ಭಾಷೆ ಶೂನ್ಯದಲ್ಲಿ ಉದ್ಭವವಾಗುವಂತಹದ್ದಲ್ಲ ಶೂನ್ಯದಲ್ಲಿ ವ್ಯವಹರಿಸುವಂತದ್ದಲ್ಲ. ಶೂನ್ಯ ಸಾಧನೆಯು ಅದರ ಉದ್ದೇಶವಲ್ಲ, ಗುರಿಯಲ್ಲ ನಮ್ಮೊಳಗೊಳಗೇ ಅಂದುಕೊಳ್ಳುವುದಕ್ಕೆ ಯಾರ ಹಂಗೂ ಇಲ್ಲ, ಅದಕ್ಕೆ ಬೇರೆ ಪ್ರಕ್ರಿಯೆಗಳೂ ಇರುವುದಿಲ್ಲ, ಹಾಗಂತ ಹೆರವರೊಂದಿಗೆ ವ್ಯವಹರಿಸುವ ಸಂದರ್ಭದಲ್ಲೆಲ್ಲ ಪರಸ್ಪರ ಪ್ರತಿಕ್ರಿಯೆ – ಪ್ರತಿಸ್ಪಂದನಗಳಿರುವುದು ನಿಜ.
ಭಾಷೆಯಿರದ ಪ್ರಪಂಚದ ಕಲ್ಪನೆಯೇ ಅಸಾಧ್ಯ. ಪ್ರಪಂಚದ ಪ್ರತಿಯೊಂದರ ಗುರುತಿಸುವಿಕೆಯೂ ಪ್ರಾರಂಭವಾಗುವುದೇ ಭಾಷೆಯ ಮೂಲಕ ಪ್ರತಿಯಂದು ಭಾವಾಭಿವ್ಯಕ್ತಿಗೂ, ಚಿಂತನೆಯ ಸಂವಹನಕ್ಕೂ ಅನಿವಾರ್ಯವಿದು. ಪ್ರತಿಯೊಂದು ಜ್ಞಾನದ ಶಾಖೆಗೂ ಅದರದ್ದೇ ಆದ ನಿರ್ದಿಷ್ಟ ಭಾಷಾ ಲೋಕವಿದೆ. ಹಾಗೇ ವೃತ್ತಿಗೆ ಭಾಷಾ ಬಳಕೆಯಲ್ಲಿ ಭಿನ್ನತೆಯೂ ಇದೆ. ಭಾಷಾ ಬಳಕೆಯ ಕ್ರಮ ಕೂಡ ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತದೆ ಸ್ಥಳ, ವ್ಯಕ್ತಿ, ಸಂದರ್ಭಕ್ಕನುಗುಣವಾಗಿ ಕೂಡ ಭಾಷಾ ಬಳಕೆಯಲ್ಲಿ ವ್ಯತ್ಯಯವುಂಟಾಗುವುದನ್ನು ಗಮನಿಸಬಹುದು. ಅಂದರೆ ಭಾಷೆ ಒಟ್ಟಾರೆಯಾಗಿ ತನ್ನ ಅರ್ಥವನ್ನು ಬಿಚ್ಚಿಡುವುದು ಸಂದರ್ಭಕ್ಕೆ ಅನುಗುಣವಾಗಿಯೇ ವಿನಃ ನಿಘಂಟಿಗನುವಾಗಿಯಲ್ಲ.
ಆಡುನುಡಿಯಿಂದ, ಗ್ರಂಥಸ್ಥದತ್ತ ತಿರುಗಿ ಬಿಡುತ್ತದೆ. ಪ್ರಜ್ಞಾ, ಪೂರ್ವಕವಾಗಲ್ಲ. ಅವೆಲ್ಲ ಸಹಜವಾಗಿಯೇ ಜರುಗುವ ಕ್ರಿಯೆ, ಇಲ್ಲಿ ಮನೆಯೊಳಗಣ ಮಾತಿಗೂ, ಹೊರ ಪ್ರಪಂಚದ ಸಮಾಜದೊಂದಿಗಿನ ಮಾತಿಗೂ ಅಂತರವಿದೆ. ನಾವು ಆ ಕ್ಷಣದಲ್ಲಿ ಏನಾಗಿದ್ದೇವೆ ಎಂಬುದರ ಮೇಲೆ ನಮ್ಮ ಮಾತು ನಿರ್ಧರಿತವಾಗುತ್ತದೆ. ಪ್ರಾಯಾಣಿಕರಾಗಿದ್ದರೆ ಒಂದು ರೀತಿ ಕಛೇರಿ ಸಿಬ್ಬಂದಿಯಾಗಿದ್ದರೆ ಇನ್ನೊಂದು ರೀತಿ ಕಛೇರಿಯ ಅಧಿಕಾರಿಯಾಗಿದ್ದಲ್ಲಿ ಒಂದು ರೀತಿ ಸಾಮಾನ್ಯ ನೌಕರನಾಗಿದ್ದಲ್ಲಿ ಇನ್ನೊಂದು ರೀತಿ ಹೇಗೆಂದರೆ ರಾಜನಾದವನು ನಮ್ಮ ಭೋಜನದ ವ್ಯವಸ್ಥೆ ಆಗಿದೆಯೇ? ಎಂದು ಪ್ರಶ್ನಿಸಿದರೆ ಸಾಮಾನ್ಯ ವ್ಯಕ್ತಿ ಅಡುಗೆ ಆಯ್ತಾ? ಅಥವಾ ಊಟಕ್ಕೆ ಆಯ್ತಾ? ಎಂದು ಕೇಳುತ್ತಾನೆ ಹೀಗೆ ಸಂದರ್ಭ ಮತ್ತು ವ್ಯಕ್ತಿಗಳ ಸ್ಥಾನ, ಮಾನಕ್ಕೆ ಹೊಂದಿಕೊಂಡಂತೆ ಭಾಷೆಯ ಬಳಕೆಯ ಕ್ರಮದಲ್ಲಿ ಏರುಪೇರಾಗುವದನ್ನು, ನಾವೇ ಗಮನಿಸಬಹುದು ರಂಗ ಪ್ರಯೋಗಗಳ ಮುಲಕವೂ ಸ್ಪಷ್ಟವಾಗಿ ಅರಿಯಲು ಅಧ್ಯಯನ ಮಾಡಲು ಸಾಧ್ಯ.
ವಸ್ತುಸ್ಥಿತಿ ಹೀಗಿರುವ ಸಂದರ್ಭದಲ್ಲಿ ಶಿಕ್ಷಕನೊಬ್ಬನ ತರಗತಿಯೊಳಗಿನ ಭಾಷೆ ಕೂಡ ಹೇಗಿದ್ದರೆ ಸೂಕ್ತವೆಂದು ತಿಳಿದುಕೊಳ್ಳುವುದು, ಆ ಕುರಿತು ಲಕ್ಷವಹಿಸುವುದು ಇಂದಿನ ಅಗತ್ಯ. ಯಾಕೆಂದರೆ ತರಗತಿಯೊಳಗಿನ ಮಾತುಗಳೇ ಬಹಳ ಬೆಲೆಯುಳ್ಳದ್ದು ಪ್ರಭಾವ ಬೀರುವಂತದ್ದು ಯಾಕೆಂದರೆ ಅಲ್ಲಿ ಒಂದೆಡೆ ಶಿಕ್ಷಕ ಇನ್ನೊಂದೆಡೆ ವಿದ್ಯಾರ್ಥಿ ಪರಸ್ಪರ ಮುಖಾಮುಖಿಯಾಗಿ ಮಾತುಗಳ ಮುಖಾಂತರ ತಿಳುವಳಿಕೆಯನ್ನು ಯಾ ಜ್ಞಾನವನ್ನು ನೀಡುವುದು ಅಥವಾ ವಿನಿಮಯ ಮಾಡಿಕೊಳ್ಳುವುದು ಜರುಗುತ್ತಿರುತ್ತದೆ. ಇದು ಒಮ್ಮುಖದ ಕ್ರಿಯೆಯಲ್ಲಿ ಒಮ್ಮುಖದ ಕ್ರಿಯೆಯಾದಲ್ಲಿ, ಒಬ್ಬನೇ ಹೇಳುತ್ತಿರುವುದು, ಉಳಿದವರು ಸುಮ್ಮನೆ ಒಪ್ಪಿಕೊಳ್ಳುತ್ತಿರುವುದು ಆದಲ್ಲಿ, ಹೇಳುವವನ ಮಾತುಗಳು ಪ್ರಶ್ನಾತೀತ ಎಂದು ಪರಿಗಣಿಸುವುದಾದರೆ ಆತ ಧಾರ್ಮಿಕ ಗುರು, Preacher ಅದೇ ಪರಸ್ಪರ ಮಾತುಗಾಳಾದರೆ, ಪ್ರಶ್ನಾಪೇಕ್ಷಿತವಾದಲ್ಲಿ ಅದಕ್ಕೆ ಅವಕಾಶವಿತ್ತೇ ವ್ಯವಹರಿಸುವ ವ್ಯಕ್ತಿಯಾದಲ್ಲಿ ಆತ ಶಿಕ್ಷಕ teacher ಹೀಗೆ ವಿದ್ಯಾರ್ಥಿಗಳಿಂದ ಪ್ರಶ್ನೆಗಳನ್ನು ಅಪೇಕ್ಷಿಸುವ, ಉತ್ತರಿಸುವ ಸಂಗತಿಗಳೆಲ್ಲ ಜರುಗುವ ಸಂದರ್ಭದಲ್ಲಿ ಬಳಸುವ ಭಾಷೆ ಸರಳ, ಶುದ್ದ ವ್ಯಾಕರಣ ಬದ್ಧ, ಪಠ್ಯದ ಶಿಸ್ತಿಗೆ ಒಳಪಟ್ಟಿದ್ದಾಗಿರಬೇಕು ಹಾಗಲ್ಲದಿದ್ದಲ್ಲಿ ತರಗತಿಯ ಘನತೆ ಕ್ಷಣಾರ್ಧದಲ್ಲಿ ಛಿದ್ರಗೊಳ್ಳಬಹುದು.
ಕನ್ನಡದ ಸಂಧರ್ಭವನ್ನೇ ಗಮನಿಸುವುದಾದರೆ, ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಬಳಸುವ ಕನ್ನಡದ ಕ್ರಮ ಬೇರೆ ಬೇರೆಯಾಗಿದ್ದಾಗ್ಯೂ, ತರಗತಿಯೊಳಗೆ ಸಾಮಾನ್ಯವಾಗಿ ಏಕಪ್ರಕಾರವಾದ ಗ್ರಂಥಸ್ಥವಾದ ಭಾಷಾ ಬಳಕೆಯಿರುವುದು ಅನಿವಾರ್ಯ. ಯಾಕೆಂದರೆ ಎಲ್ಲಾ ಭಾಗದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಲ್ಲೂ ಏಕರೂಪದ ಶಿಸ್ತುಬದ್ಧ ಭಾಷಾ ಬಳಕೆಯನ್ನು ಮೌಲ್ಯಮಾಪಕರು ನಿರೀಕ್ಷಿಸುತ್ತಾರೆ. ಅಲ್ಲಿ ತಮ್ಮ ತಮ್ಮ ಜಾಗೆಯದೆಂದು, ಭಾಷಾ ಬಳಕೆ ನಡೆದರೆ ಹೊರಗಿನವರಿಂದ ಶ್ಯೂನ್ಯಸಂಪಾದನೆ ಸಾಧ್ಯವಾಗಿಬಿಡಬಹುದು.
ಭಾಷಾ ಶುದ್ಧಿಯ ಜೊತೆಗೆ ಉಚ್ಛಾರದ ಶುದ್ಧಿಯ ಕಡೆಗೂ ಗಮನವಿರಬೇಕಾಗುತ್ತದೆ. ವಿದಾರ್ಥಿಗಳು ಪ್ರತಿಯೊಂದನ್ನು ಗಮನಿಸುತ್ತಾರೆ. ತರಗತಿಯ ಪ್ರತಿಯೊಂದು ಅಂಶವೂ, ತರಗತಿಯ ಹೊರಗಡೆ ಕೂಡ ಚರ್ಚೆಗೆ ಒಳಪಡುತ್ತಿರುತ್ತದೆ. ಅಪಭ್ರಂಶ ಭಾಷಾ ಬಳಕೆ ಅವರಿಗೆ ಕಿರಿ, ಕಿರಿಯ ಜೊತೆಗೆ ತರಗತಿಯೇ ಬೇಡವೆಂಬಂತಾಗಬಹುದು. ಹಾಗಾಗಿ ‘ಧ್ವನಿ’ಯನ್ನು ಹದಗೊಳಿಸಿಕೊಂಡು, ಅಗತ್ಯ ಏರಿಳಿತಗಳೊಂದಿಗೆ ಪಾಠಮಾಡಬೇಕಲ್ಲದೆ, ಏಕತಾನತೆಯಿಂದ ಕೂಡಿದ್ದ ಪಕ್ಷದಲ್ಲಿ ಕೇಳುಗರಲ್ಲಿ ಆಸಕ್ತಿಗೆ ಬದಲಾಗಿ, ನಿದ್ದೆ ಒತ್ತರಿಸಿ ಬರುವ ಸಾಧ್ಯತೆಯೇ ಹೆಚ್ಚು.
ರವೀಂದ್ರ ಭಟ್ ಕುಳಿಬೀಡು