ಒಂದಲ್ಲ, ಎರಡಲ್ಲ, ಕಳೆದ ಮೂವತ್ತೈದು ವರ್ಷಗಳಿಂದ ಒಂದೇ ಓಟ ಕಿತ್ತು ಓಡುತ್ತಿದೆ ವಾಯೇಜರ್.
ಏನಿದು ವಾಯೇಜರ್?
ಇದೊಂದು ಮಾನವನಿರ್ಮಿತ ಅಂತರಿಕ್ಷನೌಕೆ. 1977ರಲ್ಲಿ ಉಡ್ಡಯನಗೊಂಡು ಅಂದಿನಿಂದ ಇಂದಿನವರೆಗೂ ಹಾರುತ್ತಲೇ ಇದೆ. ಸೂರ್ಯನ ಪ್ರಭಾವವಲಯದ ಆಚಿನ ಲೋಕಕ್ಕೆ ಹೊರಟಿರುವ ಪ್ರಪ್ರಥಮ ನೌಕೆ ಇದು.
ಹಿನ್ನೆಲೆ:
ನಿಸರ್ಗದ ದಿನನಿತ್ಯದ ವಹಿವಾಟುಗಳನ್ನು ಮಾನವ ಅಚ್ಚರಿಯಿಂದ ಕಾಣುತ್ತಿದ್ದ ದಿನಗಳಿದ್ದವು, ಸೂರ್ಯಕೇಂದ್ರಿತ ವ್ಯವಸ್ಥೆಯಲ್ಲಿ ನಾವಿದ್ದೇವೆ, ನಮ್ಮೆಲ್ಲಾ ಚಟುವಟಿಕೆಗಳಿಗೂ ಸೂರ್ಯನೇ ಆಧಾರ ಎಂದು ಕೊಪರ್ನಿಕಸ್ ಸಾರಿದಾಗ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತ್ತು. ಅಲ್ಲಿಂದ ನಾವೀಗ ಬಹು ದೂರ ಸಾಗಿ ಬಂದಿದ್ದೇವೆ. ನಮ್ಮ ಸುತ್ತಲ ಬ್ರಹ್ಮಾಂಡದ ಬಗ್ಗೆ ಅರಿವು ಅನೇಕ ಪಟ್ಟು ಹೆಚ್ಚಿದೆ. ಕಣ್ಣಿಗೆ ಕಂಡದ್ದನ್ನು ಪ್ರಯೋಗಗಳ ಮೂಲಕ ಒರೆಹಚ್ಚಿ, ಕಾಣದ್ದನ್ನು ಮೊದಲು ಕಲ್ಪಿಸಿ, ಆನಂತರ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುವಂಥಹ ಬುದ್ಧಿಮಟ್ಟ ಮಾನವನದ್ದಾಗಿದೆ.
1977 ಬಾನಾಸಕ್ತಿ ಉಳ್ಳವರಿಗೆ ವಿಶೇಷ ವರ್ಷ. ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು ಒಂದರ ಪಕ್ಕ ಒಂದು ಹಾದುಹೋಗುತ್ತ ಒಂದೇ ಗೆರೆಯಲ್ಲಿ ಕೆಲಕಾಲ ಸಾಗುವ, 170 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಅಪರೂಪದ ವಿದ್ಯಮಾನ, ಖಗೋಳಶಾಸ್ತ್ರಜ್ಞರಿಗೆ ಈ ಅವಕಾಶವನ್ನು ಬಳಸಿಕೊಂಡು ಆಚೆ ಹಾರಹೊರಟಿರುವ ಬಾನನೌಕೆಗಳಿಗೆ ಈ ಗ್ರಹಗಳ ಗುರುತ್ವದ ನೂಕುಬಲ ದೊರೆಯುವಂತೆ ಮಾಡುವ ಹಂಬಲ ಹೊಂದಿದ್ದರು.*
ಪುಟ್ಟ 64 ಕಿಲೋಬೈಟ್ ಸಾಮಥ್ರ್ಯದ ಕಂಪ್ಯೂಟರ್ ಪೆಟ್ಟಿಗೆ, ದೊಡ್ಡದಾದ ಅಂಟೆನಾ, ಕ್ಯಾಮೆರಾಗಳು, ವಿಕಿರಣ ಮೂಲದ ಶಕ್ತಿ ಆಕರ, ಸೂರ್ಯನ ಕಾಂತವನ್ನು ಅಳೆಯುವ ಸಾಧನ ಇಷ್ಟೇ ಅಲ್ಲ, ಅಮೂಲ್ಯವಾದ ಮಾನವಮಾಹಿತಿಯನ್ನು ಹೊಂದಿದ ಗೋಲ್ಡನ್ ರೆಕಾರ್ಡನ್ನೂ ಕೂಡ ವಾಯೇಜರ್ ತನ್ನೊಡನೆ ಒಯ್ದಿದೆ. ದೂರದ ಅಂತರಿಕ್ಷದಲ್ಲಿ ಅನ್ಯಜೀವಿಗಳೇನಾದರೂ ಎದುರಾಗಿ ವಾಯೇಜರನ್ನು ಜಪ್ತಿ ಮಾಡಿದರೆ? (ಅಂಥ ಅವಕಾಶಗಳು ಅತೀ ಕಡಿಮೆ, ಏಕೆಂದರೆ ಬೃಹತ್ ವಿಶ್ವದಲ್ಲಿ ಸೂಜಿಮೊನೆಗಿಂತ ಚಿಕ್ಕದಾಗಿರುವ ವಾಯೇಜರ್ ಇನ್ನೊಂದು ನಕ್ಷತ್ರದ ಪಕ್ಕ ಹಾದುಹೋಗುವುದಾದರೂ ಅದಿನ್ನೂ ನಲವತ್ತು ಸಾವಿರ ವರ್ಷಗಳ ನಂತರ!)
ಗೋಲ್ಡನ್ ರೆಕಾರ್ಡ್ ಸಿಡಿಯಲ್ಲಿ 55 ಭಾಷೆಗಳಲ್ಲಿ ಶುಭಾಶಯ ನುಡಿಗಳು, ಸಂಗೀತ, ಪ್ರಾಣಿಗಳ ಕೂಗುಗಳು, ಸೌರಮಂಡಲದ, ಭೂಮಿ, ಮನುಷ್ಯ, ಪ್ರಾಣಿ ಪಕ್ಷಿಗಳ ರೇಖಾಚಿತ್ರಗಳು ಇತ್ಯಾದಿ ಭೂಮಿಯ ಜೀವಜಗತ್ತಿನ ಪ್ರಮುಖ ಲಕ್ಷಣಗಳೆಲ್ಲವೂ ಇವೆ.
ಸೂರ್ಯನ ಸುತ್ತ ಮೂರನೇ ಗ್ರಹವಾಗಿ ನಾವು ಹಾರುತ್ತಿದ್ದೇವೆವಷ್ಟೆ? ಬುಧ, ಶುಕ್ರ, ಭೂಮಿ, ಮಂಗಳ ಗ್ರಹಗಳು ಗಟ್ಟಿಗ್ರಹಗಳು, ಅವುಗಳ ನಂತರ ಕ್ಷುದ್ರಗ್ರಹಗಳ ಪಟ್ಟಿ, ಆ ಬಳಿಕ ಗುರು,ಶನಿ, ಯುರೇನಸ್ ಮತ್ತು ನೆಪ್ಚೂನ್ ಅನಿಲಗ್ರಹಗಳು ಈ ನಡುವೆ ನೂರಾರು ಉಪಗ್ರಹಗಳು, ಕಿರುಗ್ರಹಗಳು ಕೊನೆಯಲ್ಲಿ ಸೂರ್ಯಗೋಲ ಮತ್ತು ಅದರಾಚೆ ದೀರ್ಘಕಕ್ಷೆಯ ಧೂಮಕೇತುಗಳ ಮೂಲನೆಲೆಯಾಗಿರುವ ವೈಪರ್ ಪಟ್ಟಿ ಹಾಗೂ ಕಟ್ಟಕಡೆಗಿನ ಊರ್ತ್ ಮೋಡದ ಕಡಗದೊಂದಿಗೆ ಸೂರ್ಯನ ಶೃಂಗಾರ ಮುಗಿಯುತ್ತದೆ. ಊರ್ತ್ ಕಡಗದ ಆಚೆ ಅಂತರತಾರಾ ವಲಯ. ಅಲ್ಲಿ ಸೂರ್ಯನದ್ದೇನೂ ಪ್ರಭಾವವಿಲ್ಲ. ಅಲ್ಲಿ ವಿಕಿರಣಭರಿತ ಕಾಸ್ಮಿಕ್ ಕಿರಣಗಳ ಹೊಯ್ದಾಟ ನಡೆಯುತ್ತಿದೆ.
2009ರ ಅಗಸ್ಟ್ ತಿಂಗಳಲ್ಲಿ ಸೂರ್ಯನಿಂದ 1600 ಕೋಟಿ ದೂರದಲ್ಲಿ ತಾಸಿಗೆ ಅರವತ್ತು ಸಾವಿರ ಕಿಮೀ ವೇಗದಲ್ಲಿ ಹಾರುತ್ತಿದ್ದ ವಾಯೇಜರ್ ಸೆಕೆಂಡಿಗೆ ಲಕ್ಷಗಟ್ಟಲೆ ಕಿಮೀ ವೇಗದಲ್ಲಿ ಬೀಸುತ್ರಿದ್ದ ಸೂರ್ಯಗಾಳಿ ಒಮ್ಮೆಗೇ ಕಡಿಮೆಯಾಗಿದೆಯೆಂದು ವರದಿ ಮಾಡಿದೆ.
ಸೌರಮಂಡಲದ ಹೊರಗಣ ನಾಲ್ಕೂ ಅನಿಲದೈತ್ಯಗಳ ಬಗ್ಗೆ ಬಹಳಷ್ಟು ವಿವರಗಳನ್ನು ವಾಯೇಜರ್ ನೌಕೆಗಳು ಕಳುಹಿಸಿವೆ. ಗುರುಗ್ರಹವನ್ನು ಹಾದು ಹೋಗುವಾಗ ಅದಕ್ಕಿರುವ ಅಸ್ಪಷ್ಟ ಬಳೆಗಳು, ಎರಡು ಪುಟ್ಟದಾದ ಉಪಗ್ರಹಗಳು, ಅದರ ವಾತಾವರಣದ ಸಮೀಪದ ದೃಶ್ಯಗಳು, ಯುರೋಪಾ ಹೆಸರಿನ ಉಪಗ್ರಹದ ಹಿಮಗಡ್ಡೆಯ ಬಿರುಕಿನಲ್ಲಿ ಸಮುದ್ರವಿರುವ ಲಕ್ಷಣ, ಶನಿಯ ಉಂಗುರದೊಳಗಡೆಯಿಂದ ಇಣುಕಿದ ಉಪಗ್ರಹಗಳು, ಟೈಟಾನ್ ಉಪಗ್ರಹದ ವಾತಾವರಣದಲ್ಲಿ ಸಾರಜನಕ ಮತ್ತು ಮಿಥೇನ್ ಅನಿಲಗಳ ಇರುವಿಕೆ, ನೆಪ್ಚೂನಿನ ಆಗಸದಲ್ಲಿ ವೇಗವಾಗಿ ಬೀಸುತ್ತಿದ್ದ ಬಿರುಗಾಳಿ ಇವೆಲ್ಲವೂ ವಾಯೇಜರ್ ಜೋಡಿನೌಕೆಗಳ ಕ್ಯಾಮೆರಾ ಕಣ್ಣಿಗೆ ಬಿದ್ದ ಕೆಲವು ನೋಟಗಳು.
ಲೋ, ಗುರುಗ್ರಹವನ್ನು ಸುತ್ತುತ್ತಿರುವ ಉಪಗ್ರಹ. ಲೋ ದಿಂದ ಬರೀ 20 ಸಾವಿರ ಕಿಮೀ ದೂರದಿಂದ 1979 ರಲ್ಲಿ ಹಾದುಹೋದ ವಾಯೇಜರ್ ಮೇಲ್ಮೈನಲ್ಲಿ ಜ್ವಾಲಾಮುಖಿಯ ಕುರುಹನ್ನು ಪತ್ತೆ ಮಾಡಿತ್ತು. ಸೌರಮಂಡಲದಲ್ಲಿ ಭೂಮಿಯನ್ನು ಬಿಟ್ಟರೆ ಜ್ವಾಲಾಮುಖಿ ಬೇರೆಡೆ ಇರಬಹುದೆಂಬ ಊಹೆಯೇ ವಿಜ್ಞಾನಿಗಳಲ್ಲಿ ಉದ್ವೇಗ ಮೂಡಿಸಿತ್ತು. ಗುರುವಿನ ಯುರೋಪಾ, ಶನಿಯ ಟೈಟಾನ್ ಹಾಗೂ ನೆಪ್ಚೂನಿನ ಟ್ರೈಟಾನ್ ಉಪಗ್ರಹಗಳಲ್ಲಿ ನೀರಿನ ಮೂಲ ಇರÀಬಹುದೆಂದು ವಾಯೇಜರಿನ ಮಾಹಿತಿಗಳು ತಿಳಿಸಿದವು.
ದೂರ ಹೋದಂತೆ ವಾಯೇಜರ್‍ನಿಂದ ಬರುತ್ತಿದ್ದ ಮಾಹಿತಿಯ ವೇಗವೂ ತಗ್ಗಿದೆ. ಆದರೆ ವಿಜ್ಞಾನಿಗಳ ಉತ್ಸಾಹ ಕುಂದಿಲ್ಲ. ಭೌತ, ಗಣಿತಶಾಸ್ತ್ರಗಳ ಲೆಕ್ಕಾಚಾರ ಹಾಕಿ ಭೂಮಿಯ ಮೇಲೆ ರೇಡಿಯೋ ಅಲೆಗಳನ್ನು ಸಂಗ್ರಹಿಸುವ ಅಂಟೆನಾಗಳ ಸಾಮಥ್ರ್ಯವನ್ನು ಹೆಚ್ಚಿಸಿ ವಾಯೇಜರ್ ಬಾನಾಡಿಯ ನಾಡಿಮಿಡಿತವನ್ನು ಇನ್ನೂ ದಶಕಗಳ ಕಾಲ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.
ವಾಯೇಜರ್ ಹಾರಾಟಕ್ಕೆ ಕಳೆದ ಕೆಲವು ವರ್ಷಗಳಿಂದ ಎಲ್ಲಿಲ್ಲದ ಪ್ರಾಮುಖ್ಯತೆ ದೊರೆಯುತ್ತಿದೆ. ಈ ಜೋಡಿ ನೌಕೆಗಳಿಂದ ಬರುವ ಸಂದೇಶಗಳು ಮಾನವನಿಗೆ ಅತ್ಯಮೂಲ್ಯವೆಂದು ಭಾವಿಸಲಾಗುತ್ತಿದೆ. ಬಾನವಿಸ್ತಾರದಲ್ಲಿ ಹಾರುತ್ತಲೇ ಮನುಜನ ಜ್ಞಾನದ ಕ್ಷಿತಿಜವನ್ನೂ ವಾಯೇಜರ್ ಜೋಡಿ ವಿಸ್ತರಿಸುತ್ತಿವೆ.
* ಗುರುತ್ವವೇ ಕವಣೆಗೋಲು
ನಾವು ಭೂಮಿಗೆ, ಭೂಮಿ ಸೂರ್ಯನಿಗೆ, ಸೂರ್ಯ ಕ್ಷೀರಪಥ ಎಂಬ ಗೆಲಾಕ್ಸಿಗೆ ಗುರುತ್ವಾಕರ್ಷಣೆಯ ಮೂಲಕ ಬಂಧಿತರಾಗಿದ್ದೇವಷ್ಟೆ? ಇದೇ ಗುರುತ್ವವನ್ನು ಚಿಮ್ಮುಕವಣೆಯಂತೆ ಬಳಸಿಕೊಂಡು ಬಾನನೌಕೆಗಳ ಹಾರಾಟದ ಸಮಯ ಹಾಗೂ ಇಂಧನದ ಉಳಿತಾಯ ಮಾಡುವ ತಂತ್ರವೊಂದನ್ನು ಖಗೋಳಶಾಸ್ತ್ರಜ್ಞರು ರೂಢಿಸಿಕೊಂಡಿದ್ದಾರೆ.
ವಾಯೇಜರ್ ಮತ್ತು ನಾವು
ವಾಯೇಜರುಗಳು ತಮ್ಮ ಪಯಣವನ್ನು ಆರಂಭಿಸಿದಾಗ ಈಗಿನ ತರುಣರಲ್ಲಿ ಬಹಳಷ್ಟು ಜನರು ಹುಟ್ಟಿಯೇ ಇರಲಿಲ್ಲ, ಕೆಲವರು ಇನ್ನೂ ಚಿಕ್ಕವರಾಗಿದ್ದರು. ಆದರೆ ಎಡ್‍ವರ್ಡ್ ಸ್ಟೋನ್ ಎಂಬ ತಂತ್ರಜ್ಞ ವಾಯೇಜರ್ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವನು ಇಂದು ಎಪ್ಪತ್ತಾರು ವರ್ಷದ (ಆದರೆ ಇನ್ನೂ ವಿದ್ಯಾಸಂಸ್ಥೆಯೊಂದರಲ್ಲಿ ಅಧ್ಯಾಪಕರಾಗಿ ದುಡಿಯುವ) ಮುದುಕ. ಆತ ‘ವಾಯೇಜರ್ ಗಳಿಂದಾಗಿಯೇ ಸೌರಮಂಡಲದ ನಮ್ಮ ಜ್ಞಾನ ಇನ್ನೂ ಹೆಚ್ಚಾಗಿದೆ’ ಎಂದು ಹೆಮ್ಮೆ ಪಡುತ್ತ ಸೂರ್ಯಗೋಲವನ್ನು ದಾಟಿ ಆಚಿನ ಲೋಕದ ಬಗ್ಗೆ ವಾಯೇಜರ್ ಕಣ್ಣು ದಾಖಲಿಸುವ ಮಾಹಿತಿಯ ಬಗ್ಗೆ ತಿಳಿದುಕೊಳ್ಳಲು ತುಂಬಾ ಉತ್ಸುಕರಾಗಿದ್ದಾರೆ. ಮೂವತ್ತು ವರ್ಷಗಳ ಹಿಂದೆ ಶನಿಗ್ರಹದ ಸಮೀಪದಿಂದ ಶನಿಯ ಉಂಗುರದಲ್ಲಿರುವ ತಿರುವನ್ನು ವಾಯೇಜರ್ ಬಹಿರಂಗಗೊಳಿಸಿದಾಗ ಉಂಟಾದ ಸಂತೋಷವನ್ನು ಎಡ್ ಇಂದಿಗೂ ನೆನೆಯುತ್ತಾರೆ.
ನೂರಾರು ಚಿಗುರು ಮೀಸೆಯ ಯುವಕರೂ ವಾಯೇಜರಿನ ಅನ್ವೇಷಣೆಗಳ ಬಗ್ಗೆ ಬೆರಗು ಪಟ್ಟಿದ್ದಾರೆ. ಹೀಗೆ ವಯಸ್ಸಿನ ಬೇಧವಿಲ್ಲದೆ ವಾಯೇಜರ್ ಎಲ್ಲರಿಗೂ ಅರಿವಿನ ಫಲ ಹಂಚುತ್ತಿದೆ.
ವಾಯೇಜರ್ ಭೂಮಿಯಲ್ಲಿ
ಅದೊಂದು ಅತಿ ಸಾಮಾನ್ಯದ ಕೊಠಡಿ, ಅಲ್ಲಿಮೂಲೆಯಲ್ಲಿ ಓಬೀರಾಯನ ಕಾಲದ ಕಂಪ್ಯೂಟರ್. ಅಲ್ಲೆರಡು ಫಲಕಗಳು, ’ಮಿಶನ್ ಕಂಟ್ರೋಲರ್À’ ಹಾಗೂ ‘ವಾಯೇಜರಿನ ಪ್ರಮುಖ ಯಂತ್ರಾಂಶಗಳು, ದಯವಿಟ್ಟು ಮುಟ್ಟಬೇಡಿ’
ವಾಯೇಜರ್ ಯೋಜನೆಗೆಂದು ಬಳಸಲಾಗುತ್ತಿರುವ ಹೆಚ್ಚಿನ ತಂತ್ರಾಂಶಗಳನ್ನು ಬದಲಿಸಲಾಗಿದೆ, ಆದರೆ ಕೆಲವು ಯಂತ್ರಭಾಗಗಳು ಇನ್ನೂ ಹಾಗೇ ಇವೆ. ಹಾರ್ಡ್‍ವೇರ್ ಭಾಗಗಳು ಶಿಥಿಲಗೊಳ್ಳುತ್ತಿವೆ. ಇಂದಿನ ಬಳಸಿಬಿಸಾಕುವ ತಂತ್ರಜ್ಞಾನ ಪೃವೃತ್ತಿಯ ನಡುವೆಯೂ ಕಳೆದ 35 ವರ್ಷಗಳಿಂದ ಒಂದೆಡೆ ಕೂತು ಕಾರ್ಯನಿರ್ವಹಿಸುತ್ತಿರುವ ಈ ಯಂತ್ರೋಪಕರಣಗಳು…ಕಾಲಯಂತ್ರಗಳೂ ಆಗಿವೆ.
20 ಅರೆಕಾಲಿಕ ವಿಜ್ಞಾನಿಗಳು ಪಾಳಿಯ ಮೇಲೆ ಕೆಲಸ ಮಾಡುತ್ತ ಬಂದ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಣೆ ನಡೆಸುತ್ತಾರೆ. ವಾಯೇಜರ್1 ಕಳಿಸಿದ ಸಂದೇಶ ಇಲ್ಲಿಗೆ ತಲುಪಲು 17 ಗಂಟೆಗಳು ಬೇಕು. ಅಂಕಿಅಂಶಗಳನ್ನು ಸಂಸ್ಕರಿಸಿ ಅರ್ಥಪೂರ್ಣ ಮಾಹಿತಿಗಳನ್ನಾಗಿಸಲು ತಿಂಗಳುಗಟ್ಟಲೆ ಕಾಲ ಹಿಡಿಯುತ್ತದೆ.
ಮಂದನೀಲಿ ಬಣ್ಣದ ಭೂಮಿ
ಸರೋಜಾ ಪ್ರಕಾಶ