19.1 C
Sidlaghatta
Monday, December 23, 2024

ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ದೊಡ್ಡ ಸಮಸ್ಯೆಯೇ?

- Advertisement -
- Advertisement -

ವಿನಯ್ ಒಂಬತ್ತು ವರ್ಷದ ಬಾಲಕ. ಮೂರನೆ ತರಗತಿಯಲ್ಲಿ ಓದುತ್ತಿರುವ ಅವನೂ ಈಗಲೂ ಸಾಮಾನ್ಯವಾಗಿ ದಿನಾ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದ. ಮಕ್ಕಳ ತಜ್ಞರು ಕೊಟ್ಟ ಯಾವುದೇ ಔಷಧಿ ಅಥವಾ ಸಲಹೆಗಳು ಕೆಲಸಮಾಡಿರಲಿಲ್ಲ. ಯಾವುದೇ ದೈಹಿಕ ತೊಂದರೆಗಳಿಲ್ಲ, ಹಾಗಾಗಿ ಆಪ್ತಸಲಹೆಯ ಮೂಲಕ ಅವನ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಿ, ಎಂದು ವೈದ್ಯರು ಹೇಳಿದ್ದರು. ಅದರಂತೆ ಪೋಷಕರ ನಮ್ಮ ಸಹಾಯ ಕೋರಿದ್ದರು.
ಮಕ್ಕಳಿಗೆ ಆಪ್ತಸಲಹೆ ನೀಡುವ ವಿಷಯದಲ್ಲಿರುವ ದೊಡ್ಡ ತೊಂದರೆ ಎಂದರೆ ಮಕ್ಕಳನ್ನು ನಾವು ನೇರವಾಗಿ ಪ್ರಶ್ನಿಸಿ, ಅವರಿಗೆ ಒಪ್ಪುವ ಸಲಹೆಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಅಪರಿಚಿತರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ ಮತ್ತು ಅವರಿಗೆ ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಭಾಷೆಯ ಮೂಲಕ ವ್ಯಕ್ತಮಾಡುವುದು ಸಾಧ್ಯವಾಗಲಾರದು. ಹಾಗಾಗಿ ನಿಧಾನವಾಗಿ ಮಕ್ಕಳ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಅವರಲ್ಲಿ ಬದಲಾವಣೆಗೆ ಪ್ರಯತ್ನಿಸಬೇಕಾಗುತ್ತದೆ. ಜೊತೆಗೆ ಪೋಷಕರಿಗೆ ಮಕ್ಕಳ ಜೊತೆ ವರ್ತಿಸಬೇಕಾದ ರೀತಿಯ ಬಗೆಗೆ ತರಬೇತಿ ನೀಡಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಇದು ಪೋಷಕರಿಗೇ ಆಪ್ತಸಲಹೆಯಾಗಿರುತ್ತದೆ.
ಯಾವಾಗ ಇದು ಸಮಸ್ಯೆ?
ಮಕ್ಕಳಿಗೆ ಸುಮಾರು ಒಂದು ವರ್ಷವಾದಾಗಿನಿಂದ ಅಮ್ಮಂದಿರು ಶೌಚ ತರಬೇತಿಯನ್ನು ನೀಡಲು ಪ್ರಾರಂಭಿಸಬೇಕು. ಸುಮಾರು ಎರಡು ವರ್ಷದಿಂದ ಮೂರು ವರ್ಷದ ಒಳಗೆ ಮಕ್ಕಳು ಹಗಲು ಹೊತ್ತಿನಲ್ಲಿ ತಮಗೆ ಮಲಮೂತ್ರಗಳ ಒತ್ತಡವುಂಟಾದಾಗ ಇತರರಿಗೆ ಹೇಳುಲು ಸಮರ್ಥರಾಗುತ್ತಾರೆ. ಮೂರು ವರ್ಷದ ನಂತರವೂ ರಾತ್ರಿ ಹೊತ್ತಿನಲ್ಲಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದನ್ನು ಮುಂದುವರೆಸಬಹುದು. ಇದಕ್ಕಾಗಿ ಪೋಷಕರು ಆತಂಕ ಪಡಬೇಕಿಲ್ಲ. ಆದರೆ ಇದೇ ಪ್ರವೃತ್ತಿ ಐದು ವರ್ಷಗಳ ನಂತರವೂ ಮುಂದುವರೆದರೆ ಮಕ್ಕಳಿಗೆ ಇದರಿಂದ ಹೊರಬರಲು ಸಹಾಯ ಬೇಕಾಗುತ್ತದೆ.
ಎಲ್ಲಿದೆ ಇದರ ಮೂಲ?
ಕೆಲವು ದೈಹಿಕ ನ್ಯೂನತೆಗಳಿಂದ ಮಕ್ಕಳಿಗೆ ಈ ಸಮಸ್ಯೆ ಉಂಟಾಗಬಹುದು. ಮೂತ್ರ ಮಾಡುವ ಅಂಗಾಗಗಳಲ್ಲಿ ಇರಬಹುದಾದ ತೊಂದರೆಗಳು, ಮೂತ್ರನಾಳಗಳ ಸೋಂಕು, ಕೆಲವು ನರದೋಷಗಳು ಮತ್ತಿತರ ಕಾರಣಗಳಿಂದ ಮಕ್ಕಳಿಗೆ ಮೂತ್ರ ವಿಸರ್ಜನೆಯ ಮೇಲೆ ಹಿಡಿತ ಸಾಧಿಸಲು ಕಷ್ಟವಾಗಬಹುದು.
ದೈಹಿಕವಾಗಿ ಯಾವುದೇ ತೊಂದರೆ ಇಲ್ಲವೆಂದಾದರೆ ಇದರ ಮೂಲ ಮನಸ್ಸಿನಲ್ಲೆಲ್ಲೋ ಇರುತ್ತದೆ ಎಂದು ತಿಳಿಯಬೇಕು. ಇಷ್ಟು ಚಿಕ್ಕ ಮಕ್ಕಳಿಗೆ ಅದೆಂತಹ ಮಾನಸಿಕ ಸಮಸ್ಯೆ ಎಂದು ಮೂಗು ಮುರಿಯಬೇಡಿ. ವಾಸ್ತವವಾಗಿ ಮಕ್ಕಳಿಗೆ ಬರುವ ಮಾನಸಿಕ ಸಮಸ್ಯೆಗಳೆಲ್ಲಾ ಪೋಷಕರ ಬಳುವಳಿ. ಇವುಗಳು ಈ ಕೆಳಗಿನಂತೆ ಇರಬಹುದು;
1. ಮಕ್ಕಳಿಗೆ ಸೌಹಾರ್ದಯುತ ಕೌಟುಂಬಿಕ ವಾತಾವರಣ ದೊರಕದಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಪೋಷಕರ ಕಲಹ, ವಿಚ್ಛೇದನ, ಕುಡಿತ ಮುಂತಾದ ದುಶ್ಚಟಗಳು, ಪೋಷಕರಿಂದ ದೂರವಿರುವ ಮಕ್ಕಳು, ಪೋಷಕರ ಸಾವು ಮುಂತಾದವು.
2. ಪೋಷಕರಿಂದ ಸೂಕ್ತವಾದ ಶೌಚ ತರಬೇತಿ ದೊರೆಯದಿರುವುದು.
3. ಶಾಲೆಯಲ್ಲಿ ಅಥವಾ ಸ್ನೇಹಿತರೊಡನೆ ಬೆರೆಯುವಾಗ ಮಗುವಿಗೆ ಉಂಟಾಗಬಹುದಾದ ಒತ್ತಡಗಳು.
4. ಮಕ್ಕಳ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕ, ಭಯ, ಹಿಂಜರಿತ, ಆತ್ಮವಿಶ್ವಾಸದ ಕೊರತೆ ಮುಂತಾದವು.
ಎಲ್ಲಿಂದ ಚಿಕಿತ್ಸೆಯನ್ನು ಆರಂಭಿಸಬೇಕು?
1. ಚಿಕಿತ್ಸೆಯ ಮೊದಲ ಹಂತವಾಗಿ ಮಕ್ಕಳ ತಜ್ಞರಲ್ಲಿ ಹೋಗಿ ಮಗು ಸಂಪೂರ್ಣ ದೈಹಿಕವಾಗಿ ಆರೋಗ್ಯವಾಗಿ ಇದೆಯೆಂದು ಖಚಿತಪಡಿಸಕೊಳ್ಳಬೇಕು.
2. ದೈಹಿಕ ತೊಂದರೆಗಳಿಲ್ಲವೆಂದು ಖಾತ್ರಿಯಾದಮೇಲೆ ಮನೆಯಲ್ಲಿಯೇ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು.
3. ರಾತ್ರಿ ಮಲಗುವುದಕ್ಕೆ ಎರಡು ಗಂಟೆಗೆ ಮೊದಲು ಮಾತ್ರ ನೀರು ಕುಡಿಯಲು ಹೇಳಬೇಕು.
4. ಮಲಗುವಾಗ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ಮಾಡಿಸಬೇಕು.
5. ರಾತ್ರಿ ಒಮ್ಮೆ ಮಗುವನ್ನು ಎಬ್ಬಿಸಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸಮಾಡಿಸಬಹುದು.
6. ಈ ಸರಳ ನಿಯಮಗಳು ಪ್ರಯೋಜನಕ್ಕೆ ಬರದಿದ್ದರೆ ತಜ್ಞರಿಂದ ಆಪ್ತಸಲಹೆ ಬೇಕಾಗುತ್ತದೆ. ಹಾಗೆ ಆಪ್ತಸಲಹೆಗೆ ಬರುವ ಮುನ್ನ ಪೋಷಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
7. ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಿರುವುದಕ್ಕಾಗಿ ಮಗುವನ್ನು ಬೈಯುವುದು, ಹೊಡೆಯುವುದು ಅಥವಾ ಭಯಹುಟ್ಟಿಸುವುದು ಮುಂತಾದವುಗಳನ್ನು ಮಾಡಬಾರದು. ಇದರಿಂದ ಮಗುವಿನ ಆತಂಕ ಮತ್ತು ಅದರ ಮೇಲಿನ ಒತ್ತಡ ಜಾಸ್ತಿಯಾಗಿ ಈ ಅಭ್ಯಾಸದಿಂದ ಹೊರಬರಲು ಹೆಚ್ಚಿನ ಸಮಯ ಬೇಕಾಗಬಹುದು.
8. ಮಗುವಿನ ಅಭ್ಯಾಸವನ್ನು ಎಲ್ಲರೆದುರು ಹೇಳಿ ಅದಕ್ಕೆ ಅವಮಾನ ಮಾಡುವುದರ ಮೂಲಕ ಮಗುವಿನ ಆತ್ಮಗೌರಕ್ಕೆ ಧಕ್ಕೆ ತರಬಾರದು.
9. ಮಗು ಯಾವುದೋ ದೊಡ್ಡ ಕಾಯಲೆಯಿಂದ ನರಳುತ್ತಿದೆ ಎನ್ನವು ಭಾವನೆ ಹುಟ್ಟಿಸಬಾರದು. ಈ ತೊಂದರೆಯಲ್ಲಿ ಮಗುವಿನದು ಏನೂ ತಪ್ಪಿಲ್ಲ, ಅದರ ಸಹಾಯಕ್ಕೆ ನಾವಿದ್ದೇವೆ ಎನ್ನವು ಭರವಸೆಮೂಡಿಸಬೇಕು.
10. ಕೌಟುಂಬಿಕ ವಾತಾವರಣ ಇದಕ್ಕೆ ಕಾರಣವಾಗಿದ್ದರೆ, ಅದರಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಹಾಸಿಗೆಯಲ್ಲಿ ಮೂತ್ರ ಮಾಡುವುದು ಹೊರನೋಟಕ್ಕೆ ಭಾರೀ ಸಮಸ್ಯೆಯಾಗಿ ಕಾಣದಿರಬಹುದು. ಆದರೆ ಇದಕ್ಕಾಗಿ ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಮಗುವಿನ ಆತ್ಮವಿಶ್ವಾಸ ಮತ್ತು ಆತ್ಮಗೌರವಕ್ಕೆ ಪೆಟ್ಟುಬೀಳಬಹುದು. ಮಗು ಹಾಸ್ಟೆಲ್‍ಗಳಿಗೆ ಹೋಗಿರಲು ಅಥವಾ ಸ್ನೇಹಿತರೊಡನೆ ಮುಕ್ತವಾಗಿ ಬೆರೆಯಲು ಹಿಂಜರಿಯಬಹುದು. ಇದರಿಂದ ಮಗುವಿನ ಒಟ್ಟಾರೆ ವ್ಯಕ್ತಿತ್ವ ವಿಕಸನ ಸಮರ್ಪಕವಾಗಿರುವುದಿಲ್ಲ.
ವಸಂತ್ ನಡಹಳ್ಳಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!