20.1 C
Sidlaghatta
Friday, November 22, 2024

ಮಗು ಬೆರಳು ಕಚ್ಚುತ್ತಿದ್ದೆಯೇ?

- Advertisement -
- Advertisement -

ಸಾಮಾನ್ಯವಾಗಿ ಮಕ್ಕಳು ಬೆರಳು ಚೀಪುವುದು ಅಥವಾ ಉಗುರನ್ನು ಕಚ್ಚುವುದನ್ನು ಮಾಡುತ್ತಾರೆ. ಆರೋಗ್ಯಕರ ಮನೋದೈಹಿಕ ಬೆಳವಣಿಗೆ ಇರುವ ಮಕ್ಕಳಲ್ಲಿ ಬೆಳೆಯುತ್ತಾ ಬಂದಂತೆ ಇದು ತಾನಾಗಿ ನಿಲ್ಲುತ್ತದೆ. ನಾಲ್ಕೈದು ವರ್ಷಗಳ ನಂತರವೂ ಇದು ಮುಂದುವರೆದರೆ ಪೋಷಕರು ಇದರ ಕಡೆ ಗಮನ ಹರಿಸುವ ಅಗತ್ಯವಿರುತ್ತದೆ.
ಸುಮಾರಾಗಿ ಎಲ್ಲಾ ತಂದೆತಾಯಿಗಳೂ ಎರಡು ವರ್ಷದ ನಂತರದಿಂದಲೇ ಬೆರಳು ಚೀಪುವ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ಇದನ್ನು ಮಾಡುವ ಅಗತ್ಯವಿದ್ದರೂ ಅವರು ಅನುಸರಿಸುವ ತಂತ್ರಗಳು ಮಾತ್ರ ಸೂಕ್ತವಾಗಿರುವುದಿಲ್ಲ. ಹೆಚ್ಚಿನ ಪೋಷಕರು ಇದೊಂದು ಅವಮಾನಕರ ಅಭ್ಯಾಸ, ಹಾಗಾಗಿ ಸಾರ್ವಜನಿಕವಾಗಿ ಮಕ್ಕಳು ಬೆರಳನ್ನು ಚೀಪುವುದು ತಮ್ಮ ಘನತೆಗೆ ಕುಂದು-ಎಂದುಕೊಳ್ಳುತ್ತಾರೆ. ಆದ್ದರಿಂದ ಬಲವಂತವಾಗಿ ಈ ಅಭ್ಯಾಸವನ್ನು ಬಿಡಿಸಲು ಯತ್ನಿಸುತ್ತಾರೆ. ದೆವ್ವ ಭೂತಗಳ ಭಯ ಹುಟ್ಟುಸುವುದು, ಜನರೆಲ್ಲಾ ನಗುತ್ತಾರೆ ಎಂದು ಹಂಗಿಸುವುದು ಮುಂತಾದ ಅಡ್ಡ ದಾರಿಗಳನ್ನು ಅನುಸರಿಸುತ್ತಾರೆ. ಇದರಿಂದ ಉಪಯೋಗವಾಗದಿದ್ದರೆ ಕೈಮೇಲೆ ಹೊಡೆಯುವುದು ಮುಂತಾದ ದೈಹಿಕ ಶಿಕ್ಷೆಯನ್ನೂ ನೀಡುತ್ತಾರೆ. ಮಕ್ಕಳ ಕೈ ಅಥವಾ ಬೆರಳುಗಳ ಮೇಲೆ ಬಿಸಿ ಮುಟ್ಟಿಸುವ ಕ್ರೂರ ತಂದೆತಾಯಿಗಳೂ ಇದ್ದಾರೆ. ಹೀಗೆ ಭಯ ಹುಟ್ಟಿಸಿ ಬೆರಳು ಚೀಪುವ ಅಭ್ಯಾಸವನ್ನು ನಿಲ್ಲಿಸಿದರೂ, ಇದರಿಂದ ಮಕ್ಕಳ ಮನಸ್ಸಿನ ಮೇಲೆ ಇತರ ದುಷ್ಪರಿಣಾಮಗಳಾಗುತ್ತವೆ ಎನ್ನುವುದನ್ನು ಮರೆಯಬಾರದು.
ಏನಿದರ ಹಿನ್ನೆಲೆ?
ಮೊದಲು ಈ ಅಭ್ಯಾಸದ ಹಿನ್ನೆಲೆಯನ್ನು ಸ್ವಲ್ಪ ನೋಡೋಣ. ಗರ್ಭದಿಂದ ಹೊರಬಂದ ನಂತರ ಮಗು ಸುತ್ತಲಿನ ಹೊರ ಜಗತ್ತಿಗೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಗರ್ಭಾಶಯದ ಸುರಕ್ಷಿತ ಕೋಣೆಯಿಂದ ಹೊರಬಂದ ಮಗುವಿಗೆ ಸುತ್ತಲಿನ ಪ್ರಪಂಚ ಅಭದ್ರತೆಯ ಭಾವನೆಯನ್ನು ಕೊಡುತ್ತಿರುತ್ತದೆ. ತಾಯಿಯ ಅಪ್ಪುಗೆ ಮತ್ತು ಸ್ತನಪಾನ ಅದಕ್ಕೆ ಭದ್ರತೆಯನ್ನು ನೀಡುವ ಕ್ಷಣಗಳು. ಇಂತಹ ಭದ್ರತೆಯ ಭಾವವನ್ನು ಮಗು ಬೆರಳನ್ನು ಚೀಪುವುದರಲ್ಲಿಯೂ ಕಂಡುಕೊಂಡಿರುತ್ತದೆ. ಹೊರ ಜಗತ್ತಿಗೆ ಹೊಂದಿಕೊಳ್ಳುತ್ತಾ ಬಂದಂತೆ ಈ ಅಭ್ಯಾಸ ಸಹಜವಾಗಿ ಕಡಿಮೆಯಾಗುತ್ತಾ ಬರುತ್ತದೆ. ಆದರೂ ಕೆಲವೊಮ್ಮೆ ಮಗು ಅಭ್ಯಾಸ ಬಲದಿಂದ ಬೆರಳು ಚೀಪುವುದನ್ನು ಮುಂದುವರೆಸಿಯೇ ಇರುತ್ತದೆ.
ಯಾವಾಗ ಇದು ಸಮಸ್ಯೆ?
ಪೋಷಕರು ಗಮನಿಸಬೇಕಾದ ಅಂಶವೆಂದರೆ ಮಗು ಒಂದೇ ಇದ್ದಾಗ, ಅದಕ್ಕೆ ಬೇಸರವಾದಾಗ ಅಥವಾ ಸಕ್ರಿಯವಾಗಿ ಏನನ್ನೂ ಮಾಡದೆ ಇರುವಾಗ ಬೆರಳನ್ನು ಚೀಪುತ್ತದೆ. ಆಟವಾಡುವಾಗ ಅಥವಾ ಸಂತೋಷದಿಂದಿರುವಾಗ ಇದರ ಅಗತ್ಯವಿರುವುದಿಲ್ಲ. ಇದರ ಅರ್ಥವೇನೆಂದರೆ, ನಾಲ್ಕೈದು ವರ್ಷದ ಮಗುವಿಗೆ ಈ ಅಭ್ಯಾಸವಿದ್ದರೆ ಅದು ಬೆರಳು ಚೀಪುವ ಸಂದರ್ಭದಲ್ಲಿ ಮಾನಸಿಕವಾಗಿ ಖುಷಿಯಾಗಿರುವುದಿಲ್ಲ. ಯಾವುದೋ ಮುಜುಗರ ಅಥವಾ ಬೇಸರವನ್ನು ಅನುಭವಿಸುತ್ತಿರುತ್ತದೆ. ಅಷ್ಟು ಸಣ್ಣ ಮಗುವಿಗೆ ಅದೆಂತಹ ಬೇಸರ ಎಂದು ಮೂಗುಮುರಿಯಬೇಡಿ. ಭಾವನೆಗಳನ್ನು ಅನುಭವಿಸುವ ಮೆದುಳಿನ ಭಾಗವಾದ ಅಮಿಗ್ಡಾಲ ಹುಟ್ಟುವಾಗಲೇ ಸಂಪೂರ್ಣ ಬೆಳವಣಿಗೆಯಾಗಿರುತ್ತದೆ. ಆದರೆ ಮಗುವಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಶಬ್ಧಗಳ ಕೊರತೆ ಇರುವುದರಿಂದ ಅದನ್ನು ದೇಹಭಾಷೆಯಲ್ಲಿ ತೋರಿಸುತ್ತದೆ. ಇದನ್ನು ತಿಳಿಯದೆ ಬರಿ ಶಿಕ್ಷೆ, ಬುದ್ಧಿವಾದಗಳಿಂದ ಬದಲಾವಣೆ ಸಾಧ್ಯವಿಲ್ಲ.
ಎಲ್ಲಿದೆ ಪರಿಹಾರ?
1. ತಕ್ಷಣದಿಂದ ಎಲ್ಲಾ ರೀತಿಯ ಶಿಕ್ಷೆಯನ್ನು ನಿಲ್ಲಿಸಬೇಕು. ಇದೊಂದು ದೊಡ್ಡ ಅವಮಾನಕರ ಅಭ್ಯಾಸ ಎನ್ನುವ ಭಾವನೆಯನ್ನು ಮಗುವಿನಲ್ಲಿ ಉಂಟಾಗುವಂತೆ ವರ್ತಿಸಬಾರದು. ಎಲ್ಲರೆದುರು ಮಗುವನ್ನು ಬೈಯುವುದಾಗಲೀ ಅವಮಾನ ಮಾಡುವುದಾಗಲೀ ಸಂಪೂರ್ಣ ನಿಷಿದ್ಧ.
2. ಆರೋಗ್ಯದ ದೃಷ್ಟಿಯಿಂದ ಈ ಅಭ್ಯಾಸ ಒಳ್ಳೆಯದಲ್ಲ ಎಂದು ಪದೇಪದೇ ಮನವರಿಕೆ ಮಾಡಿಕೊಡಬೇಕು.
3. ಮಗು ಬೆರಳು ಚೀಪುತ್ತಿದ್ದರೆ ಅದರ ಗಮನವನ್ನು ಬೇರೆ ಕಡೆ ತಿರುಗಿಸಿ, ಅಂದರೆ ಮಗುವಿಗೆ ಹೆಚ್ಚು ಖುಷಿ ಕೊಡುವ ಅಂಶಗಳ ಬಗೆಗೆ ಗಮನ ಸೆಳೆಯಲು ಯತ್ನಿಸಿದರೆ ಇಂತಹ ಅಭ್ಯಾಸ ಕಡಿಮೆಯಾಗುತ್ತದೆ. ಕೈಬೆರಳುಗಳನ್ನು ಬೇರೆ ಸಂತೋಷಕೊಡುವ ಕ್ರಿಯೆಗಳಲ್ಲಿ ತೊಡಗಿಸಿದಾಗ (ಉದಾ; ಚಂಡಿನ ಆಟ, ಚಪ್ಪಾಳೆ, ನೃತ್ಯ, ಮುಂತಾದವು) ಮಗುವಿಗೆ ಅದನ್ನು ಬಾಯಿಗೆ ಹಾಕುವ ಸಾಧ್ಯತೆ ಇರುವುದಿಲ್ಲ. ಟೀವಿ ನೋಡುವ ಸಮಯವನ್ನು ನಿಯಂತ್ರಿಸದಿದ್ದರೆ ಬೆರಳು ಚೀಪುವ ಅಭ್ಯಾಸ ಮುಂದುವರೆಯುವ ಸಾಧ್ಯತೆಗಳು ಹೆಚ್ಚು.
4. ಮಗು ಯಾವ ಸಂದರ್ಭಗಳಲ್ಲಿ ಈ ಅಭ್ಯಾಸವನ್ನು ಹೆಚ್ಚಾಗಿ ಮಾಡುತ್ತಿದೆ ಎಂದು ಗಮನಿಸುತ್ತಿರಬೇಕು. ಅಂತಹ ಪರಿಸ್ಥಿತಿಗಳಲ್ಲಿ ಮಗುವಿನ ಮನಸ್ಸಿನಲ್ಲಿರಬಹುದಾದ ಬೇಸರ ಆತಂಕಗಳನ್ನು ಅರ್ಥಮಾಡಿಕೊಂಡು ಅದರ ನಿವಾರಣೆಗೆ ಯತ್ನಿಸಬೇಕು.
5. ಪೋಷಕರಿಗೆ ಅಗತ್ಯವಿರುವುದು ಸಹನೆ ಮತ್ತು ಸೂಕ್ಷ್ಮತೆ. ಆದ್ದರಿಂದ ಒರಟಾಗಿ ವರ್ತಿಸಿ ಮುಗ್ಧ ಮಗುವಿನಲ್ಲಿ ಅನಗತ್ಯ ಭಯವನ್ನು ಬಿತ್ತಬಾರದು.
ಐದಾರು ವರ್ಷಗಳ ನಂತರವೂ ಇಂತಹ ಅಭ್ಯಾಸ ಮುಂದುವರೆದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ವಸಂತ್ ನಡಹಳ್ಳಿ

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!