ಕಾನೂನಿನ ಮೊರೆಹೋಗಿ
ಲೈಂಗಿಕ ಹಿಂಸಾಚಾರವನ್ನು ಸಾಮಾಜಿಕ ಕಳಂಕವೆಂದು ಪರಿಗಣಿಸಿ ಯಾರಿಗೂ ತಿಳಿಯದಂತೆ ನಿಭಾಯಸಲು ಪ್ರಯತ್ನಿಸುವುದು ಬಹಳ ಅಪಾಯಕಾರಿ. ಇಂತಹ ಕೃತ್ಯವೆಸಗಿದವರು ನಮಗೆ ಎಷ್ಟೇ ಆತ್ಮೀಯರಾಗಿದ್ದರೂ ಪೋಲೀಸರಿಗೆ ದೂರು ಕೊಡಲೇಬೇಕು. ಹಾಗೆ ಮಾಡದಿದ್ದರೆ ನಾವು ಅಂತಹ ವ್ಯಕ್ತಿಗಳಿಗೆ ಇತರ ಮಕ್ಕಳ ಮೇಲೆ ಮತ್ತೆ ಹಿಂಸಾಚಾರವೆಸಗುವುದಕ್ಕೆ ಧೈರ್ಯ, ಪ್ರೋತ್ಸಾಹವನ್ನು ಕೊಟ್ಟಂತಾಗುತ್ತದೆ. ನಂತರ ನಡೆಯುವ ಅಂತಹ ಪಾಪಕೃತ್ಯಗಳÀಲ್ಲಿ ನಮ್ಮ ಪಾಲೂ ಸೇರಿಕೊಳ್ಳುತ್ತದೆ.
ಮಕ್ಕಳ ಮೇಲೆ ಇಂತಹ ಹಿಂಸಾಚಾರ ಮಾಡುವುದು ಮಾನಸಿಕ ವಿಕೃತಿ. ಹಾಗಾಗಿ ವಯಸ್ಸು, ಸಂಬಂಧ ಮುಂತಾದ ಕಾರಣಗಳಿಗೆ ಪೋಲೀಸರಿಗೆ ದೂರು ಕೊಡುವುದು ಸಾಧ್ಯವೇ ಇಲ್ಲ ಅನ್ನಿಸಿದರೆ ಅವರನ್ನು ತಜ್ಞರ ಬಳಿ ಮಾನಸಿಕ ಚಿಕಿತ್ಸೆಗಾದರೂ ಒಳಪಡಿಸಲೇಬೇಕು.
ಯಾವುದೇ ಸಂದರ್ಭದಲ್ಲಿಯೂ ಕಾನೂನನ್ನು ನಮ್ಮ ಕೈಗೆತೆಗೆದುಕೊಂಡು ಅತ್ಯಾಚಾರಿಯನ್ನು ನಾವೇ ಶಿಕ್ಷಿಸುವ ಪ್ರಯತ್ನ ಮಾಡಬಾರದು. ಇದು ಅವರಿಗೆ ಎಚ್ಚರಿಕೆಯ ಸೂಚನೆಯಾಗಿ ಅವರು ಸಾಕ್ಷಗಳನ್ನು ನಾಶಪಡಿಸಬಹುದು. ಅಥವಾ ಅವರೇ ನಮ್ಮ ಮೇಲೆ ಪ್ರತ್ಯಾರೋಪಹೊರಿಸಿ ಅನಗತ್ಯ ಕಿರಿಕಿರಿ ನೀಡಬಹುದು. ಇದಕ್ಕಿಂತ ಹೆಚ್ಚಿನ ಅಪಾಯವೆಂದರೆ ಮಕ್ಕಳನ್ನು ನಿರಂತರವಾಗಿ ಹೆದರಿಸುತ್ತಾ ಅವರಿಗೆ ಸಾಮಾನ್ಯ ಸಾಮಾಜಿಕ ಬದುಕು ಸಾಧ್ಯವಾಗದಂತೆ ಮಾಡಬಹುದು. ಹಾಗಾಗಿ ತಕ್ಷಣ ಕಾನೂನು ಪಾಲಕರ ಮೊರೆಹೋಗಬೇಕು.
ಮಕ್ಕಳನ್ನು ನಿಭಾಯಿಸುವುದು ಹೇಗೆ?
1. ಒಮ್ಮೆ ಪೋಲಿಸರಿಗೆ ದೂರು ನೀಡಿದರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಪೋಷಕರು ಸುಮ್ಮನಿರುವಂತಿಲ್ಲ. ಕಾನೂನಿಗೆ ಅದರ ಕೆಲಸವನ್ನು ಮಾಡಲು ಬಿಟ್ಟು ಮಕ್ಕಳ ಜೀವನವನ್ನು ರೂಪಿಸುವತ್ತ ಪೋಷಕರು ತಕ್ಷಣ ಗಮನ ಹರಿಸಬೇಕು.
2. ಮೊದಲು ಪೋಷಕರು ತಮ್ಮ ಅಸಹಾಯಕತೆ, ಅವಮಾನ, ಕೋಪ, ಹತಾಷೆಗಳನ್ನು ನಿಭಾಯಿಸುವುದನ್ನು ಕಲಿಯಬೇಕು. ಮಗುವಿನ ಎದುರಿಗೆ ಇವನ್ನೆಲ್ಲಾ ವ್ಯಕ್ತಪಡಿಸುವುದರಿಂದ ಅದರ ಮನಸ್ಸಿನ ಮೇಲಾಗಬಹುದಾದ ಪರಿಣಾಮಗಳತ್ತ ಹೆಚ್ಚು ಗಮನಹರಿಸಬೇಕು. ಪರಿಸ್ಥಿತಿಯನ್ನು ನಿರ್ವಹಿಸುವುದು ಕಷ್ಟವೆನ್ನಿಸುತ್ತಿದ್ದರೆ ಪೋಷಕರು ತಮಗಾಗಿ ಮನೋಚಿಕಿತ್ಸಕರ ಸಹಾಯ ಪಡೆಯಲು ಹಿಂಜರಿಯಬಾರದು.
3. ಮನೆಯಲ್ಲಿ ಮಗುವಿಗೆ ಸಹಜ ವಾತಾವರಣವನ್ನು ಕಲ್ಪಿಸಿ, ಅದು ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಉತ್ತೇಜಿಸಬೇಕು. ಮಗು ತನ್ನದೇ ಆದ ರೀತಿಯಲ್ಲಿ ತನಗೆ ಬೇಕಾದವರೊಡನೆ ವಿಷಯಗಳನ್ನು ಹಂಚಿಕೊಳ್ಳಲು ಅವಕಾಶಕೊಡಬೇಕು. ಅದರ ಮಾತುಗಳನ್ನು ಪ್ರೀತಿಯಿಂದ ಕೇಳಬೇಕು ಮತ್ತು ಹೆಚ್ಚು ಮಾತನಾಡಲು ಉತ್ತೇಜಿಸಬೇಕು.
4. ಯಾವುದೇ ಕಾರಣಕ್ಕೂ ಹಿಂಸಾಚಾರಕ್ಕೊಳಪಟ್ಟ ಮಕ್ಕಳನ್ನು ಶಿಕ್ಷಿಸಬಾರದು. “ಇದರಲ್ಲಿ ನಿನ್ನದೇನೂ ತಪ್ಪಿಲ್ಲ. ಹಾಗಾಗಿ ನೀನು ಭಯ ಅವಮಾನದಿಂದ ನರಳಬೇಕಿಲ್ಲ. ನೀನು ಮೊದಲಿನಂತೆಯೇ ನಮಗೆ ಪ್ರೀತಿಪಾತ್ರ. ಎಲ್ಲಾ ಸಂದರ್ಭಗಳಲ್ಲಿಯೂ ನಿನ್ನನ್ನು ಸಂಪೂರ್ಣವಾಗಿ ನಂಬುತ್ತೇವೆ ಮತ್ತು ನಿನ್ನ ಬೆಂಬಲಕ್ಕೆ ನಾವಿದ್ದೇವೆ” ಎನ್ನುವ ಭರವಸೆಯನ್ನು ಮಕ್ಕಳಲ್ಲಿ ಮೂಡಿಸಬೇಕು.
5. ಸಾಧ್ಯವಾದಷ್ಟು ಬೇಗ ಮಕ್ಕಳು ಶಾಲೆ ಮತ್ತಿತರ ದೈನಂದಿನ ಕಾರ್ಯಗಳಿಗೆ ಹಿಂತಿರುಗಲು ಉತ್ತೇಜನ ನೀಡಬೇಕು. ಅವರ ದೈಹಿಕ ಆರೋಗ್ಯದ ಸುಧಾರಣೆ ಪ್ರಥಮ ಆದ್ಯತೆಯಾಗಬೇಕು. ಸಾಮಾಜಿಕ ಸಂದರ್ಭಗಳನ್ನು ನಿಭಾಯಿಸುವ ತರಬೇತಿ ನೀಡಲು ಆಪ್ತಸಲಹೆ ಮತ್ತು ಮನೋಚಿಕಿತ್ಸೆಗಳ ಮೊರೆಹೋಗಬೇಕು. ಇದನ್ನು ಆದಷ್ಟು ಬೇಗ ಮಾಡಬೇಕು. ಗಾಯ ಆಳವಾದಷ್ಟೂ ಮಾಯಲು ಹೆಚ್ಚಿನ ಸಮಯ ಬೇಕಾಗುತ್ತದೆ. ಪರಿಸ್ಥಿತಿ ಸ್ವಲ್ಪವೇ ಉತ್ತಮಗೊಂಡರೂ ಮಕ್ಕಳಿಗೆ ಅವರ ಧೈರ್ಯ ಮತ್ತು ಗಟ್ಟಿತನಕ್ಕಾಗಿ ಮುಕ್ತವಾಗಿ ಪ್ರಶಂಸಿಸಿ ಅವರ ಆತ್ಮಸ್ಥೈರ್ಯನ್ನು ಹೆಚ್ಚಿಸಬೇಕು.
6. ಲೈಂಗಿಕ ಹಿಂಸಾಚಾರ ಕುಟುಂಬದ ಜನರಿಂದಲೇ ಆಗಿದ್ದರೆ ಅವರನ್ನು ತಕ್ಷಣ ಮನೆಯಿಂದ ಬೇರ್ಪಡಿಸಬೇಕು. ಮನೆಯಲ್ಲಿಯೇ ಇರುವ ಮಧ್ಯವಯಸ್ಸಿನ ವಿದುರ ಅಥವಾ ವಿಧವೆಯರು ಇಂತಹ ಪ್ರಯತ್ನ ಮಾಡಿದರೆ ಅವರಿಗೆ ತಮ್ಮ ಲೈಂಗಿಕ ಆಸೆಗಳನ್ನು ತೀರಿಸಿಕೊಳ್ಳುವ ಇತರ ದಾರಿಗಳನ್ನು ತೆರೆಯಬೇಕು.
7. ಇಂತಹದೇ ಉದ್ದೇಶಗಳನ್ನಿಟ್ಟುಕೊಂಡು ಕೆಲಸ ಮಾಡುವ ಸಂಘಸಂಸ್ಥೆಗಳಿದ್ದರೆ ಅವರ ಸಹಾಯಪಡೆಯಬಹುದು. ಮಗುವನ್ನು ಯಾವುದೇ ಹಂತದಲ್ಲಿಯೂ ಸ್ನೇಹಿತರಿಂದ, ಸಮಾಜದಿಂದ ವಿಮುಖಗೊಳಿಸಬಾರದು.
ಭಯ ಅನಗತ್ಯ
ಇವೆಲ್ಲವನ್ನೂ ಓದಿದ ಪೋಷಕರು ಅದರಲ್ಲೂ ಹೆಚ್ಚಾಗಿ ಹೆಣ್ಣು ಮಕ್ಕಳ ತಂದೆತಾಯಿಗಳು ಭಯಪಟ್ಟುಕೊಳ್ಳಬಹುದು. ಸಂಪೂರ್ಣ ನಿರಾಶರಾಗುವುದಕ್ಕೆ ಯಾವುದೇ ಕಾರಣಗಳಿಲ್ಲ. ನಮ್ಮ ಸುತ್ತಲೂ ಇರುವ ಕ್ರೂರಿಗಳು ಕೆಲವೇ ಜನರು ಮಾತ್ರ. ಹೆಚ್ಚಿನ ಜನರಲ್ಲಿ ನಾವು ಖಂಡಿತಾ ಭರವಸೆಯನ್ನಿಡಬಹುದು. ಪೋಷಕರು ಮಕ್ಕಳಿಗೆ ಅವರ ವಯಸ್ಸಿಗನುಗುಣವಾಗಿ ಶಿಕ್ಷಣವನ್ನು ನೀಡುತ್ತಾ, ಮನೆಯಲ್ಲಿ ಮಕ್ಕಳು ತಮ್ಮನ್ನು ಮುಕ್ತವಾಗಿ ತೆರೆದುಕೊಳ್ಳಲು ವಾತಾವರಣವನ್ನು ಕಲ್ಪಿಸಿದರೆ ಹೆಚ್ಚಿನ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಸ್ವಲ್ಪ ಸಾಮಾನ್ಯ ಜ್ಞಾನ, ಸ್ವಲ್ಪ ಎಚ್ಚರಿಕೆ, ಸಂಪೂರ್ಣ ಕಾಳಜಿ ಮತ್ತು ಸೌಹಾರ್ಧಯುತ ಕೌಟುಂಬಿಕ ಪರಿಸರ ನಮ್ಮ ಮಕ್ಕಳ ಸುಖಿಜೀವನಕ್ಕೆ ಹೆದ್ದಾರಿಯಾಗಬಲ್ಲದು.
ಕಾಲಕ್ಕೆ ತಕ್ಕ ಶಿಕ್ಷಣ
ಮಕ್ಕಳಿಗೆ ಅವರ ವಯಸ್ಸಿಗನುಗುಣವಾಗಿ ಶಿಕ್ಷಣವನ್ನು ನೀಡಬೇಕು. ಇದನ್ನು ಲೈಂಗಿಕ ಶಿಕ್ಷಣ, ವಯಸ್ಕರ ಶಿಕ್ಷಣ, ವೈವಾಹಿಕ ಶಿಕ್ಷಣ-ಹೀಗೆ ಯಾವುದೇ ಹೆಸರಿನಿಂದ ಬೇಕಾದರೂ ಕರೆದುಕೊಳ್ಳಿ. ಅದನ್ನು ಪೋಷಕರು ತಾವೇ ಕೊಡುವುದು ಅಥವಾ ವೈದ್ಯರಿಂದ ಕೊಡಿಸುವುದು ಬಹಳ ಅಗತ್ಯ. ಇದರ ಸ್ಥೂಲ ರೂಪರೇಷೆ ಹೀಗಿರಬಹುದು.
1. ಸುಮಾರು ಒಂದು ವರ್ಷದಿಂದ ಮಲಮೂತ್ರಗಳನ್ನು ವಿಸರ್ಜಿಸುವ ರೀತಿ ಮತ್ತು ಶುಚಿತ್ವನ್ನು ಕಾಪಾಡಿಕೊಳ್ಳುವ ರೀತಿಗಳ ತಿಳುವಳಿಕೆ ನೀಡಬೇಕು.
2. ಸುಮಾರು ಎರಡು ವರ್ಷಗಳ ನಂತರ ದೇಹದ ಅಂಗಾಂಗಗಳ ಬಗೆಗೆ ಅವುಗಳ ಮೂಲ ಹೆಸರುಗಳನ್ನು ಹೇಳಿ ವಿವರಿಸಬೇಕು.
3. ನಾಲ್ಕೈದು ವರ್ಷದ ಹೊತ್ತಿಗೆ ಮಗುವಿಗೆ ಸಾರ್ವಜನಿಕವಾದ್ದು ಮತ್ತು ಖಾಸಗಿಯಾದದ್ದರ ಬಗೆಗೆ ಪೂರ್ಣ ಜ್ಞಾನ ನೀಡುತ್ತಾ ಅವುಗಳನ್ನು ನಿಭಾಯಿಸುವ ವಿಧಾನಗಳನ್ನು ಹೇಳಿಕೊಡಬೇಕು.
4. ಏಳೆಂಟು ವರ್ಷದ ಹೊತ್ತಿಗೆ ಮಗುವಿಗೆ ಸ್ಪರ್ಶದ ಬಗೆಗೆ ತಿಳುವಳಿಕೆ ನೀಡಬೇಕು. ಅನುಚಿತವಾದದ್ದನ್ನು ಗುರುತಿಸುವ ಬಗೆ, ಅದನ್ನು ಪ್ರತಿಭಟಿಸುವ ರೀತಿಯ ವಿವರಣೆ ನೀಡಬೇಕು.
5. ಹದಿವಯಸ್ಸಿನ ಮಕ್ಕಳಿಗೆ ಲೈಂಗಿಕ ಕ್ರಿಯೆಯ ಪೂರ್ಣ ವಿವರಗಳನ್ನು ನೀಡಿದ ಮೇಲೆ, ಅತ್ಯಾಚಾರ ಮತ್ತಿತರ ಲೈಂಗಿಕ ವಿಕಾರಗಳ ಬಗೆಗೂ ತಿಳುವಳಿಕೆ ನೀಡಬೇಕು. ಅವರು ಅತ್ಯಾಚಾರದ ದೃಶ್ಯಗಳನ್ನು ಟೀವಿ, ಸಿನಿಮಾಗಳಲ್ಲಿ ನೋಡುವ ಸಾಧ್ಯತೆಗಳಿರುತ್ತವೆ. ಅಥವಾ ಪತ್ರಿಕೆ, ಪುಸ್ತಕಗಳಲ್ಲಿ ಇಂತಹ ಘಟನೆಗಳ ಬಗೆಗೆ ಓದಬಹುದು. ಹಾಗಾಗಿ ಇದರ ಬಗೆಗೆ ಕಾನೂನು ಕಟ್ಟಳೆಗಳ ಸಮೇತ ವಿವರಿಸಿದರೆ ಮುಂದಿನ ಜೀವನಕ್ಕೆ ತುಂಬಾ ಸಹಕಾರಿ. ಹೆಣ್ಣು ಮಕ್ಕಳಿಗೆ ಇಂತಹ ಸಂದರ್ಭಗಳನ್ನು ಆಹ್ವಾನಿಸಿಕೊಳ್ಳದಂತೆ ಎಚ್ಚರಿಸಬೇಕು.
6. ಕಂಪ್ಯೂಟರ್, ಮೊಬೈಲ್, ಅಂತರ್ಜಾಲ ಮೊದಲಾದವುಗಳನ್ನು ಸರಿಯಾದ ರೀತಿಯಲ್ಲಿ ಬಳಸುವ ಶಿಕ್ಷಣ ನೀಡಬೇಕು.
ಇವೆಲ್ಲದರ ಬಗೆಗೆ ಸಂಪೂರ್ಣ ವಿವರಣೆ ನೀಡಲು ವೈಜ್ಞಾನಿಕವಾಗಿ ಬರೆಯಲ್ಪಟ್ಟ ಸಾಕಷ್ಟು ಪುಸ್ತಕಗಳು ಸಿಗುತ್ತವೆ. ಅಥವಾ ಅಂತರ್ಜಾಲದಲ್ಲಿ ಸಿಗುವ ಉತ್ತಮ ಮಾಹಿತಿಯನ್ನು ಪೋಷಕರು ಬಳಸಿಕೊಳ್ಳಬಹುದು.
ಮುಗಿಯಿತು.
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -