“ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ” ಎನ್ನುವುದು ಲೋಕೋಕ್ತಿ. ಅದರಂತೆ “ಮಾತೃ ದೇವೋ ಭವ” ತಾಯಿಗಿಂತ ಮಿಗಿಲಾದ ದೇವರಿಲ್ಲ ಇನ್ನುವುದೂ ಕೂಡ ವಾಡಿಕೆಯಲ್ಲಿರುವ ಸಂಸ್ಕøತ ನುಡಿ. ಇಷ್ಟೇ ಅಲ್ಲದೆ ಕಥೆ, ಕಾದಂಬರಿ, ಸಿನಿಮಾಗಳಲ್ಲಿ ಕೂಡ ಮಾತೃ ಪ್ರಾಧಾನ್ಯತೆಯನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ ಹಾಗೂ ಓದಿರುತ್ತೇವೆ. ದೇವರು ತಾನು ಎಲ್ಲ ಕಡೆಯಲ್ಲಿಯೂ ಇದ್ದು ಮಕ್ಕಳ ರಕ್ಷಣೆಯನ್ನು ಮಾಡಲಾಗುವುದಿಲ್ಲವೆಂದು ತಾಯಿಯನ್ನು ಸೃಷ್ಟಿಸಿದನಂತೆ.
ಒಂಭತ್ತು ತಿಂಗಳು ಗರ್ಭದಲ್ಲಿ ಶಿಶುವಿನ ರಕ್ಷಣೆಯನ್ನು ನೀಡುವುದು ಮಹಿಳೆಯ ಜೀವನದ ಒಂದು ಸೂಕ್ಷ್ಮ ಹಾಗೂ ಮಹತ್ತರ ಘಟ್ಟ. ಇಲ್ಲಿ ತಾಯ್ತನದ ಅನುಭವವನ್ನು ಮಹಿಳೆ ಪಡೆಯುತ್ತಾಳೆ. ಇಷ್ಟೇ ಅಲ್ಲದೆ ಈ ಅವಧಿಯು ಮಹಿಳೆಯ ತ್ಯಾಗ ಜೀವನ ಹಾಗೂ ಸಹನಶೀಲತೆಯ ಸಂಕೇತ. “ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಂದಿರು ಇರಲು ಸಾಧ್ಯವಿಲ್ಲ” ಇನ್ನುವುದೂ ಕೂಡ ಒಂದು ಪ್ರಚಲಿತ ಸಂಸ್ಕøತ ಸುಭಾಷಿತ. ಗರ್ಭಿಣಿ ಮಹಿಳೆ ಈ ಅವಧಿಯಲ್ಲಿ ಸೇವಿಸುವ ಆಹಾರ ಹಾಗೂ ವಿಹಾರಗಳ ಮೇಲೆ ಜನಿಸುವ ಶಿಶುವಿನ ಆರೋಗ್ಯವು ನಿರ್ಧಾರಿತವಾಗುತ್ತದೆ.
ಗರ್ಭಿಣಿ ಸೇವಿಸುವ ಆಹಾರವು ಪ್ರಧಾನವಾಗಿ ಮೂರು ಪ್ರಯೋಜನಗಳನ್ನು ಒದಗಿಸಬೇಕು.
1. ಗರ್ಭಿಣಿಯ ದೇಹದ ಪೋಷಣೆ
2. ಬೆಳೆಯುತ್ತಿರುವ ಶಿಶುವಿನ ಪೋಷಣೆ
3. ಮಗುವಿನ ಹಾಲುಣಿಸಲು ಸ್ತನಗಳ ಪೋಷಣೆ
ಗರ್ಭಿಣಿ ಸ್ತ್ರೀಯು ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದರೆ ಸಾಲದು. ಆಹಾರವು ಪೌಷ್ಟಿಕಾಂಶಯುಕ್ತವಾಗಿರಬೇಕು. ಅಲ್ಲದೆ ಗರ್ಭಿಣಿಯಲ್ಲಿ ರಕ್ತ ಕಣಗಳ ಉತ್ಪತ್ತಿ, ಕಬ್ಬಿಣಾಂಶಗಳ ದಾಸ್ತಾನು, ಪ್ರಸವ ವೇದನೆಯನ್ನು ಸಹಿಸಿಕೊಳ್ಳಲು ಶಾರೀರಿಕ ಹಾಗೂ ಮಾನಸಿಕ ಬಲ ಮಾಂಸಖಂಡಗಳಲ್ಲಿ ಬಲವನ್ನು ನೀಡುವಂತಿರಬೇಕು.
ಮೊದಲನೆಯ ತಿಂಗಳು: ಮೊದಲ ಮೂರು ತಿಂಗಳುಗಳಲ್ಲಿ ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ವಾಂತಿ, ಸುಸ್ತು, ತಲೆ ಸುತ್ತು ಇತ್ಯಾದಿಗಳು ಇರುತ್ತವೆ. ಈ ತಿಂಗಳಿನಲ್ಲಿ ಹಾಲು ಪ್ರಮುಖವಾದ ಆಹಾರವಾಗಬೇಕು. ಸಿಹಿ, ಶೀತ, ದ್ರವ ಹಾಗೂ ಜೀರ್ಣಕ್ಕೆ ಹಗುರವಾದಂಥಹ ಆಹಾರ ಸೇವನೆ ಹಿತಕರ. ಹಣ್ಣಿನ ರಸ, ಗಂಜಿ, ಎಳನೀರು ಇತ್ಯಾದಿಗಳೂ ಕೂಡ ಈ ತಿಂಗಳಿನಲ್ಲಿ ಉತ್ತಮ. ಅಲ್ಲದೆ ಚೆನ್ನಾಗಿ ಬೆಂದ ಅನ್ನವನ್ನು ತೊವ್ವೆ ಅಥವಾ ಬೇಳೆಕಟ್ಟು ಇತ್ಯಾದಿಗಳೊಂದಿಗೆ ಅಥವಾ ಬೆಣ್ಣೆ, ತುಪ್ಪ, ಮೊಸರಿನೊಂದಿಗೆ ಸೇವಿಸಬೇಕು.
ಎರಡನೆಯ ತಿಂಗಳು: ಈ ತಿಂಗಳಿನಲ್ಲಿಯೂ ಕೂಡ ಆಹಾರ ಮೊದಲನೆಯ ತಿಂಗಳಿನಂತೆ ಇದ್ದು, ಹಾಲಿಗೆ ಅತಿ ಮಧುರ (ಜೇಷ್ಠವಧು) ಶತಾವರಿ (ಹಲವು ಮಕ್ಕಳ ತಾಯಿ ಬೇರು) ಸಸ್ಯಗಳ ಬೇರನ್ನು ಬೆರೆಸಿ, ಕುದಿಸಿ, ಶೋಧಿಸಿ ದಿನಕ್ಕೆ ಎರಡು ಲೋಟದಷ್ಟು ಹಾಲನ್ನು ಗರ್ಭಿಣಿಯು ಕುಡಿಯಬೇಕು. ಅತಿ ಮಧುರ ಮತ್ತು ಶತಾವರಿಗಳು ಎದೆ ಹಾಲಿನ ಉತ್ಪತ್ತಿ ಮತ್ತು ಕಫ ದೋಷಗಳ ನಿವಾರಣೆ ಮಾಡುತ್ತವೆ.
ಮೂರನೆಯ ತಿಂಗಳು: ಸಿಹಿ ಪದಾರ್ಥಗಳನ್ನು ಸೇವಿಸಬೇಕು. ಹಾಲು, ತುಪ್ಪ, ಜೇನುತುಪ್ಪ, ಬೆಣ್ಣೆ, ಮೊಸರುಗಳನ್ನು ಸೇವಿಸಬೇಕು. ಅನ್ನವನ್ನು ಹಾಲಿನೊಂದಿಗೆ ಸೇರಿಸಿ ಸೇವಿಸುವುದು ಹಿತಕರ. ಕಸಕಸೆ, ಶಾವಿಗೆ, ಹೆಸರುಬೇಳೆ, ಕಡ್ಲೆಬೇಳೆಗಳಿಂದ ತಯಾರಿಸಿದ ಪಾಯಸಕ್ಕೆ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಪೌಷ್ಠಿಕಾಂಶಗಳು ದೊರೆಯುತ್ತವೆ. ಅಲ್ಲದೆ ತುಪ್ಪವು ದೇಹಕ್ಕೆ ಶಕ್ತಿ ಹಾಗೂ ಶಾಖವನ್ನು ನೀಡುತ್ತದೆ. ಚರ್ಮವು ಬಿರುಕು ಬಿಡುವುದನ್ನು ತಡೆದು, ಕಾಂತಿಯನ್ನು ನೀಡುತ್ತದೆ. ಮಗುವಿನ ಬುದ್ಧಿಶಕ್ತಿಯು ಬೆಳವಣಿಗೆಗೂ ಇದು ಸಹಕಾರಿ.
ನಾಲ್ಕನೆಯ ತಿಂಗಳು: ಈ ತಿಂಗಳಿನಲ್ಲಿ ಗರ್ಭಿಣಿಯರಲ್ಲಿ ವಾಕರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಆಹಾರವನ್ನು ತಿನ್ನಲು ಇಚ್ಛೆಯಾಗುತ್ತದೆ. ಆದುದರಿಂದ ಘನ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಈ ತಿಂಗಳಿನಲ್ಲಿ ಚೆನ್ನಾಗಿ ಬೆಂದ ಅನ್ನವನ್ನು ಮೊಸರು ಅಥವಾ ಬೆಣ್ಣೆಯೊಂದಿಗೆ ಸೇವಿಸಬೇಕು. ಬಿಸಿಯಾದ ಆಹಾರದೊಂದಿಗೆ ಬೆಣ್ಣೆಯನ್ನು ಬೆರೆಸಿ ಸೇವಿಸುವುದು ಹಿತಕರ. ಮಾಂಸಾಹಾರ ಸೇವನೆ ಮಾಡುವವರು ಒಣ ಪ್ರದೇಶದ ಪ್ರಾಣಿಗಳ ಮಾಂಸ (ಕೋಳಿ, ಕುರಿ) ದಿಂದ ಸಿದ್ಧಪಡಿಸಿದ ಆಹಾರವನ್ನು ಸೇವಿಸಬಹುದು. ಮಾಂಸ ರಸದ ಸೇವನೆ ಕೂಡ ಒಂದು ಉತ್ತಮ ಆಹಾರ.
ಹಸಿ ತರಕಾರಿ, ತಾಜಾ ಹಣ್ಣುಗಳು, ರಾಗಿ, ಗೋಧಿ, ಜೋಳ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಮೊಟ್ಟೆ ಇತ್ಯಾದಿಗಳ ಸೇವನೆ ಈ ತಿಂಗಳಿನಲ್ಲಿ ಉತ್ತಮ.
ಐದನೆಯ ತಿಂಗಳು: ಹಣ್ಣಿನ ಸೇವನೆ ಈ ಅವಧಿಯಲ್ಲಿ ಅಗತ್ಯ. ಬೆಣ್ಣೆ, ತುಪ್ಪ, ಹಾಲು, ಜೇನುತುಪ್ಪಗಳೂ ಕೂಡ ಈ ತಿಂಗಳಿನಲ್ಲಿ ಹಿತಕರ, ಸೊಪ್ಪು, ತರಕಾರಿ, ಬೇಳೆಕಾಳುಗಳು ಆಹಾರದಲ್ಲಿದ್ದರೆ ಉತ್ತಮ. ಅನ್ನದ ಗಂಜಿ, ಅಕ್ಕಿಯಿಂದ ತಯಾರಿಸಿದ ಪಾಯಸ ಆಥವಾ ಖೀರೂ ಕೂಡ ಈ ಅವಧಿಯಲ್ಲಿ ಉತ್ತಮ ಪೌಷ್ಠಿಕಾಂಶಗಳನ್ನು ನೀಡುವುದು. ಮಾಂಸಾಹಾರಿಗಳು ಒಣ ಪ್ರದೇಶದ ಪ್ರಾಣಿಗಳ ಮಾಂಸ ಸೇವನೆಯನ್ನು ಹೆಚ್ಚಿನ ಮಸಾಲೆ ಪದಾರ್ಥಗಳು ಖಾರದ ಬಳಕೆಯನ್ನು ಕಡಿಮೆ ಮಾಡಿ ಬಳಸಬಹುದು. ಈ ರೀತಿ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಆರನೆಯ ತಿಂಗಳು: ಮೇಲೆ ಹೇಳಿದ ಎಲ್ಲ ಆಹಾರ ಪದಾರ್ಥಗಳನ್ನು ನಿತ್ಯ ಸೇವಿಸಬೇಕು. ಮೂತ್ರಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ತೊಂದರೆಗಳು ಈ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸುವುದು. ಇವುಗಳನ್ನು ಅಲ್ಪವಾಗಿರುವಾಗಲೇ ನಿವಾರಿಸಿಕೊಳ್ಳಬೇಕು. ಹಾಗಾಗಿ ಈ ಅವಧಿಯಲ್ಲಿ ನೀರನ್ನು ಸಂಸ್ಕರಿಸಿ ಕುಡಿಯಬೇಕು. ನೀರಿಗೆ ನೆಗ್ಗಿಲಮುಳ್ಳಿನ ಸಸ್ಯದ ಬೇರನ್ನು ಹಾಕಿ ಕುದಿಸಿ ಅನಂತರ ಶೋಧಿಸಿ ಕುಡಿಯಬೇಕು. ನೆಗ್ಗಿಲ ಮುಳ್ಳು ಹಾಕಿ ತಯಾರಿಸಿದ ಗೋಕ್ಷುರಾದಿ ಘೃತವನ್ನು ಅನ್ನದೊಂದಿಗೆ ಅಥವಾ ಬಿಸಿ ನೀರಿನೊಂದಿಗೆ ಸೇವಿಸಬೇಕು. ಹಾಲು, ತುಪ್ಪ, ಮೊಸರು, ಲಸ್ಸಿ, ಪಾಯಸ ಇತ್ಯಾದಿಗಳ ಸೇವನೆಯನ್ನು ಮುಂದುವರಿಸಬೇಕು.
ಏಳನೆಯ ತಿಂಗಳು: ತುಪ್ಪವನ್ನು ಹೆಚ್ಚಾಗಿ ಹಾಕಿ ತಯಾರಿಸಿದಂತಹ ಸಿಹಿ ತಿಂಡಿಯನ್ನು ಸೇವಿಸುವುದು ಹಿತಕರ. ಸಂಸ್ಕರಿತ ಘೃತಗಳಾದ ಫಲಘೃತ, ಮಹಾಕಲ್ಯಾಣಕ ಘೃತಗಳನ್ನು ಹಾಲಿನೊಂದಿಗೆ ಸೇವಿಸಬೇಕು.
ಎಂಟನೆಯ ತಿಂಗಳು: ಪ್ರಧಾನವಾಗಿ ಈ ತಿಂಗಳಿನಲ್ಲಿ ದ್ರವ ಆಹಾರವನ್ನು ಸೇವಿಸುವುದು ಉತ್ತಮ. ಪೌಷ್ಟಿಕಾಂಶಯುಕ್ತವಾದ ಆಹಾರವನ್ನು ಸೇವಿಸಬೇಕು. ತಿಂದ ಆಹಾರವು ಬೇಗನೇ ಜೀರ್ಣವಾಗುವಂತಿರಬೇಕು. ಅಲ್ಲದೆ ಉದರದಲ್ಲಿ ವೇದನೆಯನ್ನುಂಟು ಮಾಡುವಂತಿರಬಾರದು. ಹಣ್ಣಿನ ರಸ, ಹಾಲು ಗಂಜಿ ಎಳನೀರು, ಸಕ್ಕರೆ ನೀರು, ಗ್ಲೂಕೋಸ್ ನೀರು ಈ ತಿಂಗಳುಗಳಲ್ಲಿ ಹಿತಕರ.
ಹಾಲು ಮತ್ತು ತುಪ್ಪವನ್ನು ಸೇರಿಸಿ ತಯಾರಿಸಿದ ಗಂಜಿಯನ್ನು ಮೇಲಿಂದ ಮೇಲೆ ಸೇವಿಸಬೇಕು. ಹೆರಿಗೆ ಆಗುವವರೆಗೂ ತುಪ್ಪ ಹಾಕಿ ಸಿದ್ಧಪಡಿಸಿದ ಗಂಜಿ ಮತ್ತು ಮಾಂಸಾಹಾರ ಸೇವನೆ ಮಾಡುವವರು ಒಣ ಪ್ರದೇಶದ ಪ್ರಾಣಿಗಳ ಮಾಂಸರಸ ಸೇವನೆ ಮಾಡಬೇಕು.
ಅಲ್ಲದೆ ಈ ತಿಂಗಳೀನಲ್ಲಿ ವೈದ್ಯರ ಸಲಹೆಯ ಮೇರೆಗೆ ಆಸ್ಥಾಪನಾ ಬಸ್ತಿ (ಗುದದ್ವಾರದ ಮೂಲಕ ಔಷಧಿಯ ದ್ರವ್ಯ ಹಾಗೂ ತುಪ್ಪವನ್ನು ಸೇರಿಸುವುದು) ಯನ್ನು ತೆಗೆದುಕೊಳ್ಳಬೇಕು.
ಒಂಭತ್ತನೆಯ ತಿಂಗಳು: ಎಂಟನೆಯ ತಿಂಗಳಿನಲ್ಲಿ ಸೇವಿಸಿದ ಆಹಾರವನ್ನೇ ಮುಂದುವರಿಸಬೇಕು. ವೈದ್ಯರ ಸಲಹೆಯ ಮೇರೆಗೆ ಯೋನಿ ಪಿಚು ಅಂದರೆ ಔಷಧಿಯ ತೈಲವನ್ನು ಹತ್ತಿಯಲ್ಲಿ ಅದ್ದಿ ಯೋನಿ ಮಾರ್ಗದಲ್ಲಿ ಪ್ರಸವವಾಗುವವರಗೂ ಇಟ್ಟುಕೊಳ್ಳುವುದು. ಇದರಿಂದ ಯೋನಿ ಮಾರ್ಗವು ಮೃದುವಾಗುವುದಲ್ಲದೆ ಸುಖ ಪ್ರಸವವೂ ಆಗುವುದು.
ಮುಂದುವರೆಯುವುದು…
ಡಾ. ನಾಗಶ್ರೀ. ಕೆ.ಎಸ್.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -