ಪ್ರಸ್ತುತ ಜಾಗತೀಕರಣದ ಪ್ರಭಾವದಿಂದಾಗಿ ಮತ್ತು ಬಹುತೇಕ ಮಧ್ಯಮ ಮೇಲ್ವರ್ಗದ ಪಾಲಕರ ಕಾನ್ವೆಂಟ್ ಮೋಹದಿಂದಾಗಿ ಇಂದು ಕನ್ನಡ ಭಾಷೆ ಬಡವಾಗುತ್ತಿದೆ. ಬದುಕಿನ ಎಲ್ಲಾ ಹಂತಗಳಲ್ಲೂ ಇಂಗ್ಲೀಷ್ ಚಾಲ್ತಿಗೆ ಬರುತ್ತಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ಇಂಗ್ಲೀಷ್ ಭಾಷಾ ಮೋಹ ಅಡ್ಡಿಯನ್ನೊಡ್ಡುತ್ತಿದೆ. ಇದು ಹೀಗೆ ಮುಂದವರೆದರೆ ಮುಂದೊಂದು ದಿನ ಕನ್ನಡ ಭಾಷೆ ಅನಾಥವಾಗುತ್ತದೆ. ಎಂಬಂಥ ಮಾತುಗಳನ್ನು ದಿನನಿತ್ಯ ನಾವು ಕೇಳುತ್ತಿದ್ದೇವೆ. ಇದರಲ್ಲಿ ಸತ್ಯವಿಲ್ಲವೆಂದು ವಾದಿಸುವುದಿಲ್ಲ. ಆದರೆ ಅದರ ಇನ್ನೊಂದು ಮುಖವನ್ನು ನೋಡುವ ಅಗತ್ಯವೂ ನಮ್ಮೆದುರಿಗಿದೆ.
ಇಂದು ಬಹುತೇಕ ಪಾಲಕರ ಕನಸೆಂದರೆ ತಮ್ಮ ಮಕ್ಕಳು ಚೆನ್ನಾಗಿ ಇಂಗ್ಲೀಷ್ ಕಲಿಯಬೇಕು. ಅವರು ತಮ್ಮನ್ನು ಮಮ್ಮಿ, ಡ್ಯಾಡಿ ಅಂತಲೇ ಕರೆಯಬೇಕು. ಅನಂತರ ಅವರು ಇಂಜಿನಿಯರ್ ಅಥವಾ ಡಾಕ್ಟರ್‍ಗಳೇ ಆಗಬೇಕು. ವಿದೇಶಗಳಿಗೆ ಕಡ್ಡಾಯವಾಗಿ ತೆರಳಬೇಕು. ಒಟ್ಟಾರೆ ದುಡ್ಡು ಮಾಡಬೇಕು. ಐಷರಾಮಿ ಜೀವನ ನಡೆಸುವಂತಾಗಬೇಕು. ಡಾಲರ್ ಗಳಿಕೆಯೇ ಬದುಕಿನ ಪರಮೋದ್ದೇಶ ಹೀಗಾಗಿ ತಮ್ಮ ಮಕ್ಕಳನ್ನು ಎಷ್ಟೇ ಕಷ್ಟವಾದರು ಸರಿ ಖರ್ಚು ಬಂದರೂ ಸರಿ ಗರಿಗರಿಯಾದ ಯುನಿಫಾರ್ಮ್‍ನಲ್ಲಿ ಕನ್ವೆಂಟ್‍ಗಳಿಗೆ, ಇಂಗ್ಲೀಷ್ ಮಾಧ್ಯಮ ಸ್ಕೂಲುಗಳಿಗೆ ಕಳಿಸಲು ಹೆಣಗಾಡುತ್ತಾರೆ.
ನಮ್ಮ ರಾಷ್ಟ್ರ ಕವಿ ಕುವೆಂಪುರವರು ಹೇಳಿದ ಮಾತು ‘ಮಾತೃ ಭಾಷೆಯಲ್ಲಿ ಕಲಿತದ್ದು ಮಾತ್ರ ಮೈಗೆ ಹತ್ತುತ್ತದೆ’ ಎಂಬುದನ್ನು ಮರೆಯುತ್ತಾರೆ. ಕಾರಣ ಸ್ಪಷ್ಟ ಎಲ್ಲರೂ ಸುತ್ತಮುತ್ತ ನೋಡುತ್ತಿರುತ್ತಾರೆ. ಅಕ್ಕ ಪಕ್ಕದವರ ಮಕ್ಕಳನ್ನು ಗಮನಿಸಿರುತ್ತಾರೆ ಆ ಮಕ್ಕಳ ಪಾಲಕರನ್ನೆ ತಮ್ಮ ಆದರ್ಶವಾಗಿಸಿಕ್ಕೊಳ್ಳುತ್ತಾರೆ.
ಸಮೂಹ ಸನ್ನಿಗೆ ಉತ್ತರ ಯಾ ಪರಿಹಾರ ಕಷ್ಟ. ಈ ತನ್ಮಧ್ಯೆ ಒಂದಿಷ್ಟು ಮಂದಿ, ಕನ್ನಡದ ಬೆಳವಣಿಗೆ ಕುಗ್ಗುತ್ತದೆ ಎಂಬ ಆತಂಕದಲ್ಲಿ ಅಷ್ಟಿಷ್ಟು ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೆಲ್ಲಾ ವಾಸ್ತವದ ಒಂದು ಮಗ್ಗಲು ಮಾತ್ರ.
ಹಿಂದೆ, ಇಂಗ್ಲೀಷ್ ಕಲಿಕೆಯೆಂದರೆ ‘ಕೇವಲ ವ್ಯಾವಹಾರಿಕ ಇಂಗ್ಲೀಷ್’ ಆಗಿರಲಿಲ್ಲ. ಶೇಕ್ಸಫಿಯರ್, ಮಿಲ್ಟನ್, ವಡ್ರ್ಸ್‍ವಥ್, ಕೀಟ್ಸ್ ಇತ್ಯಾದಿ ಪ್ರತಿಭಾನ್ವಿತ ಸಾಹಿತಿಗಳ, ಕವಿಗಳ ಸಾಹಿತ್ಯವನ್ನು ಪಠ್ಯದಲ್ಲಿ ಅಳವಡಿಸುವ ಮುಖಾಂತರ, ಮಕ್ಕಳ ಭಾವಲೋಕವನ್ನು ಅರಳಿಸುವ ಪ್ರಯತ್ನ ಮಾಡುತ್ತಿದ್ದದು ನಿಜ. ಮಕ್ಕಳು ತರಗತಿಯಲ್ಲಿ ಮುಖವರಳಿಸಿಕೊಂಡು, ತನ್ಮಯತೆಯಿಂದ ಪಾಠಗಳನ್ನು ಕೇಳುತ್ತಿದ್ದರು. ಇಂಗ್ಲೀಷ್‍ನ ಸಮೃದ್ಧ ಸಾಹಿತ್ಯವನ್ನು ಅಭ್ಯಸಿಸುವ ಅನುಕೂಲತೆ ಅವರುಗಳಿಗೆ ದೊರಕುತ್ತಿತ್ತು. ಹಾಗಾಗಿ ಬಿ.ಎಂ.ಶ್ರೀಯವರ ‘ಇಂಗ್ಲೀಷ್ ಗೀತೆಗಳು’ ಕೂಡ ಹೊರ ಬಂತು. ಇಂಗ್ಲೀಷ್ ಭಾಷೆ ಬಾರದವರು ಕೂಡ, ಅದರ ಸಾಹಿತ್ಯದ ವೈವಿಧ್ಯತೆಯನ್ನು, ಸೌಂದರ್ಯವನ್ನು, ಚಿಂತನೆಗಳನ್ನು ಕನ್ನಡದಲ್ಲೇ ಆದರೂ ಓದಿ ಖುಷಿಪಟ್ಟದ್ದು ಸುಳ್ಳಲ್ಲ. ಆದರೆ ಇದು ಅವುಗಳ ಜಾಗೆಯಲ್ಲಿ ಜಾಗತಿಕ ಮಾರುಕಟ್ಟೆಗೆ ಅನುಕೂಲವೆಂಬ ಕಾರಣಕ್ಕೆ ಮಕ್ಕಳಿಗೆ ಇಂಗ್ಲೀಷ್ ಸಾಹಿತ್ಯದ ಅದರ ಸ್ವಾರಸ್ಯದ ಕುರಿತು ಏನನ್ನೂ ಹೆಚ್ಚಾಗಿ ತಿಳಿಸದೆ, ಕೇವಲ ಅದರ ವ್ಯವಾಹಾರಿಕ ಇಂಗ್ಲೀಷ್, ಇಂಗ್ಲೀಷ್ ಸಂವಹನ ಕಲೆ, ಕಾಲ್ ಸೆಂಟರ್‍ಗಳಲ್ಲಿ ಮಾತನಾಡುವ ಕಲೆ ಮತ್ತು ಇ.ಮೇಲ್‍ಗೆ ವಿಷಯ ಕಳಿಸುವ -ಸ್ವಿಕರಿಸುವ ಕಲೆಗಷ್ಟೇ ಸೀಮಿತಗೊಳಿಸುತ್ತಿದ್ದೇವೆ. ಅದಕ್ಕನುಗುಣವಾಗಿ ಪ್ರೈಮರಿಯಿಂದ ಯುನಿವರ್ಸಿಟಿ ಮಟ್ಟದವರೆಗೆ ಪಠ್ಯಗಳು ರಚಿತವಾಗುತ್ತಿವೆ. ಹೀಗಾಗಿಯೇ ವಿಶ್ವವಿದ್ಯಾನಿಲಯಗಳ ಪದವಿ ತರಗತಿಗಳಿಗೆ ಕೂಡ ‘Work Book’ ಬಂತು ತರಗತಿಗಳಲ್ಲಿ ಬಹುತೇಕ ವೇಳೆ ಇದಕ್ಕೆ ಮೀಸಲಾಯಿತು ಮಕ್ಕಳು ಆಕಳಿಸುತ್ತಲೇ, ವ್ಯಾಕರಣ, ಸಂವಹನ, ಕಲೆ, ಕಲಿಯುತ್ತ ಸಾಗುವಂತಾಯಿತೆ ವಿನಃ ಮನಸ್ಸುಗಳು ಅರಳಲಿಲ್ಲ, ಮೆದುಳುಗಳು ಬೆಳೆದಿರಬಹುದು.
ಭಾಷೆ ತಿಳಿದಿರುವುದು ಬೇರೆ ಭಾಷೆಯ ಕುರಿತು ತಿಳಿದಿರುವುದು ಬೇರೆ. ನಮ್ಮ ಇಂದಿನ ಒತ್ತು ಇರುವುದು ಭಾಷೆಯ ಕುರಿತಾದ ಕಲಿಕೆಯ ಕುರಿತು. ಹೀಗಾದಾಗ ಇಂಗ್ಲೀಷ್ ಭಾಷೆ ಕೂಡ ಸಮೃದ್ದವಾಗಿ ಬೆಳೆಯುವುದು ಅಸಾಧ್ಯ ಅರಳುವುದು ಅಸಾಧ್ಯ ಸಾಹಿತ್ಯ ಕೂಡ ಸಮೃದ್ದವಾಗಿ ಹೊರಬರುವುದು ಅಸಾಧ್ಯ ಒಂದು ಭಾಷೆ ಸಹಜವಾಗಿ ಬರುವುದು ಅದು ವಾತವರಣದಲ್ಲಿ ಸಹಜವಾಗಿ ಹರಡಿಕೊಂಡ್ಡಿದಾಗಲೆ ವಿನಃ ಹೇರಿದಾಗಲ್ಲಲ್ಲ. ಗೊತ್ತಿರಬೇಕಾದ ಸತ್ಯವೆಂದರೆ ಯಾವುದೇ ವ್ಯಾಕರಣ ಪುಸ್ತಕ ಅಥವಾ ನಿಘಂಟು, ಸಾಹಿತ್ಯ ಕೃತಿಯಲ್ಲಿ, ಸಾಹಿತ್ಯ ಕೃತಿ ನಿಘಂಟಿನ ಶಬ್ದಗಳನ್ನು ಬಳಸಿಕೊಳ್ಳಬಹುದು ವ್ಯಾಕರಣದ ನಿಯಮಗಳನ್ನು ಅನುಸರಿಸಿರಬಹುದು. ಅದು ಅನಿವಾರ್ಯ ಅಗತ್ಯ, ಹಾಗಂತ ಕೇವಲ ಶಬ್ದಗಳ ಸಂಗ್ರಹ ಮತ್ತು ವ್ಯಾಕರಣದ ನಿಯಮಗಳನ್ನೂ ನೋಡುವುದರಿಂದ ಯಾವುದೇ ಮನಸ್ಸುಗಳು ಅರಳುವುದಿಲ್ಲ. ಅರಳದ ಮನಸ್ಸುಗಳು ಕ್ರಿಯಾಶೀಲವಾಗುವುದು ಕಷ್ಟ. ಸೃಜನಶೀಲ ಪ್ರತಿಭೆಗಳು ಮೇಲೆದ್ದು ಬರುವುದು ಕಷ್ಟ. ಹೀಗಾಗಿ ಈ ಜಾಗತೀಕರಣದ ವ್ಯಾಪಾರಿ ವ್ಯವಸ್ಥೆಗೆ ಅನುಗುಣವಾಗಿ ಸಿದ್ಧವಾದ ಇಂಗ್ಲೀಷ್ ನಿಜವಾಗಿಯು ನಿಜವಾದ ಇಂಗ್ಲೀಷ್‍ನ ಬೆಳವಣಿಗೆಗೆ ಅನುಕೂಲಕರವಾಗಿ ಒದಗಿಬರದು. ಇಂತಹ ಇಂಗ್ಲೀಷ್ ಕಲಿಕೆಯಿಂದ ಕನ್ನಡ ಭಾಷೆಗೆ ಮಾತ್ರ ತೊಂದರೆಯಲ್ಲ. ಇಂಗ್ಲೀಷ್ ಭಾಷೆಗೂ ಅದರ ಸಮೃದ್ದ ಸಾಹಿತ್ಯಕ್ಕೂ ಒದಗಿಬಾರದೆ, ಕೇವಲ ವ್ಯಾಪಾರಿ ಭಾಷೆಯಾಗಿ ತಾಂತ್ರಿಕ ಕಸರತ್ತಾಗಿ ನಿಂತು ಬಿಡುವ ಅಪಾಯವಿದೆ.
ಇಂಗ್ಲೀಷ್‍ನ ಪ್ರಸಿದ್ಧ ನಿಸರ್ಗ ಕವಿ ವರ್ಡ್‍ವಥ್‍ನ ಜನಪ್ರಿಯ ಕವಿತೆ ‘ಡ್ಯಾಪೋಡಿಲ್ಸ್’,ಅದರಲ್ಲಿ ಆತ ಹೇಳುತ್ತಾನೆ ‘ತಾನು ದುಗುಡದಲ್ಲಿ, ಏಕಾಂಗಿಯಾಗಿ, ಇದ್ದಾಗ ತನ್ನದೆಯಲ್ಲಿ ಆ ಡ್ಯಾಪೋಡಿಲ್ಸ್ ಹೂವುಗಳು ನರ್ತಿಸುತ್ತವೆ’ ಎಂದು. ಹೀಗೆ ಹೃದಯಕ್ಕೆ ಸಾಂತ್ವನ ಹೇಳುವ, ಸಂತಸ ನೀಡುವ, ಸಾಹಿತ್ಯದ ಸುಂದರ ಹೂವುಗಳ ನರ್ತನ ಸದಾ ನಮ್ಮೆದೆಯೂಳಗೆ ಇರಬೇಕೆಂದರೆ, ನಾವು ಭಾಷಾ ಕಲಿಕೆಯ ಕುರಿತು ಹೆಚ್ಚು ಜಾಗೃತರಾಗಿರಬೇಕು.
ರವೀಂದ್ರ ಭಟ್ ಕುಳಿಬೀಡು