1. ಬದುಕಲು ಅಚ್ಚುಕಟ್ಟಾದ ಯೋಜನೆಯನ್ನು ರೂಪಿಸಿ ಕಷ್ಟಪಟ್ಟು ದುಡಿದು ಮೇಲೇರಬೇಕು. ನಾವು ಸಂಪಾದಿಸಿದ್ದು ಎಂಬ ತೃಪ್ತಿಯಿಂದ ಅದನ್ನು ಅನುಭವಿಸಿದಾಗ ಸುಖ ಲಭಿಸುತ್ತದೆ.
2. ಯಾರನ್ನೂ ದ್ವೇಷಿಸಬಾರದು. ಕೆಲವರನ್ನಷ್ಟೇ ನಂಬಬೇಕು. ಯಾರನ್ನೂ ಅನುಸರಿಸಬಾರದು. ಆದರೆ ಎಲ್ಲರಿಂದಲೂ ಕಲಿಯಬೇಕು. ಕಲಿತದ್ದನ್ನು ಪಾಲಿಸಬೇಕು.
3. ಯಶಸ್ಸು ಹಾಗೂ ಕುಂಟುನೆಪ ಎರಡೂ ಒಟ್ಟಿಗೆ ಸಾಗುವುದಿಲ್ಲ. ನೀವೂ ಕುಂಟುನೆಪ ಹೇಳುವವರಾದರೆ ಯಶಸ್ಸು ನಿಮ್ಮ ಕೈ ಹಿಡಿಯುವುದಿಲ್ಲ. ನಿಮಗೆ ಯಶಸ್ಸು ಲಭಿಸಬೇಕಾದರೆ ಎಂದಿಗೂ ಕುಂಟುನೆಪಗಳನ್ನು ಹೇಳಬೇಡಿ. ಕುಂಟುನೆಪ ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.
5. ನಿರಾಶಾವಾದಿಯು ಅವಕಾಶಗಳನ್ನು ಕಷ್ಟವಾಗಿಸಿಕೊಂಡರೆ ಆಶಾವಾದಿಯು ಕಷ್ಟಗಳನ್ನೇ ಅವಕಾಶಗಳನ್ನಾಗಿಸಿಕೊಳ್ಳುತ್ತಾನೆ.
6. ನಮ್ಮ ಆತ್ಮ ವಿಶ್ವಾಸಕ್ಕಿಂತ ಎತ್ತರವಾದುದು ಯಾವುದೂ ಇಲ್ಲ. ಅದರ ಮುಂದೆ ಪರ್ವತವೂ ಸಹ ದೊಡ್ಡದಲ್ಲ. ಏಕೆಂದರೆ ನೀವು ಆತ್ಮವಿಶ್ವಾಸದಿಂದ ಪರ್ವತಕ್ಕೇರಿದರೆ ಅದು ನಿಮ್ಮ ಕಾಲ ಕೆಳಗಿರುತ್ತದೆ. ಹಾಗಾಗಿ ನೀವು ಆತ್ಮ ವಿಶ್ವಾಸವನ್ನು ಹೆಚ್ಚು ಬೆಳೆಸಿಕೊಳ್ಳಲು ಯತ್ನಿಸಿರಿ.
7. ಜೀವನದಲ್ಲಿ ಅಯೋಗ್ಯ ವ್ಯಕ್ತಿಗಳನ್ನು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಪಶ್ಚಾತ್ತಾಪ ಪಡಬೇಕಾದ್ದಿಲ್ಲ. ಏಕೆಂದರೆ ಅಂಥವರನ್ನು ಆಯ್ಕೆ ಮಾಡಿಕೊಳ್ಳದಿದ್ದರೆ ಯೋಗ್ಯ ವ್ಯಕ್ತಿಗಳ ಮಹತ್ವ ನಮಗೆ ತಿಳಿಯುವುದೇ ಇಲ್ಲ.
9. ಜೀವನದಲ್ಲಿ ಎಂದೆಂದೂ ಈ ಎರಡು ವಿಷಯಗಳನ್ನು ಮಾತನಾಡಬಾರದು. ಅವು ಯಾವುದೆಂದರೆ ನಮ್ಮನ್ನು ಯಾವತ್ತೂ ಯಾರೊಂದಿಗೂ ಹೋಲಿಸಿಕೊಳ್ಳಬಾರದು. ಹಾಗೂ ಬೇರೆಯವರಿಂದ ಏನನ್ನೂ ನಿರೀಕ್ಷಿಸಬಾರದು. ಆಗ ಮಾತ್ರ ನಾವು ನೆಮ್ಮದಿಯಿಂದ ಇರಬಹುದು ಮತ್ತು ನಮ್ಮ ನೆಮ್ಮದಿಯನ್ನು ಯಾರೂ ಕಸಿಯಲಾರರು.
10. ಜೀವನಕ್ಕಾಗಿ ನೀವು ಮಾಡುವ ಕೆಲಸವನ್ನು ಮನಸಾರೆ ಪ್ರೀತಿಸಿ ಮತ್ತು ಆನಂದಿಸಿ. ಅದು ಎಂಥದೇ ಕೆಲಸವಾಗಿರಬಹುದು. ಆಗ ಮಾತ್ರ ನಿಮಗೆ ಗೆಲುವು ನಿಶ್ಚಿತ. ಪ್ರೀತಿಯಿಂದ ಮಾಡುವ ಕೆಲಸವು ಜೀವನ ಪ್ರೀತಿಯನ್ನು ಮೂಡಿಸುತ್ತದೆ.
11. ಜೀವನದಲ್ಲಿ ಏನನ್ನಾದರೂ ಕಳೆದು ಕೊಂಡಾಗ ಚಿಂತಾಕ್ರಾಂತರಾಗಬಾರದು. ಮರದಿಂದ ಎಲೆ ಬಿದ್ದಾಗ, ಟೊಂಗೆ ಮುರಿದಾಗ ಹೊಸ ಎಲೆ ಚಿಗುರುತ್ತದೆ. ಹೊಸ ಟೊಂಗೆ ಟಿಸಿಲೊಡೆಯುತ್ತದೆ. ಹಾಗೆಯೇ ಕಳೆದುಕೊಂಡಿದ್ದೂ ಕೂಡ ಹೊಸ ರೂಪದಲ್ಲಿ ಹಿಂತಿರುಗಿ ಬರುತ್ತದೆ.
13. ನಿಮ್ಮ ಮುಂದೆ ಹತ್ತಾರು ಕೆಲಸಗಳಿದ್ದರೆ ಎಲ್ಲವನ್ನೂ ಏಕಕಾಲಕ್ಕೆ ಮಾಡಲಾಗುವುದಿಲ್ಲ. ಆದ್ದರಿಂದ ಆ ಕೆಲಸಗಳ ಪೈಕಿ ಪ್ರಮುಖವಾದುವು ಯಾವುವು ಎಂಬುದನ್ನು ಆದ್ಯತೆ ಮೇಲೆ ನಿರ್ಧರಿಸಿ ಆರಿಸಿಕೊಳ್ಳಬೇಕು. ಅನಂತರ ಒಂದೊಂದನ್ನೂ ಆದ್ಯತೆಯ ಕ್ರಮದಲ್ಲಿ ಮಾಡಿ ಮುಗಿಸಬೇಕು.
14. ನಾವು ಸದಾ ಇತರರನ್ನು ದೂರುತ್ತೇವೆ. ನಾವೇ ಸರಿ, ಉಳಿದವರು ಸರಿಯಲ್ಲ ಎಂಬ ಭಾವದಿಂದಿರುತ್ತೇವೆ. ಕನ್ನಡಿಯನ್ನು ಸ್ವಚ್ಛಗೊಳಿಸುವ ಮೊದಲು ನಮ್ಮ ಮುಖವನ್ನು ಸ್ವಚ್ಛಗೊಳಿಸಬೇಕು. ಆಗ ಕನ್ನಡಿಯನ್ನು ದೂರುವುದು ತಪ್ಪುತ್ತದೆ. ನಮ್ಮ ಅಸಲಿ ಮುಖ ಏನೆಂಬುದು ನಮಗೆ ತಿಳಿಯುತ್ತದೆ. ಬೇರೆಯವರನ್ನು ದೂರುವ ಬದಲು ನಮ್ಮ ತಪ್ಪನ್ನು ತಿದ್ದಿಕೊಳ್ಳೋಣ.
15. ಜೀವನ ಒಂದು ಸುಧೀರ್ಘ ಪಯಣ. ಆದರೆ ಈ ಪಯಣಕ್ಕೆ ಯಾವ ಸಿದ್ಧ ನಕ್ಷೆಗಳಿಲ್ಲ. ಅದನ್ನು ನಾವೇ ರೂಪಿಸಿಕೊಳ್ಳಬೇಕು. ಹಾಗೂ ಸುರಕ್ಷತವಾಗಿ ಗುರಿಯನ್ನು ಮುಟ್ಟಬೇಕು.
ಮುಗಿಯಿತು.
ಡಾ. ಶ್ರೀವತ್ಸ