ನಾವು ಚಿಕ್ಕವರಿದ್ದಾಗ ಹೋಗಲಿ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ಅಂದರೆ ಸುಮಾರು ಇಪ್ಪತೈದು, ಮೂವತ್ತು ವರ್ಷಗಳ ಹಿಂದೆ ನಾವು ‘ಪ್ರೊಜೆಕ್ಟ್ ರಿಪೋರ್ಟ್’ (ಯೋಜನಾ ವರದಿ) ಎಂಬ ಶಬ್ದವನ್ನು ಕೇಳಿದ್ದೇ ಇಲ್ಲ. ಆದರೆ ಇತ್ತೀಚಿಗೆ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಸ್ನಾತಕೊತ್ತರ ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬಾಯಲ್ಲೂ ಈ ‘ಪ್ರೊಜೆಕ್ಟ್ ರಿಪೋರ್ಟ್’ ಗಳ ಮಾತುಗಳೇ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಗೆ ಬಗೆಯ ಹೂವುಗಳು, ಹಣ್ಣುಗಳು, ತರಕಾರಿ, ಹಸುಗಳು ಇನ್ನಿತರೆ ಪ್ರಾಣಿಗಳ ಕುರಿತು ‘ಪ್ರೊಜೆಕ್ಟ್ ರಿಪೋರ್ಟ್’ ತಯಾರಿಸಿಕೊಂಡು ಬರಲು ಕೇಳಿದಾಗ ಅವು ಪಾಲಕರಿಗೆ ಸಾಕಷ್ಟು ಕಷ್ಟಕೊಟ್ಟು, ಕಂಪ್ಯೂಟರ್ ಎದುರು ಕುಳಿತು ಬೇಕಾದ ಚಿತ್ರಗಳನ್ನು ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದು ಅವನ್ನು ಮತ್ತೆ ನೀಟಾಗಿ ಜೋಡಿಸಿ, ಪ್ಲಾಸ್ಟಿಕ್ ಹೊದಿಗೆ ಹಾಕಿ ಬದಿಗೊಂದು ಪಟ್ಟಿ ಸಿಕ್ಕಿಸಿ, ಶಿಕ್ಷಕರ ಎದುರು ಇಡುತ್ತವೆ. ಹೀಗೆ ಇಟ್ಟವುಗಳಲ್ಲಿ ಬಹಳಷ್ಟು ಪ್ರಾಜೆಕ್ಟ್ ರಿಪೋರ್ಟ್‍ಗಳ ಮೇಲೆ ಅವು ಬಣ್ಣ, ಬಣ್ಣ ಅಕ್ಷರಗಳಲ್ಲಿ, ಅಷ್ಟಿಷ್ಟು ಅಲಂಕಾರ ಮಾಡಿ, ತಮ್ಮ ಹೆಸರು, ತರಗತಿ, ಪ್ರಾಜೆಕ್ಟಿನ ಶೀರ್ಷಿಕೆ, ಯಾವ ಶೀಕ್ಷಕರಿಗೆ ಒಪ್ಪಿಸುವುದು ಮತ್ತು ತಮ್ಮ ಶಾಲೆಯ ಹೆಸರನ್ನು ಬರೆದದ್ದನ್ನು ಕಾಣಬಹುದೇ ವಿನಃ ಒಳಗಡೆ ಹೂರಣಗಳೇನೂ ಇರುವುದಿಲ್ಲ. ಎಲ್ಲಾ ಒಂದು ರೀತಿಯ ಕತ್ತರಿಸು, ಅಂಟಿಸು ((Cut and Paste) ಸ್ವಂತ ತಲೆ ಖರ್ಚು ಮಾಡುವುದಕ್ಕಲ್ಲ ಆಸ್ಪದವೂ ಇಲ್ಲ, ಅವಕಾಶವು ಇಲ್ಲ ಕಾರಣ ಪ್ರಾಜೆಕ್ಟ್ ಗಳು ಒಂದೆರೆಡೇ ಅಲ್ಲ. ಹಾಗಾಗಿ ಸೃಜನಶೀಲತೆಯ ಲವವೇಶವೂ ಇರದ ಒಣ ಯಾಂತ್ರಿಕ ಬರವಣಿಗೆಗಳು, ಅವುಗಳಿಂದ ಯಾವ ಪ್ರಯೋಜನ ಯಾರಿಗೆ ಸಿಗುತ್ತದೋ ಗೊತ್ತಿಲ್ಲ. ಬಹುಶಃ ಪ್ಲಾಸ್ಟಿಕ್ ಹೊದಿಕೆಯ ಮಾರಾಟಗಾರರಿಗೆ ಒಂದಿಷ್ಟು ಲಾಭವಾಗಬಹುದು! ಅದಕ್ಕಿಂತ ಹೆಚ್ಚಾಗಿ ಅವು ಶಾಲೆಯ ತುಂಬೆಲ್ಲ ಹರಡಿಕೊಂಡು ಬಿದ್ದಂತೆ ಪರಿಸರ ಪ್ಲಾಸ್ಟಿಕ್ ಮಾಯಾವಾಗಬಹುದು! ಯಾಕೆಂದರೆ ಯಾವುದೇ ಶಾಲೆಯಲ್ಲಿ ಅವನ್ನೆಲ್ಲ ಒಂದು ಶಿಸ್ತಿನಲ್ಲಿ ಇಡುವ ವ್ಯವಸ್ಥೆ ಇದೆ ಎಂಬ ಭರವಸೆಯಿಲ್ಲ. ಅದನ್ನಷ್ಟು ನೋಡಿ, ಆ ಪ್ಲಾಸ್ಟಿಕ್ ಹೊದಿಕೆ ಮತ್ತು ಪಟ್ಟಿಯನ್ನು ಪುನರ್ ಬಳಕೆಗೆ ನೀಡಿದರೆ ಪಾಲಕರ ಜೇಬಿಗೆ ಬೀಳಬಹುದಾದ ಕತ್ತರಿ ಕಡಿಮೆಯಾಗಬಹುದು! ಈ ಪ್ರಾಜೆಕ್ಟ್ ರಿಪೋರ್ಟ್ ಎಂಬುದು ಒಂದು ಫ್ಯಾಶನ್ನಾಗಿ ಬೆಳೆಯುತ್ತಿರಬೇಕೆಂಬುದೇ ನಮ್ಮ ಸದ್ಯದ ಗುಮಾನಿ.
ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಕೂಡ ಇಂದು ಇಂಥ ಪ್ರಾಜೆಕ್ಟ್ ರಿಪೋರ್ಟ್‍ಗಳು ಕಡ್ಡಾಯವಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬಹುತೇಕ ಸಮಯ ಇವುಗಳ ತಯಾರಿಕೆಗೇ ಸಂದುಹೋಗುತ್ತಿದೆ. ಇವುಗಳ ತಯಾರಿಕೆಗೆ ನಮೂದಿಸುವುದೂ ಸಾಮಾನ್ಯ ಸಂಗತಿ ಪದವಿ ತರಗತಿಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಆತಂರಿಕ ಅಂಕ ನೀಡುವಿಕೆಗೂ ಇಂಥದೆ ಸ್ವಲ್ಪ ವಿಸ್ತøತ ಮಾದರಿಯ ಪ್ರಾಜೆಕ್ಟ್ ರಿಪೋರ್ಟ್‍ಗಳನ್ನು ಒಪ್ಪಿಸುವುದು ಕಡ್ಡಾಯವಾಗಿದೆ ಒಂದು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ಕಡೆಗೆ ಹೋಗಿ, ಅಲ್ಲಿನ ಕಾರ್ಖಾನೆಯನ್ನೋ, ವ್ಯಾಪಾರ ವಹಿವಾಟಿನ ಸಂಸ್ಥೆಯನ್ನೂ ಆಮೂಲಾಗ್ರವಾಗಿ ಅಭ್ಯಸಿಸಿ ಆ ಕುರಿತು ಪ್ರಾಜೆಕ್ಟ್ ರಿಪೋರ್ಟ್ ನೀಡುವುದು ಸರಿಯಾದ ಕ್ರಮವೇ ಹೌದಾದರೂ ಅದಕ್ಕೆ ಅಗತ್ಯವಾದ ಸಿದ್ಧತೆಗಳಾಗಲಿ, ಸೌಲಭ್ಯಗಳಾಗಲಿ ಎಲ್ಲರಿಗೂ ಸಿಗುವುದು ಅಸಾಧ್ಯ. ಹಾಗಾಗಿ ಮತ್ತೆ ಈ ವಿದ್ಯಾರ್ಥಿಗಳೆಲ್ಲ ಮೊರೆಹೋಗುವುದು ಸೈಬರ್ ಕೆಫೆಗಳಿಗೆ ಅಲ್ಲಿನವರಿಗೆ ಈ ರೀತಿ ಪ್ರಾಜೆಕ್ಟ್‍ಗಳನ್ನು ರೂಪಿಸಿ ಕೊಡುವುದೇ ಹಣಗಳಿಸುವ ದಂಧೆಯಾಗಿರುತ್ತದೆ. ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಕೂಲತೆಗೆ ತಕ್ಕಂತೆ ಅವರ ಕೋರಿಕೆಯಷ್ಟು ಪುಟಗಳಲ್ಲಿ ರಿಪೋರ್ಟ್‍ಗಳನ್ನು ಅಂದವಾಗಿ ಡಿ.ಟಿ.ಪಿ ಮಾಡಿ ಅದನ್ನೊಂದು ಮಿನಿ ಪಿ.ಹೆಚ್.ಡಿ. ಪ್ರಬಂಧದಂತೆ ಅಚ್ಚುಕಟ್ಟಾಗಿ ನೀಡುತ್ತಾರೆ. ಅದಕ್ಕೊಂದು ವ್ಯವಸ್ಥಿತ ಜಾಲವೇ ಇರುತ್ತದೆ. ನಾಲ್ಕಾರು ಕಾಲೇಜುಗಳ ವಿದ್ಯಾರ್ಥಿಗಳು ಸಿಕ್ಕರೆ ಇವರ ಪ್ರಾಜೆಕ್ಟ್ ರಿಪೋರ್ಟ್‍ಗಳೆಂದರೆ ಅತ್ತ, ಇತ್ತ ಮಾಡುವುದು ಒಂದು ಕಾಲೇಜಿನ ಕಳೆದ ವರ್ಷದ ಅದರ ಹಿಂದಿನ ವರ್ಷದ ಪ್ರಾಜೆಕ್ಟ್ ರಿಪೋರ್ಟ್‍ಗಳು, ಮತ್ತೊಂದು ಕಾಲೇಜಿನ ಈ ವರ್ಷದ ಪ್ರಾಜೆಕ್ಟ್ ರಿಪೋರ್ಟ್‍ಗಳಾಗಿ ಮಾರ್ಪಟ್ಟರೆ ಅದರಲ್ಲಿ ಆಶ್ವರ್ಯ ಪಡುವಂಥದ್ದೆನಿಲ್ಲ, ಇವೆಲ್ಲ ವ್ಯವಸ್ಥಿತವಾಗಿ ಕತ್ತರಿಸು ಮತ್ತು ತೇಪೆ ಹಚ್ಚು ಎಂಬಂತಾದಾಗ, ಅವು ತಮ್ಮಿಂದ ತಾವೇ ಕೃತಿಚೌರ್ಯಗಳಾಗಲು ಪ್ರಾರಂಭವಾಗುತ್ತದೆ.
ಹೀಗೆ ಪ್ರಾಜೆಕ್ಟ್ ರಿಪೋರ್ಟ್‍ಗಳೆಂಬ ರಾಶ್ಯುತ್ಪನ್ನಗಳು ಮಾರುಕಟ್ಟೆಯ ಸರಕುಗಳಾಗದಂತೆ ಅಗ್ಗವಾಗದಂತೆ ಎಚ್ಚರವಹಿಸುದಕ್ಕೆ ಬಹುಶಃ ಇದು ಸಕಾಲ. ಈ ಕುರಿತು ಇನ್ನಷ್ಟು ಚಿಂತನ, ಮಂಥನಗಳು ವಿಷಯದ ಮೇಲೆ ಜರುಗಿದರೆ ಜೋಳ್ಳು ಗಟ್ಟಿಗಳ ಆಯ್ಕೆಯು ಕ್ರಿಯೆಗೊಂದು ಅರ್ಥಪೂರ್ಣವಾದ ವೇದಿಕೆ ನಿರ್ಮಾಣವಾಗಲು ಸಾಧ್ಯ ಎನ್ನುವುದು ಸದ್ಯದ ಅನ್ನಿಸಿಕೆ.
ರವೀಂದ್ರ ಭಟ್ ಕುಳಿಬೀಡು.