20.1 C
Sidlaghatta
Friday, November 22, 2024

ಮಕ್ಕಳಿಗೆ ಬೆಂಬಲವೇ?, ಮಕ್ಕಳೊಡನೆ ಪಾಲುದಾರಿಕೆಯೇ?

- Advertisement -
- Advertisement -

ಇವನಿಗೆ ಏನೆಲ್ಲಾ ಸೌಲಭ್ಯ ಮಾಡಿಕೊಟ್ಟಿದ್ದೇವೆ. ಆದರೂ ಸರಿಯಾಗಿ ಓದಿ ಅಂಕ ತೆಗೆಯಲ್ಲ ನೋಡಿ.
ಇವಳನ್ನು ಇಪ್ಪತ್ತೈದು ವರ್ಷ ಗಿಣಿ ಸಾಕಿದ ಹಾಗೆ ಸಾಕಿ, ಇವಳು ಕೇಳಿದ್ದನ್ನೆಲ್ಲಾ ಕೊಡಿಸಿ, ಇವಳು ಹೇಳಿದ ಹಾಗೆ ಕುಣಿದಿದ್ದಕ್ಕೆ, ಈಗ ನೋಡಿ ಎಂತಹ ಉಪಕಾರ ಮಾಡಿದಾಳೆ. ನಮ್ಮನ್ನು ಕೇಳದೆ ನಮಗೆ ಗೊತ್ತಿಲ್ಲದ ಹಾಗೆ ಅದ್ಯಾವನ್ನೋ ಕಟ್ಟಿಕೊಂಡು ಹೋಗಿದ್ದಾಳೆ.
ನೋಡಿ ಇವನಿಗೆ ದೊಡ್ಡ ಕೆಲಸ ಸಿಗೋವರೆಗೆ ನಾವು ಎಂತಹಾ ತ್ಯಾಗ ಮಾಡಿ ಇವನನ್ನು ಬೆಳೆಸಿದ್ದೇವೆ, ಈಗ ಅಪ್ಪ ಅಮ್ಮ ಅಂದ್ರೆ ಲೆಕ್ಕಕ್ಕೇ ಇಲ್ಲದ ಹಾಗಿ ವರ್ತಿಸುತ್ತಾನೆ. ನಾವು ಕೇಳೆದ್ದೆಲ್ಲಾ ತಂದುಕೊಡ್ತಾನೆ ಸರಿ, ಆದರೆ ಹಾಸಿಗೆ ಹಿಡಿದಿರುವ ನಮ್ಮ ಜೊತೆಗೆ ದಿನಕ್ಕೆ ಹತ್ತು ನಿಮಿಷನಾದ್ರೂ ಪ್ರೀತಿ, ಸಮಾಧಾನದಿಂದ ಮಾತಾಡೋದು ಬೇಡ್ವಾ? ಹೆಂಡತಿ ಮಕ್ಕಳ ಜೊತೆ ಮನೆಯಲ್ಲಿ ಯಾವಾಗ್ಲೂ ಲಲ್ಲೆಗರೆಯುತ್ತಾ ಇರುತ್ತಾನೆ, ನಾವು ಮಾತನಾಡಿಸಿದರೆ ಮಾತ್ರ ಸಿಡುಕುತ್ತಾನೆ.
ಇಂತಹ ಮಾತುಗಳನ್ನು ಸಾಕಷ್ಟು ಪೋಷಕರ ಬಾಯಲ್ಲಿ ಕೇಳುತ್ತೇವೆ. ತಂದೆ ತಾಯಿಗಳನ್ನು ಕಡೆಗಣಿಸಿದ ಇಂತಹ ಕೃತಘ್ನ ಮಕ್ಕಳ ಬಗೆಗೆ ಎಲ್ಲಾ ಭಾಷೆಯಲ್ಲಿ ಸಾವಿರಾರು ಕಾದಂಬರಿಗಳು ಬಂದಿವೆ, ನೂರಾರು ಸಿನಿಮಾಗಳು ಬಂದಿವೆ. ಸಾಹಿತ್ಯ ಸಿನಿಮಾಗಳಲ್ಲಿ ಬಿಡಿ, ಮಕ್ಕಳಿಗೆ ಕೊನೆಗೆ-ಕೆಲವೊಮ್ಮೆ ಅಪ್ಪ ಅಮ್ಮ ಸತ್ತ ಮೇಲಾದರೂ – ಜ್ಞಾನೋದಯ ಆಗುತ್ತದೆ. ಆದರೆ ವಾಸ್ತವದಲ್ಲಿ ಹಾಗೆ ಆಗುವುದು ಬಹಳ ಕಡಿಮೆ. ಹಾಗಿದ್ದರೆ ಸಾಹಿತ್ಯ ಸಿನಿಮಾಗಳಲ್ಲಿ ತೋರಿಸಿರುವಂತೆ ಇಂತಹ ಮಕ್ಕಳೆಲ್ಲಾ ದುಷ್ಟರೇ, ಸ್ವಾರ್ಥಿಗಳೇ? ಅಥವಾ ಇದಕ್ಕಿಂತ ಹೆಚ್ಚಿನ ಆಯಾಮವೇನಾದರೂ ಇದೆಯೇ?
ಪ್ರೀತಿ ಹುಟ್ಟುವುದು ಹೇಗೆ?
ಮಕ್ಕಳ ವರ್ತನೆಯ ಬಗೆಗೆ ಬಹಳ ಬೇಸರದಲ್ಲಿದ್ದ ತಂದೆತಾಯಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಕಥೆಯನ್ನು ತಾಳ್ಮೆಯಿಂದ ಆಲಿಸಿದ ನಂತರ ಕೇಳಿದೆ, “ಸಾರ್ ನಿಮ್ಮ ಮಕ್ಕಳು ನಿಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು, ಸಾಧ್ಯವಿದ್ದರೆ ನಡೆಸಿಕೊಡಬೇಕು ಅಂತ ನಿಮಗೆ ಏಕೆ ಅನಿಸುತ್ತದೆ?”
ಇಬ್ಬರೂ ಒಕ್ಕೊರಲಿನಲ್ಲಿ ಹೇಳಿದರು, “ಏನ್ಸಾರ್ ಹೀಗೆ ಕೇಳ್ತೀರಾ. ಮಕ್ಕಳನ್ನು ಹೊತ್ತು, ಹೆತ್ತು ಇಷ್ಟೆಲ್ಲಾ ವರ್ಷ ಅವರು ಕೇಳಿದ್ದನ್ನೆಲ್ಲಾ ಕೊಡಿಸಿ ಪ್ರೀತಿಯಿಂದ ಸಾಕಿದೀವಿ. ಈಗ ಅವರು ನಮ್ಮನ್ನು ಸರಿಯಾಗಿ ನೋಡಿಕೊಳ್ಳಲೇ ಬೇಕಲ್ವಾ?”
“ನೋಡಿ ಸಾರ್ ಹೊರುವುದು ಹೆರುವುದು ಪ್ರಾಕೃತಿಕ ಕ್ರಿಯೆ. ಇದರಿಂದ ನಮಗೆ ಮಕ್ಕಳ ಮೇಲೆ ಮಮಕಾರ ಹುಟ್ಟುತ್ತದೆ. ಆದರೆ ಮಕ್ಕಳಿಗೆ ಇವರು ತಂದೆತಾಯಿಗಳು ಅನ್ನುವ ಕಲ್ಪನೆ ಒಡನಾಟದಿಂದ ಮಾತ್ರ ಬರುತ್ತದೆ. ತಂದೆತಾಯಿಗಳಿಂದ ದೂರವಿದ್ದ ಮಕ್ಕಳು ತಮ್ಮನ್ನು ಬೆಳೆಸಿದ ಅಜ್ಜಿ, ಮಾವ ಮುಂತಾದವರನ್ನೇ ಹೆಚ್ಚಾಗಿ ಹಚ್ಚಿಕೊಳ್ಳೋದನ್ನು ನಾವು ನೋಡಿರುತ್ತೇವೆ. ಅಂದರೆ ಹೆಚ್ಚು ಒಡನಾಡಿದವರೊಡನೆ ಆತ್ಮೀಯತೆ ಹೆಚ್ಚಾಗಿರುತ್ತದೆ. ಇನ್ನು ಅವರು ಕೇಳಿದ್ದನ್ನೇಲ್ಲಾ ಕೊಡಿಸಿದ್ದೇವೆ ಅಂತ ಹೇಳಿದಿರಿ. ಅಂದರೆ ಹಣದಿಂದ ಕೊಳ್ಳಬಹುದಾದ್ದನ್ನು ನೀವು ಅವರಿಗೆ ಕೊಡಿಸಿ ಅದನ್ನೇ ಪ್ರೀತಿ ಅಂದುಕೊಂಡಿರಿ. ಅಥವಾ ಮಕ್ಕಳಿಗೆ ಖಾಯಿಲೆಯಾದಾಗ ನರ್ಸಗಳಂತೆ ಕರ್ತವ್ಯದ ರೀತಿಯಲ್ಲಿ ಅವರಿಗೆ ಶುಶ್ರೂಷೆ ಮಾಡಿದ್ದನ್ನೇ ಕಾಳಜಿ ಅಂದುಕೊಂಡಿರಿ. ಅಲ್ಲವೇ?”
“ಇದಕ್ಕಿಂತ ಹೆಚ್ಚಿಗೆ ನಾವು ಏನು ಮಾಡಬೇಕಾಗಿತ್ತು ಅಂತ ನಿಮ್ಮ ಅನಿಸಿಕೆ ಸಾರ್?” ನನ್ನ ಚಿಂತನೆಯ ಧಾಟಿ ಅರ್ಥವಾಗದ ದಂಪತಿಗಳು ನನ್ನನ್ನೇ ಪ್ರಶ್ನಿಸಿದರು. ಈ ಪ್ರಶ್ನೆ ನಿಮ್ಮಲ್ಲಿ ಹೆಚ್ಚಿನವರ ಮನಸ್ಸಿನಲ್ಲಿ ಈಗಾಗಲೇ ಬಂದಿರುತ್ತದೆ. ಹಾಗಾಗಿ ಆಪ್ತಸಲಹೆಯ ಮುಂದಿನ ಭಾಗವನ್ನು ಮರೆತು ಈ ಪ್ರಶ್ನೆಯ ಬಗೆಗೆ ಮಾತ್ರ ನೋಡೋಣ.
ಬೆಂಬಲವೋ? ಒಳಗೊಳ್ಳುವಿಕೆಯೋ?
ನಾವೆಲ್ಲಾ ಹೆಚ್ಚಿನ ಸಮಯ ಮಕ್ಕಳಿಗೆ ಕೊಡುತ್ತಿರುವುದು ಬರಿಯ ಬೆಂಬಲ ಮಾತ್ರ, ಇಂತಹ ಬೆಂಬಲವನ್ನೇ ನಾವು ಪ್ರೀತಿ ಅಂದುಕೊಳ್ಳುವ ತಪ್ಪು ಮಾಡುತ್ತೇವೆ. ಆದರೆ ನಿಜವಾದ ಪ್ರೀತಿ, ಆತ್ಮೀಯತೆ, ಅಂಟಿಕೊಳ್ಳುವಿಕೆ (ಅಟ್ಯಾಚ್‍ಮೆಂಟ್) ಹುಟ್ಟುವುದು ಮತ್ತು ದೀರ್ಘಕಾಲ ಉಳಿಯುವುದು ಬರಿಯ ಬೆಂಬಲ ಅಥವಾ ಕರ್ತವ್ಯದಿಂದ ಸಾಧ್ಯವಿಲ್ಲ. ಇದಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ಒಂದು ರೀತಿಯ ಒಳಗೊಳ್ಳುವಿಕೆಯ (ಇನ್‍ವಾಲ್ವ್‍ಮೆಂಟ್) ಅಗತ್ಯವಿರುತ್ತದೆ. ಹಾಗೆ ನೋಡಿದರೆ ಈ ಇನ್‍ವಾಲ್ವ್‍ಮೆಂಟ್ ಎಲ್ಲಾ ಸಂಬಂಧಗಳಲ್ಲಿಯೂ ಇರಬೇಕಾಗುತ್ತದೆ. ಆದರೆ ಸ್ವರೂಪಗಳಲ್ಲಿ ಭಿನ್ನತೆ ಇರುತ್ತದೆ. ಪತಿಪತ್ನಿಯರ ಸಂಬಂಧಗಳಲ್ಲಂತೂ ಇದು ಅತ್ಯಗತ್ಯ ಇನ್‍ವಾಲ್ವ್‍ಮೆಂಟ್ ಇಲ್ಲದ ದಂಪತಿಗಳು ಒಟ್ಟಾಗಿ ಬದುಕುತಿದ್ದರೂ ಅಪರಿಚಿತರಂತೆಯೇ ಇರುತ್ತಾರೆ.
ಸಧ್ಯಕ್ಕೆ ಮಕ್ಕಳ ವಿಚಾರದಲ್ಲಿ ಬೆಂಬಲಕ್ಕೂ ಒಳಗೊಳ್ಳುವಿಕೆಗೂ ಇರುವ ವ್ಯತ್ಯಾಸವನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ;
1. ಮಕ್ಕಳಿಗೆ ಕೇಳಿದ ಆಟಿಕೆಗಳನ್ನು ಕೊಡಿಸುವುದು ಬೆಂಬಲ. ಅಂತಹ ಆಟಿಕೆಗಳನ್ನು ಉಪಯೋಗಿಸಿ ಅಥವಾ ಅವು ಇಲ್ಲದಿದ್ದಾಗಲೂ ಮಕ್ಕಳ ಜೊತೆ ಸೇರಿ ಮನದಣಿಯೆ ಆಟವಾಡಿ ಖುಷಿಪಡುವುದು ಒಳಗೊಳ್ಳುವಿಕೆ.
2. ಖಾಯಿಲೆಯಾದಾಗ ಮಕ್ಕಳಿಗೆ ಔಷಧಿ ಕೊಡಿಸುವುದು ಬೆಂಬಲ. ಆದರೆ ಅವರ ಜೊತೆ ಇದ್ದು ಅವರ ನೋವು ಆತಂಕಗಳಿಗೆ ಸ್ಪಂದಿಸುವುದು, ಅವರ ಅಗತ್ಯಗಳನ್ನು ಪುರೈಸುವುದು ಇನ್‍ವಾಲ್ವ್‍ಮೆಂಟ್.
3. ಮಕ್ಕಳಿಗೆ ಒಳ್ಳೆಯ ಶಾಲೆಗೆ ಸೇರಿಸುವುದು, ಪುಸ್ತಕ ಮತ್ತಿತರ ಓದುವ ಪರಿಕರಗಳನ್ನು ಕೊಡಿಸುವುದು ಬೆಂಬಲ. ಆದರೆ ಅವರ ಜೊತೆ ಕುಳಿತು, ನಾವೂ ಅವರ ಪಠ್ಯಗಳನ್ನು ಜೊತೆಗೆ ಓದುತ್ತಾ ಅವರಿಗೆ ಸಹಾಯ ಮಾಡುವುದು ಒಳಗೊಳ್ಳುವಿಕೆ.
4. ಮಕ್ಕಳಿಗೆ ಕಥೆ ಪುಸ್ತಕಗಳನ್ನು ಕೊಡಿಸುವುದು ಬೆಂಬಲ. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಕಥೆ ಹೇಳುವುದು, ಅವರು ಬೆಳೆದ ಮೇಲೆ ಕೂಡ ನಾವು ಅವರ ಜೊತೆ ಓದುತ್ತಾ ಸಂತೋಷವನ್ನು ಹಂಚಿಕೊಳ್ಳುವುದು ಒಳಗೊಳ್ಳುವಿಕೆ.
5. ಮಕ್ಕಳ ಸಮಸ್ಯೆಗಳನ್ನು ನಾವಾಗಿಯೇ ಪರಿಹರಿಸುವುದು ಬೆಂಬಲ. ಆದರೆ ಮಕ್ಕಳಿಗೆ ಹೆಚ್ಚು ಮಾತನಾಡಲು ಉತ್ತೇಜಿಸುವುದು, ಅವರ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕೊಡುವುದು, ಅವರ ಅಭೀಪ್ರಾಯಗಳನ್ನು ಗೌರವಿಸುವುದು, ನಂತರ ಇಬ್ಬರೂ ಸೇರಿ ಪರಿಹಾರ ಹುಡುಕುವುದು ಇನ್‍ವಾಲ್ವ್‍ಮಂಟ್.
6. ಕೇಳಿದಷ್ಟು ಹಣ ನೀಡಿ ಮಕ್ಕಳನ್ನು ಪ್ರವಾಸಕ್ಕೆ ಕಳಿಸುವುದು ಬೆಂಬಲ. ಅವಕಾಶವಿದ್ದಲ್ಲಿ ನಾವೂ ಅವರ ಜೊತೆ ಹೋಗಿ ಜೊತೆಗಿದ್ದು ಸಂತೋಷಿಸುವುದು ಒಳಗೊಳ್ಳುವಿಕೆ.
ಅಂದರೆ ಮಕ್ಕಳಿಗೆ ‘ಧನ’ ಬೆಂಬಲಕ್ಕಿಂತ ಹೆಚ್ಚಾಗಿ ‘ತನು ಮನ’ಗಳಿಂದ ಬೆಂಬಲ ನೀಡಿದಾಗ ಅದು ಒಳಗೊಳ್ಳುವಿಕೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಪೋಷಕರು ಇದರ ಕಡೆ ಗಮನ ನೀಡದೆ ಧನ ಬೆಂಬಲವನ್ನೇ ತಮ್ಮ ಪ್ರೀತಿ ಮತ್ತು ಕಾಳಜಿ ಎಂದು ಭ್ರಮಿಸಿ, ಅದರಿಂದಲೇ ಆತ್ಮೀಯತೆ ಹುಟ್ಟಬಲ್ಲದು ಅಂದುಕೊಳ್ಳುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಪೋಷಕರಿಗೆ ವಿಧೇಯರಾಗಿದ್ದರೂ ಅವರ ಜೊತೆ ಅಟ್ಯಾಚ್‍ಮೆಂಟ್ ಬೆಳೆಸಿಕೊಳ್ಳದೆ ಹೋದಾಗ ಸಂಬಂಧಗಳ ಕೊಂಡಿ ಬಿಗಿಯಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಮತ್ತು ಮಕ್ಕಳ ಸಂಬಂಧಗಳನ್ನು ಪುನರಾವಲೋಕಿಸಿದಾಗ ನಮಗೆ ಉತ್ತಮ ಒಳನೋಟಗಳು ಸಿಗುತ್ತವೆ. ನಮಗೆ ಈಗಾಗಲೇ ಇರುವ ಯಾವುದಾದರೂ ಒಂದು ಉತ್ತಮ ಸಂಬಂಧ ರೂಪಗೊಂಡ ರೀತಿಯನ್ನು ಗಮನಿಸಿದರೆ ಅದೂ ಕೂಡ ಇನ್‍ವಾಲ್ವ್‍ಮೆಂಟ್‍ನಿಂದಾಗಿಯೇ ಈ ಸ್ಥಿತಿಗೆ ಬಂದಿರುವುದು ಎನ್ನುವುದರ ಅರಿವಾಗುತ್ತದೆ. ಮಕ್ಕಳು ನಮ್ಮ ರಕ್ತ ಮಾಂಸಗಳನ್ನು ಹಂಚಿಕೊಂಡಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಅವರು ನಮ್ಮನ್ನು ಪ್ರೀತಿಸಲೇಬೇಕು ಎನ್ನುವ ನಿಯಮವೇನೂ ಇರುವುದಿಲ್ಲ. ಆತ್ಮೀಯ ಸಂಬಂಧವೊಂದನ್ನು ಮಕ್ಕಳ ಬಾಲ್ಯದಿಂದಲೇ ಪೋಷಕರು ರೂಪಿಸಿಕೊಳ್ಳಬೇಕಾಗುತ್ತದೆ.
ಮಕ್ಕಳು ಮತ್ತು ಪೋಷಕರ ಮಧ್ಯೆ ಅಟ್ಯಾಚ್‍ಮೆಂಟ್ ಇದ್ದರೆ ಮಕ್ಕಳು ಪೋಷಕರು ಹೇಳಿದ್ದನೆಲ್ಲಾ ನಡೆಸಿಕೊಡುತ್ತಾರೆ ಅಂತ ತಿಳಿಯಬೇಕಿಲ್ಲ. ಇಬ್ಬರಿಗೂ ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವ ಪರಿಪಾಠ ಬೆಳೆಯುತ್ತದೆ. ಇದರಿಂದ ಇಬ್ಬರ ಸಂಬಂಧಗಳು ಸೌಹಾರ್ಧಯುತವಾಗಿದ್ದು ಅನಗತ್ಯ ಮನಸ್ತಾಪಗಳಿರುವುದಿಲ್ಲ. ಇರುವ ಭಿನ್ನಾಭಿಪ್ರಾಯಗಳನ್ನು ಸಮಾಧಾನದಿಂದ ಚರ್ಚಿಸಿ ಪರಿಹರಿಸಿಕೊಳ್ಳಬಹುದು. ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದಲ್ಲಿ ಉತ್ತಮ ಸ್ನೇಹದ ಅಂಶಗಳಿದ್ದು ಇದು ಇಳಿ ವಯಸ್ಸಿನಲ್ಲಿ ಪೋಷಕರಿಗೆ ಮಾನಸಿಕ ಆಧಾರವಾಗುತ್ತದೆ.
ವಸಂತ್, ನಡಹಳ್ಳಿ

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!