Home Education ಗುಟ್ಟಿನೊಳಗೆ ಗುಮಾನಿಗಳು

ಗುಟ್ಟಿನೊಳಗೆ ಗುಮಾನಿಗಳು

0

ಹಿಂದೆ ಗುರುಕುಲ ಪದ್ದತಿಯಿದ್ದಾಗಲೂ ಪರೀಕ್ಷೆಗಳಿದ್ದವು. ಉತ್ತೀರ್ಣ – ಅನುತ್ತೀರ್ಣ ಎಂಬುದು ಇತ್ತು. ಪರೀಕ್ಷೆ ಎಂಬ ನಿಕಶವಿರದೆ ವ್ಯಕ್ತಿಯ ಸಾಮಥ್ರ್ಯವನ್ನು ಅಳೆಯುವುದು ಅಸಾಧ್ಯ. ಒಬ್ಬರಿಂದ ಇನ್ನೊಬ್ಬರು ಹೆಚ್ಚು – ಕಡಿಮೆ ಎಂಬ ತೀರ್ಮಾನಕ್ಕೆ ಬರಲು ಪರೀಕ್ಷೆ ಎಂಬ ವ್ಯವಸ್ಥೆ ಅಗತ್ಯ. ಆದರೆ ಗುರುಕುಲ ಮಾದರಿಯಲ್ಲಿ ವಿದ್ಯಾರ್ಥಿಯ ಸಾಮಥ್ರ್ಯದ ಪರೀಕ್ಷೆ ಗುರು – ಹಿರಿಯರ ಮತ್ತು ಸಹಪಾಠಿಗಳ ಸಮ್ಮುಖದಲ್ಲೇ ಜರುಗುತ್ತಿತ್ತು. ಎಲ್ಲ ತೆರೆದಿಟ್ಟ ಪುಸ್ತಕದಂತೆ ಯಾರೂ ಬೇಕಾದರೂ ನೋಡಬಹುದಿತ್ತು, ಕೇಳಬಹುದಿತ್ತು. ಹಾಗಾಗಿ ಅಲ್ಲಿ ನಕಲು ಮಾಡಲಾಗಲೀ, ಅಂಕಗಳನ್ನು ತಿದ್ದಲಾಗಲೀ ಸಾಧ್ಯವಿರಲಿಲ್ಲ. ಹಾಗೇ ಸಿದ್ದ ಪ್ರಶ್ನೆ ಪತ್ರಿಕೆಗಳು ಬಯಲಾಗುವ ಭಯವಿರಲಿಲ್ಲ, ಬೇರೆ ಉತ್ತರ ಪತ್ರಿಕೆಗಳನ್ನು ಜೋಡಿಸುವ ವಾಮ ಮಾರ್ಗಕ್ಕೆ ಆಸ್ಪದವಿರಲಿಲ್ಲ. ಆದ್ದರಿಂದ ವ್ಯಕ್ತಿಯ ಸಾಮಥ್ರ್ಯದ ಕುರಿತು – ಪರೀಕ್ಷಾನಂತರ ಅಪಸ್ವರಗಳೂ ಹುಟ್ಟಲು ಕಷ್ಟವಾಗಿತ್ತು.
ಆದರೆ ಕಲಿಕಾ ಪದ್ಧತಿ ಬದಲಾದಂತೆ – ಪರೀಕ್ಷಾ ಪದ್ಧತಿಗಳೂ ಬದಲಾಗುತ್ತಾ ಬಂತು. ಈಗಂತೂ ಪಬ್ಲಿಕ್ ಪರೀಕ್ಷೆಗಳೂ ಪ್ರಶ್ನೆ ಪತ್ರಿಕೆಗಳು ಒಂದೆಡೆ ಸಿದ್ದವಾಗಿ, ಹಲವು ಕಡೆ ರವಾನೆಯಾಗಿ, ಹಲವು ಕೇಂದ್ರಗಳಲ್ಲಿ ಕುಳಿತ ವಿದ್ಯಾರ್ಥಿಗಳು – ಅವುಗಳಿಗೆ ಉತ್ತರಿಸಿ- ಅನಂತರ ಅವುಗಳು ಸೀಲಾಗಿ – ಕೋಡಿಂಗ್ ಮತ್ತು ಡಿಕೋಡಿಂಗ್ ಎಲ್ಲ ನಡೆಯುವ ಹೊತ್ತಿಗೆ ಏನೇನಾಗಿರುತ್ತದೋ ಹೇಳಲಾಗುವುದಿಲ್ಲ. ಒಂದಡೆ ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗೆ ಮುನ್ನವೇ ಬಹಿರಂಗಗೊಳ್ಳುವುದು – ಇನ್ನೊಂದಡೆ ಉತ್ತರ ಪತ್ರಿಕೆಗಳನ್ನೆ ಬದಲಿಸಿ ಬಿಡುವುದು. ಒಟ್ಟಾರೆ ಅಂಕಗಳಿಸುವುದಕ್ಕೆ ಅನೇಕ ಅಡ್ಡದಾರಿಗಳು, ಅವುಗಳಿಗೆ ಅನೇಕ ಹಸ್ತಗಳ ಸಹಕಾರ, ಅದಕ್ಕೆ ತಕ್ಕಂತೆ ಹಣಮಾಡಿಕೊಳ್ಳುವ ವ್ಯವಸ್ಥಿತ ಸಂಚು. ಇದನ್ನೆಲ್ಲ ಗಮನಿಸಿದರೆ ಸದ್ಯ ಪರೀಕ್ಷೆಗಳೂ ಕೇವಲ ಪ್ರಹಸನಗಳಾಗುತ್ತಿವೆ. ಪ್ರಾಮಾಣಿಕವಾಗಿ ಪಾಠ ಮಾಡಿದ ಪ್ರಾಧ್ಯಾಪಕರಿಗೂ – ಪ್ರಯತ್ನಶೀಲರಾದ ವಿದ್ಯಾರ್ಥಿಗಳಿಗೂ ಆತಂಕ ಮೂಡುತ್ತಿದೆ. ವರ್ಷವಿಡೀ ಕಲಿತದ್ದನ್ನು ನೆನಪಿನಲ್ಲಿಟ್ಟುಕೊಂಡು ಕೊಟ್ಟ ಮೂರು ಘಂಟೆಯ ಅವಧಿಯೊಳಗೆ – ಪ್ರಶ್ನೆ ಪತ್ರಿಕೆಗಳಲ್ಲಿನ ಪ್ರಶ್ನೆಗಳಿಗೆ ಉತ್ತರಿಸುವುದು ಸಾಮಾನ್ಯವಾದ ಸಂಗತಿಯೇನಲ್ಲ! ಹೀಗೆ ಉತ್ತರಿಸಲು ಸಿದ್ದರಾಗಿ – ತಮ್ಮ ಸಾಮಥ್ರ್ಯಕ್ಕನುಗುಣವಾಗಿ ಅಂಕಗಳನ್ನು ಪಡೆಯಲು ಉತ್ಸುಕರಾದ ವಿದ್ಯಾರ್ಥಿಗಳಿಗೆ – ಇತ್ತೀಚಿನ ವಿದ್ಯಾಮಾನಗಳು ಗಾಬರಿಯ ಜೊತೆಗೇ ಜಿಗುಪ್ಸೆಯನ್ನು ಹುಟ್ಟಿಸುತ್ತಿದೆ. ಬಹುಶಃ ಗುಟ್ಟಿನಲ್ಲಿ ಪ್ರಶ್ನೆ ತಯಾರಿಸುವ – ಗುಟ್ಟಾಗಿ ಬರೆಯುವ (ಬರೆಯುವಾಗ ಯಾರೂ ನೋಡುತ್ತಾ ಕೂತಿರುವುದಿಲ್ಲ) – ಗುಟ್ಟಾಗಿಯೇ ಅವುಗಳನ್ನು ಮೌಲ್ಯಮಾಪನ ಮಾಡುವ – ಒಟ್ಟಾರೆ ಗುಟ್ಟಿನ ವ್ಯವಹಾರವೇ ಇಂದಿನ ಸ್ಥಿತಿಗೆ ಕಾರಣವಾಗಿರಬಹುದೇನೋ ಎಂಬ ಅನುಮಾನ. ಯಾಕೆಂದರೆ ಇರಬಹುದಾದ ಗುಟ್ಟನ್ನು ಮೊದಲೇ ಅರಿತು ಉತ್ತರಿಸುವ ಅಥವಾ ಗುಟ್ಟಲ್ಲೇ ಬೇರೆಯದನ್ನು ಸೇರಿಸಬಹುದಾದ ಸಾಧ್ಯತೆಗಳಿದ್ದಾಗ ಅವುಗಳ ಸಾಧ್ಯತೆಯನ್ನು ಸಂಬಂಧಪಟ್ಟವರು ಸೂಕ್ತವಾಗಿ ಬಳಸಿಕೊಂಡು – ಸಿರಿವಂತರಾಗುವುದು ಒಂದೆಡೆ – ಇನ್ನೊಂದೆಡೆ ಇವುಗಳ ಪ್ರಯೋಜನಕ್ಕೆ ಪ್ರಯತ್ನಿಸುತ್ತಾ – ಕಷ್ಟಪಟ್ಟು ಓದುವುದನ್ನೇ ಬಿಟ್ಟು ಹೇಗಾದರೂ ಸರಿ – ಕೈಯಲ್ಲೊಂದು ಅಂಕಪಟ್ಟಿ – ಸರ್ಟಿಫಿಕೇಟ್ ಇದ್ದರೆ ಯಾರನ್ನಾದರೂ ಹಿಡಿದು – ಹೇಗಾದರೂ ನೌಕರಿಗಿಟ್ಟಿಸಿಕೊಳ್ಳಬಹುದೆಂದು ನಂಬಿ ಬದುಕುವುದು. ಯಾವಲ್ಲಿ ಹೆಚ್ಚು ಹೆಚ್ಚು ಗೌಪ್ಯತೆ ಕಾಪಾಡಲು ಪ್ರಯತ್ನಗಳು ನಡೆಯುತ್ತವೋ ಅಲ್ಲಲ್ಲಿ ಹೆಚ್ಚು ಹೆಚ್ಚು ಅವುಗಳನ್ನು ಒಡೆಯುವ ಪ್ರಯತ್ನಗಳು ಜರುಗುತ್ತವೆ. ಎಲ್ಲ ಗುಟ್ಟಾಗಿ ನಡೆದರೆ ಎಡವಟ್ಟಾಗುವುದಿಲ್ಲ. ಎಂಬ ಹುಸಿ ಭರವಸೆ. ಆದರೆ ಅವರ ಗುಟ್ಟು ರಟ್ಟಾಗಿ – ಎಲ್ಲ ಬಹಿರಂಗಗೊಳ್ಳುತ್ತಿರುವಾಗ – ಅಸಲಿ ಮತ್ತು ನಕಲಿ ಎಂಬುದರ ನಡುವಿನ ವ್ಯತ್ಯಾಸ ಗುರುತಿಸುವುದೇ ಹರಸಾಹಸದ ಕೆಲಸ.
ಹಿಂದಿನ ಹಾಗೆ “ಗುರುಕುಲ” ಪದ್ಧತಿಗೆ ಮರಳುವುದು ಇಂದು ಸಾಧ್ಯವಿಲ್ಲ. ಇಂದಿನ ವ್ಯವಸ್ಥೆಗೆ ಹೊಂದಿಕೊಂಡಾಗಿದೆ. ಪರೀಕ್ಷೆ ಎನ್ನುವುದು ಪವಿತ್ರವಾದ ಕಾರ್ಯ. ಅದರಲ್ಲಿ ಭಾಗಿಗಳಾಗುವವರೆಲ್ಲ – ವಿದ್ಯಾರ್ಥಿಗಳನ್ನೂ ಒಳಗೊಂಡಂತೆ – ಪ್ರಾಮಾಣಿಕವಾಗಿ ನಡೆದುಕೊಂಡರೆ ಅದರ ಪಾವಿತ್ರ್ಯತೆಗೆ ಧಕ್ಕೆ ಬಾರಲು ಸಾಧ್ಯವೇ ಇಲ್ಲ. ಆದರೆ ಕೆಲವೇ ಕೆಲವು ಕುತ್ಸಿತ ಮನಸ್ಸುಗಳ ಧನದಾಹ – ಪ್ರಯತ್ನ ಪಡದೇ ಅಂಕಗಳಿಸಬೇಕೆಂಬ ವಿದ್ಯಾರ್ಥಿಗಳ – ಕುಟಿಲೋಪಾಯ – ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹಂತಕ್ಕೆ ಒಯ್ಯುತ್ತಿದೆ. ಪಾರದರ್ಶಕತೆ ಪ್ರಾಪ್ತವಾಗದೆ ಹೋದಲ್ಲಿ ಇದು ಹೀಗೆ ಮುಂದುವರಿಯುತ್ತ ಹೋದರೆ – ಒಂದಲ್ಲ ಒಂದು ದಿನ ಯಾವುದೇ ಅಂಕಪಟ್ಟಿಗಾಗಲಿ ಸರ್ಟಿಫಿಕೇಟ್ ಗಾಗಲೀ ಕವಡೆ ಕಿಮ್ಮತ್ತಿರುವುದಿಲ್ಲ. ಎಲ್ಲರನ್ನು ಅನುಮಾನದಿಂದಲೇ ನೋಡುವಂತಾಗುತ್ತದೆ.
ಪ್ರಶ್ನೆ ಪತ್ರಿಕೆಗಳ ಬಹಿರಂಗದ ಹಿಂದಿನ ಷಡ್ಯಂತ್ರವನ್ನು ಹಾಗೇ ಉತ್ತರ ಪತ್ರಿಕೆಗಳನ್ನು ಬದಲಿಸಿ – ಸೇರಿಸಿ ಮಾಡುವ ಸಂಚನ್ನು ಭೇದಿಸಿದವರಿಗೆ ನಿಜಕ್ಕೂ ಶಹಬ್ಬಾಸ್ ಎನ್ನಲೇಬೇಕು. ಇದು ಇಷ್ಟಕ್ಕೇ ಸೀಮಿತವಾಗದೆ ಸಂಬಂಧಪಟ್ಟವರೆಲ್ಲ ಶಿಕ್ಷೆಗೆ ಒಳಪಡಬೇಕು. ಯಾಕೆಂದರೆ ಇವರೆಲ್ಲ ಪ್ರಾಮಾಣಿಕ ವಿದ್ಯಾರ್ಥಿಗಳ ಬದುಕಿನೊಡನೆ ಚಲ್ಲಾಟವಾಡಿದವರು. ಅವರ ಕನಸುಗಳನ್ನು ಕಮರಿಸಿದ ಪಾಪಿಗಳು. ತಮ್ಮ ಸ್ವಾರ್ಥಕ್ಕೋಸ್ಕರ ಪ್ರಾಮಾಣಿಕರಿಗೆ ಅನ್ಯಾಯವೆಸಗಿದ ರಾಕ್ಷಸರು. ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಕರಣಗಳ ತನಿಖೆಯಾಗಿ ತಪ್ಪಿತಸ್ಥರು ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಾದದ್ದು ಇಂದಿನ ಅಗತ್ಯ.
ಇಂದು ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳೂ ಒಂದಲ್ಲ ಒಂದು ಹಗರಣಗಳಲ್ಲಿ ಭಾಗಿಯಾಗಿ (ಗೊತ್ತಿದ್ದೋ – ಇಲ್ಲದೆಯೋ) ಇಡೀ ಶಿಕ್ಷಣ ವ್ಯವಸ್ಥೆಗೇ ಕಳಂಕವಾಗುತ್ತಿವೆ. ಪ್ರತಿಭಾವಂತ -ಪ್ರಾಮಾಣಿಕ ಶಿಕ್ಷಕವೃಂದಕ್ಕೆ ಆಘಾತವಾಗುತ್ತಿದೆ ಹಾಗೇ ಪ್ರತಿಭಾವಂತ – ಪ್ರಯತ್ನಶೀಲ ವಿದ್ಯಾರ್ಥಿವೃಂದಕ್ಕೆ ಅನ್ಯಾಯವಾಗುತ್ತಿದೆ. ಬಹುಶಃ ಪ್ರಾಮಾಣಿಕತೆಯ ಕೊರತೆ ಮತ್ತು ದಿಢೀರನೆ ಶ್ರೀಮಂತರಾಗುವ ಕನಸು ಕೂಡಿ – ಕೆಡುಕನ್ನು ಹುಟ್ಟುಹಾಕುತ್ತಿವೆ. ರಹಸ್ಯ ಎಂಬುದೇ ಇವರ ಪಾಲಿಗೆ ವರವಾದಂತಿದೆ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಈ ರೀತಿಯಾದರೆ – ಪರೀಕ್ಷೆಗಳಲ್ಲಿ ನೀಡುವ ಆಂತರಿಕ ಅಂಕಗಳಿಗೆ ಸಂಬಂಧಿಸಿದಂತೆ ಕೂಡ ಕೆಲವಡೆ ಗುಟ್ಟುಗಳು ನಡೆಯುತ್ತಿರುತ್ತವೆ. ಶಿಕ್ಷಕರು ತಮಗೆ ಬೇಕಾದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿದ್ಯಾರ್ಥಿನಿಯರಿಗೆ ಅಧಿಕ ಅಂಕ ನೀಡುತ್ತಾರೆ ಎಂಬ ಆರೋಪ ಸಾಮಾನ್ಯವಾಗಿ ಎಲ್ಲಡೆ ಕೇಳಿಬರುತ್ತಿದೆ. ಪ್ರತಿಭಟಿಸಿದರೆ – ಪ್ರಶ್ನಿಸಿದರೆ ತಮ್ಮಗೆಲ್ಲಿ ಅನ್ಯಾಯವಾಗುವುದೋ ಎಂದು ಹೆದರಿ ಕುಳಿತ ವಿದ್ಯಾರ್ಥಿಗಳು ಒಂದೆಡೆಯಾದರೆ – ನಮಗೇಕೆ ಇನ್ನೊಬ್ಬರ ಉಸಾಬರಿ? ಎಂದು ನಿಷ್ಕ್ರಿಯವಾಗಿರುವ ಸಜ್ಜನ ಶಿಕ್ಷಕ ಸಮುದಾಯ ಇನ್ನೂಂದೆಡೆ. ಇದರ ಗರಿಷ್ಟ ಲಾಭ ಪಡೆಯುವವರು – ಮತ್ತದೇ ನೀತಿಗೆಟ್ಟ ಶಿಕ್ಷಕರು ಮತ್ತು ಲಜ್ಜೆಗೆಟ್ಟ ವಿದ್ಯಾರ್ಥಿಗಳು ಇಂತಹ ವ್ಯವಸ್ಥೆ ಕೂಡ ಅಗತ್ಯವಾಗಿ ಬದಲಾಗಬೇಕೆಂದರೆ – ಆಂತರಿಕ ಮೌಲ್ಯಮಾಪನ ಪಾರದರ್ಶಕವಾಗಿ ಸಂಸ್ಥೆಯ ಎಲ್ಲರೆದುರಿಗೆ ನಡೆಯಬೇಕು. ಆಗ ಕನಿಷ್ಟ ಭಯವಿರಲು ಸಾಧ್ಯ. ಭಂಡಗೆಟ್ಟವರ ಮಾತು ಬೇರೆ.
ಇನ್ನು ಶಿಕ್ಷಣ ಸಂಸ್ಥೆಗಳಲ್ಲಿ ಜರುಗುತ್ತಿರುವ ಲೈಂಗಿಕ ದೌರ್ಜನ್ಯಕ್ಕೂ ಕೂಡ – ಇಂಥ ಗುಟ್ಟಿನ ವ್ಯವಹಾರಗಳೇ ಮೂಲಕಾರಣವಾಗಿರುತ್ತದೆ. ತಮಗಿಷ್ಟವಾದವರನ್ನು ಮಾತ್ರ – ತರಗತಿಯ ಹೊರಗೆ – ತರಗತಿಗಳೆಲ್ಲ ಮುಗಿದ ಬಳಿಕವೂ – ತಮ್ಮ ಕೊಠಡಿಗೆ ಕರೆಸಿಕೊಂಡು ಹೆಚ್ಚುವರಿ ಪಾಠ ಹೇಳುತ್ತೇವೆ – ತಮ್ಮ ಅಗಾಧ ಜ್ಞಾನ ಸಂಪತ್ತನ್ನು ಧಾರೆಯೆರೆಯುತ್ತೇವೆ ಎಂದು ನಂಬಿಸಿ – ಮೋಸ ಮಾಡುವವರ ಕುರಿತು ಎಚ್ಚರವಿರಬೇಕಾದ ಅಗತ್ಯವಿದೆ. ಸಂಸ್ಥೆಗಳ ಮುಖ್ಯಸ್ಥರು ಮತ್ತು ಇತರೆ ಸಿಬ್ಬಂದಿ ಇಂಥ ವಿಶೇಷ ಮುತುವರ್ಜಿ ತೋರುವವರನ್ನು ಒಂದಿಷ್ಟು ಅನುಮಾನದಿಂದ ಮತ್ತು ಹದ್ದಿನ ಕಣ್ಣಿನಿಂದ ಗಮನಿಸುತ್ತಿದ್ದರೆ ಪರಿಸ್ಥಿತಿ ಸರಿಯಾಗಿರುವ ಸಾಧ್ಯತೆಯಿದೆ. ಗುಟ್ಟಿನಲ್ಲಿ ಕೆಲವರಿಗಷ್ಟೇ ಕಲಿಸುವುದು – ಗುಟ್ಟಿನಲ್ಲಿ ಅಂಕ ನೀಡುವುದು – ಅವರನ್ನಷ್ಟೇ ಮೊದಲಿಗರನ್ನಾಗಿಸುವುದು ಕೂಡ ಶಿಕ್ಷಣದ ವ್ಯಭಿಚಾರವಲ್ಲದೆ ಮತ್ತೇನೂ ಅಲ್ಲ. ಪ್ರಶ್ನೆ ಪತ್ರಿಕೆಗಳ ಮಾರಾಟ ಮತ್ತು ಉತ್ತರ ಪತ್ರಿಕೆಗಳನ್ನು ತಿದ್ದುವ – ಮತ್ತೆಲೋ ಸರಿ ಉತ್ತರ ಬರೆದು ಸೇರಿಸುವ – ಅಂಕಗಳನ್ನು ತಿದ್ದುವ – ನಕಲಿ ಅಂಕಪಟ್ಟಿ ನೀಡುವ – ವಿಷವರ್ತುಲ ಎಷ್ಟೇ ಗುಟ್ಟಾಗಿ ಕಾರ್ಯಾಚರಣೆ ಮಾಡಿದರೂ ಒಂದಿಲ್ಲೊಂದು ದಿನ ಸತ್ಯ ಹೊರಬರುತ್ತದೆ, ತಪ್ಪಿತಸ್ಥರು ಸಿಕ್ಕಿ ಹಾಕಿಕೊಳ್ಳುತ್ತಾರೆ ಎಂಬುದೇ ಸದ್ಯದ ಸಮಾಧಾನ. ಗುಟ್ಟಿನಲ್ಲಿ ಗಂಟುಮಾಡಿಕೊಳ್ಳುವ – ಗುಟ್ಟಿನಲ್ಲಿ ಲಾಭ ಗಳಿಸಿಕೊಳ್ಳುವ – ಗುಟ್ಟಿನಲ್ಲಿ ತಮ್ಮ ತೀಟೆ ತೀರಿಸಿಕೊಳ್ಳುವವರೆಲ್ಲ ತಿಳಿದಿರಬೇಕಾದ ಗಾದೆ – ‘ನೀರಿನ ಎಷ್ಟೇ ಆಳದಲ್ಲಿ ಗುಟ್ಟಾಗಿ ಮಲವಿಸರ್ಜನೆ ಮಾಡಿದರೂ ಅವರ ಮಲ ಮಾತ್ರ ಮೇಲೆ ಬಂದೇ ಬರುತ್ತದೆ’ (ಗಾದೆಯಲ್ಲಿನ ಶಬ್ದಗಳನ್ನಿಲ್ಲಿ ಆದಷ್ಟು ಸುಸಂಸ್ಕ್ರತಗೊಳಿಸಿದೆ) ಗುಟ್ಟಾಗಿ ತಿಂದು ಬೇಗುವವರಿಂದ ಗಂಧ ನಿರೀಕ್ಷಿಸುವುದು ನ್ಯಾಯವಲ್ಲ.
ರವೀಂದ್ರ ಭಟ್ ಕುಳಿಬೀಡು.