ಹೌದು, ಅದರ ಹೆಸರೇ ಕುತೂಹಲಿ ಸಂಚಾರಿ, ಕ್ಯೂರಿಯಾಸಿಟಿ ರೋವರ್. ಅದೊಂದು ರೋಬಾಟ್ ಯಂತ್ರ. ಅದರ ಸ್ವಭಾವವೇ ಸಹಜ ಕುತೂಹಲ, ಕಂಡದ್ದನ್ನು ಒರೆಹಚ್ಚಿ ಕಾಣದ್ದರ ಬಗ್ಗೆ ಮಾಹಿತಿ ಪಡೆಯುವ ಹಂಬಲ ಅದಕ್ಕೆ. ಅದಕ್ಕೆಂದೇ ಅತ್ಯಾಧುನಿಕವಾದ ಸಾಧನಗಳನ್ನು ಒಡಲಲ್ಲಿರಿಸಿಕೊಂಡು ಮಂಗಳನಡಿಗೆಯನ್ನು ಪ್ರಾರಂಭಿಸ ಹೊರಟಿದೆ ಅದು. ಮಂಗಳನ ಮೇಲ್ಮೈ ಹಿಂದೆ ಜೀವಿಗಳಿಗೆ ಇರಲು ಅನುಕೂಲಕರವಾಗಿತ್ತೇ, ಮುಂದೆ ಈ ಕೆಂಪುಗ್ರಹ ಮನುಕುಲಕ್ಕೆ ವಾಸಯೋಗ್ಯವಾಗಲಿದೆಯೇ ಎಂಬುದು ಸಂಶೋಧನೆಯ ಮೂಲ ವಿಷಯ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಎರಡೂವರೆ ನೂರು ಕೋಟಿ ಡಾಲರ್ ವೆಚ್ಚದ ‘ಮಾರ್ಸ್ ವಿಜ್ಞಾನ ಪ್ರಯೋಗಾಲಯ’ವಾದ ಕ್ಯೂರಿಯಾಸಿಟಿ ಬಾನನೌಕೆಯೊಂದರಲ್ಲಿ ಅಚ್ಚುಕಟ್ಟಾಗಿ ಕುಳಿತು ಕಳೆದ ಅಗಸ್ಟ್ ಆರರಂದು ಆಗಸಕ್ಕೆ ಹಾರಿತ್ತು. ಭೂಮಿಯ ಗುರುತ್ವಬಲವನ್ನು ಮೀರಿ ಬಾಹ್ಯಾಕಾಶದಲ್ಲಿ ಮಂಗಳನನ್ನು ಗುರಿಯಾಗಿಸಿ ಸುಮಾರು 566 ದಶಲಕ್ಷ್ಷ ಕಿಮೀ ದೂರದ ಪ್ರಯಾಣವನ್ನು ಎಂಟು ತಿಂಗಳಲ್ಲಿ ಕ್ರಮಿಸಿತ್ತು. ನೌಕೆ ರೊಬಾಟ್ ಯಂತ್ರವನ್ನು ನೆಲಕ್ಕಿಳಿಸುವÀ ವೇಳೆಗೆ ಮಂಗಳನ ಬಾನಂಚಿನ ಕೆಳಗೆ ಸರಿದ ಭೂಮಿಗೆ ನೇರ ಸಂದೇಶಗಳು ತಲುಪುವ ಹಾಗಿರಲಿಲ್ಲ. ಆದರೇನು, ಮಂಗಳನ ಸುತ್ತ ಗಸ್ತು ಹೊಡೆಯುತ್ತಿದ್ದ ರಿಕನ್ಸೈನ್ಸ್, ಒಡಿಸ್ಸಿ ಉಪಗ್ರಹಗಳು ಇಲ್ಲಿನ ಸುದ್ದಿ ತಿಳಿಸಲು ಸಜ್ಜಾಗಿದ್ದವು. ಕೆಲವೇ ದಿನಗಳ ಹಿಂದೆ ಒಡಿಸ್ಸಿ ಉಪಗ್ರಹದ ಕಕ್ಷೆಯನ್ನು ಓರೆಯಾಗಿಸಿ ಈ ಸಂಚಾರಿ ವಾಹನದ ಲ್ಯಾಂಡಿಗ್ನ ದೃಶ್ಯಗಳನ್ನು ಸೆರೆಹಿಡಿವುದಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.
ಅಂತೂ ರಂಗಸಜ್ಜಿಕೆ ತಯಾರಾಗಿತ್ತು. ಲ್ಯಾಂಡಿಗಿನ ಪ್ರತಿಯೊಂದು ಹಂತವೂ ರೋಮಾಂಚಕ, ಮನಮೋಹಕ ದೃಶ್ಯಚಿತ್ರಣವಾಗಿ ತಂತ್ರಜ್ಞರ ಎದುರಿಗಿನ ಪರದೆಯ ಮೇಲೆ ಮೂಡಿ ಬರತೊಡಗಿದವು.
ಸೆಕೆಂಡಿಗೆ ಆರು ಕಿಮೀ ವೇಗದಲ್ಲಿ ವಾತಾವರಣವನ್ನು ಪ್ರವೇಶಿಸುವಾಗ ಕ್ಯೂರಿಯಾಸಿಟಿಯನ್ನು ಸುಮಾರು 2100 ಡಿಗ್ರಿ ಸೆಂಟಿಗ್ರೇಡ್ ಬಿಸಿಯಿಂದ ರಕ್ಷಿಸಿದ್ದು ಬಿಸಿಲುಗುರಾಣಿ ಅಥವಾ ಹೀಟ್ಶೀಲ್ಡ್. ಅದೇ ನೌಕೆಯ ವೇಗ ತಗ್ಗಿಸುವ ಸಾಧನವೂ ಕೂಡ. ವೇಗವನ್ನು ತಗ್ಗಿಸಿಕೊಂಡು ಓರೆಯಾಗಿ 125 ಕಿಮೀ ಎತ್ತರದಲ್ಲಿ ಮಂಗಳನ ವಾತಾವರಣವನ್ನು ಪ್ರವೇಶಿಸಿದ ನೌಕೆಯಿಂದ ಗರಿಬಿಚ್ಚಿಕೊಂಡು ಹೊರಗಿಣುಕಿತು ಪ್ರಯೋಗಾಲಯವನ್ನು ಹೊತ್ತ ದೊಡ್ಡದೊಂದು ಪ್ಯಾರಾಶೂಟ್. ನೆಲದಿಂದ ಎಂಟು ಕಿಮೀ ಎತ್ತರದಲ್ಲಿರುವಾಗ ಬಿಸಿಲುಗುರಾಣಿ ತನ್ನ ಕೆಲಸ ಮುಗಿಯಿತೆಂಬಂತೆ ಕಳಚಿಕೊಂಡಿತು.
ಸುಮಾರು 35 ಮೀಟರ್ ನೇರ ಎತ್ತರದಿಂದ ನೌಕೆ ಸೆಕೆಂಡಿಗೆ 4 ಮೀ ವೇಗದಲ್ಲಿ ಕೆಳಗಿಳಿಯತೊಡಗಿತು. ರೊಬಾಟನ್ನು ಕಚ್ಚಿ ಹಿಡಿದ ಆಚೀಚೆಗೆ ಹಾಗೂ ಮಧ್ಯಕ್ಕೆ ಒಂದರಂತಿದ್ದ ಮೂರು ಟೆಕ್ನೋರಾ ನಾರುಲೋಹದ ಮೂಗುದಾಣಗಳು ಕೆಳಗಿಳಿದವು. ಈಗ ಪ್ಯಾರಾಶೂಟ್ ಪ್ರತ್ಯೇಕಗೊಂಡಿತು. ಕೆಳಕ್ಕಿಳಿಯುತ್ತಾ ಬಂದು ವೇಗ ಸೆಕೆಂಡಿಗೆ ಮುಕ್ಕಾಲು ಮೀಟರಿನಷ್ಟಿರುವಾಗ ನೆಲಕ್ಕೆ ತಾಗಿದವು ರೋವರಿನ ಆರು ಗಾಲಿಗಳು. ಕಡಿವಾಣಗಳ ಮತ್ತು ಸಂಚಾರಿಯ ನಡುವಿನ ಕೊಂಡಿಗಳು ಕಳಚಿಕೊಂಡವು, ಸಂಚಾರಿವಾಹನ ಸ್ವತಂತ್ರವಾಯಿತು, ತನ್ನ ಶೋಧನಾ ಕಾರ್ಯವನ್ನು ಆರಂಭಿಸಿತು. ಕ್ಯೂರಿಯಾಸಿಟಿ ತೆಗೆದ ಚಿತ್ರಗಳು ರೇಡಿಯೋ ಅಲೆಗಳ ರೂಪದಲ್ಲಿ ಒಂದೊಂದಾಗಿ ಭೂಮಿಗೆ ರವಾನೆಯಾಗತೊಡಗಿದವು.
ತಂತ್ರಜ್ಞಾನದ ಖಚಿತತೆಯ ಬಗ್ಗೆ ತಂತಜ್ಞರು ಅದೆಷ್ಟು ವಿಶ್ವಾಸ ಹೊಂದಿದ್ದರೂ ದೂರದ ಬಾನಲ್ಲಿ ಏನೂ ಆಗಬಹುದಿತ್ತು. ಕ್ಯೂರಿಯಾಸಿಟಿ ತನ್ನ ಮಾತೃನೌಕೆಯಿಂದ ಕಳಚಿಕೊಂಡು ಮಂಗಳನೆಲವನ್ನು ಮುಟ್ಟಲು ತೆಗೆದುಕೊಂಡಿದ್ದು ಏಳೇ ಏಳು ನಿಮಿಷಗಳು. ಆವೇಗಕ್ಕೊಳಗಾದ ನಾಸಾದ ಸಿಬ್ಬಂದಿ ಆ ಏಳು ನಿಮಿಷಗಳ ಆತಂಕದ ಅವಧಿ ಕಳೆದು ಕ್ಯೂರಿಯಾಸಿಟಿ ಮಂಗಳನ ನೆಲವನ್ನು ಸ್ಪರ್ಶಿಸಿದಂತೆ ಸಂತಸದಿಂದ ‘ತಂತ್ರಜ್ಞಾನದ ಚಮತ್ಕಾರ ಇದು’ ಎಂದು ಉದ್ಗಾರವೆತ್ತಿದರು.
ಕ್ಯೂರಿಯಾಸಿಟಿ ಕಳಿಸಿದ ಚಿತ್ರಗಳನ್ನು ತಂತ್ರಜ್ಞರು ಎರಡು ಬಗೆಯವಾಗಿ ವಿಂಗಡಿಸಿದ್ದಾರೆ. ಮೊದಲನೆಯದು, ಮಂಗಳನ ಬೆಳಕಿನಲ್ಲಿ ತೆಗೆದ ಚಿತ್ರಗಳು, ಥೇಟ್ ನಮ್ಮ ಸೆಲ್ ಫೋನಿನಿಂದ ತೆಗೆದ ಚಿತ್ರಗಳಂತೆಯೇ ಇರುವಂಥವು. ಎರಡನೆಯಯದು, ಅವೇ ಚಿತ್ರಗಳನ್ನು ಭೂಮಿಯ ಮೇಲಿನ ಬಿಸಿಲಿನ ಹಿನ್ನೆಲೆಯಲ್ಲಿ ತೆಗೆದರೆ ಹೇಗಿರುತ್ತವೋ ಹಾಗಿರುವ ಚಿತ್ರಗಳು, ಅವನ್ನು ‘ವೈಟ್ ಬ್ಯಾಲನ್ಸಿಂಗ್’ ಎನ್ನುತ್ತಾರೆ. ಇವು ವಿಜ್ಞಾನಿಗಳಿಗೆ ಇಲ್ಲಿಯ ಶಿಲಾಚೂರುಗಳಿಗೆ ಹೋಲಿಸಿ ಅಧ್ಯಯನ ನಡೆಸಲು ಅನುಕೂಲವಾಗುತ್ತವೆ.
ಸೆಕೆಂಡಿಗೆ ಒಂದೂವರೆ ಇಂಚು ದೂರವನ್ನು ಕ್ರಮಿಸುವ ಕ್ಯೂರಿಯಾಸಿಟಿ ಹತ್ತಾರು ವಿವಿಧ ವೈಜ್ಞಾನಿಕ ಉಪಕರಣಗಳನ್ನು ಹೊಂದಿದೆ.
ಕ್ಯಾಮೆರಾಗಳು
1. ಮಸ್ತ್ಕ್ಯಾಮ್: ನಮ್ಮ ಡಿಜಿಟಲ್ ಕ್ಯಾಮೆರಾದಂತೆಯೇ ಇರುವ ಎರಡು ಕ್ಯಾಮೆರಾಗಳನ್ನು ಪ್ರಯೋಗಾಲಯ ಮುಂಭಾಗದಲ್ಲಿ ಎತ್ತರದ ಲೋಹದ ಗೂಟವೊಂದು ಎತ್ತಿ ಹಿಡಿದಿದೆ. ಸಂಚಾರಿ ಮುಂದೆ ಮುಂದೆ ಸಾಗಿದಂತೆ ಮಂಗಳನ ನೆಲದೃಶ್ಯ, ಕಲ್ಲು ಬಂಡೆಗಳು, ವಾತಾವರಣ ಬದಲಾವಣೆ ಇತ್ಯಾದಿಗಳ ದೂರದ ಹಾಗೂ ಸಮೀಪದ ಚಿತ್ರಗಳನ್ನು ತೆಗೆಯಲು ಇದು ಸಹಕಾರಿ.
2. ಮಾರ್ಸ್ ಹ್ಯಾಂಡ್ ಲೆನ್ಸ್ ಇಮೇಜರ್: ಕ್ಯೂರಿಯಾಸಿಟಿ ಕೈಯ್ಯಲ್ಲಿರುವ ಭೂತಗನ್ನಡಿಸಹಿತವಾದ ಕ್ಯಾಮೆರಾ ಇದು. ಒಂದೂವರೆ ಇಂಚಿನ ಈ ಕ್ಯಾಮೆರಾ ಎದುರಾಗುವ ವಸ್ತುಗಳ (ಕೂದಲೆಳೆಗಿಂತ ತೆಳುವಸ್ತುಗಳನ್ನೂ ಬಿಡದೆ) ದೊಡ್ಡದಾದ ಚಿತ್ರಗಳನ್ನು ತೆಗೆಯುತ್ತದೆ. ಮಾಮೂಲು ವರ್ಣಚಿತ್ರಗಳನ್ನಲ್ಲದೆ ಕಲ್ಲಿನ ಚೂರುಗಳಲ್ಲಿ ಇರಬಹುದಾದ ಕಾರ್ಬನ್ ಸಂಯುಕ್ತಗಳ ಪತ್ತೆಗೆ ನೆರವಾಗುವ ಅತಿನೇರಳೆ ಬೆಳಕಿನ ಚಿತ್ರಗಳನ್ನೂ ಇದು ಸೆರೆಹಿಡಿಯುತ್ತದೆ.
ಮಾರ್ಸ್ ಡಿಸೆಂಟ್ ಇಮೇಜರ್
ಸಂಚಾರಿ ವಾಹನ ಬಿಸಿಲುಗುರಾಣಿಯನ್ನು ಹೊರಕ್ಕೆಸೆದು ಕೆಳಗಿಳಿಯುವಾಗ ಎದುರಾದ ಚಿತ್ರಗಳನ್ನು ತೆಗೆದ ಕ್ಯಾಮೆರಾ ಇದು. ಸೆಕೆಂಡಿಗೆ ನಾಲ್ಕು ಫ್ರೇಮಿನಂತೆ ವಿಡಿಯೋ ಮಾಡಿ ವಾಹನ ನೆಲ ಮುಟ್ಟಿದ ನಂತರ ಭೂಮಿಗೆ ಆ ಚಿತ್ರಗಳನ್ನು ಕಳುಹಿಸಿತು. ರೋವರ್ನ ಕೆಳಪಥದ ಚಿತ್ರದೊಂದಿಗೆ ಸುತ್ತಲ ಭೌಗೋಳಿಕ ದೃಶ್ಯಗಳೂ ದೊರೆತಿರುವುದರಿಂದ ಕ್ಯೂರಿಯಾಸಿಟಿ ಇಂಥಲ್ಲೇ ಇದೆ ಎಂದು ಖಚಿತವಾಗಿ ಗುರುತಿಸಲು ಸಾಧ್ಯವಾಗಿದೆ.
ಕ್ಯೂರಿಯಾಸಿಟಿಯಲ್ಲಿ ನಾಲ್ಕು ರೀತಿಯ ಸ್ಪೆಕ್ಟ್ರೋಮೀಟರುಗಳಿವೆ
ಸ್ಪೆಕ್ಟ್ರೋಮೀಟರ್ ಎಂದರೆ ವಿದ್ಯುತ್ ಕಾಂತೀಯ ರೋಹಿತವನ್ನು ಅಳೆಯುವ ಉಪಕರಣ. ಇವುಗಳಲ್ಲೊಂದು ಬಂಡೆಗಲ್ಲುಗಳಲ್ಲಿ ಇರಬಹುದಾದ ಎಕ್ಸ್ರೇಯಂಥಹ ಶಕ್ತಿಕಿರಣಗಳನ್ನು ಗುರುತಿಸಿದರೆ, ಇನ್ನೊಂದು ಕೆಮ್ಕ್ಯಾಮ್ ಎಂಬ ಹೆಸರಿನದು ಲೇಸರ್ ಕಿರಣಗಳನ್ನು ಹಾಯಿಸಿ ಶಿಲೆಗಳನ್ನು ಪುಡಿಮಾಡಿ ಅದರಿಂದ ಹೊರಹೊಮ್ಮುವ ಪ್ಲಾಸ್ಮಾ ಅಥವಾ ಬಿಸಿ ಹೊಗೆಯ ಸೂಕ್ಷ್ಮಾತಿಸೂಕ್ಷ್ಮವಿವರಗಳನ್ನು ಪಡೆಯುತ್ತದೆ. ಮೂರನೆಯದು ಕೆಮ್ಮಿನ್ ಅಥವಾ ಕೆಮಿಸ್ಟ್ರಿ ಎಂಡ್ ಮಿನರಾಲಜಿ ಎಕ್ಸ್ಪರಿಮೆಂಟ್, ಇದು ಶಿಲಾಪುಡಿಗಳಲ್ಲಿರಬಹುದಾದ ರಾಸಾಯನಿಕಗಳ ಪತ್ತೆಗೆ ಪ್ರಯತ್ನಿಸುತ್ತದೆ. ನಾಲ್ಕನೆಯದು ಸ್ಯಾಮ್ ಅಥವಾ ಸ್ಯಾಂಪಲ್ ಎನಲಿಸಿಸ್ ಎಟ್ ಮಾರ್ಸ್. ನಿಜಾರ್ಥದಲ್ಲಿ ಇದೊಂದು ವೈಜ್ಞಾನಿಕ ಪ್ರಯೋಗಾಲಯವೇ. ಏಕೆಂದರೆ ವಿವಿಧ ಉಪಕರಣಗಳ ಮೂಲಕ ಇಲ್ಲಿ ಮಂಗಳನ ಕಲ್ಲು, ಮಣ್ಣು, ಶಿಲಾಚೂರುಗಳೆಲ್ಲವುಗಳ ವಿಶ್ಲೇಷಣೆ ನಡೆಯುತ್ತದೆ. ಮಾಸ್ ಸ್ಪೆಕ್ಟೋಗ್ರಾಫ್ ಎಂಬ ಉಪಕರಣ ಪುಡಿಗಳನ್ನು ಅವುಗಳ ದ್ರವ್ಯರಾಶಿಯ ಆಧಾರದ ಮೇಲೆ ವರ್ಗೀಕರಿಸಿದರೆ, ಗ್ಯಾಸ್ ಕ್ರೊಮ್ಯಾಟೋಗ್ರಾಫ್ ಅವುಗಳನ್ನು ಬಿಸಿಮಾಡಿ ಹೊರಚಿಮ್ಮುವ ಅನಿಲಹಬೆಯನ್ನು ವಿಂಗಡಿಸುತ್ತದೆ ಹಾಗೂ ಲೇಸರ್ ಸ್ಪೆಕ್ಟ್ರೋಮೀಟರ್ ಅವುಗಳಲ್ಲಿ ಮಿಥೇನ್ನಂತಹ ಇಂಗಾಲದ ಸಂಯುಕ್ತಗಳಲ್ಲದೆ ಜಲಜನಕ, ಆಮ್ಲಜನಕ, ಸಾರಜನಕ ಇತ್ಯಾದಿ ಜೀವಿಗಗತ್ಯ ಮೂಲವಸ್ತುಗಳಿಗಾಗಿ ಶೋಧ ನಡೆಸುತ್ತದೆ.
ವಿಕಿರಣಶೋಧಕಗಳು
ಇವುಗಳಲ್ಲಿ ಮೊದಲನೆಯದು ಸಿಲಿಕಾನ್ ಮತ್ತು ಸೀಸಿಯಂ ಅಯೋಡೈಡ್ಗಳುಳ್ಳ ಪುಟ್ಟ ಶೋಧಕಪೆಟ್ಟಿಗೆ. ಮಂಗಳ ಗ್ರಹದ ವಾತಾವರಣದಲ್ಲಿ ಬೀಸಿ ಬರುವ ಶಕ್ತಿಯುತ ಕಿರಣಗಳನ್ನು ಹೀರಿಕೊಂಡು ಅವುಗಳನ್ನು ದಾಖಲಿಸುತ್ತದಷ್ಟೇ ಅಲ್ಲ, ಮಂಗಳನ ನೆಲ, ಶಿಲೆಗಳ ಮೇಲೆ ಈ ವಿಕಿರಣಗಳಿಂದಾದ ಪರಿಣಾಮವನ್ನೂ ಇದು ಅಳೆಯಲಿದೆ. ಇನ್ನೊಂದು ಡೈನಮಿಕ್ ಅಲ್ಬಿಡೋ ಆಫ್ ನ್ಯೂಟ್ರಾನ್ಸ್. ಈ ಉಪಕರಣ ನ್ಯೂಟ್ರಾನ್ ಕಿರಣಗಳನ್ನು ಎರಡೂವರೆ ಅಡಿ ಎತ್ತರದಿಂದ ಮಂಗಳದ ನೆಲ ಹಾಗೂ ಬಂಡೆಗಳ ಮೇಲೆ ಸಿಡಿಸುತ್ತದೆ. ಈ ಕಿರಣಗಳು ಮತ್ತೂ 3-6 ಅಡಿ ನೆಲದೊಳಗೆ ಸಾಗಬಲ್ಲವು. ಅಲ್ಲೇನಾದರೂ ನೀರು ಹಿಮಗಡ್ಡೆಗಳ ರೂಪದಲ್ಲಿ ಅಥವಾ ಬಂಡೆಯ ಖನಿಜಗಳೊಳಗೆ ಸಂಯುಕ್ತವಾಗಿ ಅವಿತಿದ್ದರೆ ನ್ಯೂಟ್ರಾನುಗಳನ್ನು ನೀರಿನಲ್ಲಿರುವ ಜಲಜನಕದ ಅಣುಗಳು ಹೀರಿಕೊಳ್ಳುತ್ತವೆ. ಅಲ್ಲಿಂದ ಪ್ರತಿಫಲಿತಗೊಂಡ ನ್ಯೂಟ್ರಾನ್ಗಳು ಶಕ್ತಿಗುಂದಿರುತ್ತವೆ. ಅವುಗಳ ಬಲವನ್ನು ಅಳೆದು ಆ ಮೂಲಕ ಜಲಪತ್ತೆಗೆ ಈ ಸಾಧನ ನೆರವಾಗುತ್ತದೆ.
ಪರಿಸರ ಸಂವೇದಕಗಳು
ಇದೊಂದು ಮಂಗಳ ಗ್ರಹದ ವಾತಾವರಣವನ್ನು ಸದಾಕಾಲ ಗಮನಿಸುತ್ತಿರುವ ಸಾಧನ. ರೋವರಿನ ಸುತ್ತಮುತ್ತಲ ಪರಿಸರದ ಒತ್ತಡ, ಆದ್ರ್ರತೆ, ಗಾಳಿಯ ವೇಗ ಮತ್ತು ದಿಕ್ಕು, ವಾತಾವರಣದಲ್ಲಿನ ಅತಿನೇರಳೆ ಕಿರಣಗಳು, ವಾಯುಮಂಡಲದ ಉಷ್ಣತೆ ಇವೆಲ್ಲವುಗಳನ್ನು ಇದು ಕಾಲಕಾಲಕ್ಕೆ ದಾಖಲಿಸುತ್ತಿರುತ್ತದೆ. ಇವು ಸಂಚಾರಿ ವಾಹನದ ಪ್ರಮುಖ ಭಾಗಗಳಷ್ಟೇ. ಹಾಗೆ ನೋಡಿದರೆ, ಕ್ಯೂರಿಯಾಸಿಟಿಯ ಪ್ರತಿಯೊಂದೂ ಭಾಗವೂ ಒಂದೊಂದು ಪ್ರಯೋಗ ಉಪಕರಣವೇ ಆಗಿದೆ. ವಿವಿಧ ದೇಶಗಳ ವಿಜ್ಞಾನಿಗಳು ಹಾಗೂ ತಂತ್ರಜ್ಞರು ಕ್ಯೂರಿಯಾಸಿಟಿಯ ಯಂತ್ರೋಪಕರಣಗಳು ಹಾಗೂ ತಂತ್ರಾಂಶಗಳನ್ನು ರೂಪಿಸುವಲ್ಲಿ ನೆರವಾಗಿದ್ದಾರೆ. ಹಾಗಾಗಿ ಇದೊಂದು ಅಂತಾರಾಷ್ಟ್ರೀಯ ಮಟ್ಟದ ಸಾಹಸವೇ ಸರಿ. ಮಂಗಳನನ್ನು ತಲುಪಿದ ಒಂದು ವಾರದ ಬಳಿಕ ಕುತೂಹಲಿಯ ಕಂಪ್ಯೂಟರ್ ಮಿದುಳಿಗೆ ಮತ್ತಷ್ಟು ದೇಶಗಳನ್ನು(ಬ್ರೈನ್ಸ್ಟಾರ್ಮಿಂಗ್) ವಿಜ್ಞಾನಿಗಳು ಕಳುಹಿದ್ದಾರೆ. ಸಂಚರಿಸುವಾಗ ಅಥವಾ ರೊಬಾಟ್ ಕೈ ಚಲಿಸುವಾಗ ಎದುರಾಗುವ ಅಡಚಣೆಗಳನ್ನು ತಾನೇ ನಿವಾರಿಸಿಕೊಳ್ಳುವ ಆದೇಶಗಳು ಅವು. ಉಪಗ್ರಹ ಚಿತ್ರವೊಂದು ಕ್ಯೂರಿಯಾಸಿಟಿಯನ್ನು ಹೊತ್ತೊಯ್ದ ಕೋಟ್ಯಂತರ ಹಣದಿಂದ ತಯಾರಾದ ಬಾನನೌಕೆ, ಬಿಸಿಲು ಗುರಾಣಿ, ಪ್ಯಾರಾಚ್ಯೂಟ್ ಇವುಗಳ ಅವಶೇಷಗಳನ್ನು ತೋರಿಸಿದೆ. ‘ಇವೆಲ್ಲ ಅನಿವಾರ್ಯ’ ಎಂದೆನ್ನುವ ವಿಜ್ಞಾನಿಗಳ ದೃಷ್ಟಿಯಲ್ಲಿ ಕ್ಯೂರಿಯಾಸಿಟಿ ಒದಗಿಸಲಿರುವ ಮಾಹಿತಿ ಕಣಜವೇ ಅತಿ ಹೆಚ್ಚು ಬೆಲೆಬಾಳುವಂಥದ್ದಾಗಿದೆ. ಕುತೂಹಲಿ ಸಂಚಾರಿ ಮಾನವನ ಕುತೂಹಲಗಳಿಗೆ ಮಂಗಳ ಹಾಡುವುದೇ? ಕಾಲವೇ ಉತ್ತರ ಹೇಳಬೇಕು.
ಮನುಕುಲದ ಅಮೋಘ ಸಾಧನೆ, ಶ್ಲಾಘನೆ
ಅಂತರಿಕ್ಷಕ್ಕೆ ಸಾವಿರಾರು ಉಪಗ್ರಹಗಳನ್ನು ಕಳಿಸಲಾಗಿದೆ. ಸೌರಮಂಡಲದ ಅಂಚಿನ ನಸುಗತ್ತಲಲ್ಲಿ ಓಟ ನಡೆಸಿರುವ ಸೂರ್ಯನ ಕಿರುಗ್ರಹ ಪ್ಲೂಟೋದ ಬಗ್ಗೆಯೂ ಸಂಶೋಧನೆಗಳು ನಡೆದಿವೆಯಷ್ಟೇ ಅಲ್ಲ, ಬಾಹ್ಯ ಆಕಾಶದಲ್ಲಿಯೂ ನೂರಾರು ಬಾನನೌಕೆಗಳು ಅಧ್ಯಯನಶೀಲವಾಗಿವೆ. ಆದರೆ ಮೊನ್ನೆಮೊನ್ನೆಯಷ್ಟೇ ಮಂಗಳ ಗ್ರಹಕ್ಕೆ ಹಾರಿ ಅಲ್ಲಿ ಪ್ರಯೋಗ ನಡೆಸುತ್ತಿರುವ ಕ್ಯೂರಿಯಾಸಿಟಿ ಪ್ರಯೋಗಾಲಯವನ್ನು ಮನುಕುಲದ ಅಮೋಘ ಸಾಧನೆ ಎಂದು ಬಣ್ಣಿಸಲಾಗುತ್ತಿದೆ. ಕಳೆದ 50 ವರ್ಷಗಳಿಂದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೆಜ್ಜೆಹೆಜ್ಜೆಯಾಗಿ ಪ್ರಗತಿ ಸಾಧಿಸಿದ್ದ ಮಾನವ ಈಗಿಟ್ಟಿದ್ದು ದಾಪುಗಾಲೇ ಸರಿ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಅಮೆರಿಕದ ಅಧ್ಯಕ್ಷ ಒಬಾಮಾ ನಾಸಾದ ವಿಜ್ಞಾನಿಗಳಿಗೆ ಶಹಬ್ಬಾಸ್ ಎಂದಿದ್ದಾರೆ.
ಮಂಗಳನ ಮೇಲೆ ಇಳಿದ ರೋವರ್ ಇದೇ ಮೊದಲನೆಯದೇನೂ ಅಲ್ಲ. 2004 ರಿಂದ ಅಲ್ಲಿ ಅಪಾರ್ಚುನಿಟಿ ಓಡಾಡುತ್ತಲೇ ಇದೆ. ಅವಳಿ ಸಂಚಾರಿಗಳಾದ ಸ್ಪಿರಿಟ್ ಮತ್ತು ಅಪಾರ್ಚುನಿಟಿಗಳು ಸಾಕಷ್ಟು ಮಾಹಿತಿಗಳನ್ನೂ ಕಳಿಸಿಕೊಟ್ಟಿವೆ. ಅದಕ್ಕಿಂತ ಮೊದಲು ಸೋಜರ್ನರ್ ರೋವರ್ ಮಂಗಳನಲ್ಲಿ ನೀರಿದ್ದಿರಬಹುದಾದ ಕುರುಹುಗಳನ್ನು ಕಂಡುಹಿಡಿದಿದೆ. ಹಾಗಿದ್ದರೆ ಈ ಕುತೂಹಲಿ ಸಂಚಾರಿಯಲ್ಲಿ ಅಂಥದ್ದೇನಿದೆ ಹೊಸತು?
ಮುಂದುವರೆಯುವುದು….
ಸರೋಜ ಪ್ರಕಾಶ
- Advertisement -
- Advertisement -
- Advertisement -
- Advertisement -