‘ಪ್ರಜ್ಞೆ’ ಏನಿದು ಎಂಬ ಪ್ರಶ್ನೆ ನಮ್ಮಲ್ಲಿ ಮೂಡುವುದು ಸಹಜ. ಇದು ಕೇವಲ ಎಚ್ಚರವಾಗಿರುವ ಸ್ಥಿತಿಯೇ ಅಥವಾ ಅದಕ್ಕಿಂತ ಹೆಚ್ಚಿನದೇ? ಪ್ರಜ್ಞೆ ಎಂಬುದು ಬುದ್ಧಿ. ತಪ್ಪು ಸರಿಗಳನ್ನು ವಿವೇಚಿಸುವ, ಸುಖ-ದು:ಖಗಳನ್ನು ಗ್ರಹಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವಂತೆ ನೋಡಿಕೊಳ್ಳುವ ಮನುಜನ ಒಂದು ವಿಶೇಷ ಘಟಕವೇ ಈ ಪ್ರಜ್ಞೆ. “ಪ್ರಜ್ಞೆ” ಎಂಬ ಮನುಜನ ಘಟಕ ಸರಿಯಾಗಿ ಕಾರ್ಯ ನಿರ್ವಹಿಸಿದರೆ ವ್ಯಕ್ತಿಗೆ ಆರೋಗ್ಯ ನಿಶ್ಚಿತ ಪ್ರಜ್ಞೆಯು ಏರುಪೇರಾದರೆ ರೋಗವು ಖಚಿತ. ಈ ಪ್ರಜ್ಞೆಯ ವ್ಯಾಪ್ತಿಯು ಬಹಳ ವಿಸ್ತಾರವಾದುದು. ಜೀವನದ ಪ್ರತಿಯೊಂದು ಹಂತದಲ್ಲೂ ಪ್ರಜ್ಞೆ ಎಂಬುದು ಪ್ರಧಾನ ಪಾತ್ರವನ್ನು ವಹಿಸುತ್ತದೆ. ಪ್ರಜ್ಞೆ ಸಮರ್ಪಕವಾಗಿ ಕೆಲಸ ಮಾಡಿದಾಗ ಆರೋಗ್ಯ ಲಾಭ ಸಾಧ್ಯ. ಅದೇ ಪ್ರಜ್ಞೆ ಎಂಬ ಮನುಜನ ಘಟಕ ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದಲ್ಲಿ, ರೋಗ ಬರುವುದು ಶತ: ಸಿದ್ಧ. ಇಂದಿನ ದಿನಗಳಲ್ಲಿ ಮನುಜ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾನೆ. ಕುಡಿತ, ಧೂಮಪಾನ, ಮಾದಕ ದ್ರವ್ಯ ಸೇವನೆ ಮೊದಲಾದ ಕೆಟ್ಟ ಚಟಗಳಿಗೆ ಮನುಜ ಬಲಿಯಾಗಲು ಮುಖ್ಯ ಕಾರಣವೇ ಅವನ ಈ ಪ್ರಜ್ಞೆ ಎಂಬ ಘಟಕ ಸರಿಯಾಗಿ ಕಾರ್ಯ ನಿರ್ವಹಿಸದೇ ಇರುವುದು. ವ್ಯಕ್ತಿಯ ಪ್ರಜ್ಞೆಯ ಮಟ್ಟವು ಉತ್ತಮ ಸ್ಥಿತಿಯಲ್ಲಿದ್ದಾಗ ಅವನಲ್ಲಿ ಯಾವುದೇ ರೀತಿಯ ವೈಪರಿತ್ಯ ಉಂಟಾಗದು. ನಮ್ಮ ದೈನಂದಿನ ಚಟುವಟಿಕೆಗಳು, ಆಹಾರ ವಿಧಿ ವಿಧಾನಗಳು ಪ್ರಜ್ಞೆಯನ್ನು ಹೆಚ್ಚಿಸುವಂತೆ ಇರಬೇಕು.
ಪರಿಪೂರ್ಣ ಆಹಾರವೆಂದರೆ ಏಕದಳ ಧಾನ್ಯಗಳಾದ ಅಕ್ಕಿ, ರಾಗಿ, ಗೋಧಿ, ಜೋಳ, ದ್ವಿದಳ ಧಾನ್ಯಗಳಾದ ಹೆಸರು, ಕಡಲೆ, ಹುರುಳಿ ಮೊದಲಾದವುಗಳು, ಶುದ್ಧವಾದ ನೀರು, ಆಕಳ ಹಾಲು, ತುಪ್ಪ, ಸೈಂದವ ಎಂಬ ವಿಧವಾದ ತಪ್ಪು, ಜೇನುತುಪ್ಪ, ಬೆಟ್ಟದ ನೆಲ್ಲಿಕಾಯಿ, ಕಾಲಾನುಸಾರವಾದ ಹಣ್ಣು ತರಕಾರಿಗಳು. ಈ ರೀತಿಯ ಪರಿಪೂರ್ಣ ಆಹಾರದ ಸೇವನೆಯು ಪ್ರಜ್ಞೆಯ ಮಟ್ಟವನ್ನು ಕಾಪಾಡುವಲ್ಲಿ ಹಾಗೂ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.
ಇನ್ನು ನಮ್ಮ ವೃತ್ತಿ ಜೀವನವೂ ಕ್ರಮಬದ್ಧವಾಗಿರಬೇಕು. ನಮ್ಮ ವೃತ್ತಿಯು ಯಾವಾಗಲೂ ನಮ್ಮ ಬೆಳವಣಿಗೆಗೆ ಪೂರಕವಾಗಿ ಇರಬೇಕೇ ಹೊರತು ಅದು ನಮ್ಮ ವಿಕಾಸಕ್ಕೆ ಮಾರಕವಾಗಕೂಡದು. ಸುಖದ ಹಿಂದೇ ಸಾಗುತ್ತಿರುವ ಮನುಜನು ತನ್ನ ಆರೋಗ್ಯವನ್ನೂ ಪಣವಾಗಿಟ್ಟು ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಸ್ವರ್ಧಾತ್ಮಕವಾದಂತಹ ಇಂದಿನ ಯುಗದಲ್ಲಿ ವೃತ್ತಿಯೆಂಬುದು ವ್ಯಕ್ತಿಗೆ ಒಂದು ಒತ್ತಡವೇ ಆಗುತ್ತಿದೆ. ಯಾವಾಗ ವ್ಯಕ್ತಿಯು ವೃತ್ತಿಯನ್ನು (Pಡಿoಜಿessioಟಿ) ಸಮರ್ಪಕವಾಗಿ ನಿರ್ವಹಿಸುತ್ತಾನೋ ಆಗ ಆತ ಬದುಕಿನಲ್ಲೂ ಯಶಸ್ವಿಯಾಗುತ್ತಾನೆ. ತನ್ನ ವೃತ್ತಿಯನ್ನು ಕುಶಲತೆಯಿಂದ ನಿಭಾಯಿಸುವ ಕಲೆಯನ್ನು ರೂಢಿಸಿಕೊಂಡಾಗ ಮಾತ್ರ ವ್ಯಕ್ತಿಯ ಪ್ರಜ್ಞೆಯು ಉತ್ತೇಜನಗೊಳ್ಳುವುದು.
ಇನ್ನು ಕ್ರಮಬದ್ಧವಾದ ಉಸಿರಾಟವೂ ಕೂಡ ಪ್ರಜ್ಞೆಯ ವಿಕಾಸದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ಶರೀರ ಹಾಗೂ ಮನಸ್ಸನ್ನು ಜೋಡಿಸುವ ಒಂದೇ ಒಂದು ಮನುಜನಲ್ಲಿರುವ ಕ್ರಿಯೆಯೆಂದರೆ ಉಸಿರಾಟ. ಈ ಉಸಿರಾಟದ ಕ್ರಮಬದ್ಧತೆಗೆ ಯೋಗಶಾಸ್ತ್ರದಲ್ಲಿ ಹಲವಾರು ಪ್ರಾಣಾಯಾಮದ ವಿಧಾನಗಳನ್ನು ತಿಳಿಸಲಾಗಿದೆ. ಅತ್ಯಂತ ಸರಳವಾದ ವಿಧಾನ ಎಂದರೆ ನಮ್ಮ ಉಸಿರಾಟವನ್ನು ನಾವು ಗಮನಿಸಿಕೊಳ್ಳುತ್ತಾ ಇರುವುದು. ಸಾಧ್ಯವಾದಷ್ಟು ನಿಧಾನವಾದ ಗತಿಯಲ್ಲಿ ಸಮಪ್ರಮಾಣದಲ್ಲಿ ಉಸಿರನ್ನು ತೆಗೆದುಕೊಳ್ಳುವುದು ಹಾಗೂ ಉಸಿರನ್ನು ಬಿಡುವುದು – ಈ ವಿಧಾನವನ್ನು ಅನುಸರಿಸಬೇಕು. ಸರಳವಾದಂತಹ ಈ ಕ್ರಮವನ್ನು ಬೆಳಿಗ್ಗೆ ಹಾಗೂ ಸಂಜೆ ಹತ್ತು ನಿಮಿಷಗಳವರೆಗೆ (ಕನಿಷ್ಠ ಪ್ರಮಾಣದಲ್ಲಿ) ಮಾಡಿದರೂ ಪ್ರಜ್ಞೆಯ ಮಟ್ಟ ವಿಕಾಸವಾಗುತ್ತಾ ಹೋಗುತ್ತದೆ. ಪೂಜ್ಯರಾದ ಓಶೋರವರು ಒಂದು ವಿಶಿಷ್ಟವಾದ ವಿಧಾನವನ್ನು “ಪ್ರಜ್ಞಾ ವಿಕಾಸ” ಕ್ಕಾಗಿ ಹೇಳುತ್ತಾರೆ. ನಮ್ಮ ದೈನಂದಿನ ಎಲ್ಲಾ ಚಟುವಟಿಕೆಗಳನ್ನೂ ಗಮನವಿಟ್ಟು ಮಾಡುವುದು ಹಾಗೂ ಎಲ್ಲಾ ಚಟುವಟಿಕೆಗಳನ್ನು ಆನಂದದಿಂದ ಮಾಡುವುದು. ಇದರಿಂದ ಖಂಡಿತವಾಗಿಯೂ ಪ್ರಜ್ಞೆ ವಿಕಾಸ ಹೊಂದುತ್ತದೆ.
ಜೀವನ ಶಾಸ್ತ್ರ ಆಯುರ್ವೇದವು ಪ್ರಜ್ಞೆಯ ಬಗ್ಗೆ ಅತಿ ಹೆಚ್ಚಿನ ಒತ್ತು ನೀಡಿದೆ. ಹಿತ ಮಿತವಾದ ಆಹಾರವನ್ನು ಕಾಲಕ್ಕೆ ಅನುಸಾರವಾಗಿ ಸೆವಿಸುವುದು, ಒತ್ತಡವಿಲ್ಲದ ವೃತ್ತಿ ಜೀವನ, ಜ್ಞಾನೇಂದ್ರಿಯಗಳ ಸಮರ್ಪಕ ರೀತಿಯ ಬಳಕೆ, ಕ್ರಮಬದ್ಧವಾದ ಉಸಿರಾಟ, ಶಿಸ್ತಿನ ಜೀವನಶೈಲಿ ಈ ಎಲ್ಲಾ ಅಂಶಗಳನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ಪ್ರಜ್ಞಾ ವಿಕಾಸ ಸಾಧ್ಯ ಎಂಬುದು ಆಯುರ್ವೇದ ಗ್ರಂಥವಾದ ಚರಕ ಸಂಹಿತೆ ಹಾಗೂ ಯೋಗ ದರ್ಶನಗಳಲ್ಲಿ ಹೇಳಲ್ಪಟ್ಟಿದೆ.
ಡಿ.ವಿ.ಜಿ. ಯವರ ಮಂಕುತಿಮ್ಮನ ಕಗ್ಗವೊಂದು ಇಲ್ಲಿ ಪ್ರಸ್ತುತವೆನಿಸುತ್ತದೆ.
“ಸತ್ಯ ಶಿವ ಸುಂದರದ ಸಚ್ಚಿದಾನಂದನದ||
ಭಿತ್ತಿಯಲಿ ಬಣ್ಣ ಬಣ್ಣದ ಜೀವಚಿತ್ರ||
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ
ವೃತ್ತಿ ತನ್ಮಯವಹುದೋ ಮಂಕುತಿಮ್ಮ||
ಪ್ರಜ್ಞೆಯನ್ನು ಅರಿಯೋಣ, ಅರಿತು ಅಳವಡಿಸಿಕೊಳ್ಳೋಣ, ಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ ತನ್ಮೂಲಕ ವಿಕಾಸ ಹೊಂದೋಣ.
ಡಾ. ಶ್ರೀವತ್ಸ.
- Advertisement -
- Advertisement -
- Advertisement -