ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನದಲ್ಲಿ ಬಹು ಪ್ರಮುಖವಾದ ಅಂಶಗಳು.
“ಆಹಾರ ಸಂಭವಂ ವಸ್ತು ರೋಗಶ್ಚಾಹಾರ ಸಂಭವ:” ಮನುಷ್ಯನ ಶರೀರವು ಆಹಾರದಿಂದ ನಿರ್ಮಿತವಾಗಿದೆ. ಹಾಗೆಯೇ ರೋಗಗಳೂ ಕೂಡ ಆಹಾರದಿಂದಲೇ ಉತ್ಪನ್ನವಾಗುತ್ತವೆ ಎನ್ನುವುದು ಆಯುರ್ವೇದ ಶಾಸ್ತ್ರ ಗ್ರಂಥಗಳ ಅಭಿಪ್ರಾಯ.
ಆಹಾರ ಸ್ವೀಕರಣೆ ಎಂಬುದು ಕೇವಲ ಶರೀರ ಪೋಷಣೆಯ ಅಂಶ ಮಾತ್ರವಾಗಿರುವುದಿಲ್ಲ. “ಆಹಾರ ಶುದ್ಧೌ ಸತ್ವ ಶುದ್ಧಿ:” ಎಂಬ ಉಪನಿಷತ್ ವಾಕ್ಯದಂತೆ ಆಹಾರದಿಂದ ಶುದ್ಧ ಆಲೋಚನೆ ಶುದ್ಧ ಯೋಚನೆಯಿಂದ ಶುದ್ಧ ಕ್ರಿಯೆ, ಶುದ್ಧ ಕ್ರಿಯೆಯಿಂದ ಶುದ್ಧ ಗತಿ ಮತ್ತು ಶುದ್ಧ ಫಲಗಳು ಸಿಗುತ್ತವೆ. “ಅನ್ನಮಿತಿ ಬ್ರಹ್ಮ” ಅಂದರೆ ವೇದಗಳಲ್ಲಿ ಅನ್ನವನ್ನು ಬ್ರಹ್ಮನಿಗೆ ಹೋಲಿಕೆ ಮಾಡಲಾಗಿದೆ. “ಉದರ ನಿಮಿತ್ತಂ ಬಹುಕೃತ ವೇಷಂ” ಎನ್ನುವುದು ಶಂಕರಾಚಾರ್ಯರ ಅಂಬೋಣ, ಅಂದರೆ ವ್ಯಕ್ತಿ ಆಹಾರ ಸಂಗ್ರಹಣೆಗಾಗಿ ಏನೆಲ್ಲ ವೇಷಗಳನ್ನು ಧರಿಸುತ್ತಾನೆ.
“ಹಿತಭುಕ್, ಮಿತಭುಕ್, ಋತಭುಕ್” ಅಂದರೆ ಹಿತವಾಗಿ, ಮಿತವಾಗಿ ಹಾಗೂ ಋತುವಿಗನುಸಾರವಾಗಿ ಆಹಾರ ಸೇವನೆ ಮಾಡಬೇಕು ಎನ್ನುವುದು ಆಯುರ್ವೇದಾಚಾರ್ಯರ ಮತ.
ನಾವು ಸೇವಿಸುವ ಆಹಾರ ಉದರದಲ್ಲಿ ಸ್ರಾವವಾಗುವ ಕಿಣ್ವಗಳ ಸಹಾಯದಿಂದ ಪಚನಗೊಂಡು (Digestion) ದೇಹದ ಧಾತುಗಳಾಗಿ ಮಾರ್ಪಾಟುಗೊಳ್ಳಲು ಆಹಾರದ ಸೇವನೆ ಹೇಗೆ ಮಾಡಬೇಕು? ಎನ್ನುವುದರ ಬಗ್ಗೆ ಸ್ವಲ್ಪ ಗಮನ ಹರಿಸೋಣ.
ಯಾವ ರೀತಿ ಆಹಾರ ಸೇವನೆ ಮಾಡಬೇಕು?
1. ಶುಚಿಯಾದ ಸ್ಥಳದಲ್ಲಿ ಕುಳಿತು ಆಹಾರ ಸೇವನೆ ಮಾಡಬೇಕು.
2. ಸಮತಟ್ಟಾದ ಪ್ರದೇಶದಲ್ಲಿ ಕುಟುಂಬ ವರ್ಗದವರೊಂದಿಗೆ ಕುಳಿತು ಆಹಾರ ಸೇವನೆ ಉತ್ತಮ.
3. ಬೇರೆ ಬೇರೆ ರೀತಿಯ ಸಂಸ್ಕಾರಗಳನ್ನೊಳಗೊಂಡ (ಉದಾ: ಬೇಯಿಸುವುದು, ಎಣ್ಣೆಯಲ್ಲಿ ಹುರಿಯುವುದು, ಕರಿಯುವುದು ಇತ್ಯಾದಿ) ದೇಹಕ್ಕೆ ಹೊಂದುವಂಥಹ ಆಹಾರ ಸೇವನೆ ಮಾಡಬೇಕು.
4. ಹೆಚ್ಚು ಬಿಸಿಯೂ ಅಲ್ಲದ, ಹೆಚ್ಚು ತಂಪೂ ಅಲ್ಲದ ಆಗ ತಾನೇ ತಯಾರಿಸಿದ ಆಹಾರ ಸೇವನೆ ಉತ್ತಮ.
5. ಹೆಚ್ಚು ವೇಗವಾಗಿಯೂ ಅಲ್ಲದೆ, ಹೆಚ್ಚು ಸಾವಕಾಶವಾಗಿಯೂ ಅಲ್ಲದೆ ಆಹಾರ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.
6. ಮಾಡಿದ ಆಹಾರ ಸೇವನೆ ಮನಸ್ಸಿಗೆ ಆಹ್ಲಾದವನ್ನುಂಟುಮಾಡುವಂತಿರಬೇಕು.
7. ನಾವು ಸೇವಿಸುವ ಆಹಾರ ಆರೂ ರಸಗಳನ್ನು (ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರು) ಒಳಗೊಂಡಿರಬೇಕು.
8. ಮೊದಲು ಸಿಹಿ ರಸ ಪ್ರಧಾನವಾಗಿರುವ ಆಹಾರದ ಸೇವನೆ ಮಾಡಿ ನಂತರ ಉಳಿದ ರಸಗಳ ಸೇವನೆ ಉತ್ತಮ.
9. ಆಹಾರ ಶುಚಿ, ರುಚಿಯಾಗಿರಬೇಕು.
10. ಆಹಾರ ಸೇವನೆಯ ಮೊದಲು ಹಣ್ಣುಗಳ ಸೇವನೆ ಉತ್ತಮ.
11. ಮೊದಲು ದ್ರವ ಪ್ರಧಾನ ಆಹಾರದ ಸೇವನೆ ನಂತರ ಘನ ಪದಾರ್ಥಗಳ ಸೇವನೆ ಮಾಡುವುದು ಉತ್ತಮ.
12. ಗೆಡ್ಡೆ, ಗೆಣಸುಗಳು ಇತ್ಯಾದಿ ಕಂದ ಮೂಲಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಪ್ರಾರಂಭದಲ್ಲಿಯೇ ಸೇವಿಸುವುದು ಉತ್ತಮ.
13. “ಕಾಲ ಭೋಜನಂ ಆರೋಗ್ಯಕರಾಣಾಂ” ಅಂದರೆ ಸರಿಯಾದ ಕಾಲದಲ್ಲಿ, ಒಮ್ಮೆ ಸೇವಿಸಿದ ಆಹಾರ ಜೀರ್ಣವಾದ ನಂತರವೇ ಪುನ: ಆಹಾರ ಸೇವನೆ ಒಳಿತು.
14. ನಾವು ಸೇವಿಸುವ ಆಹಾರ ಸುಲಭವಾಗಿ ಜೀರ್ಣವಾಗುವಂತಿರಬೇಕು, ಜೀರ್ಣಕ್ಕೆ ಭಾರವಾದಂಥಹ ಆಹಾರದ ಸೇವನೆ ಮಾಡುವಾಗ ಅರ್ಧ ಹೊಟ್ಟೆತುಂಬುವಷ್ಟು ಮಾತ್ರ ಆಹಾರ ಸೇವನೆ ಮಾಡಬೇಕು. ಒಟ್ಟಿನಲ್ಲಿ ಜೀರ್ಣಶಕ್ತಿಗೆ ಅನುಕೂಲಕರವಾದ ಪ್ರಮಾಣದಲ್ಲಿ ಆಹಾರ ಸೇವನೆ ಹಿತಕರ.
15. ನಿತ್ಯವೂ ಸ್ವಲ್ಪ ಜಿಡ್ಡಿನಾಂಶದಿಂದ ಕೂಡಿದ (ತುಪ್ಪ, ಬೆಣ್ಣೆ, ಎಣ್ಣೆಯಿಂದ) ಸಂಸ್ಕರಿಸಿದ ಆಹಾರ ಪದಾರ್ಥಗಳ ಸೇವನೆ ಉತ್ತಮ. ದಿನಕ್ಕೆ ಒಂದು ಚಮಚದಷ್ಟು ತುಪ್ಪ ಅಥವಾ ಬೆಣ್ಣೆಯನ್ನು ಬಿಸಿಯಾದ ಆಹಾರದೊಂದಿಗೆ ಸೇವಿಸುವುದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಇದು ಕೊಲೆಸ್ಟರಾಲನ್ನು ಹೆಚ್ಚಿಸುವುದಿಲ್ಲ.
16. ನೀರಿನಂಶ ಪ್ರಧಾನವಾಗಿರುವ ಆಹಾರ ಪದಾರ್ಥಗಳ ಸೇವನೆ ಅಗತ್ಯ.
17. ಸ್ಥೂಲ ಶರೀರದವರು ಊಟದ ಮೊದಲು ನೀರನ್ನು ಕುಡಿಯಬೇಕು. ಕೃಶ ಶರೀರದವರು ಊಟದ ನಂತರ ನೀರನ್ನು ಕುಡಿಯಬೇಕು. ಹಾಗೂ ಸಮ ಶರೀರದವರು ಊಟದ ಮಧ್ಯ ನೀರಿನ ಸೇವನೆ ಮಾಡುವುದು ಅನುಕೂಲಕರ.
18. ಊಟದ ಜೋತೆಗೆ ಬಿಸಿ ನೀರಿನ ಸೇವನೆ ಹಿತಕರ. ಇದು ಆಹಾರವು ಸರಿಯಾದ ರೀತಿಯಲ್ಲಿ ಪಚನವಾಗಲು ಸಹಾಯ ಮಾಡುತ್ತದೆ.
19. ಸ್ನಾನ ಮಾಡಿ ಅಥವಾ ಕೈ ಕಾಲುಗಳನ್ನು ತೊಳೆದ ನಂತರವೇ ಆಹಾರದ ಸೇವನೆ ಉತ್ತಮ.
ಯಾವ ರೀತಿ ಆಹಾರ ಸೇವನೆ ಮಾಡಬಾರದು?
1. ಅತಿ ಬಿಸಿಯಾದ ಹಾಗೂ ಅತಿ ತಂಪಾದ ಆಹಾರ ಸೇವನೆ ಅರೋಗ್ಯಕ್ಕೆ ಹಾನಿಕರ.
2. ಅತಿ ವೇಗವಾಗಿ ಹಾಗೂ ಅತಿ ನಿಧಾನವಾಗಿಯೂ ಆಹಾರ ಸೇವನೆ ನಿಷಿದ್ಧ.
3. ಹಳಸಿದ, ದೂಷಿತಗೊಂಡ, ಕಲ್ಲು ಮಣ್ಣು, ಕೂದಲುಗಳಿಂದ ಮಿಶ್ರಣಗೊಂಡ ಆಹಾರ ಸೇವನೆ ನಿಷಿದ್ಧ.
4. ಅತಿಯಾಗಿ ಬೆಂದ, ಅತಿಯಾಗಿ ಸೀದು ಹೋದ ಹಾಗು ಅತಿಯಾಗಿ ಬೇಯದ ಆಹಾರ ಸೇವನೆ ಅಹಿತಕರ.
5. ಸೇವಿಸಿದ ಆಹಾರ ಹೊಟ್ಟೆ ಉಬ್ಬರಿಸುವಂತಿದ್ದು, ಅತಿಯಾಗಿ ಹುಳಿ ಅಂಶವನ್ನು ಹೆಚ್ಚಿಸುವಂತಿದ್ದರೂ ಕೂಡ ಅಂತಹ ಆಹಾರ ಪದಾರ್ಥಗಳನ್ನು ವರ್ಜಿಸುವುದು ಉತ್ತಮ.
6. ದು:ಖ, ಭಯ, ಸಿಟ್ಟು ಇರುವಾಗ ಮಾಡಿದ ಆಹಾರ ಸೇವನೆಯೂ ಕೂಡ ಸರಿಯಾಗಿ ಜೀರ್ಣವಾಗಲಾರದು.
7. ಆಹಾರ ಸೇವನೆಯ ನಂತರ ಸ್ವಲ್ಪ ಸಮಯ ಸುಖವಾದ ಆಸನದಲ್ಲಿ ಕುಳಿತುಕೊಳ್ಳಬೇಕು. ನಂತರ ನೂರು ಹೆಜ್ಜೆಗಳಷ್ಟು ನಡೆದಾಡಿ ಎಡ ಮಗ್ಗುಲಿನಲ್ಲಿ ಮಲಗಿ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವುದು ಅಗತ್ಯ.
ಡಿ.ವಿ.ಜಿ. ಯವರು ತಮ್ಮ “ಮಂಕುತಿಮ್ಮನ ಕಗ್ಗ”ದಲ್ಲಿ ಹೀಗೆ ವಿವರಿಸಿದ್ದಾರೆ.
ಆರೋಗ್ಯ ಭಾಗ್ಯವನು ಮನಕೆ ತನುಗೆಂತಂತೆ
ಹಾರಯಿಸುವೊಡೆ ಹಲವು ಸರಳ ನೀತಿಗಳ
ಧಾರಯಿಸು ನೆನಸಿನಲಿ ನಡೆಯಲ್ಲಿ ನುಡಿಯಲ್ಲಿ
ಪಾರಾಗು ಸುಳಿಯಿಂದ ಮಂಕುತಿಮ್ಮ||
ಮನಸ್ಸಿನ ಹಾಗೂ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವೊಂದು ಸರಳ ನೀತಿ ಸೂತ್ರಗಳನ್ನು ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿದ್ದಾರೆ. ಅವುಗಳನ್ನು ನಮ್ಮ ನಡೆ ನುಡಿಗಳಲ್ಲಿ ಹಾಗೂ ಜೀವನ ಕ್ರಮಗಳಲ್ಲಿ ಅಳವಡಿಸಿಕೊಳ್ಳುವುದರಿಂದ ರೋಗವೆಂಬ ಸುಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು.
ನಿತ್ಯ ಬಳಕೆಯಲ್ಲಿ ಉಪಯೋಗಿಸಬಹುದಾದ ಆಹಾರ ಪದಾರ್ಥಗಳು
ಕೆಂಪು ಅಕ್ಕಿ, ಷಷ್ಟಿಕ ಶಾಲಿ (60 ದಿನಗಳಲ್ಲಿ ಬೆಳೆದ ಅಕ್ಕಿ), ಗೋಧಿ, ಬಾರ್ಲಿ, ಹರಿವೆಸೊಪ್ಪು, ಎಳೆ ಮೂಲಂಗಿ, ಅಣಲೆಕಾಯಿ, ನೆಲ್ಲಿಕಾಯಿ, ದ್ರಾಕ್ಷಿ, ಪಡುವಲಕಾಯಿ, ಹೆಸರು ಬೇಳೆ, ಸಕ್ಕರೆ, ತುಪ್ಪ, ಹಾಲು, ಆಕಾಶ ಜಲ, ಜೇನುತುಪ್ಪ, ಸೈಂಧವ ಉಪ್ಪು, ದಾಳಿಂಬೆ ಹಣ್ಣು.
ನಿತ್ಯ ಉಪಯೋಗಿ ಅಲ್ಲದ ಆಹಾರ ವಸ್ತುಗಳು
ಉದ್ದು, ಮೊಸರು, ಬೇಕರಿ ತಿನಿಸುಗಳು, ಮೊಳಕೆ ಬರಿಸಿದ ಕಾಳುಗಳು, ಒಣಗಿದ ತರಕಾರಿಗಳು, ತೆಳುಬೆಲ್ಲ, ಒಡೆದ ಹಾಲು ಇತ್ಯಾದಿ.
ಡಾ. ನಾಗಶ್ರೀ ಕೆ.ಎಸ್.
- Advertisement -
- Advertisement -
- Advertisement -
- Advertisement -