ಸಿಹಿಯಾದ ಜೇನಿನ ರುಚಿಯನ್ನು ಪ್ರಾಯಶ: ಆಸ್ವಾದಿಸದ ಮಾನವರಿಲ್ಲ. ಆಯುರ್ವೇದಗ್ರಂಥಗಳಲ್ಲಿ ಮಗುವಿನ ಜನನವಾದ ಸ್ವಲ್ಪ ಸಮಯದ ನಂತರ ಶುದ್ಧವಾದ ಬಂಗಾರವನ್ನು ಜೇನುತುಪ್ಪ ಹಾಗೂ ತುಪ್ಪದ ಮಿಶ್ರಣದಲ್ಲಿ ತೇಯ್ದು ನೆಕ್ಕಿಸುವ ಪದ್ಧತಿಯನ್ನು ನಾವು ಕಾಣಬಹುದು. ವೃದ್ಧರೂ ಕೂಡ ಸರಿಯಾದ ಪ್ರಮಾಣದಲ್ಲಿ ಜೇನಿನ ಸೇವನೆ ಮಾಡುವುದರಿಂದ ನರ ದೌರ್ಬಲ್ಯ ಹಾಗೂ ದೈಹಿಕ ಶಿಥಿಲತೆಗಳು ದೂರವಾಗುತ್ತವೆ. ಹೀಗೆ ಜನನದಿಂದ ಮರಣದವರೆಗಿನ ಪ್ರತಿಯೊಂದು ಹಂತಗಳಲ್ಲೂ ಜೇನು ಪ್ರಾಮುಖ್ಯತೆಯನ್ನು ಹೊಂದಿದೆ.
ಜೇನಿನ ವೈವಿಧ್ಯತೆ?
ಎಂಟು ರೀತಿಯ ಜೇನುತುಪ್ಪದ ವಿವರಣೆಯನ್ನು ಆಯುರ್ವೇದ ಗ್ರಂಥವಾದ ಸುಶ್ರುತ ಸಂಹಿತದಲ್ಲಿ ಸುಶ್ರುತಾಚಾರ್ಯರು ವಿವರಿಸಿದ್ದಾರೆ.
1. ಪೌತ್ತಿಕ:- ಈ ಜೇನುತುಪ್ಪವು ತುಪ್ಪದ ಬಣ್ಣವನ್ನು ಹೊಂದಿದೆ ಇದು ರೂಕ್ಷ ಗುಣವನ್ನು ಹೊಂದಿದ್ದು, ವಿಷಯುಕ್ತ ಪುಷ್ಪಗಳಿಂದ ಸಂಗ್ರಹಿಸಲ್ಪಟ್ಟಿರುತ್ತದೆ. ಇದು ವಾತ, ಪಿತ್ತ, ರಕ್ತ ದೋಷಗಳನ್ನು ಹೆಚ್ಚುಸುತ್ತದೆ, ಮದವನ್ನುಂಟುಮಾಡುವುದಲ್ಲದೆ, ದೇಹದಲ್ಲಿ ದಾಹವನ್ನು ಉತ್ಪತ್ತಿ ಮಾಡುತ್ತದೆ.
2. ಭ್ರಾಮರ:- ಈ ಜೇನುತುಪ್ಪವು ಬಿಳಿ ವರ್ಣವನ್ನು ಹೊಂದಿರುತ್ತದೆ. ಅತಿಯಾಗಿ ಸಿಹಿರಸವನ್ನು ಹೊಂದಿದ್ದು, ಜೀರ್ಣಕ್ಕೆ ಭಾರವಾದುದಾಗಿದೆ.
3. ಕ್ಷೌದ್ರ:- ಕಪಿಲ ವರ್ಣವನ್ನು ಹೊಂದಿದ್ದು, ಜೀರ್ಣಕ್ಕೆ ಹಗುರವಾಗಿರುತ್ತದೆ. ಶೀತ ಗುಣವನ್ನು ಹೊಂದಿದ್ದು, ಕಫ ದೋಷವನ್ನು ಶಮನ ಮಾಡುವುದು.
4. ಮೌಕ್ಷಿಕ:- ಇದು ತೈಲದ ಬಣ್ಣದ್ದಾಗಿರುತ್ತದೆ. ಇದು ಎಲ್ಲ ಜೇನುತುಪ್ಪಗಳಲ್ಲಿ ಅತ್ಯಂತ ಶ್ರೇಷ್ಠವಾದುದು. ಇದು ಅತ್ಯಂತ ಲಘು ಅಂದರೆ ಜೀರ್ಣಕ್ಕೆ ಹಗುರವಾದಂಥಹುದು ವಿಶೇಷವಾಗಿ ಶ್ವಾಸ (ದಮ್ಮು), ಕಾಸ (ಕೆಮ್ಮು)ಗಳಲ್ಲಿ ಇದನ್ನು ಬಳಸಲಾಗುವುದು.
5. ಛಾತ್ರ:- ಇದು ಮಧುರ ವಿಪಾಕವನ್ನು ಹೊಂದಿದ್ದು ಶೀತ ಗುಣವನ್ನು ಹೊಂದಿರುತ್ತದೆ. ರಕ್ತ ಹಾಗೂ ಪಿತ್ತ ವಿಕಾರಗಳನ್ನು ಶಮನಗೊಳಿಸುವುದು.
ಶ್ವಿತ್ರ (ತೊನ್ನು), ಮಧುವೇಹ ಹಾಗೂ ಕ್ರಿಮಿ ರೋಗಗಳಲ್ಲಿ ಇದನ್ನು ಉಪಯೋಗಿಸಬಹುದು.
6. ಆಘ್ರ್ಯ:- ಇದು ಕಣ್ಣಿಗೆ ಹಿತಕರ ಕಫ ಹಾಗೂ ಪಿತ್ತ ದೋಷಗಳನ್ನು ಶಮನ ಮಾಡುತ್ತದೆ. ಕಷಾಯ (ಒಗರು) ಹಾಗೂ ಕಹಿರಸಗಳನ್ನು ಪ್ರಧಾನವಾಗಿ ಹೊಂದಿದ್ದು, ದೇಹಕ್ಕೆ ಹೆಚ್ಚಿನ ಬಲವನ್ನು ಕೊಡುತ್ತದೆ.
7. ಔದ್ದಾಲಕ:- ಇದು ನಾಲಿಗೆ ರುಚಿಯನ್ನು ಹೆಚ್ಚಿಸುತ್ತದೆ. ಸ್ವರ ಸಂಬಂಧಿ ರೋಗಗಳಿಗೆ ಉತ್ತಮವಾದಂಥಹುದು, ವಿಷ ಹಾಗೂ ಕುಷ್ಠರೋಗಗಳನ್ನು ಹೋಗಲಾಡಿಸುವುದು.
8. ದಾಲ:- ಒಗರು ಹಾಗೂ ಹುಳಿ ರಸಗಳನ್ನು ಪ್ರಧಾನವಾಗಿ ಹೊಂದಿರುತ್ತದೆ. ಉಷ್ಣ ವೀಂiÀರ್i ಹಾಗೂ ಕಟು ವಿಪಾಕಗಳನ್ನು ಹೊಂದಿದ್ದು ಪಿತ್ತ ದೋಷವನ್ನು ಹೆಚ್ಚಿಸುತ್ತದೆ. ವಾಂತಿ ಹಾಗೂ ಮಧುಮೇಹಗಳಲ್ಲಿ ಉತ್ತಮ.
ಈ ಎಂಟೂ ವಿಧದ ಜೇನುತುಪ್ಪಗಳೂ ಎಂಟು ವಿಧದ ಜೇನು ನೊಣಗಳಿಂದ ಸಂಗ್ರಹಿಸಲ್ಪಟ್ಟುದಾಗಿದೆ.
ಜೇನಿನ ಸಾಮಾನ್ಯ ಗುಣಗಳು:
1. ಸಿಹಿ, ಹಾಗೂ ಒಗರು ರಸಗಳು ಪ್ರಧಾನವಾಗಿರುತ್ತದೆ.
2. ರೂಕ್ಷ ಹಾಗೂ ಶೀತ ಗುಣವನ್ನು ಹೊಂದಿದೆ.
3. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.
4. ದೇಹದ ಕಾಂತಿಯನ್ನು ಹೆಚ್ಚಿಸುತ್ತದೆ.
5. ಧ್ವನಿ ಶಕ್ತಿಯನ್ನು ಹೆಚ್ಚಿಸುತ್ತದೆ.
6. ಜೀರ್ಣಕ್ಕೆ ಹಗುರವಾದಂತಹುದು.
8. ದೇಹದ ಸೂಕ್ಷ್ಷ್ಮ ಅವಯವಗಳನ್ನೂ, ಮಾರ್ಗಗಳನ್ನೂ ಹಾಗೂ ಸಂಪೂರ್ಣ ಶರೀರವನ್ನು ಅತ್ಯಂತ ಶೀಘ್ರವಾಗಿ ವ್ಯಾಪಿಸುತ್ತದೆ.
9. ದೇಹದ ಯಾವುದೇ ಭಾಗದಲ್ಲಿ ಸಂಗ್ರಹಗೊಂಡ ಕಫವನ್ನು ಹೊರಹಾಕುತ್ತದೆ.
10. ಕಣ್ಣಿಗೆ ಹಿತಕರವಾದುದಾಗಿದೆ.
11. ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
12. ವೀರ್ಯ ವರ್ಧನೆಯನ್ನು ಹೆಚ್ಚಿಸುತ್ತದೆ.
13. ದೇಹದಲ್ಲಿ ಉತ್ಪತ್ತಿಯಾದ ಯಾವುದೇ ರೀತಿಯ ವ್ರಣಗಳನ್ನು ಶುದ್ಧಗೊಳಿಸುವುದಲ್ಲದೆ, ಗುಣಪಡಿಸುತ್ತದೆ.
14. ಹೃದಯಕ್ಕೆ ಹಿತಕರವಾದುದಾಗಿದೆ.
15. ದೇಹದಲ್ಲಿ ಅತಿಯಾಗಿ ಸಂಗ್ರಹವಾದ ಕೊಬ್ಬು (ಮೇದಸ್ಸು)ನ್ನು ಕರಗಿಸುತ್ತದೆ.
16. ಶ್ವಾಸ (ದಮ್ಮು), ಕಾಸ (ಕೆಮ್ಮು), ವಾತ, ಕ್ರಿಮಿ, ವಿಷ, ಮಧುಮೇಹ, ಬಾಯಾರಿಕೆ ಇತ್ಯಾದಿಗಳಲ್ಲಿ ಉತ್ತಮ ಲಾಭಕರ.
ಪಕ್ವವಾದ ಜೇನುತುಪ್ಪವು ಮೂರೂ ದೋಷಗಳನ್ನು ಶಮನ ಮಾಡುವುದು. ಅದೇ ರೀತಿ ಅಪಕ್ವವಾದ ಜೇನುತುಪ್ಪವು ಹುಳಿ ರಸವನ್ನು ಹೊಂದಿದ್ದು, ಮೂರೂ ದೋಷಗಳನ್ನು ವರ್ಧಿಸುವುದು.
ಜೇನುತುಪ್ಪವು ಕೇವಲ ರುಚಿಗಾಗಿಯೇ ಇರುವುದಲ್ಲ, ಇದು ಅತ್ಯುತ್ತಮ ಆಹಾರವೂ ಕೂಡ, ಪ್ರತಿಯೊಬ್ಬರೂ ನಿತ್ಯದ ಆಹಾರದ ಜೊತೆ ಜೇನುತುಪ್ಪವನ್ನು ಸೇವನೆ ಮಾಡುವುದು ಉತ್ತಮ ಇದರಿಂದ ಶರೀರದ ಸ್ವಾಭಾವಿಕ ಉಷ್ಣತೆಯೂ, ಶರೀರದ ಸ್ವಾಭಾವಿಕ ಶಕ್ತಿಯೂ ಸ್ಥಿರಗೊಳ್ಳುತ್ತದೆ. ಮಕ್ಕಳು, ಆಶಕ್ತರು, ವೃದ್ಧರು ಮತ್ತು ಸಾಮಾನ್ಯವಾಗಿ ಎಲ್ಲ ಸ್ತ್ರಿ ಪುರುಷರು, ಇವರುಗಳಿಗೆಲ್ಲ ಜೇನುತುಪ್ಪವು ಬಹಳ ಲಾಭದಾಯಕವಾದುದಾಗಿದೆ.
ಮಹಾತ್ಮಾ ಗಾಂಧೀಜಿಯವರು ಬೇಯಿಸದ ಆಹಾರವನ್ನು ಸೇವಿಸುವ ಸಮಯದಲ್ಲಿ ಇತರ ಪದಾರ್ಥಗಳ ಜೊತೆಗೆ 4 ತೊಲ ಜೇನುತುಪ್ಪವನ್ನು ಸೇವಿಸುತ್ತಿದ್ದರು ಎನ್ನುವುದು ಪ್ರತೀತಿ.
ವಿವಿಧ ರೋಗಗಳಲ್ಲಿ ಜೇನುತುಪ್ಪದ ಬಳಕೆ:
1. ಕ್ಷಯ ರೋಗದಿಂದ ಬಳಲುತ್ತಿರುವವರು ಒಂದು ಲೋಟ ಹಸುವಿನ ಹಾಲಿಗೆ ಅಥವಾ ಒಂದು ಲೋಟ ಆಡಿನ ಹಾಲಿಗೆ 2 ರಿಂದ 3 ಚಮಚದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯುವುದು ಉತ್ತಮ, ಕಾಯಿಸಿ ಆರಿಸಿದ ಹಾಲಿನ ಬಳಕೆ ಉತ್ತಮ.
2. ಮಧುಮೇಹ (ಡಯಾಬಿಟಿಸ್) ರೋಗದಿಂದ ಬಳಲುತ್ತಿರುವವರು ಜೇನುತುಪ್ಪವನ್ನು ಇತರ ಆಹಾರ ಪದಾರ್ಥಗಳೊಡನೆ ಸೇರಿಸಿ ಸೇವಿಸುವುದು ಹಿತಕರ.
3. ಏಟು ತಗಲುವುದರಿಂದ ಆಗಿರುವ ಗಾಯಾಗಳಿಗೆ ಜೇನುತುಪ್ಪವನ್ನು ತುಪ್ಪದೊಡನೆ ಮಿಶ್ರಣ ಮಾಡಿ ಲೇಪಿಸುವುದು ಒಳ್ಳೆಯದು.
4. ಬಹಳ ಉಷ್ಣದಿಂದ ಅಥವಾ ಸುಣ್ಣ ಮತ್ತು ಇತರೆ ಬಿಸಿ ಪದಾರ್ಥಗಳ ಸಂಪರ್ಕದಿಂದ ಸುಟ್ಟಂತಾಗಿ ಬಾಯೊಳಗೆ ಬೊಬ್ಬೆಗಳು, ಗುಳ್ಳೆಗಳು ಆಗಿರುವಾಗ ಜೇನುತುಪ್ಪವನ್ನು ಲೇಪಿಸಿದರೆ ಅವು ಬೇಗನೇ ಗುಣವಾಗುವವು.
5. ಬೇಲದ ಹಣ್ಣು ಅಥವಾ ಚಕ್ಕೆಯ ರಸದಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಕಿವಿಗಳಿಗೆ ಹಾಕುವುದರಿಂದ ಕಿವಿ ಸೋರುವುದು ನಿಲ್ಲುತ್ತದೆ.
6. ರಕ್ತ ವಾಂತಿಯಾಗುತ್ತಿದ್ದರೆ, ಜೇನುತುಪ್ಪದೊಡನೆ ತುಪ್ಪ ಮತ್ತು ಭತ್ತದ ಅರಳಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸಬೇಕು.
7. ಪಿತ್ತ ಜ್ವರದಿಂದ ನೀರಿನಂತಹ ಭೇದಿಯಾಗುತ್ತಿದ್ದರೆ ದಾಳಿಂಬೆಯ ರಸದಲ್ಲಿ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು.
8. ವಿವಿಧ ರೀತಿಯ ಚರ್ಮರೋಗಗಳಲ್ಲಿ ಜೇನುತುಪ್ಪವನ್ನು ವಾಯುವಿಡಂಗ, ತ್ರಿಫಲಾ, ಹಿಪ್ಪಲಿ ಇವುಗಳ ಚೂರ್ಣದೊಡನೆ ಮಿಶ್ರಣ ಮಾಡಿ ಸೇವಿಸಬೇಕು.
9. ಚೇಳು ಕಚ್ಚಿದಾಗ ಜೇನುತುಪ್ಪದ ಲೇಪನ ಮತ್ತು ಸೇವನೆ ಮಾಡಿದರೆ ವಿಷವು ಶಮನವಾಗುವುದು.
10. ಶರೀರದಲ್ಲಿ ಕೊಬ್ಬು (ಮೇದಸ್ಸು) ಹೆಚ್ಚು ಸಂಗ್ರಹವಾಗಿದ್ದರೆ ಅರ್ಧ ಲೋಟದಷ್ಟು ಕಾಯಿಸಿ ಆರಿಸಿದ ನೀರಿಗೆ ಒಂದರಿಂದ ಎರಡು ಚಮಚ ಜೇನುತುಪ್ಪವನ್ನು ಬೆರೆಸಿ ಕೆಲವು ದಿನಗಳವರೆಗೆ ನಿತ್ಯವೂ ಸೇವಿಸಬೇಕು.
11. ಒಸಡುಗಳು ಊದಿಕೊಂಡು ನೋಯುತ್ತಿದ್ದರೆ ಅಥವಾ ಕೀವು ಸೋರುತ್ತಿದ್ದರೆ, ಜೇನುತುಪ್ಪದಲ್ಲಿ ಹತ್ತಿಯನ್ನು ಅದ್ದಿ ಹಚ್ಚಬೇಕು. ಇದರಿಂದ ಒಸಡಿಗೆ ಸಂಬಂಧವಾದ ಎಲ್ಲ ರೋಗಗಳೂ ನಿವಾರಣೆಯಾಗುತ್ತದೆ.
12. ದೃಷ್ಟಿದೋಷವಿದ್ದಲ್ಲಿ ನಿತ್ಯ ಪ್ರಾತ:ಕಾಲ ಶುದ್ಧವಾದ ಜೇನುತುಪ್ಪವನ್ನು ಅಂಜನದಂತೆ ಹಚ್ಚುತ್ತಿರಬೇಕು.
13. ಕಫದಿಂದ ಕೂಡಿದ ಕೆಮ್ಮು ಇದ್ದಾಗ ಸಿತೋಪಲಾದಿ ಅಥವಾ ತಾಲೀಸಾದಿ ಚೂರ್ಣದೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು.
14. ವರ್ಷಾ ಋತು (ಮಳೆಗಾಲ)ವಿನಲ್ಲಿ ಬಾಹ್ಯ ಪರಿಸರದಲ್ಲೂ ಕ್ಲೇದಾಂಶ (ನೀರಿನಂಶ)ವಿದ್ದು, ದೇಹದಲ್ಲೂ ಕ್ಲೇದತೆ ಅಧಿಕವಾಗಿರುವುದರಿಂದ ಈ ಋತುವಿನಲ್ಲಿ ನಿತ್ಯವೂ ಜೇನಿನ ಬಳಕೆ ಉತ್ತಮ.
ಎಚ್ಚರಿಕೆ:
1. ಜೇನುತುಪ್ಪವನ್ನು ಅತಿಯಾಗಿ ಸೇವಿಸುವುದು ನಿಷಿದ್ಧ. ಇದರ ಅತಿ ಸೇವನೆಯಿಂದ ಅಜೀರ್ಣ ಉಂಟಾಗಿ ಮರಣವೂ ಸಂಭವಿಸಬಹುದು.
2. ಜೇನುತುಪ್ಪವನ್ನು ಬಿಸಿ ಮಾಡಿ ಸೇವಿಸಬಾರದು.
3. ಜೇನುತುಪ್ಪವನ್ನು ಬಿಸಿಯಾದ ಪದಾರ್ಥದೊಂದಿಗೆ ಮಿಶ್ರಣ ಮಾಡಿ ಸೇವಿಸಬಾರದು.
4. ಉಷ್ಣ ಪ್ರಕೃತಿಯವರು, ಬಿಸಿಲಿನಿಂದ ಬಸವಳಿದು ಬಂದವರು ಜೇನುತುಪ್ಪವನ್ನು ಸೇವಿಸುವುದು ಹಾನಿಕರ.
“ಅತಿ ಸರ್ವತ್ರ ವರ್ಜಯೇತ್” ಎನ್ನುವ ಚಾಣಕ್ಯರ ನೀತಿಯಂತೆ ದೇಹ, ಪ್ರಕೃತಿ, ರೋಗ, ದೇಶ, ಋತು, ಪ್ರಮಾಣ ಇವೆಲ್ಲವುಗಳನ್ನು ಗಮನದಲ್ಲಿಟ್ಟುಕೊಂಡು ಸವಿಯಾದ, ಅಮೃತ ತುಲ್ಯ ಜೇನಿನ ಬಳಕೆ ಮಾಡೋಣ.
ಡಾ. ನಾಗಶ್ರೀ .ಕೆ.ಎಸ್.
- Advertisement -
- Advertisement -
- Advertisement -