19.1 C
Sidlaghatta
Saturday, November 23, 2024

ಸಂಗೀತ ಚಿಕಿತ್ಸೆ – ಒಂದು ಪರಿಚಯ

- Advertisement -
- Advertisement -

‘ಸಂಗೀತ’ ಎಂಬುದು ಎಲ್ಲರಿಗೂ ಆಹ್ಲಾದಕರವೆಂದೆನಿಸುವ ಧ್ವನಿ ವಿಶೇಷ ಹಾಗೂ ವಿದ್ಯೆ, ಸಂಗೀತ ಕಲೆ ಕೂಡ. ಎಲ್ಲಾ ಭಾರತೀಯ ಕಲೆ/ವಿದ್ಯೆಗಳಿಗೆ ತಮ್ಮದೇ ಆದಂತಹ ವ್ಯಾಪ್ತಿ (Dimensions) ಇದೆ. ಎಲ್ಲಾ ಕಲೆಗಳೂ ಕೂಡ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಜೊತೆಗೇ ಸಾಮಾಜಿಕ ಹಿತ ಎರಡನ್ನೂ ಉಂಟು ಮಾಡುತ್ತದೆ. ಚಿತ್ರಗಾರನಿಂದ ರೂಪಿತವಾದಂತಹ ಚಿತ್ರ ಅವನ ಸೃಜನಶೀಲತೆ, ಬೌದ್ಧಿಕ ವಿಕಾಸ, ಆತ್ಮ ಸಂತೃಪ್ತಿಗಳನ್ನು ಉದ್ದೀಪನಗೊಳಿಸಿದರೆ ಅದೇ ಚಿತ್ರವು ನೋಡುಗನಿಗೆ ಸ್ಫೂರ್ತಿದಾಯಕ, ಮನೋಲ್ಲಾಸಕರ ಹಾಗೂ ರಂಜಕ. ಅಂತೆಯೇ ಸಂಗೀತ ಶಾಸ್ತ್ರವೂ ಕೂಡ ಹಾಡುಗ ಕೇಳುಗರ ಮೇಲೆ ತನ್ನದೇ ಆದಂತಹ ಪ್ರಭಾವವನ್ನು ಬೀರುತ್ತದೆ.
ಸಂಗೀತಕ್ಕೆ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಆಧ್ಯಾತ್ಮಿಕ ಮೌಲ್ಯಗಳಿರುವಂತೆಯೇ ಚಿಕಿತ್ಸಾ ಮೌಲ್ಯ ಕೂಡ ಇದೆ. ಮನುಷ್ಯನ ವಿವಿಧ ಘಟಕಗಳಾದ ಶರೀರ ಇಂದ್ರಿಯ ಮನಸ್ಸು, ಆತ್ಮಗಳಲ್ಲಿ ಸಮತೆಯನ್ನು ಕಾಪಾಡುವ ವಿಧಾನಕ್ಕೆ ‘ಚಿಕಿತ್ಸೆ’ ಎಂಬುದಾಗಿ ಆಯುರ್ವೇದ ಶಾಸ್ತ್ರದಲ್ಲಿ ಹೇಳಲಾಗಿದೆ. ಚಿಕಿತ್ಸೆ ಎಂದರೆ ಕೇವಲ ರೋಗವನ್ನು ನಿವಾರಣೆ ಮಾಡುವುದಷ್ಟೇ ಅಲ್ಲ, ರೋಗ ನಿವಾರಣೆಯ ನಂತರ ಮನುಷ್ಯನ ಉಳಿದೆಲ್ಲಾ ಘಟಕಗಳನ್ನೂ ಸುಸ್ಥಿತಿಯಲ್ಲಿಡುವ ವೈಜ್ಞಾನಿಕವಾದ ವಿಧಾನವೇ ‘ಚಿಕಿತ್ಸೆ’. ಸಂಗೀತವೆಂಬುದು ಮನುಜನ ಎಲ್ಲಾ ಘಟಕಗಳ ಮೇಲೆಯೂ ಪ್ರಭಾವವನ್ನು ಬೀರಿ ಶರೀರ, ಇಂದ್ರಿಯ, ಮನಸ್ಸು, ಆತ್ಮಗಳ ಕ್ರಿಯಾ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಸಂಗೀತದಲ್ಲಿರುವ ಸಪ್ತಸ್ವರಗಳಾದ ‘ಸರಿಗಮಪದನಿ’ ಎಂಬುದು ನಮಗೆಲ್ಲಾ ತಿಳಿದ ವಿಚಾರವೇ. ‘ಸರಿ’ ಎಂದರೆ ದೋಣಿ; ‘ಗಮ’ ಎಂದರೆ ಕೊಡುವುದು ಎಂಬುದಾಗಿ ಉಪನಿಷತ್ ಗಳಲ್ಲಿ ಹೇಳಲ್ಪಟ್ಟಿದೆ. ಮನುಷ್ಯನ ವಿಕಾಸಕ್ಕೆ ಎಲ್ಲೆಯಿಲ್ಲ. ‘ಜೀವನದಲ್ಲಿ ಅತ್ಯುನ್ನತ ಸ್ಥಾನವನ್ನು ಪಡೆಯುವಂತಾಗಲಿ’ ಎಂಬಂತಹ ಆಶಯ ಈ ಸಪ್ತಸ್ವರಗಳಲ್ಲಿ ಬಿಂಬಿತವಾಗಿದೆ. ಧನಾತ್ಮಕವಾದಂತಹ ಆಲೋಚನೆಯನ್ನು ಸಪ್ತಸ್ವರಗಳು ಮೂಡಿಸುತ್ತವೆ. ಇಂತಹ ಧನಾತ್ಮಕವಾದಂತಹ ಆಲೋಚನೆಯೇ ವ್ಯಕ್ತಿಯ ಸರ್ವಾಂಗೀಣ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಮೂಲಾಧಾರ.
ಆಯುರ್ವೇದದ ಗ್ರಂಥವಾದ ಚರಕ ಸಂಹಿತೆಯಲ್ಲಿ ‘ಗೀತವಾದಿತ್ರ ಶ್ರವಣ’ ಅಂದರೆ ಸುಮಧುರ ಗಾಯನ ಶ್ರವಣ, ಆಹ್ಲಾದಕರ ಸಂಗೀತ ವಾದ್ಯ ಶ್ರವಣವೆಂಬುದು ಒಂದು ಚಿಕಿತ್ಸಾ ವಿಧಾನವಾಗಿ ಉಲ್ಲೇಖಿಸಲ್ಪಟ್ಟಿದೆ. ಆಚಾರ್ಯ ಚರಕರು “ಸತ್ವಾವಜಯ” ಎಂಬಂತಹ ವಿಶೇಷವಾದ ಚಿಕಿತ್ಸಾ ಕ್ರಮವನ್ನು ಉಲ್ಲೇಖಿಸಿದ್ದಾರೆ. ಮನಸ್ಸಿಗೆ ಅಹಿತಕರವೆಂದೆನಿಸುವ ಪರಿಸ್ಥಿತಿಯನ್ನು ಎದುರಿಸಿ ಮಾನಸಿಕ ಸ್ವಾಸ್ಥ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಸಹಾಯಕವಾಗುವ ಚಿಕಿತ್ಸಾ ಕ್ರಮವು ‘ಸತ್ವಾವಜಯ ಚಿಕಿತ್ಸೆ’ ಎಂದೆನಿಸಿದೆ. ವ್ಯಕ್ತಿಯ ಮನೋಬಲವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿ. ಸಂಗೀತ ಚಿಕಿತ್ಸೆಯೂ ಕೂಡ ಮನೋಬಲವನ್ನು ಹೆಚ್ಚಿಸುವಲ್ಲಿ ಸಹಕಾರಿ.
“ಗೀತಂ ವಾದ್ಯಂ ತಥಾನೃತ್ತಂ ತ್ರಯಂ ಸಂಗೀತಮುಚ್ಯತೆ||” ಎಂಬುದಾಗಿ ಸಂಗೀತ ಗ್ರಂಥವಾದ ಸಂಗೀತ ರತ್ನಾಕರದಲ್ಲಿ ಉಲ್ಲೇಖಿಸಲ್ಪಟ್ಟಿದೆ. ರಾಗ, ತಾಳ, ಭಾವ, ಸಾಹಿತ್ಯಗಳ ಸಂಗಮವೇ ಸಂಗೀತ. ತಾಳವು ಶರೀರದ ಎಲ್ಲಾ ಅವಯವಗಳ ಸ್ಪಂದನವನ್ನು ಸರಿಗೊಳಿಸಿದರೆ, ರಾಗ, ಭಾವಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಸಾಹಿತ್ಯವು ಧನಾತ್ಮಕ ಬುದ್ಧಿಯನ್ನು ಪ್ರಚೋದಿಸುತ್ತದೆ.
ಸಂಗೀತ ಚಿಕಿತ್ಸೆಯ ಮೂಲ ಸಿದ್ಧಾಂತವೆಂದರೆ ‘ಇಂತಹ ರೋಗಿಗೆ ಇಂತಹ ರಾಗ’ ಎಂದೇ ಹೊರತು ‘ಇಂತಹ ರೋಗಕ್ಕೆ ಇಂತಹ ರಾಗ’ ವೆಂದಲ್ಲ. ಎಲ್ಲಾ ಭಾರತೀಯ ವೈದ್ಯ ಸಿದ್ಧಾಂತಗಳು ‘ವ್ಯಕ್ತಿನಿಷ್ಠ’ ಒಂದೇ ವ್ಯಾಧಿ ಅನೇಕ ಮಂದಿಯಲ್ಲಿ ಅನೇಕ ರೀತಿಯಲ್ಲಿ ವ್ಯಕ್ತವಾಗುತ್ತದೆ. ರೋಗದ ತೀವ್ರತೆಯೂ ಭಿನ್ನ, ಅಂತೆಯೇ ಚಿಕಿತ್ಸೆಯನ್ನೂ ರೋಗಿಗೆ ನೀಡಬೇಕೇ ವಿನ: ರೋಗಕ್ಕಲ್ಲ. ಹಾಗಾಗಿ ರೋಗಿಯಲ್ಲಿ ರೋಗದ ಕಾರಣಗಳನ್ನು ಹುಡುಕಿ ರೋಗದ ತೀವ್ರತೆಯನ್ನು ಅರಿತು, ರೋಗಿಗೆ ಹೊಂದುವಂತಹ ರಾಗ, ಸಂಗೀತ ವಿಧಾನದ ಮೂಲಕ ಚಿಕಿತ್ಸೆ ಮಾಡಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿರುವ ಹಾಗೂ 75% ಜನ ಅನುಭವಿಸುತ್ತಿರುವ ಮನೋ ಶಾರೀರಿಕ ವ್ಯಾಧಿಗಳು (Psychosomatic Diseases) ಹಾಗೂ ಮಾನಸಿಕ ಒತ್ತಡ (Tension) ಗಳಂತಹ ತೊಂದರೆಗಳಲ್ಲಿ ಖಂಡಿತವಾಗಿಯೂ ಸಂಗೀತ ಚಿಕಿತ್ಸೆಯು ರಾಮಬಾಣವೇ ಸರಿ.
ಪ್ರಾಚೀನ ಕಾಲದಲ್ಲಿ ಕುಟುಂಬದವರೆಲ್ಲಾ ಸೇರಿ ಮುಸ್ಸಂಜೆಯ ಸಮಯದಲ್ಲಿ ಭಜನೆ ಮಾಡುವ ಪರಿಪಾಠವಿತ್ತು. ಭಜನೆಯೆಂಬುದು ತಾಳ, ರಾಗ ಪ್ರಧಾನವಾದ ಸಂಗೀತ ವಿಧಾನವಾಗಿದ್ದು ಮೆದುಳಿನ ಬೆಳವಣಿಗೆಗೆ ಸಹಕಾರಿ. ತಾಳವನ್ನು ನಿಯಂತ್ರಿಸುವ ಮೆದುಳಿನ ಎಡಭಾಗ, ರಾಗದ ಭಾವವನ್ನು ನಿಯಂತ್ರಿಸುವ ಮೆದುಳಿನ ಬಲಭಾಗಗಳು ಭಜನಾ ವಿಧಾನದಿಂದ ಉತ್ತೇಜನ ಹೊಂದಿ, ತನ್ಮೂಲಕ ವ್ಯಕ್ತಿಯ ವಿಕಾಸಕ್ಕೆ ಸಹಕಾರಿಯಾಗುತ್ತದೆ.
ಇಂತಹ ‘ಪರಿಪೂರ್ಣತೆ’ ಗೆ ಪೂರಕವಾಗಿರುವ ಸಂಗೀತವನ್ನು ನಾವು ಅರಿಯೋಣ, ಕಲಿಯೋಣ, ಅದರಿಂದ ಆರೋಗ್ಯದ ಮಟ್ಟವನ್ನೂ ಹೆಚ್ಚಿಸಿಕೊಳ್ಳೋಣ, ಸುಧಾರಿಸಿಕೊಳ್ಳೋಣ, ರೋಗವನ್ನೂ ನಿವಾರಣೆ ಮಾಡಿಕೊಳ್ಳೋಣ, ವಿಕಾಸದ ಉತ್ತುಂಗಕ್ಕೇರೋಣ ||ಸರ್ವೇ ಜನಾ: ಸುಖಿನೋ ಭವಂತು||
ಡಾ. ಶ್ರೀವತ್ಸ.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!