ಪಶ್ಚ್ಯಾತ್ಯೀಕರಣವೇ ಪ್ರಾಧಾನ್ಯವಾಗಿರುವ ಇಂದಿನ ದಿನಗಳಲ್ಲಿ ಮುಂಜಾನೆ ಏಳುವುದರಿಂದ ರಾತ್ರಿ ಮಲಗುವವರೆಗೆ ನಿತ್ಯ ಬಳಕೆಯಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುವೂ ಕೂಡ ವಿದೇಶೀಮಯವಾದುದಾಗಿದೆ. ಮುಂಜಾನೆ ಹಲ್ಲುಜ್ಜಲು ಬಳಸುವ ಬ್ರಷ್, ಪೇಸ್ಟ್‍ಗಳಿಂದ ರಾತ್ರಿ ಮಲಗುವಾಗ ಸೊಳ್ಳೆಗಳನ್ನು ದೂರವಿಡಲು ಬಳಸುವ ಗುಡ್‍ನೈಟ್ ಮ್ಯಾಟ್‍ಗಳವರೆಗೆ ಎಲ್ಲವೂ ಪಾಶ್ಚ್ಯಾತ್ಯ ವಸ್ತುಗಳು. ಸುಂದರ ದಂತಪಂಕ್ತಿಗಳನ್ನೊಳಗೊಂಡ ಸ್ತ್ರೀ, ಪುರುಷರನ್ನು ದೃಶ್ಯ ಮಾಧ್ಯಮಗಳಲ್ಲಿ, ಜಾಹೀರಾತುಗಳಲ್ಲಿ ನೋಡಿದ ತಕ್ಷಣ ಮಾರನೆಯ ದಿನವೇ ಅವರು ಆ ಜಾಹೀರಾತುಗಳಲ್ಲಿ ಬಳಸಿದ ಬ್ರಷ್‍ಗಳು ನಮ್ಮ ಮನೆಯನ್ನು ಅಲಂಕರಿಸುತ್ತವೆ.
ಆಯುರ್ವೇದ ಗ್ರಂಥಗಳಲ್ಲಿ ಹಲ್ಲುಜ್ಜುವುದರ ಬಗ್ಗೆ, ಅದಕ್ಕಾಗಿ ಬಳಸುವ ಬ್ರಷ್, ಪೇಸ್ಟ್ ಗಳ ಬಗ್ಗೆ ಆಚಾರ್ಯರು ಏನನ್ನು ವಿವರಿಸಿದ್ದಾರೆ ಎನ್ನುವುದನ್ನು ತಿಳಿಯೋಣ.
ಬ್ರಷ್ ಹೇಗಿರಬೇಕು?
ಮುಂಜಾನೆ ಎದ್ದ ನಂತರ ಶೌಚ ಕಾರ್ಯಗಳನ್ನು ಮುಗಿಸಿ ಹಲ್ಲುಜ್ಜುವುದು ಒಂದು ಕ್ರಿಯೆ. ಆಯುರ್ವೇದದಲ್ಲಿ ಆಚಾರ್ಯರು ದಂತ ಧಾವನಕ್ಕೆ ಸಿಹಿ, ಒಗರು, ಖಾರ ಹಾಗೂ ಕಹಿರಸ ಪ್ರಾಧಾನ್ಯತೆಯುಳ್ಳ ವೃಕ್ಷಗಳ ಕಾಂಡಗಳನ್ನು ಬಳಸಲು ಹೇಳಿರುತ್ತಾರೆ. ಬೇವು, ಅಣಲೆವೃಕ್ಷ, ಉತ್ತರಾಣಿ, ಹೊಂಗೆ, ಅರಳೀವೃಕ್ಷ, ಮತ್ತಿ, ಕರವೀರ, ಎಕ್ಕೆ ಇತ್ಯಾದಿ ವೃಕ್ಷಗಳ ಕಾಂಡಗಳು ಅಥವಾ ದಂಟುಗಳನ್ನು ದಂತ ಧಾವನಕ್ಕೆ ಬಳಸಬಹುದಾಗಿದೆ. ಈ ದಂಟುಗಳು 12 ಅಂಗುಲಗಳಷ್ಟು ಉದ್ದವಿರಬೇಕು. ಕಿರು ಬೆರಳಿನಷ್ಟು ದಪ್ಪವಾಗಿರಬೇಕು, ನೇರವಾಗಿರಬೇಕು. ಗಂಟುಗಳಿಂದ ಹಾಗೂ ವ್ರಣಗಳಿಂದ ಕೂಡಿರಬಾರದು. ತುಸು ಮೃದುವಾಗಿರಬೇಕು. ತುದಿಗಳನ್ನು ಹಲ್ಲುಗಳಿಂದ ಅಗಿದು ಬ್ರಷ್‍ನ ಆಕಾರದಲ್ಲಿ ಮಾಡಿಕೊಳ್ಳಬೇಕು.
ಹಲ್ಲುಜ್ಜುವ ವಿಧಾನ
ಹಲ್ಲುಜ್ಜಲು ಬಳಸುವ ಪದಾರ್ಥಗಳು
ಜೇನುತುಪ್ಪ, ಹಿಪ್ಪಲಿ, ಕಾಳುಮೆಣಸು, ಶುಂಠಿ, ಅಣಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ, ಎಣ್ಣೆ, ಸೈಂಧವ ಲವಣ, ತೇಜೋಮತಿ ಚೂರ್ಣದಿಂದ ಕೂಡ ಹಲ್ಲುಗಳನ್ನು ಉಜ್ಜಬಹುದು.
ದಂತ ಧಾವನದ ಉಪಯೋಗಗಳು
ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವುದು, ಹಲ್ಲುಗಳ ಮೇಲೆ, ಸಂದುಗಳಲ್ಲಿ ಶೇಖರವಾಗಿರುವ ಕಿಟ್ಟ ಪದಾರ್ಥಗಳನ್ನು ಶುಚಿಗೊಳಿಸುವುದು, ಬಾಯಿಯಲ್ಲಿ ಗಂಟಲಿನಲ್ಲಿ ಸಂಗ್ರಹವಾಗಿರುವ ಕಫವನ್ನು ನಿರ್ಹರಣ ಮಾಡುವುದು, ಬಾಯಿಯನ್ನು ಸ್ವಚ್ಛಗೊಳಿಸುವುದು, ಬಾಯಿಯ ರುಚಿಯನ್ನು ಹೆಚ್ಚಿಸುವುದು, ಮನಸ್ಸಿಗೆ ಆಹ್ಲಾದವನ್ನುಂಟುಮಾಡುವುದು. ಕಹಿಬೇವು, ಅಣಲೆಕಾಯಿ ಈ ವೃಕ್ಷಗಳ ದಂಟುಗಳನ್ನು ಬಳಸುವುದರಿಂದ ಈ ವೃಕ್ಷಗಳು ಕ್ರಿಮಿನಾಶಕಗಳಾದುದರಿಂದ ಗಂಟಲಿನ ಸಂಬಂಧಿ ಹಲವು ರೋಗಗಳ ಶಮನಕ್ಕೆ ಸಹಾಯಕ.
ಗ್ರೀಷ್ಮ ಹಾಗೂ ಶರದ್ ಋತುಗಳಲ್ಲಿ ಶೀತ ಜಲದಿಂದ ಬಾಯಿ ಮುಕ್ಕಳಿಸಬೇಕು. ಇತರೆ ಋತುಗಳಲ್ಲಿ (ವರ್ಷಾ, ಹೇಮಂತ, ಶಿಶಿರ, ವಸಂತ) ಉಷ್ಣಜಲದಿಂದ ಬಾಯಿ ಮುಕ್ಕಳಿಸಬೇಕು.
ಡಿ.ವಿ.ಜಿ ಯವರು ತಮ್ಮ “ಮಂಕು ತಿಮ್ಮನ ಕಗ್ಗ”ದಲ್ಲಿ ಈ ರೀತಿ ಹೇಳಿದ್ದಾರೆ.
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ?
ಮಗುವೆ, ಮುದುಕನೆ, ಪುರಾಣಿಕ, ಪುರೋಹಿತರೇ?
ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು
ಮೊಗವ ತದ್ದುವರಲ್ಲ ಮಂಕುತಿಮ್ಮ.
ಡಾ. ನಾಗಶ್ರೀ.ಕೆ.ಎಸ್.