ಸಂಜೆ ಆರಕ್ಕೆ “ಅಯ್ಯೋ ಮಕ್ಕಳಿಗೆ ಹೋಂವರ್ಕ್ ಮಾಡಿಸ್ಬೇಕ್ರೀ” ಎಂದೆನ್ನುತ್ತಾ ಹರಟೆ ಕಟ್ಟೆಯಿಂದ ಓಡಿ ಮನೆಸೇರುವ ತಾಯಂದಿರು ಮುಂದಿನ ಮೂರ್ನಾಲ್ಕು ಗಂಟೆಗಳ ಕಾಲ ಮಗು ಮಲಗುವವರೆಗೂ ಇದೇ ತರಾತುರಿಯಲ್ಲಿರುತ್ತಾರೆ. ಉದ್ಯೋಗಸ್ಥ ಮಹಿಳೆಯರಾದರಂತೂ ಬಿಡಿ, ಕಛೇರಿಯಿಂದ ಸಂಜೆ ಮನೆಗೆ ಬಂದೊಡನೆ ಮನೆಕೆಲಸದ ಜೊತೆಗೆ ನಿತ್ಯವೂ ಈ ಹೋಂವರ್ಕ್‍ನ ಗೋಳು ಇದ್ದಿದ್ದೇ. ಪ್ರಾಥಮಿಕ ಶಾಲೆಯ ಮಕ್ಕಳಾದರೆ ಅವರ ಹೋಂವರ್ಕ್‍ಗೆ ಪೋಷಕರ ನೆರವು ಅಗತ್ಯ ಎನ್ನುವುದನ್ನು ಒಪ್ಪಬಹುದು. ಇದೇ ಅಭ್ಯಾಸ ಪ್ರೌಢಶಾಲೆ ಮತ್ತು ಕಾಲೇಜು ಸೇರಿದರೂ ಮುಂದುವರೆಯುತ್ತಿದೆ ಎಂದರೆ ನಾವು ಮಕ್ಕಳನ್ನು ಬೆಳೆಸಿರುವ ರೀತಿಯಲ್ಲಿ ಏನೋ ತಪ್ಪಾಗಿದೆ ಅಂತ ನಿಮಗನ್ನಿಸೋದಿಲ್ಲವಾ?
ಹೀಗೆ ಹೋಂವರ್ಕ್ ಮಾಡಿಸುವುದಾದರೂ ಎಂತಹ ತರಲೆ ವಿಷಯ ಅಂತ ಸಾಕಷ್ಟು ಜನ ಅಪ್ಪಂದಿರಿಗೆ ಗೊತ್ತಿಲ್ಲ. ಒಬ್ಬ ಮಿಸ್‍ಗೆ ಇರುವ ವಿದ್ಯಾರ್ಹತೆಯೆಲ್ಲ ಇದಕ್ಕೆ ಬೇಕು. ಆದರೆ ಶಾಲೆಯಲ್ಲಿ ಮಿಸ್‍ಗೆ ಇರುವ ಮಕ್ಕಳ ಮೇಲಿನ ಹಿಡಿತ ತಾಯಂದಿರಿಗೆ ಇರುವುದಿಲ್ಲ. ತಾಯಿಯನ್ನು ಕಂಡಕೂಡಲೇ ಮಕ್ಕಳು ಏನೆಲ್ಲಾ ಮಂಗಾಟಗಳನ್ನು ಶುರುಮಾಡುತ್ತವೆ. ಆಟವಾಡುವಾಗ ಕಂಡಿರದ ಏನೆಲ್ಲಾ ನೋವು, ಗಾಯಗಳು ಹೊರಬರುತ್ತವೆ; ಹಸಿವು, ಬಾಯಾರಿಕೆಗಳಾಗುತ್ತವೆ; ಜೊತೆಗೆ ಶಾಲೆಯಲ್ಲಿ ನಡೆದ ಏನೆಲ್ಲಾ ಸಮಾಚಾರಗಳನ್ನು ಅಮ್ಮನಿಗೆ ಹೇಳಬೇಕಾಗಿರುತ್ತದೆ! ಇವುಗಳ ಮಧ್ಯೆ ಹೋಂವರ್ಕ್‍ಗೆ ಸಿಗುವ ವೇಳೆ ಅತ್ಯಲ್ಪ. ಮನಸ್ಸನ್ನು ಕಲ್ಲು ಮಾಡಿಕೊಂಡು ಮಗುವಿಗೆ ಬೈಯ್ಯುವುದೋ ಅಥವಾ ಹೊಡೆಯುವುದೋ ಮಾಡಿದರೆ ಕಣ್ಣೀರ ಧಾರೆ ಹರಿಯಬಹುದು. ಆಗ ಮಕ್ಕಳಿಗೆ ಮನೆಯ ಹಿರಿಯರದ್ದೋ ಅಥವಾ ಅಪ್ಪಂದಿರದ್ದೋ ಅನುಕಂಪ ಸಿಕ್ಕಿಬಿಟ್ಟರೆ, ಬಿಡಿ ತಾಯಂದಿರದು ನಾಯಿಪಾಡು. ಹಾಗೂ ಹೀಗೂ ಊಟಮಾಡಿ ತೂಕಡಿಕೆ ಬರುವವರೆಗೂ ಎಳೆದಾಡಿ, ಕೆಲವೊಮ್ಮೆ ಬೆಳಿಗ್ಗೆಗೂ ಸ್ವಲ್ಪ ಉಳಿಸಿಕೊಂಡು ಮಗು ಮಲಗುವಷ್ಟರಲ್ಲಿ ಅಮ್ಮಂದಿರು ಅರ್ಧ ಹೆಣವಾಗಿರುತ್ತಾರೆ. ಇದು ಒಂದು ಮಗುವಿನ ಕಥೆಯಾದರೆ, ಇಬ್ಬರಿದ್ದರಂತೂ ಬಿಡಿ, ಅವರ ಜಗಳಗಳನ್ನೂ ಬಗೆಹರಿಸುತ್ತಾ ಹೋಂವರ್ಕ್ ಮಾಡಿಸುವುದು ನಿತ್ಯದ ಮಹಾಸಾಧನೆಯಾಗುತ್ತದೆ.
ಇದು ಪ್ರಾಥಮಿಕ ಶಾಲಾ ಹಂತದಲ್ಲೇನೋ ಸರಿ. ಮಗು ಬೆಳೆಯುತ್ತಾ ಬಂದಂತೆ, ತನ್ನೆಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಜವಾಬ್ದಾರಿಯನ್ನು ಮೂಡಿಸಬೇಕಲ್ಲವೇ? ಹಾಗೆ ಮಾಡದೆ ತಾವೇ ಕೈ ಹಿಡಿದು ನಡೆಸುವ ತಾಯಂದಿರು, ತಾತ್ಕಾಲಿಕವಾಗಿ ಭಾರೀ ಜವಾಬ್ದಾರಿಯುತ ಪೋಷಕರಂತೆ ಕಂಡರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ನ್ಯಾಯವೆಸುಗುತ್ತಿರುವುದಿಲ್ಲ.
ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸುವ ವಿಚಾರದಲ್ಲಿ ದೊಡ್ಡ ತೊಂದರೆ ಇರುವುದು ಮಕ್ಕಳಲ್ಲಲ್ಲ, ಪೋಷಕರಲ್ಲೇ ಎಂದು ಯಾರಾದರೂ ಹೇಳಿದರೆ ನೀವು ಮೂಗು ಮುರಿಯಬಹುದು. ಆದರೆ ಇದು ವಸ್ತುಸ್ಥಿತಿ. ಮಕ್ಕಳಿಗೆ ತಮ್ಮ ಕೆಲಸ ಸ್ವಂತವಾಗಿ ಮಾಡಿಕೊಳ್ಳುವ ಅವಕಾಶ ಕೊಡದಿದ್ದರೆ ಅವರಿಗೆ ತಮ್ಮ ಹೊಣೆಗಾರಿಕೆಯ ಅರಿವಾಗುವುದಿಲ್ಲ. ಹಾಗೆ ಅವರನ್ನು ಅವರಷ್ಟಕ್ಕೆ ಬಿಟ್ಟರೆ, ಅವರು ಹೋಂವರ್ಕ್ ಮಾಡದೆ ಹೋಗಬಹುದು ಅಥವಾ ತಪ್ಪಾಗಿ ಮಾಡಬಹುದು; ಮಿಸ್ ದಿನಚರಿ ಪುಸ್ತಕದಲ್ಲಿ ಕೆಟ್ಟ ಅಭೀಪ್ರಾಯ ಕೊಡಬಹುದು; ಮಗುವಿಗೆ ಬರಬೇಕಾದ ರ್ಯಾಂಕ್ ಇನ್ನಾರದೋ ಪಾಲಾಗಬಹುದು- ಎನ್ನುವ ರೀತಿಯ ಅನಗತ್ಯ ಅನುಮಾನ, ಆತಂಕಗಳೇ ಪೋಷಕರನ್ನು ಕಾಡಿ, ಬೇಡಿ ಬೆದರಿಸಿ ನಂಬಿಸಿ, ಅಂತೂ ಹೇಗಾದರೂ ಮಕ್ಕಳಿಂದ ಹೋಂವರ್ಕ್ ಮಾಡಿಸುವುದಕ್ಕೆ ಪ್ರೇರೇಪಿಸುತ್ತದೆ. ಅಮ್ಮ ಹೇಗೂ ಮಾಡಿಸುತ್ತಾಳೆ ಎಂದು ಮಗು ಮಾನಸಿಕವಾಗಿ ಸೋಮಾರಿಯಾಗಿ ಹೇಳಿದಾಗ, ಹೇಳಿದಷ್ಟನ್ನು ಮಾತ್ರ ಮಾಡುತ್ತದೆ. ಪೋಷಕರು ಎಲ್ಲಾ ಜವಾಬ್ದಾರಿಯನ್ನು ಹೊತ್ತು ತಮ್ಮ ಮಕ್ಕಳಿಗಾಗಿ ತಾವು ಏನೆಲ್ಲಾ ತ್ಯಾಗ ಮಾಡುತ್ತಿದ್ದೇವೆಂಬ ಭ್ರಮೆಯಲ್ಲಿರುತ್ತಾರೆ, ಆದರು ನಿಜವಾಗಿ ಅವರು ಮಕ್ಕಳಿಗೆ ತ್ಯಾಗಕ್ಕಿಂತ ಹೆಚ್ಚಾಗಿ ಅನ್ಯಾಯವನ್ನೇ ಮಾಡುತ್ತಿರುತ್ತಾರೆ.
ಹಾಗಾಗಿ ಕಡೆಯ ಪಕ್ಷ ಮಗು ಮಾಧ್ಯಮಿಕ ಶಾಲೆಗೆ ಬರುವಷ್ಟರಲ್ಲಿ ತನ್ನ ಕೆಲಸಗಳನ್ನು ಸ್ವತಂತ್ರವಾಗಿ ನಿಭಾಯಿಸಬಲ್ಲ ಹೊಣೆಗಾರಿಕೆ ಅದಕ್ಕೆ ಬರಬೇಕು. ಇದಕ್ಕಾಗಿ ಪೋಷಕರು ಪ್ರಾಥಮಿಕ ಶಾಲಾ ಹಂತದಿಂದಲೇ ಮಗುವನ್ನು ತಯಾರು ಮಾಡುತ್ತಾ ಬರಬೇಕು. “ನಿನಗೆ ತಿಳಿಯದ ವಿಷಯದಲ್ಲಿ ನಾನು ಸಹಾಯ ಮಾಡುತ್ತೇನೆ, ಆದರೆ ದಿನಚರಿ ನೋಡುವುದು, ಸಮಯಕ್ಕೆ ಸರಿಯಾಗಿ ಬರೆಯಲು ಪ್ರಾರಂಭಿಸಿವುದು ನಿಮ್ಮ ಜವಾಬ್ದಾರಿ” ಎಂದು ತಿಳಿಸಿ. ಅವರು ಕಡೆಗಣಿಸಿದರೆ ಕೆಲವೊಮ್ಮೆ ಶಾಲೆಯಲ್ಲಿ ಶಿಕ್ಷೆ ಅನುಭವಿಸಲಿ ಬಿಡಿ. ಅದೇನು ಭಾರೀ ಅವಮಾನದ ವಿಚಾರ ಅನ್ನೋತರ ಎಲ್ಲಾ ನಿಮ್ಮ ತಲೆಯ ಮೇಲೆ ಎಳೆದುಕೊಳ್ಳಬೇಡಿ. ತಪ್ಪು ಮಾಡುವುದನ್ನೇ ತಪ್ಪಿಸಿದರೆ ಸರಿ ಮಾಡುವುದನ್ನು ಕಲಿಸಿದಂತಾಗುವುದಿಲ್ಲ. ಶಿಕ್ಷೆ ಅನುಭವಿಸಿದ ಮೇಲೆ ಹಂಗಿಸಬೇಡಿ. “ನಾನು ಮೊದಲೇ ಹೇಳಿದ್ದೆ, ನಾನು ಹೇಳಿದ ಹಾಗೆ ಕೇಳಿದ್ದರೆ ಹೀಗಾಗುತ್ತಿತ್ತಾ? ಈಗ ಅನುಭವಿಸು” ಎನ್ನುವ ಪ್ರತೀಕಾರದ ರೀತಿಯ ಮಾತುಗಳಿಂದ ಮಕ್ಕಳನ್ನು ಚುಚ್ಚಬೇಡಿ. ಮತ್ತೊಮ್ಮೆ ಇಂತಹ ತಪ್ಪು ಆಗುವುದಕ್ಕೆ ಅವಕಾಶ ಕೊಡಬಾರದೆಂದು ಪ್ರೀತಿಯಿಂದ ಎಚ್ಚರಿಸಿ. ಯಾವುದೇ ವಯಸ್ಸಿನ ಮಗುವಿಗೂ ನೀವು ಬರೆದುಕೊಡಬೇಡಿ. ಹೋಂವರ್ಕ್ ತೀರಾ ಹೆಚ್ಚಾಗಿರುತ್ತದೆ ಅನ್ನಿಸಿದರೆ ಶಾಲೆಯವರೊಡನೆ ಇದರ ಬಗೆಗೆ ಚರ್ಚಿಸಿ.
ಹೋಂವರ್ಕ್ ಮಾಡಲು ಒಂದು ಸ್ಥಳ, ಸಮಯ ನಿಗದಿಪಡಿಸಿ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಟೀವಿ ನೋಡಬಾರದೆಂದು ಕಡ್ಡಾಯ ಮಾಡಿ. ಇಲ್ಲದಿದ್ದರೆ ಒಂದು ತಾಸಿನ ಕೆಲಸ ನಾಲ್ಕು ತಾಸಾದರೂ ಮುಗಿಯುವುದಿಲ್ಲ ಮತ್ತು ಮಾಡಿದ ಕೆಲಸ ಸಮರ್ಪಕವಾಗಿಯೂ ಇರುವುದಿಲ್ಲ. ತಪ್ಪಿಲ್ಲದ ಕ್ರಮಬದ್ಧ ಕೆಲಸಕ್ಕೆ ವಾರಾಂತ್ಯದಲ್ಲಿ ಸಣ್ಣ ಪುಟ್ಟ ಬಹುಮಾನ ಕೊಡಿ. ಇದನ್ನು ಅತಿಯಾಗಿ ಬಳಸಿದರೆ ಅದು ಬೆಲೆ ಕಳೆದುಕೊಳ್ಳುತ್ತದೆ. ಮಕ್ಕಳು ತಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡಿದಾಗ ಎಲ್ಲರೆದುರು ಮುಕ್ತವಾಗಿ ಹೊಗಳಿ, ಅವರ ಆತ್ಮಗೌರವಕ್ಕೆ ಇಂಬು ಕೊಡಿ.
ಹೀಗೆ ಹಂತಹಂತವಾಗಿ ಪ್ರಯತ್ನ ಮಾಡುತ್ತಾ ಹೋದರೆ ಮಾಧ್ಯಮಿಕ ಶಾಲೆಗೆ ಬರುವ ಹೊತ್ತಿಗೆ ಮಕ್ಕಳು ಸ್ವತಂತ್ರರಾಗಿರುತ್ತಾರೆ. ನಂತರ ಆಗಾಗ ಮೇಲ್ವಿಚಾರಣೆ ಮಾಡಿಕೊಂಡರೆ ಸಾಕು. ನಿಮ್ಮ ಇತರ ಕೆಲಸಗಳಿಗೆ ಸಾಕಷ್ಟು ಸಮಯ ಸಿಗುತ್ತದೆ. ಆದರೆ ಎಚ್ಚರವಿರಲಿ, ಮಕ್ಕಳನ್ನು ಬರೆಯಲು ಕೂರಿಸಿ ನೀವು ಟೀವಿ ಮುಂದೆ ಸ್ಥಾಪಿತರಾದಿರೋ, ಮತ್ತೆ ಹಳೆಯ ಚಾಳಿಗಳು ಶುರುವಾಗಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಕೆಲವು ವಿಷಯಗಳ ಶಿಸ್ತನ್ನು ಮನೆಯವರೆಲ್ಲಾ ಖಾಯಂ ಆಗಿ ಪಾಲಿಸದಿದ್ದರೆ, ಮಕ್ಕಳಿಗೆ ನಾವು ಮಾಡುವುದು ಬರೀ ಉಪದೇಶವಾಗಿ ಉಳಿಯುತ್ತದೆ. ನಿತ್ಯದ ಹೋರಾಟ ತಪ್ಪುವುದೇ ಇಲ್ಲ.
ನನ್ನ ಅನುಭವದಲ್ಲಿ ಹೆಚ್ಚಿನ ತಾಯಂದಿರ ಆತಂಕ ಮಗು ಎಲ್ಲಿ ತಪ್ಪು ಮಾಡಿಬಿಡಬಹುದೋ ಎನ್ನುವುದು. ಅದರಿಂದ ಹೊರಬಂದು ಮಗುವಿಗೆ ಹಂತಹಂತವಾಗಿ ಸ್ವಾತಂತ್ರ ನೀಡುತ್ತಾ ಹೋಗಿ. ಅಂತಹ ಸ್ವಾತಂತ್ರವನ್ನು ಸದುಪಯೋಗಪಡಿಸಿಕೊಳ್ಳುವುದನ್ನು ಕಲಿಸಿ. ತಪ್ಪು ಮಾಡುವುದು ತಪ್ಪಲ್ಲ, ತಪ್ಪುಗಳಿಂದ ಬದಲಾಗದೇ ಇರುವುದು ತಪ್ಪು ಎನ್ನುವ ಮನೋಭಾವ ಬೆಳಿಸಿ. ಆಗ ಮಕ್ಕಳ ವ್ಯಕ್ತಿತ್ವ ಅರಳುವುದನ್ನು ನೋಡುವ ಖುಷಿ ನಿಮ್ಮದಾಗುತ್ತದೆ.
ವಸಂತ್ ನಡಹಳ್ಳಿ
- Advertisement -
- Advertisement -
- Advertisement -
- Advertisement -