ಈ ಋತುವಿನಲ್ಲಿ ಸೂರ್ಯನ ತಾಪ ಅಧಿಕವಾಗಿರುವುದರಿಂದ ಅಲ್ಲದೆ ಒಣ ಹವೆ ಇರುವುದರಿಂದ ದೇಹದಲ್ಲಿ ವಾತ ಪ್ರಕೋಪವಾಗುತ್ತದೆ. ಆಯಾಸ, ಸುಸ್ತು, ಬೆವರು, ದೇಹ ದೌರ್ಗಂಧ್ಯ ಇವೆಲ್ಲವು ಈ ಋತುವಿನ ಲಕ್ಷಣಗಳು, ಅತಿಯಾಗಿ ದೇಹ ಬೆವರುವುದರಿಂದ ದೇಹದಲ್ಲಿ ನೀರಿನ ಅಂಶದ ಕೊರತೆ ಕಂಡು ಬರುತ್ತದೆ. ಆದ್ದರಿಂದ ದ್ರವ ಪ್ರಧಾನವಾಗಿರುವ, ತಣ್ಣಗಿನ, ಸಿಹಿ ರಸವನ್ನು ಹೊಂದಿರುವ ಜೀರ್ಣಕ್ಕೆ ಹಗುರವಾದ ಜಿಡ್ಡಿನ ಅಂಶದಿಂದ ಕೂಡಿದ ಆಹಾರ ಸೇವನೆ ಮಾಡಬೇಕು. ಎನ್ನುವುದು ಆಯುರ್ವೇದ ಆಚಾರ್ಯರ ಅಭಿಮತ.
ಆಹಾರ
1. ಈ ಋತುವಿನಲ್ಲಿ ಉಪ್ಪು ಹುಳಿ, ಖಾರ ಹಾಗೂ ಬಿಸಿಯಾದ ಆಹಾರ ಪದಾರ್ಥಗಳ ಸೇವನೆ ವಜ್ರ್ಯ.
2. ತಣ್ಣಗಿನ, ಸಿಹಿ ಪ್ರಧಾನವಾಗಿರುವ, ದ್ರವ ಪದಾರ್ಥಗಳಾದ ಕೋಕಂ ಪಾನಕ, ಲಿಂಬೆ ಹಣ್ಣಿನ ಪಾನಕ, ಸೊಗದೆ ಬೇರಿನ ಪಾನಕ ಹಾಗೂ ಮಾವಿನ ಹಣ್ಣಿನ ಪಾನಕ ದಾಳಿಂಬೆ ಹಣ್ಣಿನ ಪಾನಕಗಳು ಈ ಋತುವಿನಲ್ಲಿ ಉತ್ತಮ.
3. ಅರಳಿನ ಹಿಟ್ಟನ್ನು ನೀರಿಗೆ ಬೆರೆಸಿ ಅದಕ್ಕೆ ಒಂದರಿಂದ ಎರಡು ಚಮಚದಷ್ಟು ತುಪ್ಪವನ್ನು ಸೇರಿಸಿ, ರುಚಿಗೆ ತಕ್ಕಷ್ಟು ಸಕ್ಕರೆಯನ್ನು ಮಿಶ್ರಣ ಮಾಡಿ ಸೇವಿಸುವುದೂ ಕೂಡ ಈ ಋತುವಿನಲ್ಲಿ ಹಿತಕರ.
4. ಮೊಸರಿನಿಂದ ತಯಾರಿಸಿದ ಶ್ರೀಖಂಡ ಕೂಡ ಒಂದು ಒಳ್ಳೆಯ ಆಹಾರ.
5. ದ್ರಾಕ್ಷಿ, ಖರ್ಜೂರ, ಚಿಕ್ಕು ಹಣ್ಣುಗಳಿಂದ ತಯಾರಿಸಿದ ಪಾನಕ ಕೂಡ ಒಳ್ಳೆಯದು.
6. ಸಿಹಿ ಹಣ್ಣುಗಳಿಂದ ತಯಾರಿಸಿದ ಮಿಲ್ಕ್ ಶೇಕ್ ಕೂಡ ಹಿತಕರ. (ಹುಳಿ ಹಣ್ಣನ್ನು ಹಾಲಿಗೆ ಸೇರಿಸಕೂಡದು)
7. ಸೌತೆಕಾಯಿ, ಕುಂಬಳಕಾಯಿ, ಸೀಮೆ ಬದನೆಕಾಯಿ, ಮಂಗಳೂರು ಸೌತೆ, ಹೀರೆಕಾಯಿ, ಪಡುವಲಕಾಯಿ ಇತ್ಯಾದಿ ತರಕಾರಿಗಳನ್ನು ಬಳಸಬಹುದು. ಗಡ್ಡೆ, ಗೆಣಸುಗಳನ್ನು ಬಳಸದಿದ್ದರೆ ಒಳ್ಳೆಯದು.
8. ಜೀರಿಗೆ, ಮೆಂತೆ, ಶುಂಠಿ, ಬೆಳ್ಳುಳ್ಳಿ ಇತ್ಯಾದಿಗಳಿಂದ ತಂಬುಳಿಗಳನ್ನು ತಯಾರಿಸಿ ಊಟದಲ್ಲಿ ಬಳಸಬಹುದು. ಇವು ವಾತ ಶಮನವನ್ನು ಮಾಡಲು ಸಹಾಯಕಾರಿ.
9. ಮಜ್ಜಿಗೆಗೆ ನೀರನ್ನು ಬೆರೆಸಿ ಬೆಲ್ಲ ಅಥವಾ ಸಕ್ಕರೆಯೊಂದಿಗೆ ಸೇವಿಸುವುದು ಉತ್ತಮ.
ವಿಹಾರ
1. ಅತಿಯಾದ ವ್ಯಾಯಾಮ, ಅತಿಯಾಗಿ ಬಿಸಿಲಿನಲ್ಲಿ ಓಡಾಡುವುದು ಸಲ್ಲದು.
2. ಹಗಲು ಸ್ವಲ್ಪ ಹೊತ್ತು ಕುಳಿತ ಭಂಗಿಯಲ್ಲಯೇ ನಿದ್ದೆ ಮಾಡುವುದು ಉತ್ತಮ.
3. ಸ್ನಾನದ ನಂತರ ಕರ್ಪೂರ, ಚಂದನ ಇತ್ಯಾದಿ ಸುಗಂಧ ದ್ರವ್ಯಗಳನ್ನು ಮೈಗೆ ಲೇಪಿಸಿಕೊಳ್ಳುವುದು ಹಿತಕರ.
4. ಉದ್ಯಾನವನದಲ್ಲಿ ವಿಹರಿಸುವುದು ಹಿತಕರ.
ಡಾ. ನಾಗಶ್ರೀ ಕೆ.ಎಸ್.
- Advertisement -
- Advertisement -
- Advertisement -