“ಮಕ್ಕಳಿರಲವ್ವ ಮನೆ ತುಂಬ” ಎನ್ನುವುದು ಒಂದು ಜಾನಪದ ರೂಢಿಯ ಮಾತು. “ನಾವಿಬ್ಬರು ನಮಗಿಬ್ಬರು” ಎನ್ನುವುದು ಇಂದಿನ ಆಧುನಿಕ ಶಿಕ್ಷಿತ ಜಗತ್ತಿನ ಒಂದು ಮಂತ್ರ ವಾಕ್ಯ. ಮಕ್ಕಳ ಮನೋರಂಜನೆಗೆ, ಬೌದ್ಧಿಕ ಮನೋ ವಿಕಾಸಕ್ಕೆ, ದೈಹಿಕ ಬೆಳವಣಿಗೆಗೆ ಆಟಿಕೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಶಹರಗಳಲ್ಲಿ ಕೊಳ್ಳು ಬಾಕ ಸಂಸ್ಕøತಿಯು ತಲೆ ಎತ್ತಿರುವ ಕಾರಣ ಮಕ್ಕಳಿಬ್ಬರಿರಲಿ, ಮೂವರಿರಲಿ, ಒಂದೇ ಮಗುವಿರಲಿ ಶಾಪಿಂಗ್ ಮಾಲ್ ಗಳಲ್ಲಿ ಕಂಡ ಕಂಡ ಆಟಿಕೆಗಳನ್ನು ಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ.
ಯಾವ ರೀತಿಯ ಆಟಿಕೆಗಳನ್ನು ಮಕ್ಕಳಿಗೆ ಆಯ್ಕೆ ಮಾಡಿಕೊಳ್ಳಬೇಕು? ಎನ್ನುವುದರ ಬಗ್ಗೆ ಚರಕಾಚಾರ್ಯರು “ಚರಕ ಸಂಹಿತೆ” ಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
“ಕ್ರೀಡನಕಾನಿ ಖಲು ಕುಮಾರಸ್ಯ ವಿಚಿತ್ರಾಣಿ ಘೋಷಮಂತ್ಯಭಿರಾಮಾಣಿ ಚಾಗ್ರರೂಣಿ ಚಾತೀಕ್ಷ್ಣಾಗ್ರಾಣಿ ಚಾನಾಸ್ಯ ಪ್ರವೇಶೀನಿ ಚಾಪ್ರಾಣ ಹರಾಣಿ ಚಾವಿತ್ರಾಸನಾನಿ ಸ್ಯು||”
ವಿಚಿತ್ರಾಣಿ: ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು. ಉದಾರಹರಣೆಗೆ, ಆನೆ, ಹುಲಿ, ಕುದುರೆ, ನಾಯಿ ಇತ್ಯಾದಿ ಪ್ರಾಣಿಗಳನ್ನು ಹೋಲುವಂಥದ್ದಾಗಿರಬೇಕು. ಚಿಕ್ಕ ಚಿಕ್ಕ ಚೆಂಡುಗಳು ವಿವಿಧ ರೀತಿಯ ಟೆಡ್ಡಿಬೇರ್ ಗೊಂಬೆಗಳೂ ಕೂಡ ಮಕ್ಕಳಿಗೆ ಉತ್ತಮ ಆಟಿಕೆ ವಸ್ತುಗಳು.
ಅಭಿರಾಮಾಣಿ: ಆಟಿಕೆಗಳು ನೋಡಲು ಸುಂದರವಾಗಿರಬೇಕು ಮಕ್ಕಳನ್ನು ಆಕರ್ಷಿಸುವಂತಿರಬೇಕು.
ಅಗ್ರರೂಣಿ: ಆಟಿಕೆಗಳು ಹಗುರವಾಗಿರಬೇಕು. ಮಕ್ಕಳು ಅನಾಯಾಸವಾಗಿ ಹಿಡಿದು ಆಡಲು ಅನುಕೂಲವಾಗುವಂತಿರಬೇಕು.
ಅತೀಕ್ಷ್ಣಾಗ್ರಾಣಿ: ಆಟಿಕೆಗಳ ತುಡಿಗಳು ಮೊನಚಾಗಿರಬಾರದು ಆಡುವ ಸಮಯದಲ್ಲಿ ಮೊನಚಾಗಿದ್ದರೆ ಮಕ್ಕಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು.
ಅನಾಸ್ಯ ಪ್ರವೇಶೀನಿ: ಮಕ್ಕಳು ಆಟಿಕೆಗಳನ್ನು ಬಾಯಿಯೊಳಗೆ ಹಾಕಿಕೊಳ್ಳುವಂತಿರಬಾರದು. ಯಾವುದೇ ವಸ್ತುಗಳು ಸಿಕ್ಕಾಗಲೂ ಕೂಡ ಆಡುತ್ತಾ ಬಾಯಿಯೊಳಗೆ ಇಟ್ಟುಕೊಳ್ಳುವಂಥದ್ದು ಮಕ್ಕಳ ಸಹಜ ಸ್ವಭಾವ. ಇತ್ತೀಚಿನ ದಿನಗಳಲ್ಲಿ ಕೆಲವು ಆಟಿಕೆಗಳನ್ನು ಸೀಸ ಹಾಗೂ ಇತರೇ ರಾಸಾಯನಿಕ ಪದಾರ್ಥಗಳಿಂದ ಮಾಡಿರುತ್ತಾರೆ. ಇವುಗಳ ಸೇವನೆಯಿಂದ ಕೆಲವು ಶ್ವಾಸಕೋಶ ಸಂಬಂಧಿ, ಜೀರ್ಣಕ್ರಿಯೆ ಸಂಬಂಧಿ ಹಾಗೂ ಚರ್ಮದ ಸೋಂಕುಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.
ಅಪ್ರಾಣ ಹರಾಣಿ: ಮಕ್ಕಳ ಆಟಿಕೆಗಳು ಮೃತ್ಯುವನನ್ನು ಆಹ್ವಾನಿಸುವಂತಿರಬಾರದು, ಇದರಿಂದ ಪ್ರಾಣಕ್ಕೆ ಯಾವುದೇ ರೀತಿಯ ಹಾನಿಯುಂಟಾಗಬಾರದು.
ಅವಿತ್ರಾಸನಾನಿ: ಆಟಿಕೆಗಳು ಭಯಾನಕವಾಗಿರಬಾರದು. ಮಕ್ಕಳನ್ನು ಹೆದರಿಸುವಂತಿರಬಾರದು, ಕ್ರೂರವಾಗಿರಬಾರದು.
ಈ ರೀತಿ ಮಕ್ಕಳ ಆಟಿಕೆಗಳು ವಿಭಿನ್ನ ರೀತಿಯದ್ದಾಗಿರಬೇಕು.
ಡಾ. ನಾಗಶ್ರೀ.ಕೆ.ಎಸ್.