26.1 C
Sidlaghatta
Monday, December 23, 2024

ಅರ್ಥವಾಗುವುದು ಬೇರೆ-ಅರ್ಥ ಮಾಡಿಸುವುದು ಬೇರೆ

- Advertisement -
- Advertisement -

ಅರ್ಥವಾಗುವುದು ಬೇರೆ-ಅರ್ಥ ಮಾಡಿಸುವುದು ಬೇರೆ ಎಂಬ ತಿಳುವಳಿಕೆ ಮೂಡದ ವಿನಃ ಶಿಕ್ಷಣದಲ್ಲಿ ಸುಧಾರಣೆ ಸಾಧ್ಯವಾಗದ ಮಾತು. ತಾನು ತಿಳಿದುಕೊಳ್ಳುವುದಕ್ಕೂ, ಬೇರೆಯವರಿಗೆ ತಿಳಿಸಿ ಹೇಳುವುದಕ್ಕೂ ವ್ಯತ್ಯಾಸವಿದೆ. ತಾನು ತಿಳಿದುಕೊಂಡದ್ದನ್ನು ತನ್ನ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಕಲೆ ಕರಗತವಾಗದಿದ್ದಲ್ಲಿ ಆತ ಉತ್ತಮ ಶಿಕ್ಷಕನಾಗಲಾರವೆನ್ನಿಸುತ್ತದೆ. ಇಂದು ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಬೇಕು, ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಯಾಗಬೇಕು, ವಿದೇಶಿ ವಿಶ್ವವಿದ್ಯಾಲಯಗಳೂ ಇಲ್ಲಿ ಲಗ್ಗೆ ಇಡುತ್ತಿರುವ ಸಂದರ್ಭದಲ್ಲಿ ಸಮರ್ಥ ಪೈಪೋಟಿ ನೀಡುವುದು ಅಗತ್ಯ ಎಂಬಿತ್ಯಾದಿ ಮಾತುಗಳು ಸತತವಾಗಿ ಕೇಳಿಬರುತ್ತಿವೆ. ಹಾಗಂತ ಆಯೋಗಗಳು, ಸುತ್ತೋಲೆಗಳು, ಕಾಟಾಚಾರದ ತರಬೇತಿಗಳು ತಲೆತಿನ್ನುವ ಮೀಟಿಂಗುಗಳಿಂದ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ, ಗುಣಮಟ್ಟದ ಹೆಚ್ಚಳವಾಗಬೇಕೆಂದರೆ, ಶಿಕ್ಷಕರ ಗುಣಮಟ್ಟದಲ್ಲಿ ಸುಧಾರಣೆ ಸಾಧ್ಯವಾಗಬೇಕು.
ಇಂದು ಪ್ರಾಥಮಿಕ ಶಿಕ್ಷಣ ನೀಡಲು ನೇಮಕವಾಗುವ ಶಿಕ್ಷಕರಿಗೆ ಡಿ.ಎಡ್. ತರಬೇತಿಯ ವ್ಯವಸ್ಥೆಯಿದೆ. ಪ್ರೌಢ ಶಿಕ್ಷಣ ನೀಡಲು ನೇಮಕವಾಗುವ ಶಿಕ್ಷಕರಿಗೆ ಬಿ.ಎಡ್. ತರಬೇತಿಯ ವ್ಯವಸ್ಥೆ ಇದೆ. ಅಲ್ಲಿ ಅವರು ಕಲಿಸುವ ಕಲೆಯ ಕುರಿತು ಸಾಮಾನ್ಯ ಜ್ಞಾನ ಪಡೆಯಲು ಸಾಧ್ಯವಿದೆ. ಆನಂತರ ಅದರ ಬಳಕೆ ಆದರೆ ಕಾಲೇಜು ಶಿಕ್ಷಕರಾಗುವವರಿಗೆ ಇಂಥ ಯಾವುದೇ ತರಬೇತಿಯ ವ್ಯವಸ್ಥೆ ಇಲ್ಲ. ಇಲ್ಲಿಯವರೆಗೂ ಅದು ಅಗತ್ಯವೆಂತಲೂ ಇಲಾಖೆ ಭಾವಿಸಿದಂತಿಲ್ಲ. ಸ್ನಾತಕೋತ್ತರ ಪದವಿ ಪೂರೈಸಿದರೆ ಆತ, ಆಕೆ ಕಾಲೇಜುಗಳಲ್ಲಿ ಶಿಕ್ಷಕರಾಗಲು ನಂಬಿಕೆ ಸಾರ್ವತ್ರಿಕವಾಗಿದೆ. ಪದವಿ ಕಾಲೇಜುಗಳಲ್ಲಿ ಶಿಕ್ಷಕರಾಗಲು ಇತ್ತೀಚೆಗೆ NET/SLET ಎಂಬ ಪರೀಕ್ಷೆಗಳು ಕಡ್ಡಾಯವಾಗಿದೆ ನಿಜ. ಆದರೆ ಇವೆಲ್ಲ ವ್ಯಕ್ತಿಯ ಒಳಗಿನ ಜ್ಞಾನದ ಅಳತೆಗೋಲಾಗಬಹುದೇ ವಿನಃ ಆತನ ಕಲಿಸುವಿಕೆಯ ಸಾಮಥ್ರ್ಯದ ಒರೆಗಲ್ಲುಗಳಲ್ಲ. ಇಂಥ ಪರೀಕ್ಷೆಗಳು ಬೇಡವೇ ಬೇಡವೆಂಬುದು ವಾದವಲ್ಲ ಯಾಕೆಂದರೆ ಒಳಗಡೆಗೆ ಜ್ಞಾನ ತುಂಬಿರದೆ ಹೊರಗಡೆಗೆ ನೀಡಲಾಗುವುದಿಲ್ಲ. ಆದರೆ ಒಳಗಡೆಗೆ ಜ್ಞಾನವಿದ್ದಾಕ್ಷಣ ಅದನ್ನು ಹೊರಗಡೆಗೆ ಸಮರ್ಥವಾಗಿ ನೀಡಲಾಗುತ್ತದೆ ಎಂಬ ಕುರಿತೂ ಯಾವುದೇ ಗ್ಯಾರಂಟಿಯಿಲ್ಲ. ಹಾಗಾಗಿ ಪಡೆದ ಜ್ಞಾನವನ್ನು, ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಿಸಲು ಅಗತ್ಯವಾದ ಸಂವಹನ ಕಲೆ ಸಾಧ್ಯವಾಗುವಂತಹ ಒಂದು ನಿರ್ದಿಷ್ಟ ತರಬೇತಿಯ ಅಗತ್ಯವಿದೆಯೆನ್ನಿಸುತ್ತದೆ. ಯಂತ್ರಗಳೊಂದಿಗಿನ ವ್ಯವಹಾರಕ್ಕೆ ಬುದ್ಧಿವಂತಿಕೆ ಸಾಕು. ಆದರೆ ಮನುಷ್ಯರೊಂದಿಗಿನ ವ್ಯವಹಾರಕ್ಕೆ ಅಷ್ಟೆ ಸಾಲುವುದಿಲ್ಲ, ಪಾಠ ಹೇಳುವುದು ಗೋಡೆಗಳಿಗಲ್ಲ ಅಥವಾ ತಮ್ಮಷ್ಟಕ್ಕೆ ತಾವೇ ಗೊಣಗಿಕೊಳ್ಳುವುದೂ ಅಲ್ಲ.
ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಮೊದಲು TCH ಇತ್ತು. SSLC ಮುಗಿಸಿದವರು ಇದನ್ನು ಮಾಡಬಹುದಿತ್ತು. ಆದರೆ ಈಗ ಆ ಜಾಗೆಯಲ್ಲಿ ಡಿ.ಎಡ್ ಬಂದಿದೆ. ಪಿಯುಸಿ ಮುಗಿಸಿರಬೇಕು. ಹಾಗೇ ಪ್ರೌಢಶಿಕ್ಷಣಕ್ಕೆ ಶಿಕ್ಷಕರಾಗಲು ಬಿ.ಎಡ್. ಇದೆ ಪದವಿ ಪೂರೈಸಿದ ಆನಂತರ ಒಂದು ವರ್ಷದ ಅವಧಿಯ ತರಬೇತಿ ಇದಾಗಿದ್ದು ಈಗ ಇದನ್ನು ಎರಡು ವರ್ಷಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ. ಆದರೆ ಇದೇ ಮಾದರಿಯಲ್ಲಿ ಕಾಲೇಜು ಶಿಕ್ಷಕರಿಗೂ ತರಬೇತಿ ನೀಡಲು ಯಾವುದೇ ಕೋರ್ಸ್‍ಗಳಿಲ್ಲ. ಇತ್ತೀಚಿಗೆ ಪದವಿ ಶಿಕ್ಷಣವನ್ನು ಮೂರರಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಲು ಯೋಚಿಸುತ್ತಿದ್ದಾರೆ. ಆದರೆ ಪದವಿ ಕಾಲೇಜುಗಳ ಶಿಕ್ಷಕರಿಗೆ ಪಾಠ ಹೇಳಲು ತರಬೇತಿಯನ್ನು ನೀಡುವ ಕುರಿತು ಯಾವುದೇ ಯೋಚನೆ ಅಥವಾ ಯೋಜನೆ ಸದ್ಯಕ್ಕಂತೂ ಇದ್ದಂತಿಲ್ಲ, ಹಾಗಾಗಿ ಸ್ನಾತಕೋತ್ತರ ಪದವಿ ಪೂರೈಸಿದಾಕ್ಷಣ ಪಾಠ ಹೇಳುವ ಕೌಶಲ್ಯವೂ ಪ್ರಾಪ್ತವಾಗಿರುತ್ತದೆ ಎಂಬ ನಂಬಿಕೆ ಎಷ್ಟರ ಮಟ್ಟಿಗೆ ಸರಿ ಎಂಬುವುದೇ ವರ್ತಮಾನದ ಪ್ರಶ್ನೆ.
ಕಾಲೇಜು ಶಿಕ್ಷಕರಿಗೆ ಕಾಲಕಾಲಕ್ಕೆ ಓರಿಯಂಟೇಶನ್ ಮತ್ತು ರಿಪ್ರೆಶನ್ ಕೋರ್ಸ್‍ಗಳನ್ನು ನಡೆಸಲಾಗುತ್ತದೆ ಎಂಬುದೇನೋ ನಿಜ. ಆದರೆ ಒಮ್ಮೆ ಕೆಲಸಕ್ಕೆ ಸೇರಿದ ನಂತರ, ಇದರಲ್ಲಿ ಭಾಗವಹಿಸುವುದು ಕೇವಲ ಪದೋನ್ನತಿಗೆ ಮಾತ್ರವಾಗುತ್ತಿರುವುದು ವಾಸ್ತವ. ಹಾಗಂತ ಇವನ್ನು ನಿರಾಕರಿಸಲಾಗುವುದಿಲ,್ಲ ಆದರೆ ಅದು ಸತತವಾಗಿ ಪ್ರತಿಯೊಬ್ಬರಿಗೂ ಮೂರು ವರ್ಷಕ್ಕೊಮ್ಮೆಯಾದರೂ ಕಡ್ಡಾಯವಾಗಿ ಸಿಗುವಂತಾದರೆ ಕನಿಷ್ಠ ಆಸಕ್ತಿ ಇರುವವರಿಗಾದರೂ ಅನುಕೂಲವಾದೀತು. ಅದೇನೇ ಇದ್ದರೂ ಇಂದು ಉನ್ನತ ಶಿಕ್ಷಣದಲ್ಲಿ ನಿಜವಾದ ಸುಧಾರಣೆ ಬಯಸುವುದೇ ಆದಲ್ಲಿ, ಗುಣಮಟ್ಟ ಹೆಚ್ಚಿಸಬೇಕೆಂದು ನೈಜ ಕಳಕಳಿಯಾಗಿದ್ದಲ್ಲಿ, ಕಾಲೇಜುಗಳಲ್ಲಿ ಶಿಕ್ಷಕರಾಗುವವರಿಗೆ ಕನಿಷ್ಠ ಒಂದು ವರ್ಷದ ಸೂಕ್ತ ತರಬೇತಿ ನೀಡುವುದರತ್ತ ಗಮನಹರಿಸಬೇಕಾದ್ದು ಅಗತ್ಯವೆನ್ನಿಸುತ್ತದೆ. ಕಾಲೇಜಿನಲ್ಲಿ ಶಿಕ್ಷಕರೇ ಆಗಬೇಕೆಂದು ಬಯಸುವವರಿಗೆ ಮಾತ್ರ ಈ ತರಬೇತಿಯನ್ನು ಕಡ್ಡಾಯಗೊಳಿಸಿ ಕೇವಲ ಪದವಿ ಮಾತ್ರದಿಂದ ಸಂತೃಪ್ತಿ ಪಡುವವರಿಗೆ ಇದರಿಂದ ವಿನಾಯಿತಿ ನೀಡಬಹುದು. ಕಲಿಸಲಿಕ್ಕೆ ಬರುವುದರಲ್ಲಿ ಆಸಕ್ತಿಯುಳ್ಳವರಿಗೆ ಈಗ ರೀಜನಲ್ ಕಾಲೇಜಿನಲ್ಲಿ ಬಿಎಡ್, ಬಿಎಸ್ಸಿ, ಬಿಎಡ್ ಎಂದು ಒಟ್ಟಿಗೆ ನಾಲ್ಕು ವರ್ಷದ ಕಲಿಕೆ ಇರುವಂತೆ ಸ್ನಾತಕೋತ್ತರ ಪದವಿಯಲ್ಲೂ ಇಂಥದ್ದನ್ನೇ ಜಾರಿಗೊಳಿಸಬಹುದು ಅಥವಾ ಎರಡು ವರ್ಷಗಳ ಸ್ನಾತಕೋತ್ತರ ಪದವಿ ಪೂರೈಸಿದ ಅನಂತರ ವಿಶ್ವವಿದ್ಯಾಲಯಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧಿಸಿದಂತೆ ಕನಿಷ್ಠ ಒಂದು ವರ್ಷದ ತರಬೇತಿ ನೀಡುವ ವ್ಯವಸ್ಥೆ ಜಾರಿಯಾದರೆ ಒಳ್ಳೆಯದಾಗಬಹುದು. ಅಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕಲಿತ ವಿಷಯಗಳನ್ನೆ ಪುನಃ ಪುನಃ ಓದಿ ಪರೀಕ್ಷೆ ಬರೆಯುವ ಪದ್ಧತಿಗೆ ಬದಲಾಗಿ ಕಲಿತದ್ದನ್ನು ಕೌಶಲ್ಯವನ್ನು ನೀಡುವ ಪದ್ಧತಿ ಜಾರಿಯಾದರೆ, ಕ್ಲಾಸ್ ರೂಂ ಒಳಗಡೆಯ ಪಾಠಕ್ಕೆ ಅದು ನೆರವಾದೀತು. ಅದು ಬೋಧನಾ ಕೌಶಲ್ಯ ತರಬೇತಿ (Teacher skill training) ಆದರೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದು. ಶಿಕ್ಷಕರ ಗುರಿ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಕೇಂದ್ರಿಕೃತವಾಗಿರಬೇಕೆ ವಿನಃ ಕೇವಲ ತಮ್ಮ ಜ್ಞಾನಾಭಿವೃದ್ಧಿಯತ್ತ ಅಲ್ಲ. ಯಾಕೆಂದರೆ ಪಿಹೆಚ್‍ಡಿ ಪಡೆದವರಿಗೆ ಕೂಡ ಆ ವಿಷಯದ ಮೇಲೆ ಅಧಿಕೃತವಾಗಿ ಹೆಚ್ಚಿನ ಜ್ಞಾನವಿರಬಹುದಾದರೂ, ವಿಶ್ವವಿದ್ಯಾಲಯ ನಿಗದಿಗೊಳಿಸಿದ ಪಠ್ಯದ ಬೋಧನೆಯೂ ಒಂದು ಕಲೆ ಎನ್ನುವುದನ್ನು ಒಪ್ಪಿಕೊಳ್ಳುವುದಾದಲ್ಲಿ ಅದಕ್ಕೆ ಸಂಬಂಧಿಸಿದಂತೆ ತರಬೇತಿಯ ಚೌಕಟ್ಟು ಇರಬೇಕಾದುದು ಅನಿವಾರ್ಯ. ಶಿಕ್ಷಕರಿಗೆ ಇರಬೇಕಾದ ಕನಿಷ್ಠ ಶಿಸ್ತು (ವಿಷಯದ ಕುರಿತು ಮತ್ತು ತಮ್ಮ ಡ್ರೆಸ್ ಅನ್ನು ಕುರಿತೂ ಸಹ) ಕಲಿಸುವ ಕೇಂದ್ರಗಳಂತೆ ಅವು ಕರ್ತವ್ಯ ನಿರ್ವಹಿಸುವುದು ಅಗತ್ಯ. ಪಡೆದ ಜ್ಞಾನ ವಿದ್ಯಾರ್ಥಿಗಳಿಗೆ ತಲುಪುವುದು ಸಂವಹನ ಕಲೆಯಿಂದ ಹಾಗಾಗಿ ಇಂಥ ತರಬೇತಿ ಒತ್ತು ನೀಡಬೇಕಾದದ್ದು ಸಂವಹನ ಕಲೆಗೆ, ಭಾಷಾ ಬಳಕೆಗೆ, ಇದಕ್ಕಾಗಿ ಅಲ್ಲಿ ಬಂದೆ ಪಾಠ ಹೇಳುವುದಕ್ಕೆ ಬದಲಾಗಿ ಪಾಠ ಹೇಳಿಸುವ, ಅದನ್ನು ತಿದ್ದಿ ತೀಡುವ ತರಬೇತಿಬೇಕು. ಅದಕ್ಕೆ ಸಂಬಂಧಿಸಿದಂತೆ ಚರ್ಚೆ, ವಿಚಾರ ಸಂಕಿರಣ, ಪ್ರಬಂಧಗಳ ಮಂಡನೆ, ಗುಂಪು ಚರ್ಚೆ, ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೋತ್ತರ ಪದ್ಧತಿ ಇವುಗಳಿಗೆ ಆದ್ಯತೆ ಇದ್ದು ಮುಂದೆ ತರಗತಿಗಳಲ್ಲಿ ನಿರ್ಭಯವಾಗಿ ಮತ್ತು ನಿರರ್ಗಳವಾಗಿ ಪಾಠ ಹೇಳಲು ಸಾಧ್ಯವಾಗುವಂತೆ ಆಗಬೇಕಾದ ಅಗತ್ಯವಿದೆ. ಹಾಗೇ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಬಳಕೆ ತಿಳಿದಿರುವುದು ಕಡ್ಡಾಯವಾಗಬೇಕಾದ ಅಗತ್ಯ ಇವತ್ತಿನ ಸಂದರ್ಭದಲ್ಲಿ ಇದೆ. ತಾವು ಬಳಸುವುದಕ್ಕೆ ಮತ್ತು ಬಳಸಲು ಮಾರ್ಗದರ್ಶನ ನೀಡುವುದಕ್ಕೆ ಗೊತ್ತಿದ್ದರೆ, ಪ್ರತಿಯೊಂದಕ್ಕೂ ಟಿಪ್ಪಣಿ ನೀಡುತ್ತ ಸಮಯ ಕಳೆಯುವುದು ತಪ್ಪುತ್ತದೆ. ಕಲಿಕೆಯ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು ಎಂಬ ಎಚ್ಚರ ಕಲಿಸುವವರಲ್ಲೂ ಕಲಿಯುವವರಲ್ಲೂ ಸದಾ ಇರುವಂತೆ ನೋಡಿಕೊಳ್ಳಬೇಕಿದೆ.
ಇಂದಿನ ಗೋಳೀಕರಣ (globalization) ವ್ಯವಸ್ಥೆಯೊಳಗೆ ಹೊಂದಿಕೊಳ್ಳುವುದು ಮತ್ತು ಹೊಸ ಹೊಸ ಸಾಧ್ಯತೆಗಳನ್ನು ಅವಕಾಶಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಅಗತ್ಯವಾಗಿರುವುದರಿಂದ ಇದರ ಕುರಿತು ತಮ್ಮ ತಮ್ಮ ವಿಷಯಗಳಿಗೆ ಸಂಬಂಧಿದಂತೆ ಲಭ್ಯವಿರುವ ಸಂಗತಿಗಳನ್ನು ವಿದ್ಯಾಥಿಗಳಿಗೆ ತಿಳಿಹೇಳುವ ಜವಬ್ಧಾರಿಯನ್ನು ಶಿಕ್ಷಕರು ಹೊರಬೇಕಾದ್ದು, ಅವರ ಕರ್ತವ್ಯದ ಒಂದು ಭಾಗವೇ ಅಗಿರಬೇಕು. ಕಾಲೇಜಿನ ಯಾವುದೂ ಒಂದು ಮೂಲೆಯ ಕೊಠಡಿಯಲ್ಲಿ ‘ನೌಕರಿ ಕುರಿತಾದ ಮಾಹಿತಿ ಕೇಂದ್ರ’ ಸ್ಥಾಪಿಸಿ ಕೈ ತೊಳೆದುಕೊಂಡರೆ ಯಾವುದೇ ಪ್ರಯೋಜನವಾಗುವುದು ಅಷ್ಟರಲ್ಲೇ ಇದೆ.
ಶಿಕ್ಷಕನಾದವನಿಗೆ ತಾನು ಜ್ಞಾನ ಸಂಪಾದಿಸಿಕೊಂಡು ಬೆಳೆಯಬೇಕೆಂಬ ಆಸೆಯಷ್ಟೇ ಇದ್ದರೆ ಸಾಲದು ತಾನು ಸಂಪಾದಿಸಿಕೊಂಡದ್ದನ್ನು ವಿದ್ಯಾರ್ಥಿಗಳಿಗೆ ಹಂಚುವ ಚೈತನ್ಯ ಕೂಡ ಇರಬೇಕಾಗುತ್ತದೆ. ಹಾಗಲ್ಲದಿದ್ದಲ್ಲಿ ಒಟ್ಟಾರೆ ಬೆಳವಣಿಗೆ ಅಸಾಧ್ಯ.
ಯಾಕೆ ಈಗೇನಾಗಿದೆ? ಕಾಲೇಜುಗಳಲ್ಲಿ ಪಾಠ ಹೇಳುತ್ತಿಲ್ಲವಾ? ಉತ್ತಮವಾದ ಉಪನ್ಯಾಸಕರಿಲ್ಲವೇ? ಅವರು ವಿದ್ಯಾರ್ಥಿಗಳಿಗೆ ಸೂಕ್ತವಾಗಿ ತಮ್ಮ ಜ್ಞಾನವನ್ನು ಧಾರೆಯರೆಯುತ್ತಿಲ್ಲವೇ? ವಿದ್ಯಾರ್ಥಿಗಳು ಕಲಿಯುತ್ತಿಲ್ಲವೆ ಎಂಬತ್ಯಾದಿ ಪ್ರಶ್ನೆಗಳೆನ್ನೆತ್ತಿ, ಮತ್ತೆ ತರಬೇತಿಯ ಅಗತ್ಯವೇನಿದೆ? ಯಾಕ್ ಸುಮ್ಮನೇ ಒಂದು ವರ್ಷಗಟ್ಟಲೇ ಹಾಳುಮಾಡಿಕೊಳ್ಳಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವ ಸಾಧ್ಯತೆಗಳಿರುವುದನ್ನು ತಳ್ಳಿಹಾಕಲಾಗುವುದಿಲ್ಲ.
ಆದರೆ ಒಟ್ಟಾರೆ ಗುಣಮಟ್ಟದ ಹೆಚ್ಚಳಕ್ಕೆ (ಶಿಕ್ಷಕರ ಮತ್ತು ವಿದ್ಯಾರ್ಥಿಗಳ) ಇಂಥದೊಂದ್ದು ತರಬೇತಿಯ ಅಗತ್ಯವಿರುವುದನ್ನು ಅನಗತ್ಯವೆಂದು ವಾದಿಸುವುದಕ್ಕೂ ಮುನ್ನ ವಾಸ್ತವವನ್ನು ಯಾವುದೇ ಪೂರ್ವಗ್ರಹವನ್ನು ಇಟ್ಟುಕೊಳ್ಳದೇ ಗಮನಿಸಿದರೆ, ಸತ್ಯ ದರ್ಶನವಾಗಬಹುದು? ನೆಟ್, ಸ್ಲೇಟ್ ಪರೀಕ್ಷೆಗಳಿಗಾಗಿ ವರ್ಷಗಟ್ಟಲೆ ಕೆಲವೊಮ್ಮೆ ಕೆಲವು ವರ್ಷಗಟ್ಟಲೇ ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಇಂಥ ತರಬೇತಿ ಅವಧಿ, ಅಂಥ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಿ  ಹೊರಬರುವುದಕ್ಕೂ ಸಹಾಯಕವಾಗುವಂತಿದ್ದರೆ, ಅಧ್ಯಯನಕ್ಕೆ ಪೂರಕವಾಗುವಂತಿದ್ದರೆ ಎಂದು ಚಿಂತಿಸುವುದು ಕೂಡ ಸೂಕ್ತವೆನಿಸುತ್ತದೆ. ಇಂಥ ಯಾವುದೇ ತರಬೇತಿಗಳು ಒಟ್ಟಾರೆ ಭವಿಷ್ಯದ ದೃಷ್ಟಿಯಿಂದ ವ್ಯರ್ಥವಲ್ಲ, ಮುಂದೆ 25-30 ವರ್ಷಗಳಷ್ಟು ಕಾಲ ಬೊಧಿಸುವ ವೃತ್ತಿಗಿಳಿಯುವವರಿಗೆ ಒಂದು ವರ್ಷದ ತರಬೇತಿ ನಿರುಪಯುಕ್ತವಾಗದೆ ಅವರನ್ನು ಅಷ್ಟು ವರ್ಷ ತಾಳಿಕೊಳ್ಳುವ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಲ್ಲದು ಎಂದಷ್ಟೆ ಹೇಳಿದರೆ ಸಾಕು ಎನ್ನಿಸುತ್ತದೆ.
ರವೀಂದ್ರ ಭಟ್ ಕುಳಿಬೀಡು

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!