ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಬಹಳ ಕಡಿಮೆ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ಲಭ್ಯವಾಗಬೇಕು. ನಮ್ಮದು ಶೈಕ್ಷಣಿಕವಾಗಿ ಮುಂದುವರಿದ ದೇಶವಾಗಬೇಕು. ಇದು ಸಾಧ್ಯವಾಗಬೇಕಾದರೆ ದೇಶದ ಉದ್ದಗಲಗಳಲ್ಲಿ ಕಾಲೇಜುಗಳ ಸಂಖ್ಯೆ ಹೆಚ್ಚಾಗಬೇಕು. ಅದಕ್ಕನುಗುಣವಾಗಿ ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಬೇಕು.
ಅಷ್ಟೇ ಅಲ್ಲದೇ ಗ್ರಾಮೀಣ ಪ್ರದೇಶದಲ್ಲೂ ಅವುಗಳ ಸ್ಥಾಪನೆಯಾಗಬೇಕು. ಕೇವಲ ಪದವಿಗಳದ್ದೆ ಅಲ್ಲದೇ ಸ್ನಾತಕೋತ್ತರ ಶಿಕ್ಷಣ ಕೂಡ ಎಷ್ಟು ಸಾಧ್ಯವೋ ಅಷ್ಟು ಹತ್ತಿರದಲ್ಲಿ ವಿದ್ಯಾರ್ಥಿಗಳಿಗೆ ದೊರಕುವಂತಾಗಬೇಕು. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಪೇಚಾಡುವಂತಾಗಬಾರದು. ಹೌದು ಆದರೆ ಅದಕ್ಕನುಗುಣವಾಗಿ ವ್ಯವಸ್ಥೆ ರೂಪುಗೊಳ್ಳುತ್ತಿದೆಯೇ ಎಂದು ನೋಡಿದಾಗ ನಿರಾಸೆಯಾಗುತ್ತದೆ.
ಮೂರು ವರ್ಷಗಳ ಪದವಿ ಹೀಗೆ ವಿದ್ಯಾರ್ಥಿಗಳ ಅಮೂಲ್ಯವಾದ ವಯಸ್ಸು ಮತ್ತು ಶಕ್ತಿಯನ್ನು ವ್ಯಯಿಸಿ ಪಡೆದ ಪದವಿಗಳಿಂದ ಸುಲಭವಾಗಿ ಉದ್ಯೋಗ ಪ್ರಾಪ್ತವಾಗುತ್ತದೆಯೇ? ಸರಕಾರ ಇತ್ತೀಚೆಗೆ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮತ್ತು ಶಾಲಾ ಶಿಕ್ಷಕರ ನೇಮಕಕ್ಕೆ ಏರ್ಪಡಿಸಿದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಗುಜಾರಾಯಿಸಿದವರ ಸಂಖ್ಯೆಯನ್ನು ನೋಡಿದರೆ ಭಯವಾಗುತ್ತದೆ. ಒಂದು ಸಾವಿರ ಉದ್ಯೋಗಕ್ಕೆ ಒಂದು ಲಕ್ಷಕ್ಕಿಂತ ಅಧಿಕ ಆಕಾಂಕ್ಷೆಗಳು ಕೊನೆಗೆ ತೊಂಭತ್ತೊಂಭತ್ತು ಸಾವಿರಕ್ಕಿಂತ ಅಧಿಕ ಮಂದಿ ಹಾಗೆಯೇ ಉಳಿದಿರುತ್ತಾರೆ. ಮುಂದಿನ ನೇಮಕಾತಿ ದಿನಗಳಿಗೆ ಕಾಯುತ್ತಿರುತ್ತಾರೆ. ಅಲ್ಲಿಯವರೆಗೆ ಸಿಕ್ಕ-ಸಿಕ್ಕ ಉದ್ಯೋಗಗಳಿಗೆ ಸಾಧ್ಯವಾದರೆ ಒಗ್ಗಿಕೊಳ್ಳುತ್ತಾರೆ. ಅಂದರೆ ಪಡೆವ ಪದವಿಗಳಿಗೆ ಉದ್ಯೋಗದ ಗ್ಯಾರಂಟಿ ಇಲ್ಲ. ಕೇವಲ ವಯಸ್ಸನ್ನು ವ್ಯರ್ಥಗೊಳಿಸುವ ಕಸರತ್ತಾಗುತ್ತಿದೆ ಅದಕ್ಕೆ ಬದಲಾಗಿ ಉದ್ಯೋಗ ಖಾತ್ರಿ ಶಿಕ್ಷಣ ವ್ಯವಸ್ಥೆ ಜಾರಿಯಾಗುತ್ತ ಸಾಗಿದರೆ ಓದಿದವರೂ ತಮ್ಮ ಓದಿಗೆ ಒಂದು ಬೆಲೆಯಿದೆ ಎಂದು ಶ್ರದ್ಧೆಯಿಂದ ಓದಬಹುದು ಮತ್ತು ಅದರಿಂದ ಅವರ ಬದುಕಿಗೊಂದು ನಿರ್ದಿಷ್ಟ ನೆಲೆ ಪ್ರಾಪ್ತವಾಗಬಹುದು.
ಇಂದಿನ ಪದವಿಗಳೆಂದರೆ – ಉಳಿದ ಎಲ್ಲೂ ಜಾಗೆ ಸಿಗದ ವಿದ್ಯಾರ್ಥಿಗಳ ಕೊನೆಯ ಆಸರೆಯಾಗಿದ್ದು – ಭ್ರಮನಿರಸನ ಹೊಂದಿದ – ಒಟ್ಟಾರೆ ಕಾಟಾಚಾರಕ್ಕೆ ಕಾಲೇಜಿಗೆ ಬರುವವರ ಸಂಖ್ಯೆಯೇ ಅಧಿಕ. ಪಿಯುಸಿ ಆದ ಅನಂತರ ಕಲಾ ವಿಭಾಗದವರಿಗೆ ಬಿ.ಎ ಸೇರಲು ಒಂದು ಕಾಲೇಜು ಬೇಕು. ವಾಣಿಜ್ಯ ವಿಭಾಗದವರಿಗೆ – ಬಿ.ಕಾಂ. – ಬಿ.ಬಿ.ಎಂ. ಹೀಗೆ ಬೇಕು. ತಾಂತ್ರಿಕ ಶಿಕ್ಷಣ ಅಥವಾ ಇನ್ನಿತರ ಕಡೆ ಜಾಗೆ ಸಿಗದವರು ಅನಿವಾರ್ಯವಾಗಿ ಬಿ.ಎಸ್ಸಿ ಸೇರುವುದೇ ಹೆಚ್ಚು. ಆಸಕ್ತಿಯಿಂದ ಸೇರುವವರ ಸಂಖ್ಯೆ ಅತಿ ಕಡಿಮೆ. ಮತ್ತೆ ಇವರೇ ಬಿ.ಎಡ್, ಎಂ.ಎಸ್ಸಿ ಮಾಡಿ ಪಾಠ ಹೇಳಲು ಜಾಗೆ ದೊರಕುವುದೋ ನೋಡುತ್ತಾರೆ. ಹೀಗಾಗಿ ಉತ್ತಮ ಅಂಕಗಳಿಸಿದವರೆಲ್ಲ ಬೇರೆಡೆ ಹೋದರೆ – ಸಾಮಾನ್ಯ ಪದವಿಗಳಿಗೆ ಕೇವಲ ಸಾಮಾನ್ಯ ವಿದ್ಯಾರ್ಥಿಗಳಷ್ಟೇ ಉಳಿದುಕೊಂಡು – ಭವಿಷ್ಯ ರೂಪಿಸಿಕೊಳ್ಳಲು ಹೆಣಗಾಡುತ್ತಾರೆ. ಹತ್ತಿರದಲ್ಲೇ ಇರುವ ಕಾಲೇಜಿನಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಇದೆ ಎಂದರೆ ಪದವಿ ಪಡೆದ ವಿದ್ಯಾರ್ಥಿಗಳಲ್ಲಿ ಹಲವರು ಬೇರೆನೂ ಮಾಡಲಾಗದಿದ್ದ ಪಕ್ಷದಲ್ಲಿ ಅವುಗಳಿಗೆ ಅಲ್ಲಲ್ಲೇ ಸೇರುತ್ತಿರುವ ದೃಶ್ಯ ಸಾಮಾನ್ಯ. ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಅನುಕೂಲತೆಗಳಾಗಲೀ, ವಾತಾವರಣವಾಗಲೀ ಇವುಗಳಲ್ಲಿ ಇರದೆ ಇಲ್ಲಿನ ಎಂ.ಎ, ಎಂ.ಕಾಂ, ಎಂಎಸ್ಸಿಗಳು ಕೂಡ ಒಂದರ್ಥದಲ್ಲಿ ನಾಲ್ಕು-ಐದನೇ ವರ್ಷದ ಬಿ.ಎ ಬಿ.ಕಾಂ, ಬಿಎಸ್ಸಿಗಳಂತೆ ಕಂಡುಬಂದರೆ ಯಾರೂ ಹುಬ್ಬೇರಿಸುವ ಅವಶ್ಯಕತೆ ಇಲ್ಲ ಇದು ವಸ್ತುಸ್ಥಿತಿ.
ಉಳಿದ ದೇಶಗಳ ಶಿಕ್ಷಣ ವ್ಯವಸ್ಥೆಯನ್ನು ನೋಡುವುದರಲ್ಲಿ ಮತ್ತು ಅಭ್ಯಸಿಸುವುದರಲ್ಲಾಗಲಿ ತಪ್ಪಿಲ್ಲ. ಅಲ್ಲಿನ ಬಹುತೇಕ ವಿದ್ಯಾರ್ಥಿಗಳಿಗೆ ಅಗತ್ಯವಾದ ಉನ್ನತ ಶಿಕ್ಷಣ ದೊರಕುತ್ತಿದೆ. ಆದರೆ ಇಲ್ಲಿನ ವಿದ್ಯಾರ್ಥಿಗಳು ಅದರಿಂದ ವಂಚಿತರಾಗುತ್ತಿದ್ದಾರೆ. ಅವರಿಗೂ ಉನ್ನತ ಶಿಕ್ಷಣ ಲಭ್ಯವಾಗಬೇಕು ಎಂಬ ಆದರ್ಶದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಉಳಿದ ದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕೇವಲ ನಿರುದ್ಯೋಗಿಗಳಾಗಿಯೇ ದಿನ ದೂಡುತ್ತಿದ್ದಾರೆಯೇ? ಅವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನ ಮಾನಗಳು ಲಭಿಸಿವೆಯೇ? ಎಂದು ನೋಡಬೇಕಾಗುತ್ತದೆ. ಅಲ್ಲಿ ಉನ್ನತ ಶಿಕ್ಷಣ ಪಡೆದವರೆಲ್ಲ ಒಂದೋ ನೌಕರಿಯಲ್ಲಿ ಅಥವಾ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತೆಂದಾದರೆ ಇಲ್ಲೂ ಅದಾಗಬೇಕು. ಅಂತಹ ಶಿಕ್ಷಣ ಲಭ್ಯವಾಗಬೇಕು. ಉನ್ನತ ಶಿಕ್ಷಣ ಪಡೆದವರಾರೂ ಅಲೆಮಾರಿಗಳಂತಾಗಬಾರದು. ಇಲ್ಲಿ ಇಲ್ಲಿನವರೆಗೆ ಉನ್ನತ ಶಿಕ್ಷಣದ ಹೆಸರಿನಲ್ಲಿ ಪಡೆದ ಪದವಿಗಳನ್ನು ಹಿಡಿದುಕೊಂಡು ಒದ್ದಾಡುತ್ತಿರುವ ಯುವ ಸಮುದಾಯವನ್ನು ನೋಡಿದರೆ – ಇದನ್ನು ಇನ್ನಷ್ಟು ಅಧಿಕಗೊಳಿಸಲು ನಾವು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆಯೇ ವಿನಃ ಬೇರೇನೂ ಅಲ್ಲ. ಉನ್ನತ ಶಿಕ್ಷಣ ಪಡೆದವರ ಸಂಖ್ಯೆ ಏರಬಹುದು ಹೀಗೆ ಸಂಖ್ಯೆ ಏರಿದ್ದನ್ನು ತೋರಿಸಿ ಸರಕಾರ ಹೆಮ್ಮೆ ಪಡಬಹುದು. ಆದರೆ ಇದರಿಂದಾದ ಪ್ರಯೋಜನವನ್ನು ಕೂಡ ನೋಡಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಇದು ಇದ್ದ ಮಕ್ಕಳಿಗೆ ಹೊಟ್ಟೆಗಿಲ್ಲ. ಇನ್ನೂ ಕೊಡೋ ಸದಾಶಿವ ಎಂಬಂತಿದೆ.
ಉನ್ನತ ಶಿಕ್ಷಣವನ್ನು ಎಲ್ಲಡೆ – ಎಲ್ಲರ ಕೈಗೆಟಕುವಂತೆ ಮಾಡುವ ಮೊದಲು – ಅವುಗಳಿಗೆ ವಿದ್ಯಾರ್ಥಿಗಳು ವ್ಯಯಿಸುವ ವಯಸ್ಸು ಮತ್ತು ಶಕ್ತಿಯನ್ನು ಗಣನೆಗೆ ತೆಗೆದುಕೊಳ್ಳಬೇಕು. ಯೌವನದ ಕಸವು ವ್ಯರ್ಥವಾಗದಂತೆ ಶಿಕ್ಷಣ ನೀಡುವುದು ಒಳ್ಳೆಯದು ಅದನ್ನು ಬೇಕಾದರೆ ಉನ್ನತ ಶಿಕ್ಷಣ ಅಥವಾ ಇನ್ನಾವುದೇ ರೀತಿಯ ಶಿಕ್ಷಣವೆಂದು ಕರೆದರೂ ಸರಿ ಆ ಮೂರು ಅಥವಾ ಐದು ವರ್ಷಗಳ ಓದು ಅವರ ಬದುಕಿನ ತರಬೇತಿಯ ಅವಧಿಯಂತಿದ್ದರೆ ಅನುಕೂಲ ಅದು ಬಿಟ್ಟು ಮಾಮೂಲಿ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳನ್ನು ತೆರೆದು ಅವರನ್ನು ಕೇವಲ ಗಿಳಿಪಾಠ ಒಪ್ಪಿಸುವ ಯಂತ್ರಗಳಂತೆ ತಯಾರು ಮಾಡಿದರೆ ಏನು ಪ್ರಯೋಜನ? ಪ್ರಯೋಜನಕ್ಕೆ ಬಾರದ – ವ್ಯರ್ಥವಾಗಿ ಸಮಯವನ್ನು ವ್ಯಯಿಸುವ ಪದ್ಧತಿ ರದ್ದಾಗುತ್ತಲೇ ಆ ಜಾಗೆಯಲ್ಲಿ ಹೊಸ ಹೊಸ ಪದ್ಧತಿಗಳು ಪ್ರತಿಷ್ಠಾಪನೆಗೊಳ್ಳುತ್ತಾ ಸಾಗಿದರೆ ಭsವಿಷ್ಯದ ಸವಾಲುಗಳನ್ನು ಎದುರಿಸಲು ಸಾಧ್ಯವಾಗಬಹುದು. ಕೇವಲ ಪುಸ್ತಕದ ಬದನೆಗಳನ್ನು ನೀಡಿದರೆ ಊಟಕ್ಕೆ ಬರುವುದಿಲ್ಲ.!
ಹಾಗಲ್ಲದೆ ಇದ್ದವುಗಳನ್ನೇ ಇನ್ನಷ್ಟು, ಮತ್ತಷ್ಟು ಹೆಚ್ಚಿಸುತ್ತ ಹೋಗುವುದೆಂದರೆ ಉಪಯೋಗಕ್ಕೆ ಬಾರದ ಬಿಳಿಯಾನೆಗಳನ್ನು ಹೆಚ್ಚು, ಹೆಚ್ಚು ಸಾಕಿದಂತೆ ಹೊಟ್ಟೆಗೆ ಹಿಟ್ಟಿರದಿದ್ದರೂ ಜುಟ್ಟಿಗೆ ಮಲ್ಲಿಗೆ ಮುಡಿದು ಜಂಬಪಡುತ್ತಾ ದಿಕ್ಕು, ದೆಸೆಯಿಲ್ಲದೆ ಸಾಗುವಂತೆಯೇ ಸರಿ.
ರವೀಂದ್ರ ಭಟ್ ಕುಳಿಬೀಡು.