ಜಮಾನಾ ಬದಲಾಗಿದೆ. ಈ ಹಿಂದಿನಂತೆ ರೈತರು ಅಆಇಈ ತಿಳಿಯದ ಅನಕ್ಷರಸ್ಥರಲ್ಲ. ಬರೆಯುವುದು ಅವರ ಪಾಲಿಗೆ ಸಾಹಸವೆಂದು ಅನ್ನಿಸಬಹುದಾದರೂ ಓದುವುದು ಸಲೀಸು. ಆದರೂ ಕೃಷಿಕರು ಓದುವವರಲ್ಲ. ಹೆಚ್ಚೆಂದರೆ ವಿದ್ಯುತ್ ಬಿಲ್, ಫೋನ್ ಬಿಲ್, ಬ್ಯಾಂಕ್ ನೋಟೀಸ್ ಓದಿ ಸುಸ್ತಾಗುತ್ತಾರಷ್ಟೇ! ವಾಸ್ತವವಾಗಿ, ಕೃಷಿಕರ ಒಂದು ಮಟ್ಟಿನ ಹಿನ್ನಡೆಗೆ ಈ ಓದಿನ ಕೊರತೆಯೂ ಕಾರಣ.
ಬೇರೆಯದನ್ನು ಬದಿಗಿಟ್ಟರೂ, ರೈತರು ಕೃಷಿ ಪತ್ರಿಕೆಗಳನ್ನು ಓದುವುದನ್ನು ತಮ್ಮ ಬೇಸಾಯದ ಒಂದು ಭಾಗ ಎಂದುಕೊಳ್ಳಲೇಬೇಕಾದ ದಿನಗಳಿವು. ಸಾಮಾನ್ಯವಾಗಿ ಕೃಷಿ ಪತ್ರಿಕೆಗಳನ್ನು ಓದಿ ಮರೆತುಬಿಡುವುದು ತರವಲ್ಲ. ಆ ಪತ್ರಿಕೆಗಳನ್ನು ಬಹುಕಾಲ ಜೋಪಾನವಾಗಿಟ್ಟುಕೊಳ್ಳಬೇಕು. ವರ್ಷದ ಸಂಚಿಕೆಗಳನ್ನು ಬುಕ್‍ಬೈಂಡ್ ಮಾಡಿಸಿ ಇರಿಸಿಕೊಂಡ ರೈತರನ್ನು ನಾನು ಕಂಡಿದ್ದೇನೆ. ಇವು ಇವತ್ತಲ್ಲವಾದರೂ ಇನ್ನಾವತ್ತೋ ನಿಮ್ಮ ಅನುಕೂಲಕ್ಕೆ ಬರಬಹುದು. ಬಹುಷಃ ಈ ಮಾತಿಗೆ ಈಗ ನೀವು ಓದುತ್ತಿರುವ ಈ `ಕೃಷಿ ಸಂಪದ’ ಪುರವಣಿಗಿಂತ ಬೇರೆ ಉದಾಹರಣೆ ಬೇಡವೇನೋ?
ಎಷ್ಟೋ ಬಾರಿ ರೈತ ತಮ್ಮ ಖರ್ಚು ಕಡಿಮೆ ಮಾಡಲು ಯೋಚಿಸಿದಾಗ ಮೊತ್ತಮೊದಲ ಕತ್ತರಿ ಕೃಷಿ ಪತ್ರಿಕೆಗಳ ಖರೀದಿಗೆ ಬೀಳುತ್ತದೆ. ಇಂದು ಕೃಷಿ ಪತ್ರಿಕೆಗೆ ವಾರ್ಷಿಕ ಬೀಳುವ ವೆಚ್ಚ ಬರೋಬ್ಬರಿ 200 ರೂ. ನಿಜಕ್ಕಾದರೆ, ರೈತನೊಬ್ಬ ಎರಡು ಮೂರು ಕೃಷಿ ಪತ್ರಿಕೆಗಳನ್ನು ಓದುವುದು ಅತ್ಯವಶ್ಯಕ. ಚಂದಾದಾರನಾದರಂತೂ ಭೇಷ್. ನೆನಪಿರಲಿ, ಬಹುಪಾಲು ಮಾದರಿ ಕೃಷಿಕರು ತಮ್ಮ ಸಾಧನೆಯ ಹಿಂದೆ ಕೃಷಿ ನಿಯತಕಾಲಿಕಗಳ ಹಾಗೂ ಕೃಷಿ ಪುಸ್ತಕಗಳ ನೆರವನ್ನು ಪಡೆದಿದ್ದಾರೆ. ಕನ್ನಡದ ಕೆಲವು ರೈತರಿಗಾಗಿಯೇ ಪ್ರಕಟಗೊಳ್ಳುವ ಪತ್ರಿಕೆಗಳನ್ನು ಪರಿಚಯಿಸುವ ಪ್ರಯತ್ನ ಇದು.
ಬಹುಷಃ ಇದಕ್ಕೆ `ಅಡಿಕೆ ಪತ್ರಿಕೆ’ ಎಂಬ ಶೀರ್ಷಿಕೆಯಿರುವುದೇ ಒಂದು ಸಮಸ್ಯೆಯಾಗಿರಲಿಕ್ಕೆ ಸಾಕು. ಅಡಿಕೆ ಬೆಳೆಯ ಹೊರತಾದ ಕೃಷಿಕರು ಇದು ತನಗಲ್ಲ ಎಂದುಕೊಂಡುಬಿಡುತ್ತಾರೆ. ಅಡಿಕೆ ಪತ್ರಿಕೆ ಹಾಗೇನೂ ಇಲ್ಲ. ಇದು ಎಲ್ಲ ಬೆಳೆಗಳ ಉಳುಮೆದಾರರಿಗೂ ಅನುಕೂಲಕರ. ಅಡಿಕೆ ಪತ್ರಿಕೆಯ ವಿಳಾಸ – ಅಂಚೆ ಪಟ್ಟಿಗೆ ಸಂಖ್ಯೆ 29, ಭಟ್ ಬಿಲ್ಡಿಂಗ್, ಏಳ್ಮುಡಿ, ಪುತ್ತೂರು – 574201.
ದಕ್ಷಿಣ ಕನ್ನಡದಿಂದಲೇ ಪ್ರಕಟಗೊಳ್ಳುವ ಇನ್ನೊಂದು ಕೃಷಿ ಮಾಸಿಕ `ಸುಜಾತ ಸಂಚಿಕೆ’. ಇದು ಸಂಪಾದಕೀಯ ಬಳಗದ ಲೇಖನಗಳಿಂದಲೇ ಅಲಂಕೃತವಾಗುವ ಪತ್ರಿಕೆ. ಗಮನಿಸಬೇಕಾದುದೆಂದರೆ, ಈ ಪತ್ರಿಕೆ ಒಂದು ವಿಷಯದಲ್ಲಿ ಪರಿಪೂರ್ಣ ಮಾಹಿತಿಯನ್ನು ಒಂದೇ ಸಂಚಿಕೆಯಲ್ಲಿ ನೀಡುತ್ತದೆ. ಇತ್ತೀಚಿನ ಒಂದು ಸಂಚಿಕೆಯಲ್ಲಿ ಎಲ್ಲ ಮಾದರಿಯ ಸ್ಪ್ರಿಂಕ್ಲರ್ ಬಗ್ಗೆ ಮಾಹಿತಿ ಹೊತ್ತು ತಂದಿದ್ದನ್ನು ಉದಾಹರಿಸಬಹುದು. ಸಾಮಾನ್ಯ ತಾಂತ್ರಿಕ ಮಾಹಿತಿಗಳಷ್ಟೂ ಇದರಲ್ಲಿ ಲಭ್ಯ. ಹಾಗೆಂದು ಸಾವಯವ – ರಾಸಾಯನಿಕಗಳ ವಿಚಾರದಲ್ಲಿ ಪತ್ರಿಕೆಗೆ ಮಡಿವಂತಿಕೆ ಇಲ್ಲ. ಇಲ್ಲಿ ಇನ್ನೊಂದು ಮಾತು ಪ್ರಸ್ತಾಪಾರ್ಹ. ಎಷ್ಟೋ ಬಾರಿ ಕೃಷಿ ಪತ್ರಿಕೆಗಳು ಲೇಖನಗಳಿಗಾಗಿಯಷ್ಟೇ ಅಲ್ಲ, ಕೃಷಿ ಉಪಕರಣಗಳ, ಬೀಜ – ಔಷಧಗಳ ಜಾಹೀರಾತುಗಳಿಗಾಗಿಯೂ ರೈತರಿಗೆ ಬೇಕಾಗುತ್ತವೆ! ಸುಜಾತ ಸಂಚಿಕೆಯ ವಿಳಾಸ – 107/108, ಸುಪ್ರಭಾತ, ಬಿಜೈ ಕಾಪಿಕಾಡ್, ಮಂಗಳೂರು – 575004.
ಮುಖಪುಟದ ಹೊರತಾಗಿ ಉಳಿದೆಲ್ಲ ಪುಟಗಳಲ್ಲಿ ಸುದ್ದಿ, ಲೇಖನಗಳಿಂದ ಶೃಂಗರಿಸಿಕೊಂಡ ದ್ವೈಮಾಸಿಕ ಸಹಜ ಸಾಗುವಳಿ.
28ರಿಂದ 32ರವರೆಗೆ ಪುಟಗಳು. ಆರಂಭಿಕ ದಿನಗಳ `ಅಡಿಕೆ ಪತ್ರಿಕೆ’ಯ ಆಕಾರ. ಕಾರ್ಪೊರೇಟ್ ದುರಾಕ್ರಮಣವನ್ನು ವಿರೋಧಿಸುವ ಖಡಕ್ ನೀತಿ. ಹಾಗಾಗಿ ರಾಸಾಯನಿಕ ಗೊಬ್ಬರ, ಕೆಮಿಕಲ್ ಔಷಧಿ, ಬಿಟಿ ಜ್ಞಾನಗಳನ್ನು ಆಮೂಲಾಗ್ರವಾಗಿ ಸಹಜ ಸಾಗುವಳಿ ವಿರೋಧಿಸುತ್ತದೆ. ಇವುಗಳ ಮೂಲವಾದ ಬಹುರಾಷ್ಟ್ರೀಯ ಕಂಪನಿಗಳನ್ನು, ಉತ್ಪಾದಕರನ್ನು ಟೀಕಿಸುತ್ತಲೇ ಇರುವುದರಿಂದ ಜಾಹೀರಾತುಗಳ ಕಾಟ ಈ ಪತ್ರಿಕೆ ಓದುಗನಿಗಿಲ್ಲ.
ಗಮನ ಸೆಳೆಯುವ ಇನ್ನೊಂದು ಕೃಷಿ ಪತ್ರಿಕೆ `ಹಿತ್ತಲ ಗಿಡ’. ಇದು ಚಾತುರ್ಮಾಸಿಕ. ಅಂದರೆ ನಾಲ್ಕು ತಿಂಗಳಿಗೆ ಒಮ್ಮೆ ಪ್ರಕಟಗೊಳ್ಳುವ ಪತ್ರಿಕೆ. ವರ್ಷಕ್ಕೆ ನಾಲ್ಕೇ ಸಂಚಿಕೆ. ಹಾಗಿದ್ದೂ ಮನೆಯಲ್ಲಿ ಜೋಪಾನವಾಗಿ ತೆಗೆದಿಡಲು ಬೇಕಾಗುವಷ್ಟು ಕೃಷಿ ವಿಚಾರಗಳು ಇದರಲ್ಲಿವೆ. ಕನ್ನಡ, ಇಂಗ್ಲೀಷ್ ಪತ್ರಿಕೆಗಳ ಅತ್ಯುತ್ತಮ ಮಾಹಿತಿಗಳನ್ನು ಹಿತ್ತಲ ಗಿಡದಲ್ಲಿ ಸಂಗ್ರಹಿಸಿ ಕೊಡಲಾಗುತ್ತಿದೆ. ಎಲ್ಲ ಪ್ರದೇಶದ ರೈತರಿಗೆ ಈ ಪತ್ರಿಕೆ ಉಪಯುಕ್ತ ಕೈಪಿಡಿ ಎಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಸಂಪರ್ಕ ವಿಳಾಸ – ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ಹಿತ್ತಲ ಗಿಡ, ಕೃಷಿ ಅರ್ಥಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ, ಬೆಂಗಳೂರು – 560065.
ಬೇಕೆಂತಲೇ ಈ ಪತ್ರಿಕೆಗಳ ಚಂದಾದರವನ್ನು ಪ್ರಸ್ತಾಪಿಸುತ್ತಿಲ್ಲ. ರೈತರಿಗೆ ಅವುಗಳ ಬೆಲೆ ಒಂದು ವಿಷಯವಾಗಬಾರದು. ನೂರಾರು ರೂ. ಕೊಟ್ಟು ಎಂಎಲ್ ಅಳತೆಯ ಕೀಟನಾಶಕವನ್ನು ತರುವವರು ನಾವು! ಈ ಪತ್ರಿಕೆಗಳಲ್ಲಿ ಪ್ರಕಟವಾಗುವ ಅನುಭವಗಳು ನಮ್ಮ ಕೈಯಲ್ಲೇ ಔಷಧಿ ತಯಾರಿಕೆ ತಂತ್ರ ಇರುವುದನ್ನು ತೋರಿಸಬಲ್ಲದು. ಆಗ ಕೀಟನಾಶಕ ಯಾಕೆ ಬೇಕು? ಮಾಡಬೇಕಾದುದಿಷ್ಟೇ, ಸದರಿ ಪತ್ರಿಕೆಗಳಿಗೆ ಒಂದು ಪತ್ರ ಬರೆದು ಮಾದರಿ ಪ್ರತಿ ಕಳಿಸಿಕೊಡಲು ವಿನಂತಿಸಿ. ಅದಕ್ಕೂ ಮುನ್ನ, ಕನಿಷ್ಠ ಒಂದಾದರೂ ಕೃಷಿ ಪತ್ರಿಕೆಗೆ ಚಂದಾದಾರರಾಗಲು ಗಟ್ಟಿ ಮನಸ್ಸು ಮಾಡಿರಿ!
ನಿಜ, ಇನ್ನೂ ಹಲವು ಕೃಷಿ ಪತ್ರಿಕೆಗಳಿವೆ. ಎಂ.ಟಿ.ಶಾಂತಿಮೂಲೆಯವರು ಜೇನುಕೃಷಿಗೆ ಸಂಬಂಧಿಸಿದಂತೆ ನಿಯತಕಾಲಿಕವೊಂದನ್ನು ಹೊರತರುತ್ತಿರುವ ಸುದ್ದಿಯಿದೆ. ಉತ್ತರ ಕರ್ನಾಟಕದವರಿಗೆ ಆಪ್ತವಾಗುವ `ಅನ್ನದಾತ’ ಮಾಸಿಕವನ್ನು ಈ ಟಿವಿ ಬಳಗ ಹೊರತರುತ್ತಿದೆ. ಬೆಂಗಳೂರಿನ ಅನುರಾಗ್ ಪಬ್ಲಿಕೇಷನ್ಸ್ ಕೂಡ `ಕೃಷಿ ರಂಗ’ ಎಂಬ ಮಾಸಿಕವನ್ನು ಪ್ರಕಾಶಿಸುತ್ತಿದೆ. ಇಂತಹ ಹತ್ತು ಹಲವು ಪತ್ರಿಕೆಗಳನ್ನು ಓದುವುದರಿಂದ ನಷ್ಟದ ಮಾತೇ ಇಲ್ಲ. ಓದುವ ಆಂದೋಲನ ಆರಂಭವಾಗಲಿ…..
– ಮಾ.ವೆಂ.ಸ.ಪ್ರಸಾದ್