ಸೌರವ್ಯೂಹದಲ್ಲೆಷ್ಟು ಗ್ರಹಗಳಿವೆ? ಈ ಪ್ರಶ್ನೆ ಕೇಳುತ್ತಿದ್ದಂತೆ ’ಒಂಭತ್ತು ಗ್ರಹಗಳು: ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್, ನೆಪ್ಚ್ಯೂನ್, ಪ್ಲೂಟೋ’ ಎಂಬುದಾಗಿ ಒಂದೇ ಉಸಿರಿಗೆ ಪಟಪಟ ಹೇಳಿಬಿಡುತ್ತೀರಿ, ಅಲ್ಲವೆ? ಆದರೀಗ ನಮ್ಮನಿಮ್ಮೆಲ್ಲರ ವಿಜ್ಞಾನವನ್ನು ಸ್ವಲ್ಪ ತಿದ್ದುಪಡಿ ಮಾಡುವ ದಿನಗಳು ಬಂದಿವೆ. ಸೂರ್ಯನನ್ನು ಸುತ್ತುವ ಗ್ರಹಗಳು ಎಂಟು. ಇನ್ನುಮುಂದೆ ಪ್ಲೂಟೋವನ್ನು ಗ್ರಹವೆಂದು ಕರೆಯುವ ಹಾಗಿಲ್ಲ.
’ಅಂತರ್ರಾಷ್ಟ್ರೀಯ ಖಗೋಳ ವಿಜ್ಞಾನ ಸಂಸ್ಥೆ’ ಝೆಕ್ ಗಣರಾಜ್ಯದ ಪ್ರೇಗ್ನಲ್ಲಿ ನಡೆದ ಎಂಟನೆಯ ಮಹಾ ಅಧಿವೇಶನದಲ್ಲಿ ನಡೆದ ಚರ್ಚೆಗಳ ನಂತರ ’ಗ್ರಹ’ ಎಂಬ ಶಬ್ದದ ವ್ಯಾಖ್ಯೆಯನ್ನು ಘೋಷಿಸಿತು. ಈ ಹೊಸ ವ್ಯಾಖ್ಯೆಯನ್ವಯ ಸೌರವ್ಯೂಹದ ಕಡೆಯ ಮತ್ತು ಪುಟ್ಟ ಗ್ರಹ ಪ್ಲೂಟೋ ತನ್ನ ಸದಸ್ಯತ್ವವನ್ನು ಕಳೆದುಕೊಂಡಿದೆ. ೭೫ ದೇಶಗಳ ೨೫೦೦ ಖಗೋಳ ವಿಜ್ಞಾನಿಗಳು ಪ್ರೇಗ್ನಲ್ಲಿ ಎರಡು ವಾರಗಳ ಚರ್ಚೆ ನಡೆಸಿದ ನಂತರ ನಮ್ಮ ಸೂರ್ಯನಿಗೀಗ ಗ್ರಹಗಳು ಒಂಭತ್ತಲ್ಲ, ಬರೀ ಎಂಟು ಎಂಬ ನಿರ್ಣಯವನ್ನು ಅಂಗೀಕರಿಸಿದ್ದಾರೆ.
ಇನ್ನೂ ಮೂರು ಗ್ರಹಗಳು ನಮ್ಮ ಸೂರ್ಯನ ಬಳಗಕ್ಕೆ ಸೇರುವವೆ? ಇಡೀ ಜಗತ್ತೇ ಪ್ರೇಗ್ನ ಸಭೆ ಕೈಗೊಳ್ಳಲಿರುವ ನಿರ್ಣಯವನ್ನು ಎದುರು ನೋಡುತ್ತಿತ್ತು.
ಖಗೋಳ ಶಾಸ್ತ್ರಜ್ಞರ ಸಂಘ ತನ್ನ ಹೊಸ ನಿರ್ಣಯಗಳನ್ನು ಜನರ ಮುಂದಿಟ್ಟಿದೆ. ’ಗ್ರಹ’ದ ಹೊಸ ವ್ಯಾಖ್ಯೆಯನ್ನು ಈಗಿರುವ ಗ್ರಹಗಳಿಗೊಂದೇ ಅಲ್ಲ, ಮುಂದೆ ಕಂಡುಹಿಡಿಯಲಾಗುವ ಆಕಾಶಕಾಯಗಳಿಗೂ ಅನ್ವಯಿಸುವ ರೀತಿಯಲ್ಲಿ ರೂಪಿಸಲಾಗಿದೆ. ಇದರ ಪರಿಣಾಮವಾಗಿ ಪ್ಲೂಟೋಕ್ಕೆ ಗ್ರಹದ ಪಟ್ಟದಿಂದ ಕೊಕ್ ಕೊಡಲೇಬೇಕಾಗಿದೆ.
’ಗ್ರಹ’ದ ನವವ್ಯಾಖ್ಯೆಯ ಪ್ರಕಾರ ಅದು ಸೂರ್ಯನನ್ನು ಸುತ್ತುತ್ತಿರುವ ಗುಂಡನೆಯ ಆಕಾಶಕಾಯವಾಗಿರಬೇಕು, ಗುರುತ್ವಬಲದ ಮೂಲಕ ತನ್ನ ಗೋಳಾಕೃತಿಯನ್ನು ಉಳಿಸಿಕೊಳ್ಳುವಷ್ಟು ದ್ರವ್ಯರಾಶಿಯನ್ನು ಒಳಗೊಂಡಿರಬೇಕು, ಅದರ ಪಥಕ್ಕೆದುರಾಗಿ ಎಡತಾಕುವ ಇತರ ಆಕಾಶಕಾಯಗಳಿರಬಾರದು.
ಈ ನಿಬಂಧನೆಗಳೆಲ್ಲವನ್ನೂ ಪ್ಲೂಟೋ ಒಂದುಳಿದು ಉಳಿದ ಎಂಟೂ ಗ್ರಹಗಳು ಪಾಲಿಸುತ್ತಿವೆ. ಸೂರ್ಯನನ್ನು ಸುತ್ತುವಾಗ ಒಂದು ಪ್ರದಕ್ಷಿಣೆಯಲ್ಲಿ ಎರಡೆರಡು ಬಾರಿ ನೆಪ್ಚೂನಿನ ಕಕ್ಷೆಯೊಳಗೆ ಪ್ರವೇಶಿಸುವ ಪ್ಲೂಟೋದ ಪಥಚಲನವೇ ಅದನ್ನು ಗ್ರಹಗಳ ಬಣದಿಂದ ಉಚ್ಛಾಟಣೆಗೊಳಿಸಲು ಕಾರಣ. *
ನಮ್ಮ ಸೂರ್ಯನ ಬಳಗದ ಇತರ ಸದಸ್ಯರುಗಳಿಗೂ ಸಂಸ್ಥೆ ಹೊಸ ನಾಮಕರಣಗಳನ್ನು ಮಾಡಿದೆ. ಸೂರ್ಯನನ್ನು ಸುತ್ತುವ ಗುಂಡನೆಯ ಮತ್ತು ಉಪಗ್ರಹವಲ್ಲದ ಆಕಾಶಕಾಯಗಳನ್ನು ’ಕುಬ್ಜಗ್ರಹ’ಗಳೆಂಬ ಹೆಸರಿನಿಂದ ಕರೆಯಲಾಗುವುದು.(ನಾವಿವನ್ನು ಏನೆಂದು ಕರೆಯೋಣ? ’ಕುಬ್ಜಗ್ರಹಗಳು’, ’ಮರಿಗ್ರಹಗಳು’ ಅಥವಾ ’ಕಿರುಗ್ರಹಗಳು’?) ಉಳಿದೆಲ್ಲವೂ ಅಂದರೆ ಧೂಮಕೇತುಗಳು, ಉಪಗ್ರಹಗಳು ಹಾಗೂ ಇನ್ನಿತರ ಚಿಕ್ಕ, ಪುಟ್ಟ ಆಕಾಶಕಾಯಗಳೆಲ್ಲವೂ ’ಇತರೇ ಆಕಾಶಕಾಯಗಳು’ ಎಂಬ ಗುಂಪಿಗೆ ಸೇರಲಿವೆ. ಹೀಗಾಗಿ ಈಗ ಪ್ಲೂಟೋ, ಸಿರಿಸ್ ಮತ್ತು ಝೇನಾ ಕಿರುಗ್ರಹಗಳೆನಿಸಿದರೆ ಕ್ಯಾರನ್ ನಮ್ಮ ಚಂದ್ರನಂತೆ ’ಸೌರಮಂಡಲದ ಇತರೆ ಆಕಾಶಕಾಯಗಳು’ ಎಂಬ ಪಟ್ಟಿಗೆ ಸೇರಿದೆ. ಇವೆಲ್ಲವೂ ಒಟ್ಟೂ ಸೇರಿ ’ಪ್ಲೂಟಾನ್’ಗಳೆನಿಸುತ್ತವೆ.
ಕಳೆದ ಅಗಸ್ಟ್ ಇಪ್ಪತ್ತನಾಲ್ಕರಂದು ಸಭೆಯ ನಿರ್ಧಾರಗಳು ಪ್ರಕಟವಾದಾಗ ’ಮೂರು ಹೊಸ ಹೆಸರುಗಳನ್ನು ಮನನ ಮಾಡಬೇಕಿಲ್ಲ, ಬದಲಾಗಿ ಸೌರಮಂಡಲದಲ್ಲೀಗ ಎಂಟೇ ಗ್ರಹಗಳು ಎಂಬುದನ್ನು ನೆನಪಿಟ್ಟರೆ ಸಾಕು’ ಎಂದು ಜಗತ್ತಿನಾದ್ಯಂತದ ಪಠ್ಯಪುಸ್ತಕ, ಜ್ಞಾನ – ವಿಜ್ಞಾನ ಕೋಶಗಳನ್ನು ಬರೆಯುವವರು (ವಿಶ್ವಕೋಶದ ೨೦೦೭ರ ಆವೃತ್ತಿ ಖಗೋಳ ಶಾಸ್ತ್ರಜ್ಞರ ನಿರ್ಣಯಕ್ಕಾಗಿ ತನ್ನ ಮುದ್ರಣವನ್ನು ಮುಂದೂಡಿತ್ತು), ಪಾಠ ಮಾಡುವವರು, ಸಂಶೋಧಕರು ಅಷ್ಟೇ ಏಕೆ ಸೌರವ್ಯೂಹ ಮಾದರಿಯ ಆಟಿಗೆ ವಸ್ತುಗಳ ತಯಾರಕರು ನಿಟ್ಟುಸಿರು ಬಿಟ್ಟಿರಲಿಕ್ಕೆ ಸಾಕು.
ಕ್ಯಾರನ್: ಸೇರ್ಪಡೆಯಾಗಬಹುದಾಗಿದ್ದ ಮೂರನೆಯ ಗ್ರಹವೆಂದರೆ ಕ್ಯಾರನ್. ಹಬ್ಬಲ್ ದೂರದರ್ಶಕ ರಲ್ಲಿ ಪತ್ತೆ ಹಚ್ಚಿದ ಕ್ಯಾರನ್ ಇದುವರೆಗೂ ಪ್ಲೂಟೋದ ಉಪಗ್ರಹವೆನಿಸಿತ್ತು. ಗಾತ್ರದಲ್ಲಿ ಹೆಚ್ಚೂ ಕಡಿಮೆ ಪ್ಲೂಟೋದಷ್ಟೇ ಇರುವ ಕ್ಯಾರನ್ ಅನ್ನೂ ಸೌರವ್ಯೂಹದ ಗ್ರಹಗಳಲ್ಲೊಂದೆಂದು ಸೇರಿಸುವುದೆಂದಾಗಿತ್ತು. ಆದರೀಗ ಪ್ಲೂಟೋವನ್ನು ಸುತ್ತುತ್ತ ಸೂರ್ಯನನ್ನು ಪ್ರದಕ್ಷಿಣೆ ಹಾಕುತ್ತಿರುವ ಕ್ಯಾರನ್ ’ಸೌರಮಂಡಲದ ಇತರೆ ಆಕಾಶಕಾಯಗಳ’ಲ್ಲೊಂದಾಗಿದೆ.
ಸೌರವ್ಯೂಹದ ರಚನೆಯ ಬಗ್ಗೆ ವಿಜ್ಞಾನಿಗಳಲ್ಲಿ ಒಟ್ಟಾಭಿಪ್ರಾಯಗಳಿಲ್ಲ. ’ನೆಪ್ಚೂನ್ ಆಚೆಯಿರುವ ವೈಪರ್ ಪಟ್ಟಿಯಲ್ಲಿ ಸುತ್ತುತ್ತಿರುವ ಆಕಾಶಕಾಯಗಳಲ್ಲಿ ಪ್ಲೂಟೋ ಕೂಡ ಒಂದು, ಅದೊಂದು ಗ್ರಹವೇ ಅಲ್ಲ’ ಎಂದು ಮುಂಚಿನಿಂದಲೂ ವಾದಿಸಿದವರಿದ್ದಾರೆ. ’ಪ್ಲೂಟೋದ ಬದಲು ಝೇನಾವನ್ನು ಒಂಭತ್ತನೆಯ ಗ್ರಹವೆಂದು ಗುರುತಿಸಬೇಕು’ ಎಂಬುದಾಗಿ ಒಂದು ಬಣ, ’ಪ್ಲೂಟೋ ಇರಲಿ, ಝೇನಾ ಕೂಡ ನಮ್ಮ ಸೌರವ್ಯೂಹದ ಸದಸ್ಯನಾಗಲಿ’ ಇನ್ನೊಂದು ಬಣ, ’ಇಷ್ಟೆಲ್ಲಾ ರಗಳೆ ಯಾಕೆ, ಸಾಂಪ್ರದಾಯಿಕವಾದ ಎಂಟು ಗ್ರಹಗಳನ್ನಷ್ಟೇ ಮನ್ನಿಸೋಣ’ ಎಂಬುದಾಗಿ ಕೆಲ ವಿಜ್ಞಾನಿಗಳು. ಪ್ಲೂಟೋಕ್ಕಿಂತ ದೊಡ್ಡದಾದ ಕೆಲವು ಹೊಸ ಆಕಾಶಕಾಯಗಳನ್ನು ಈಗಾಗಲೇ ಗುರುತಿಸಲಾಗಿದೆ. ’ಪ್ಲೂಟೋ ಗ್ರಹವಾದರೆ ಅವಕ್ಕೂ ಆ ಮನ್ನಣೆ ದೊರೆಯಬೇಕು’ ಎಂದೂ ವಾದ ಸಾಗಿದೆ. ನ್ಯೂಯಾರ್ಕಿನ ಹೇಡನ್ ತಾರಾಲಯದಲ್ಲಿ ೨೦೦೦ರಲ್ಲಿ ಪ್ಲೂಟೋವನ್ನು ಗ್ರಹವೆಂದು ಪ್ರದರ್ಶಿಸುವುದನ್ನು ಕೈಬಿಡಲಾಗಿದೆ.
ಸರೋಜಾ ಪ್ರಕಾಶ