ಹೆಣ್ಣಿಗೆ ತಾಯ್ತನ ಎನ್ನುವುದು ವರದಾನ. ಇಂದಿನ ಆಧುನಿಕ ಯುಗದಲ್ಲಿ ಗಂಡನ ಸರಿಸಮಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈ ಕಾರಣದಿಂದಾಗಿ ಹೆಣ್ಣು ತಾಯ್ತನವನ್ನು ಮುಂದೂಡಿದರೂ ಕೂಡ ತನ್ನದೇ ಆದ ಸ್ವಂತ ಕೂಸನ್ನು ಪಡೆಯುವುದು ಎಲ್ಲ ವಿವಾಹಿತ ಮಹಿಳೆಯರ ಕನಸು. ಹೆಣ್ಣು ಗರ್ಭಿಣಿಯಾದ ದಿನದಿಂದಲೇ ಅವಳಿಗೆ ಹಿರಿಯರಿಂದ ಕಿವಿಮಾತು, ಎಚ್ಚರಿಕೆಯ ಮಾತುಗಳು ಕೇಳಿಬರುತ್ತವೆ. ಹಿರಿಯರು ಆಹಾರ, ಊಟೋಪಚಾರದಿಂದ ಹಿಡಿದು ಅವಳ ಪೂರ್ತಿ ನಿಗಾವಣೆಯನ್ನು ವಹಿಸುತ್ತಾರೆ. ಗರ್ಭಿಣಿಯ ವಿಚಾರದಲ್ಲಿ ಎಷ್ಟು ಜಾಗರೂಕತೆಯನನ್ನು ಹಿರಿಯರು ವಹಿಸುತ್ತಾರೋ ಅಷ್ಟೇ ಜಾಗರೂಕತೆ ಹೆರಿಗೆಯ ನಂತರವೂ ಹೆಣ್ಣಿಗೆ ಅವಶ್ಯಕ. ಒಂಭತ್ತು ತಿಂಗಳು ಇನ್ನೊಂದು ಜೀವವನ್ನು ಹೊತ್ತು, ಹೆತ್ತು ದೇಹ ಬಸವಳಿದಿರುತ್ತದೆ. ಅದಕ್ಕೆ ತಕ್ಕ ರೀತಿಯಲ್ಲಿ ಆರೈಕೆ ದೊರೆತರೆ ಮತ್ತೆ ದೇಹ ಮೊದಲಿನ ಸ್ಥಿತಿಗೆ ತಲುಪುವುದು. ಈ ಅವಧಿಯಲ್ಲಿ ಸರಿಯಾದ ರೀತಿಯ ಆರೈಕೆ, ಪೋಷಣೆಗಳು ದೊರೆಯದಿದ್ದರೆ ಅದರಿಂದ ಸಂಭವಿಸುವ ರೋಗಗಳನ್ನು ಗುಣಪಡಿಸುವುದು ಕಷ್ಟಸಾಧ್ಯ ಎನ್ನುವುದು ಆಚಾರ್ಯರ ಅಭಿಪ್ರಾಯ.
ಹೆರಿಗೆ ಆದ ದಿನದಿಂದ ಒಂದುವರೆ ತಿಂಗಳಿನವರೆಗಿನ ಅವಧಿಯನ್ನು ಬಾಣಂತಿಯ ಆರೈಕೆಯ ದಿನಗಳು ಎನ್ನುವುದು ಆಯುರ್ವೇದ ಆಚಾರ್ಯರ ಅಭಿಮತ. ಕೆಲವರು ಆರು ತಿಂಗಳುಗಳು ಆರೈಕೆ ಅವಶ್ಯಕ ಎನ್ನುವರು. ಮತ್ತೆ ಋತುಸ್ರಾವ ಆರಂಭವಾಗುವವರೆಗೆ ಆರೈಕೆ ಅವಶ್ಯಕ ಎನ್ನವುದು ಇನ್ನು ಕೆಲವರ ಅಭಿಪ್ರಾಯ.
ಬಾಣಂತಿಯ ಆರೈಕೆಯಲ್ಲಿ ನಾಲ್ಕು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕು.
1. ಶೇಖರಣೆಗೊಂಡ ಅಶುದ್ಧ ರಕ್ತವನ್ನು ಹೊರ ಹೋಗುವಂತೆ ಮಾಡುವುದು.
2. ದೇಹದಲ್ಲಿ ಪ್ರಕೋಪವಾದ ವಾತ ದೋಷವನ್ನು ಶಮನ ಮಾಡುವುದು.
3. ಶಿಥಿಲಗೊಂಡ ದೇಹ ಧಾತುಗಳನ್ನು ಸಮಸ್ಥಿತಿಗೆ ತರುವುದು.
4. ಪೌಷ್ಟಿಕಾಂಶ ಇರುವ ಆಹಾರವನನ್ನು ನೀಡುವುದು. (ಪ್ರಧಾನವಾಗಿ ಸ್ತನ್ಯ ವರ್ಧನೆಗೆ ಸಹಾಯಕವಾದ ಆಹಾರ ಸೇವನೆ.)
ಬಾಣಂತಿ ಆರೈಕೆ
1. ಬಾಣಂತಿಗೆ ಎಳ್ಳೆಣ್ಣೆ ಮತ್ತು ತುಪ್ಪವನ್ನು ಮಿಶ್ರಣ ಮಾಡಿ, ಬಿಸಿ ಮಾಡಿ ಮೈಯನ್ನು ಉಜ್ಜಿ, ಬಿಸಿ ನೀರಿನಿಂದ ಸ್ನಾನ ಮಾಡಿಸಬೇಕು. ಪ್ರಧಾನವಾಗಿ ಎದೆ, ಹೊಟ್ಟೆ, ಸೊಂಟ ಈ ಭಾಗಗಳಿಗೆ ಸರಿಯಾಗಿ ಮಿಶ್ರಣವನ್ನು ಹಚ್ಚಿ ತಿಕ್ಕಿ, ಬಿಸಿ ನೀರಿನ ಸಿಂಚನವನ್ನು ಮಾಡಬೇಕು. ಬಾಣಂತಿಯ ಅಭ್ಯಂಗಕ್ಕೆ ಕ್ಷೀರಬಲಾ ತೈಲ, ಮಹಾ ನಾರಾಯಣ ತೈಲ, ಸಹಚರಾದಿ ತೈಲಗಳಲ್ಲಿ ಯಾವುದನ್ನಾದರೂ ಬಳಸಬಹುದು.
2. ಸ್ನಾನದ ನಂತರ ಶುದ್ಧವಾದ ಹತ್ತಿಯ ಬಟ್ಟೆಯಿಂದ ಹೊಟ್ಟೆಯನ್ನು ಬಿಗಿಯಬೇಕು. ಇದು ಹೊಟ್ಟೆಯಲ್ಲಿ ವಿಕೃತ ವಾತದ ಗತಿಯನ್ನು ಶಮನ ಮಾಡುವುದು. ಅಲ್ಲದೆ ಉದರದ ಮಾಂಸ ಖಂಡಗಳು ದುರ್ಬಲವಾಗುವುದನ್ನು ತಡೆದು ಗಟ್ಟಿಗೊಳಿಸುವುದಲ್ಲದೆ, ಗರ್ಭಿಣಿಯ ಪೂರ್ವಾವಸ್ಥೆಗೆ ತಲುಪಲು ಸಹಾಯ ಮಾಡುವುದು.
3. ನಂತರ ಹಿಪ್ಪಲಿ, ಹಿಪ್ಪಲಿ ಮೂಲ, ಶುಂಠಿ, ಕಾಳುಮೆಣಸು, ಗಜಪಿಪ್ಪಲಿ ಇವುಗಳಿಂದ ಸಿದ್ಧಪಡಿಸಿದ ತುಪ್ಪ ಅಥವಾ ಕಷಾಯವನ್ನು ಬೆಲ್ಲದ ನೀರಿನೊಂದಿಗೆ ಸೇವಿಸಬೇಕು. ಇದನ್ನು 2 ರಿಂದ 3 ದಿನಗಳವರೆಗೆ ಅಥವಾ ಹನ್ನೊಂದು ದಿನಗಳವರೆಗೆ ಅಶುದ್ಧ ರಕ್ತಸ್ರಾವವಾಗುವವರೆಗೆ ಸೇವಿಸಬೇಕು.
4. ಹಸಿವೆ ಆದ ನಂತರ ಬಿಸಿಯಾದ ಚೆನ್ನಾಗಿ ಬೆಂದ ಅನ್ನಕ್ಕೆ ತುಪ್ಪವನ್ನು ಬೆರೆಸಿ, ಕಾಳುಮೆಣಸಿನಿಂದ ಸಿದ್ಧಪಡಿಸಿದ ಸಾರನ್ನು ಮಿಶ್ರಣ ಮಾಡಿ ಸೇವಿಸುವುದು ಹಿತಕರ.
5. ಪ್ರತಿ ಆಹಾರದೊಂದಿಗೆ ತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದು ಒಳ್ಳೆಯದು.
6. ಕಾಳು ಮೆಣಸಿನ ಸಾರನ್ನು ಕುಡಿಯಲೂ ಕೂಡ ಉಪಯೋಗಿಸಬಹುದು.
7. ದಿನ ನಿತ್ಯದ ಆಹಾರದಲ್ಲಿ ಹಾಲು, ಮೊಸರು ಹಾಗೂ ತುಪ್ಪವನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಕು.
8. ಏಳು ದಿನಗಳ ನಂತರ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಇದರಲ್ಲಿ ಮುಖ್ಯವಾಗಿ ಬಾಣಂತಿಯ ಎದೆ ಹಾಲನ್ನು ಹೆಚ್ಚಿಸುವಂತಹ ಆಹಾರ ಸೇವನೆ ಮಾಡುವುದು ಅತ್ಯವಶ್ಯಕ.
9. ಶತಾವರಿ (ಹಲವು ಮಕ್ಕಳ ತಾಯಿ ಬೇರು), ಕಬ್ಬಿನ ಹಾಲು, ಜೀವಂತಿ (ಸಿಹಿ ಹಾಲೆ), ಕೆಂಪಕ್ಕಿ, ಬೆಳ್ಳುಳ್ಳಿ, ಸಬ್ಬಸಿಗೆ ಸೊಪ್ಪು, ಹಾಲು ಹಾಗೂ ಹಾಲಿನ ಉತ್ಪನ್ನಗಳು ಇವೆಲ್ಲವು ಸ್ತನ್ಯ (ಎದೆ ಹಾಲು) ವರ್ಧನೆಗೆ ಸಹಾಯಕಾರಿ.
10. ಜೀರ್ಣ ಶಕ್ತಿಯನ್ನು ಉತ್ತಮಗೊಳಿಸಲು ಹಿಪ್ಪಲಿ, ಹಿಪ್ಪಲಿಮೂಲ, ಶುಂಠಿಪುಡಿಯನ್ನು ಒಂದು ಚಮಚದಷ್ಟು ತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ತೆಳುವಾದ ಅನ್ನದ ಗಂಜಿಗೆ ಹಿಪ್ಪಲಿ ಮತ್ತು ಒಣ ಶುಂಠಿಯ ಪುಡಿಯನ್ನು ಹಾಕಿ ಸೇವಿಸಲು ಕೊಡಬೇಕು. ಇದೇ ರೀತಿ ಐದರಿಂದ ಏಳು ದಿನಗಳವರೆಗೆ ಪಾಲಿಸಬೇಕು. ಇದರೊಂದಿಗೆ ಭದ್ರದಾರುವನ್ನು ಹಾಕಿ ಕುದಿಸಿದ ನೀರನ್ನು ಕುಡಿಯಲು ಕೊಡಬೇಕು.
11. ಒಂದು ಲೋಟ ಬೆಲ್ಲದ ನೀರನ್ನು ಎರಡು ಬಾರಿ ಕುಡಿಯಬೇಕು. ಬೆಲ್ಲವು ಸುಣ್ಣ ಮತ್ತು ಕಬ್ಬಿಣಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ರಕ್ತದ ಅಂಶವನ್ನು ಪೂರೈಸುವ ದೃಷ್ಟಿಯಿಂದ ಬೆಲ್ಲದ ನೀರು ಹಿತಕರ.
12. ಬೂದಗುಂಬಳ, ಮೂಲಂಗಿ, ಸೌತೆಕಾಯಿ ಇವುಗಳ ಸೊಪ್ಪುಗಳನ್ನು ತುಪ್ಪದಲ್ಲಿ ಹುರಿದು ಮಾಡಿದ ಪಲ್ಯವು ಊಟದಲ್ಲಿರಬೇಕು.
13. ತುಪ್ಪದಲ್ಲಿ ಹುರಿದ ಸಬ್ಬಸಿಗೆ ಸೊಪ್ಪು ಮತ್ತು ಹಲವು ಮಕ್ಕಳ ತಾಯಿ ಬೇರಿನ ಗಿಡದ ಎಲೆಗಳನ್ನು ಸೇವಿಸಬೇಕು.
14. ಸಬ್ಬಸಿಗೆ ಸೊಪ್ಪಿನಿಂದ ಚಟ್ನಿ, ತಂಬುಳಿ, ದೋಸೆ, ಇಡ್ಲಿಗಳನ್ನು ತಯಾರಿಸಿ ಸೇವಿಸುವುದು ಹಿತಕರ.
15. ಶತಾವರಿ ಲೇಹ್ಯವನ್ನು ತಯಾರಿಸಿ ಸೇವಿಸಬೇಕು.
16. ಬೆಳ್ಳುಳ್ಳಿ ಚಟ್ನಿ, ತಂಬುಳಿಗಳನ್ನು ತಯಾರಿಸಿ ಸೇವಿಸುವುದು ಹಿತಕರ.
17. ಸೋರಲೆ ಸೊಪ್ಪು, ಎಲೆವರಿಗೆ ಸೊಪ್ಪು, ಚಕ್ರಮರ್ದ ಸೊಪ್ಪು, ದುಂಡು ಮಲ್ಲಗೆ ಗಿಡದ ಎಲೆ ಇತ್ಯಾದಿಗಳಿಂದ ಚಟ್ನಿಯನ್ನು ತಯಾರಿಸಿ ಸೇವಿಸುವುದು ಉತ್ತಮ.
18. ತರಕಾರಿ, ಸೊಪ್ಪುಗಳು (ಉದಾ: ಬಸಳೆ, ಹರಿವೆ, ಮೆಂತ್ಯ, ಪಾಲಕ್, ಪುದಿನ ಇತ್ಯಾದಿ) ಬೇಳೆ, ಕಾಳುಗಳು, ಸೇಬು ಸಪೋಟದಂತಹ ಶೀತಕಾರಕವಲ್ಲದ ಹಣ್ಣುಗಳ ಸೇವನೆ ಉತ್ತಮ. ದಾಳಿಂಬೆ, ಒಣದ್ರಾಕ್ಷಿ, ಅಂಜೂರ, ಖರ್ಜೂರ, ಉತ್ತುತ್ತಿಗಳು ಹಿತಕರ.
19. ಈರುಳ್ಳಿ, ಹುರುಳಿಕಾಯಿ, ಹೀರೇಕಾಯಿಯ ಪಲ್ಯಗಳು, ಬೆಳ್ಳುಳ್ಳಿಯನ್ನು ಹೆಚ್ಚಾಗಿ ಹಾಕಿ ತಯಾರಿಸಿದಂತಹ ಗೊಜ್ಜು ಅಥವಾ ತಿಳಿಸಾರು ಇತ್ಯಾದಿಗಳನ್ನು ಅನ್ನದೊಂದಿಗೆ ಸೇವಿಸಬೇಕು.
20. ಸಜ್ಜಿಗೆ, ಪಾಯಸ, ಕೀರು ಇತ್ಯಾದಿ ಸಿಹಿ ಆಹಾರಗಳನ್ನು ಸೇವಿಸಬೇಕು.
21. ಗೋಧಿ, ಅಕ್ಕಿ ಎಳ್ಳಿನ ಚಟ್ನಿ, ತೆಂಗಿನ ಕಾಯಿಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕು.
22. ಅತ್ತಿ, ಆಲ ಮತ್ತು ಅರಳಿ ಮರಗಳ ಚಕ್ಕೆಯ ಕಷಾಯವನ್ನು ಹಾಲಿನೊಂದಿಗೆ ಕುದಿಸಿಕೊಂಡು ಸ್ವಲ್ಪ ತುಪ್ಪ, ಬೆಲ್ಲ, ಸೇರಿಸಿ ಅನ್ನದೊಂದಿಗೆ ಊಟ ಮಾಡಬೇಕು. ಇದರಿಂದ ತಾಯಿಯ ಎದೆ ಹಾಲು ಹೆಚ್ಚುತ್ತದೆ.
23. ಅಂಟಿನ ಉಂಡೆ ಸೇವನೆಗೆ ಹಿತಕರ.
ಅಂಟಿನ ಉಂಡೆ ಮಾಡುವ ವಿಧಾನ:
ದ್ರಾಕ್ಷಿ 1/4 ಕೆ.ಜಿ., ಉತ್ತುತ್ತಿ 1 ಕೆ.ಜಿ., ಬಾದಾಮಿ 100 ಗ್ರಾಂ, ಗಸಗಸೆ 1/4 ಕೆ.ಜಿ., ಕೆಂಪು ಕಲ್ಲು ಸಕ್ಕರೆ 50 ಗ್ರಾಂ, ಕೊಬ್ಬರಿ 1/2 ಕೆ.ಜಿ. ಜಾಲಿಯ ಅಂಟು 100 ಗ್ರಾಂ, ಬೆಲ್ಲ 1/2 ಕೆ.ಜಿ.
ಬಾದಾಮಿ, ಉತ್ತುತ್ತಿ, ಕಲ್ಲು ಸಕ್ಕರೆಗಳನ್ನು ಸಣ್ಣಗೆ ಪುಡಿಮಾಡಿಕೊಳ್ಳಬೇಕು. ಕೊಬ್ಬರಿಯನ್ನು ತುರಿದುಕೊಂಡು ಎಲ್ಲಾ ಪದಾರ್ಥಗಳನ್ನು ತಪ್ಪದಲ್ಲಿ ಹುರಿದುಕೊಳ್ಳಬೇಕು. ಅಂಟನ್ನೂ ಸಣ್ಣಗೆ ಪುಡಿಮಾಡಿಕೊಂಡು ತುಪ್ಪದಲ್ಲಿ ಹುರಿದು ಬೆಲ್ಲದ ಪಾಕದಲ್ಲಿ ಎಲ್ಲವನ್ನೂ ಸೇರಿಸಿಕೊಂಡು ಉಂಡೆಗಳನ್ನು ಮಾಡಿಕೊಳ್ಳುವುದು.
ಮುಂದುವರೆಯುವುದು…
ಡಾ. ನಾಗಶ್ರೀ. ಕೆ.ಎಸ್.
- Advertisement -
- Advertisement -
- Advertisement -