ನ್ಯೂಟನ್ ಎಂಬ ವಿಜ್ಞಾನಿ ಗುರುತ್ವಾಕರ್ಷಣೆ ಕುರಿತು ಅನ್ವೇಷಣೆಯನ್ನು ಮಾಡಿದ್ದು ಮರದ ಮೇಲಿನಿಂದ ಸೇಬುಹಣ್ಣೊಂದು ನೆಲಕ್ಕೆ ಬಿತ್ತು ಎಂಬುದರಿಂದ ಎಂಬ ಮಾತಿದೆ. ಅದು ಆ ಕ್ಷಣದ ಅರಿವಿನ ಸ್ಪೋಟದಿಂದ ಹುಟ್ಟಿದ ಅನ್ವೇಷಣೆ. ಹೀಗೇ ಹಲವೊಂದು ಅನ್ವೇಷಣೆಗಳು ಥಟ್ಟನೆ ಹೊಳೆದ ಯೋಚನೆಗಳಿಂದಾಗಿ ರೂಪುಗೊಂಡಿದ್ದು. ಅನಂತರ ಕೂಡ ಅವರು ಆ ದಿಶೆಯಲ್ಲಿ ಅನ್ವೇಷಣೆಗಳನ್ನು ಮುಂದುವರಿಸಿದ್ದರ ಪರಿಣಾಮದಿಂದಾಗಿ ನಮಗೆ ಆ ಕುರಿತಾಗಿ ಸೂತ್ರಗಳು ಸಿಗುವಂತಾದದ್ದು. ಮಾನವ ಸ್ವಭಾವತಃ ಕುತೂಹಲವನ್ನು ಹೊಂದಿದ್ದು – ತನ್ನ ಕುತೂಹಲದ ತಣಿಕೆಗಾಗಿ ಪ್ರಯತ್ನಿಸುವುದರಿಂದಲೇ ಅನೇಕ ಅನ್ವೇಷಣೆಗಳು ಸಾಧ್ಯವಾದದ್ದು. ಹೊಸ ಹೊಸ ಅನ್ವೇಷಣೆಗಳ ಕುರಿತಾದ ತುಡಿತ ಮಾನವನ ಸಹಜ ಗುಣವೇ ಆಗಿದ್ದಿರುತ್ತದೆ. ಆದರೆ ಇಂಥ ಅನ್ವೇಷಣೆಗಳಿಗೆ ಪ್ರೇರಕವಾಗುವ ಸಂಗತಿಗಳಾವುವು ಎಂದು ಯೋಚಿಸಿ – ಚಾಲ್ತಿಗೆ ತಂದ ಮಾತುಗಳೆಂದರೆ – Necessity is the mother of invention. ಅವಶ್ಯಕತೆಯೇ ಅನ್ವೇಷಣೆಗೆ ಮೂಲ. ಹಾಗೇ Curiosity is the mother of invention. ಕುತೂಹಲವೇ ಅನ್ವೇಷಣೆಯ ಮೂಲ. Interest is the mother of invention – ಆಸಕ್ತಿಯೇ ಅನ್ವೇಷಣೆಯ ಮೂಲ. ಈ ಎಲ್ಲ ಮಾತುಗಳು ನಿಜ. ಆದರೆ ಎಲ್ಲಿಯವರೆಗೆ ಎಂಬುದೇ ಯಕ್ಷ ಪ್ರಶ್ನೆ.
ಅನ್ವೇಷಣೆಯೊಂದರ ಮೂಲ ಬೇರೆ. ಅನ್ವೇಷಣೆಯೊಂದರ ನಿರಂತರತೆ ಬೇರೆ. ಯಾವುದೇ ಅನ್ವೇಷಣೆ ಒಂದು ಘಟ್ಟವನ್ನು ತಲುಪಿದಾಕ್ಷಣ ಸ್ತಬ್ಧವಾದರೆ – ಅದು ಒಂದು ಉದ್ದೇಶಕ್ಕೆ ಮಾತ್ರ ಮಿತಿಗೊಂಡಂತೆ ಅಥವಾ ಒಂದು ಕುತೂಹಲದ ತಣಿಕೆಗೆ ಮಾತ್ರ ಸೀಮಿತಗೊಂಡಂತೆ. ಹಾಗೇ ಒಂದು ಮಿತಿಗೆ ಮಾತ್ರ ಸೀಮಿತವಾಗದೇ ಸದಾ ಮುಂದುವರೆಯುತ್ತಲೇ ಸಾಗುತ್ತಿರಬೇಕೆಂಬ ಆಶಯವನ್ನು ಹೆಣೆದಿದ್ದರೆ ಅದಕ್ಕೆ ಖಂಡಿತವಾಗಿಯೂ ತಲುಬು ಇರಲೇಬೇಕು. ಅದೇ ಹಗಲು – ರಾತ್ರಿ ಕಾಡುತ್ತ ಕಾಡುತ್ತ ಅತೃಪ್ತಿಯಿಂದ ತೃಪ್ತಿ ಪಡೆಯಬೇಕೆಂಬ ಹಪ ಹಪಿಕೆ ಜೀವಂತವಾಗಿರುವಷ್ಟು ಕಾಲವೂ ಅದರ ನಿರಂತರತೆ ಸಾಧ್ಯವಾಗುತ್ತದೆ. ಇದೇ ದೃಷ್ಟಿಯಿಂದಲೇ ಇರಬೇಕು ಡಾ. ಶಾಂತಿನಾಥ ದೇಸಾಯಿಯವರು ಹೇಳಿದ್ದು ‘ತೃಪ್ತಿಯೆಂದರೆ ಸಾವು. ಅತೃಪ್ತಿಯೆಂದರೆ ಬದುಕು.’ ಒಳಗುದಿಯೊಂದು ಸದಾ ಜಾಗೃತವಾಗಿದ್ದರೆ ಅಥವಾ ಅದನ್ನಷ್ಟು ಜಾಗೃತವಾಗಿಟ್ಟುಕೊಳ್ಳಬೇಕೆಂದು – ಹಿಡಿದದ್ದನ್ನಷ್ಟು ಮುಗಿಸುವುದಷ್ಟೇ ಅಲ್ಲದೇ ಮುಂದೇನು? ಮುಂದೇನು? ಎಂದು ಪ್ರಶ್ನಿಸಿಕೊಳ್ಳುತ್ತಲೇ – ಉತ್ತರಗಳನ್ನು ಕಂಡುಕೊಳ್ಳುತ್ತಲೇ ಮತ್ತೆ ಮುಂದುವರಿಯುವ ಮನುಷ್ಯನ ತಲುಬು – ಭವಿಷ್ಯದಲ್ಲಿ ಮತ್ತಷ್ಟು – ಮಗದಷ್ಟು ಆವಿಷ್ಕಾರಗÀಳಿಗೆ ಇಂಬುಕೊಡುವ ಕ್ರಿಯಾಶಕ್ತಿಯಾಗಬಹುದು. ಎಚ್ಚರಿಕೆಯಿಂದ ಗಮನಿಸಬೇಕಾದ ಅಂಶವೆಂದರೆ ‘ತಲುಬು’ ಬೇರೆ ‘ತೆವಲು’ ಬೇರೆ. ಒಂದು ಧನಾತ್ಮಕವಾದರೆ ಇನ್ನೊಂದು ಋಣಾತ್ಮಕ.
ರವೀಂದ್ರ ಭಟ್ ಕುಳಿಬೀಡು