“ನನ್ನ ಮಗ ಪುಸ್ತಕ, ಅವನ ಆಟದ ಸಾಮಾನುಗಳನ್ನು ಎಲ್ಲಿ ಬೇಕೆಂದರಲ್ಲಿ ಬಿಸಾಕುತ್ತಾನೆ: ನನ್ನ ಮಗಳು ಅವಳ ಡ್ರೆಸ್ ಮತ್ತಿತರ ವಸ್ತುಗಳನ್ನು ಸರಿಯಾಗಿ ಇಟ್ಕೊಳ್ಳಲ್ಲ: ಬೆಳೆದ ಮಕ್ಕಳೂ ಕೂಡ ಕಾಫಿ ಕುಡಿದ ಲೋಟವನ್ನೂ ತೊಳೆಸಲ್ಲ, ಚಿಕ್ಕ ಪುಟ್ಟ ಮನೆಕೆಲಸ ಕೂಡ ಮಾಡಲ್ಲ” ಈ ರೀತಿಯ ಗೋಳನ್ನು ಸಾಕಷ್ಟು ಮಂದಿ ತಾಯಂದಿರು ತೋಡಿಕೊಳ್ಳುತ್ತಾರೆ.
ಮಕ್ಕಳಿಗೆ ಮತ್ತೆ ಮತ್ತೆ ತಿಳಿಸಿ ಹೇಳಿ, ಸಮಾಧಾನದಿಂದ ನಿಧಾನವಾಗಿ ಶಿಸ್ತನ್ನು ಕಲಿಸಿ ಅಂತ ತಜ್ಞರು ಸಲಹೆ ಕೊಡುತ್ತಾರೆ. ಪದೇ ಪದೇ ಹೇಳಿದರೆ ಮಕ್ಕಳು ಕಡೆಗಣಿಸುತ್ತಾರೆ. ಅಥವಾ ಸ್ವಲ್ಪ ದೊಡ್ಡ ಮಕ್ಕಳಾದರೆ, “ಅಮ್ಮಾ, ದಿನಾ ನಿಂದು ಇದೇ ಗೋಳು. ನನ್ನ ಕೈಲಿ ಮಾಡಕ್ಕಾಗಲ್ಲ. ನಾನು ಇರೋದು ಹೀಗೇನೇ ನೀನು ಏನು ಬೇಕಾದ್ರೂ ಮಾಡ್ಕೋ” ಅಂತ ಪ್ರತಿಭಟಿಸುತ್ತಾರೆ. ಇತರ ನಾನಾ ತರದ ಒತ್ತಡದಲ್ಲಿರುವ ತಾಯಂದಿರೂ ಮಕ್ಕಳಿಗೆ ದಬಾಯಿಸತೊಡಗುತ್ತಾರೆ. ಒಟ್ಟಾರೆ ಮನೆ ರಣರಂಗ. ಆದರೂ ಪರಿಣಾಮ ಮಾತ್ರ ಶೂನ್ಯ, ಮರುದಿನ ತಾಯಿ ಮಕ್ಕಳು ಇಬ್ಬರದ್ದೂ ಮತ್ತೆ ಅದೇ ಹಾಡು.
ಹಾಗಿದ್ದರೆ ಹೇಗೆ ಈಗ ಚಕ್ರವ್ಯೂಹವನ್ನು ಛೇಧಿಸುವುದು? ಇದಕ್ಕೆಲ್ಲಾ ಒಂದು ಖಾಯಮ್ಮಾದ ಪರಿಹಾರವಿಲ್ಲವೇ?
ನೀವು ಸ್ವಲ್ಪ ತಾಳ್ಮೆ ಇಟ್ಕೊಂಡು, ವ್ಯವಸ್ಥಿತವಾಗಿ ಕೆಲಸ ಮಾಡುವುದು ಸಾಧ್ಯವಾಗುವುದಾದರೆ, ಹೀಗೆ ಮಾಡಬಹುದು;
• ಎಲ್ಲಾ ಶಿಸ್ತನ್ನು ಒಮ್ಮೆಲೆ ಕಲಿಸುವ ಪ್ರಯತ್ನ ಮಾಡಬೇಡಿ. ಮಕ್ಕಳು ಹೇಳಿದ ಕೆಲಸವನ್ನು ತಕ್ಷಣ ಮಾಡದಿದ್ದರೆ, ಪೋಲಿಸರ ಶಿಸ್ತನ್ನು ಹೇರಬೇಡಿ. ಹಾಗೆ ಮಾಡಿದರೆ ಚಿಕ್ಕ ಮಕ್ಕಳು ಹೆದರಿಕೆಯಿಂದ ತಕ್ಷಣ ನೀವು ಹೇಳಿದ್ದನ್ನು ಮಾಡಿದರೂ, ಪ್ರತೀ ಬಾರಿಯೂ ಕೂಗಾಡಿಯೇ ಕೆಲಸ ಮಾಡಿಸಬೇಕಾಗುತ್ತದೆ ಮತ್ತು ಅವರು ನಿಮ್ಮ ಕಣ್ಣಳತೆಯಿಂದ ದೂರ ಹೋದೊಡನೆ ಸ್ವೇಚ್ಛಾಚಾರಿಗಳಾಗಬಹುದು. ಬೆಳೆದ ಮಕ್ಕಳಾದರೆ ನಮಗಿಂತ ದೊಡ್ಡ ಧ್ವನಿಯಲ್ಲಿ ಅವರೂ ಕೂಗಾಡಿ ಮನೆ ಯುದ್ಧಭೂಮಿಯಾಗುತ್ತದೆ.
• ಶಿಸ್ತನ್ನು ಮೊದಲು ನೀವು ಪಾಲಿಸಿ. ತಾಯಿ ಕೆಲಸ ಹೇಳಿದಾಗ, ತಂದೆ “ಹೋಗ್ಲಿ ಬಿಡೆ ಪಾಪ, ಮಗು ಆಡಿಕೊಳ್ಳಲಿ” ಅಂತ ಸಹಾನುಭೂತಿ ತೋರಿಸುವುದಾಗಲಿ, ಅಥವಾ ತಂದೆ ಮಗುವನ್ನು ಸಹಾಯಕ್ಕೆ ಕರೆದಾಗ ಅಮ್ಮ, “ಅವನ್ನ್ಯಾಕ್ರೀ ಕರೀತೀರಾ, ನಿಮ್ಮ ಕೆಲಸ ನೀವು ನೆಟ್ಟಗೆ ಮಾಡ್ಕೊಳ್ಳೋದು ಕಲೀರಿ” ಅಂತ ಹಂಗಿಸುವುದಾಗಲೀ, ಮಾಡಬೇಡಿ. ಮಕ್ಕಳು ಪೋಷಕರ ಭಿನ್ನಾಭಿಪ್ರಾಯಗಳ ಭರಪೂರ ಉಪಯೋಗವನ್ನು ಪಡೆಯುತ್ತವೆ. ಇಬ್ಬರೂ ಒಂದು ಒಪ್ಪಂದಕ್ಕೆ ಬಂದು ಮಕ್ಕಳೊಡನೆ ಮಾತನಾಡಿ.
• ಮಕ್ಕಳ ಮನಸ್ಸು ಪ್ರಫುಲ್ಲವಾಗಿರುವಾಗ ಶಿಸ್ತಿನ ಪಾಠಗಳನ್ನು ಹೇಳಿಕೊಡಿ. ಅವರ ಜೊತೆ ಸ್ವಲ್ಪ ಹೊತ್ತು ಆಟವಾಡಿದ ನಂತರ ಅಥವಾ ಮನೆಯವರೆಲ್ಲ ಕುಳಿತು ಖುಷಿಯಾಗಿ ಊಟಮಾಡುವಾಗ ನಿಮ್ಮ ಅಗತ್ಯಗಳ ಬಗೆಗೆ ತಿಳಿಸಿ.
• “ನೀನು ಹೀಗೆ ಮಾಡಬೇಕು; ಹೀಗೆ ಮಾಡದಿದ್ದರೆ ನಿನಗೇ ತೊಂದರೆ; ಶಿಸ್ತನ್ನು ಕಲಿಯದಿದ್ದರೆ ಮುಂದೆ ಹಾಳಾಗುತ್ತೀಯಾ” ಎನ್ನುವ ರೀತಿಯ ಪೋಲೀಸ್ ಭಾಷೆ ಬಳಸಬೇಡಿ. “ನೋಡು ಮರೀ, ನೀನು ನಿನ್ನ ಸಾಮಾನುಗಳನ್ನು ಸರಿಯಾಗಿಟ್ಟುಕೊಂಡರೆ ನನಗೆ ಮನೆಕೆಲಸದಲ್ಲಿ ಬಹಳ ಸಹಾಯ ಆಗುತ್ತೆ. ಆಗ ನಾನು ನಿನ್ನ ಜೊತೆ ಆಟ ಆಡಬಹುದು ಅಥವಾ ನಿನಗೆ ಹೊಸ ತಿಂಡಿ ಮಾಡಬಹುದು” ಎಂದು ನಿರ್ಮಲ ಪ್ರೀತಿಯಿಂದ ಮಾತನಾಡಿ. ಮಕ್ಕಳು ಮಾಡುವ ಕೆಲಸ ನಮಗಾಗುವ ದೊಡ್ಡ ಸಹಾಯ ಎಂದು ತಿಳಿಸಿ.
• ಇದು ಪೂಸಿಹೊಡೆಯುವ ಕೆಲಸ, ನಮಗಾಗಲ್ಲ, ಎಂದುಕೊಳ್ಳಬೇಡಿ. ಇದು ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಎಂದುಕೊಳ್ಳಿ. ಒಮ್ಮೆ ಮಕ್ಕಳಿಗೆ ತಮ್ಮ ಜವಾಬ್ದಾರಿಗಳ ಅರಿವು ಮೂಡಿ, ಶಿಸ್ತಿನ ಅಭ್ಯಾಸವಾಯಿತೆಂದರೆ ಅದು ಅವರ ಸ್ವಭಾವವಾಗಿಬಿಡುತ್ತದೆ.
• “ನೀನು ಇದು ಮಾಡದಿರುವುದಕ್ಕೆ ನಾನು ಅದು ಮಾಡಲ್ಲ” ಎನ್ನುವ ರೀತಿಯ ವ್ಯಾಪಾರದ ಮಟ್ಟದಲ್ಲಿ ಮಾತನಾಡಿ ಸಂಬಂಧಗಳನ್ನು ಹಾಳು ಮಾಡಿಕೊಳ್ಳಬೇಡಿ.
• ಮಿಲಿಟರಿ ರೀತಿ ಎಲ್ಲಾ ಕೆಲಸಕ್ಕೂ ನೀತಿ ನಿಯಮಗಳನ್ನು ಮಾಡಿದರೆ ನಿಮ್ಮ ಸೋಲು ಖಂಡಿತ. ಅಲ್ಲದೆ ಎಲ್ಲಾ ವಿಚಾರಕ್ಕೂ ಕಿರಿಕಿರಿ ಮಾಡುವವರು ಎಂಬ ಕೆಟ್ಟ ಹೆಸರೂ ಮುಫತ್ತಾಗಿ ಸಿಗುತ್ತದೆ.
• ಎಲ್ಲಾ ಕೆಲಸಕ್ಕೂ ಅದರದೇ ಆದ ಶಿಸ್ತಿನ ಅಗತ್ಯವಿರುತ್ತದೆ. ಉದಾಹರಣೆಗೆ ಮಕ್ಕಳು ಕಾಯಿಲೆ ಬೀಳಬಾರದೆನ್ನುವುದಕ್ಕಾಗಿ ಶುಚಿಯಾಗಿರುವುದನ್ನು ಕಲಿಸಬೇಕಾಗುತ್ತದೆ. ಹಾಗಂತ ಅವರು ಆಟವಾಡುವಾಗ ಅಥವಾ ಹೊರಗಡೆ ಹೋದಾಗ ಬಟ್ಟೆ, ಮೈಕೈಗಳನ್ನು ಹೊಲಸೇ ಮಾಡಿಕೊಳ್ಳಬಾರದೆಂದು ನಿಯಮ ಮಾಡಿದರೆ ಅವರ ಸಹಜ ತುಂಟಾಟಗಳಿಗೇ ಕಟ್ಟುಹಾಕಿದಂತಾಗುತ್ತದೆ. ಅಥವಾ ಮನೆಗೆ ಬಂದ ಮರುಕ್ಷಣದಲ್ಲೇ ಕೈಕಾಲು ತೊಳೆಯಲೇಬೇಕು ಎನ್ನುವ ನಿಯಮ ಮಾಡಿದರೆ ನಿಮಗೆ ನಿರಾಸೆ ಕಾದಿರುತ್ತದೆ.
ನೆನಪಿಡಿ, ಶಿಸ್ತಿಗಾಗಿ ಶಿಸ್ತಲ್ಲ, ಜೀವನಕ್ಕಾಗಿ ಶಿಸ್ತು. ಶಿಸ್ತಿನ ಹೆಸರಿನಲ್ಲಿ ಮಕ್ಕಳ ಸಹಜ ತುಂಟಾಟಗಳನ್ನು ನಿಲ್ಲಿಸಿ ಅವರ ಬಾಲ್ಯವನ್ನೇ ಕಸಿದುಕೊಳ್ಳಬೇಡಿ.
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -