ರಾಜ್ಯದ ಆಯ್ದ 371 ಸರ್ಕಾರಿ ಶಾಲೆಗಳಲ್ಲಿ 6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ರಾಜ್ಯ ಸರ್ಕಾರ ಆದೇಶ ಹೋರಡಿಸಿದ ಹಿನ್ನಲೆಯಲ್ಲಿ ಹಲವಾರು ಸಾಹಿತಿಗಳು, ಸಂಘಟನೆಗಳು ಅದನ್ನು ಪ್ರತಿಭಟಿಸುತ್ತಿರುವ ಸಂದರ್ಭದಲ್ಲೇ ಮಾನ್ಯ ಮುಖ್ಯಮಂತ್ರಿಗಳು ಇಂಗ್ಲಿಷ್ ಮಾಧ್ಯಮ ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಕನ್ನಡ ಸಂಘಟನೆಯವರು ತಮ್ಮ ಮಕ್ಕಳನ್ನು ಯಾವ ಮಾಧ್ಯಮದಲ್ಲಿ ಕಲಿಯಲು ಕಳುಹಿಸುತ್ತಿದ್ದಾರೆ? ಈ ಮಕ್ಕಳು ಎಂತಹ ಶಾಲೆಗಳಲ್ಲಿ ಓದುತ್ತಿದ್ದಾರೆ ಎನ್ನುವುದನ್ನು ಮೊದಲು ಗಮನಿಸಬೇಕಾಗಿದೆ ಎಂದು ಖಾರವಾಗಿಯೇ ಹೇಳಿದ್ದಾರೆ. ಸರಕಾರ ಸರಿದಾರಿಯಲ್ಲಿ ಇದೆಯೇ? ಎಂದು ಯೋಚಿಸುವ ಚರ್ಚಿಸುವ ಮುನ್ನ ವಾಸ್ತವವನ್ನು ಮರೆಯುವುದಾಗಲಿ, ಮರೆಮಾಡುವುದಾಗಲಿ ಒಳ್ಳೆಯದಲ್ಲ. ಇಂದಿನ ಅಗತ್ಯವನ್ನು ಅರಿಯುವುದು ಕೂಡ ಅಗತ್ಯ.
ಇಂದಿನ ‘ಗೋಳೀಕರಣ’ ದ ಸಂದರ್ಭದಲ್ಲಿ ಇಂಗ್ಲೀಷ್ ಕಲಿಕೆ ಅನಿವಾರ್ಯ. ಅದು ಅನೇಕ ರೀತಿಯ ನೌಕರಿಗಳಿಗೆ ನೆರೆವಾಗಬಲ್ಲ ಸಾಧನ. ಇಂಗ್ಲೀಷ್ ಮಾದ್ಯಮದಲ್ಲಿ ಓದಿದರೆ ಮಾತ್ರ ಇದು ಸಾಧ್ಯ. ಮಕ್ಕಳು ಹೆಚ್ಚು ಅಂಕಗಳನ್ನು ಗಳಿಸಬಹುದು. ವಿಜ್ಞಾನ ವಿಷಯಕ್ಕಂತೂ ಇಂಗ್ಲೀಷ್ ಮಾದ್ಯಮ ಬೇಕೇ ಬೇಕು. ತಮ್ಮ ಮಕ್ಕಳು ಇಂಜಿನಿಯರ್‍ಗಳಾಗ ಬೇಕು. ಇಂಥ ಕನಸನ್ನೇ ಇಂದು ಎಲ್ಲೆಲ್ಲೂ ಬಿತ್ತಿದರ ಪರಿಣಾಮವಾಗಿ ಇಂದು ಗ್ರಾಮೀಣ ಪ್ರದೇಶಗಳಿಂದ ಹಿಡಿದು ಎಲ್ಲ ನಗರಗಳಲ್ಲೂ ಖಾಸಗಿ ಇಂಗ್ಲೀಷ್ ಶಾಲೆಗಳು ಪ್ರಾರಂಭಿಸಲ್ಪಟ್ಟಿವೆ. ದಿನೇ ದಿನೇ ಇವುಗಳ ಸಂಖ್ಯೆ ವೃದ್ದಿಯಾಗುತ್ತಿದೆ. ಅಲ್ಲಿಗೆ ಸೇರುವ ಮಕ್ಕಳ ಸಂಖ್ಯೆ ಕೂಡ ಏರುತ್ತಿದೆ. ಅಲ್ಲಿನ ಡೋನೆಶನ್ ಮತ್ತು ಫೀ ಕುರಿತು ಚಿಂತಿಸುವುದಕಿಂತ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ರೂಪುಗೊಂಡರೆ ಸಾಕು ಎಂಬ ಚಿಂತೆ ಪಾಲಕರದ್ದು. ಹಾಗಾಗಿ ಎಷ್ಟೇ ಕಷ್ಟವಾದರು ಸರಿ, ಇಂಗ್ಲೀಷ್ ಸ್ಕೂಲುಗಳಿಗೇ ಸೇರಿಸಲು ಪಾಲಕರು ಒದ್ದಾಡುತ್ತಿದ್ದಾರೆ. ಅಲ್ಲಿನ ಶಿಕ್ಷಣದ ಗುಣಮಟ್ಟದ ಕುರಿತಾಗಲೀ, ಅಲ್ಲಿನ ಶಿಕ್ಷಕರ ವಿದ್ಯಾರ್ಹತೆಯ ಕುರಿತಾಗಲೀ ಯಾರು ತಲೆಕೆಡಿಸಿಕುಳ್ಳುವುದಿಲ್ಲ. ಫಲಿತಾಂಶವನ್ನಷ್ಟೇ ಗಮನಿಸುತ್ತಾರೆ.
ಇನ್ನು ಈ ವರ್ಷದಿಂದಲೇ ಎಲ್ಲ ಕಡೆಗೂ ಸಿ.ಬಿ.ಎಸ್.ಸಿ. ಪಠ್ಯಕ್ರಮ ಜಾರಿಯಾಗುತ್ತದೆ. ಮುಂದಿನ ವರ್ಷದಿಂದ ಪಿ.ಯು.ಸಿ ವಿಜ್ಞಾನದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಬದಲಿಗೆ ರಾಷ್ಟ್ರಮಟ್ಟದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತದೆ. ಅದಕ್ಕೆ ಇಲ್ಲಿನ ವಿದ್ಯಾರ್ಥಿಗಳನ್ನು ಅಣಿಗೂಳಿಸುವುದು ಕೂಡ ಅಗತ್ಯ. ಹೀಗಿದ್ದಾಗ 6 ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಜಾರಿಯಾಗುವುದರಲ್ಲಿ ಅಂಥ ದೋಷವೇನೂ ಕಾಣಿಸದು. ಮುಖ್ಯವಾಗಿ ಬೇಕಾದದ್ದು ಯಾವುದೇ ಮಾಧ್ಯಮದಲ್ಲಾಗಲೀ, ಸರಿಯಾಗಿ ಶಿಕ್ಷಣ ದೊರಕುವಂತಾಗಬೇಕು. ಸರಕಾರ ಈ ದಿಶೆಯಲ್ಲಿ ಗಮನಹರಿಸಿ ಇಂಗ್ಲೀಷ್ ಮಾಧ್ಯಮದಲ್ಲೂ ಶಿಕ್ಷಣ ನೀಡಲು ಸಂಕಲ್ಪಿಸಿದನ್ನು ಸರಿಯಾಗಿ ಜಾರಿಗೆ ತರುವುದೇ ಆದಲ್ಲಿ, ಅದಕ್ಕೆ ತಕ್ಕಂತೆ ಶಿಕ್ಷಕರನ್ನು ಆಯ್ಕೆ ಮಾಡಬೇಕು. ಅಥವಾ ಇರುವ ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು. ಯಾಕೆಂದರೆ ಇಂದು ಅನೇಕ ಬಿ.ಎಡ್. ಮತ್ತು ಡಿ.ಎಡ್. ಕಾಲೇಜುಗಳಿಂದ ಹೊರಬರುತ್ತಿರುವ ಬಹುತೇಕರು ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲೇ ಅಭ್ಯಸಿಸಿ ಪದವಿ ಪಡೆದವರು ಶಿಕ್ಷಕರಾದರೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಥವಾ ಕನ್ನಡ ಮಾಧ್ಯಮದಲ್ಲಿ ಓದಿ ಬಂದವರಿಗೆ ಕಡ್ಡಾಯವಾಗಿ ಇಂಗ್ಲೀಷ್ ತರಬೇತಿಯನ್ನು ನೀಡುವುದು ಅಗತ್ಯವಾಗಿದೆ.
ಇಂದಿನ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಬರೆಯಲು, ಸರಾಗವಾಗಿ ಮಾತನಾಡಲು ಬರುತ್ತದೆ. ಇಂಗ್ಲೀಷ್ ಭಾಷೆ ಅವರ ಬದುಕಿನ ಎಲ್ಲಾ ಮಗ್ಗುಲನ್ನು ಆವರಿಸಿಕೊಂಡಿಲ್ಲ. ಇಂದು ಈ ರಾಜ್ಯದಲ್ಲಿ ಎಷ್ಟರ ಮಟ್ಟಿಗಾದರೂ ಕನ್ನಡ ಉಳಿದಿದ್ದರೆ, ಅದು ಗ್ರಾಮೀಣ ಭಾಗದಲ್ಲಿ ಮಾತ್ರ. ಪಟ್ಟಣದಲ್ಲಿ ಇಂಗ್ಲೀಷ್-ಕಂಗ್ಲೀಷ್ ಇತ್ಯಾದಿಯಾಗಿದೆ. ಪಟ್ಟಣದಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಅಲ್ಲಿಯವರು ಹೇಗೋ ಅಲ್ಲೇ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಮಕ್ಕಳು ಕನ್ನಡ ಶಾಲೆ, ಕನ್ನಡ ಮಾಧ್ಯಮವೆಂದು ಓದುತ್ತಾ ಎಷ್ಟೇ ಪ್ರತಿಭಾವಂತರಾಗಿದ್ದರೂ, ಸರಾಗವಾಗಿ ಇಂಗ್ಲೀಷ್ ಬಾರದ ಏಕೈಕ ಕಾರಣದಿಂದ ಅನೇಕ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಇಂಗ್ಲೀಷ್ ಮಾತ್ರ ಕಬ್ಬಿಣದ ಕಡಲೆ. ಪದವಿ ವಿದ್ಯಾರ್ಥಿಗಳು ಸಹಿತ ಇಂಗ್ಲೀಷ್‍ನಲ್ಲಿ ಪಾಸಾಗುವುದೋ ಒಂದು ಹರಸಾಹಸದ ಕೆಲಸವಾಗಿದೆ. ಹಾಗೆ ಪಾಸಾಗಲು ಅವರು ಅನೇಕ ಅಡ್ಡ ಮಾರ್ಗ ಹಿಡಿಯಲು ನೋಡುತ್ತಾರೆ. ಇದು ಇಂದಿನ ವಾಸ್ತವ ಬೆಳಕಿಗೆ ಬಂದ ಸತ್ಯ. ಇವರಿಗೆ ಇಂಗ್ಲೀಷ್ ಬರದಿರುವುದಕ್ಕೆ ಶಾಲೆ ಕಾಲೇಜುಗಳಲ್ಲಿ ಇಂಗ್ಲೀಷ್ ಕಲಿಸುವುದಿಲ್ಲವೆಂದಲ್ಲ. ಆ ವಾತಾವರಣವಿಲ್ಲ. ಅದ್ದರಿಂದ ಅವರು ಇಂಗ್ಲೀಷ್‍ನಲ್ಲಿ ಹಿಂದುಳಿದಿದ್ದಾರೆ. ಉಳಿದ ಎಲ್ಲಾ ವಿಷಯಗಳನ್ನು ಕನ್ನಡದಲ್ಲಿ ಓದಿ ಇಂಗ್ಲೀಷನ್ನು ಮಾತ್ರ ಇಂಗ್ಲೀಷ್‍ನಲ್ಲಿಯೇ ಬರೆ ಎಂದರೆ ಅವರಿಗೆ ಕಷ್ಟವಾಗಿಬಿಡುತ್ತದೆ. ಇದನ್ನು ತಪ್ಪಿಸಲು ಉಳಿದ ವಿಷಯಗಳನ್ನು ಇಂಗ್ಲೀಷ್ ನಲ್ಲಿಯೇ ಬೋಧಿಸಿ, ಕನ್ನಡವನ್ನು ಮಾತ್ರ ಕನ್ನಡದಲ್ಲಿ ಬೋಧಿಸಿದರೆ, ಪರಿಸ್ಥಿತಿ ಸುಧಾರಿಸಬಹುದು.
ವಾಸ್ತವ ಸತ್ಯವನ್ನು ಒಪ್ಪಿಕೊಳ್ಳುವುದು ಸೂಕ್ತ. ಇಂದು ಪದವಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಓದುವ ವಾಣಿಜ್ಯ ಓದುವ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆಯಲ್ಲಿ ಯಾವುದೇ ತೊಂದರೆ ಇಲ್ಲದೇ ತೇರ್ಗಡೆಯಾಗುತ್ತಾರೆ. ಕಾರಣ ಅವರು ಉಳಿದ ಎಲ್ಲಾ ವಿಷಯಗಳನ್ನು ಇಂಗ್ಲೀಷ್‍ನಲ್ಲಿಯೇ ಓದುತ್ತಿರುತ್ತಾರೆ. ಆದರೆ ಕಲಾ ವಿಭಾಗದ ವಿದ್ಯಾರ್ಥಿಗಳು ಉಳಿದೆಲ್ಲಾ ವಿಷಯಗಳನ್ನು ಕನ್ನಡ ಮಾಧ್ಯಮದಲ್ಲಿಯೇ ಓದುವುದರಿಂದ ಅವರ ಇಂಗ್ಲೀಷ್ ವಿಷಯದಲ್ಲಿನ ತೇರ್ಗಡೆಯ ಪ್ರಮಾಣ ಕಡಿಮೆ. ಹೀಗಾಗಿ ಅವರಿಗೆ ನೌಕರಿಯ ಅವಕಾಶಗಳು ತಪ್ಪುತ್ತಿವೆ. ಹೀಗಾಗದಂತೆ ಮುನ್ನಚ್ಚರಿಕೆ ವಹಿಸಬೇಕೆಂದಾದರೆ, 6 ನೇ ತರಗತಿಯಿಂದಲೇ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪ್ರಾರಂಭಿಸಬೇಕಾಗುತ್ತದೆ. ನಮಗೆ ಇಂದು ಅಗತ್ಯವಾದುದು ಅನ್ನವೇ ವಿನ: ಮಾಧ್ಯಮವಲ್ಲ. ಆ ಕುರಿತು ಅನಗತ್ಯ ಗಲಾಟೆ ಬೇಕಿಲ್ಲ.
ರವೀಂದ್ರ ಭಟ್ ಕುಳಿಬೀಡು.