ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಅಡಿಕೆ ಬೆಲೆ ಎಲ್ಲಿಗೆ ಹೋಗಿ ಮುಟ್ಟುತ್ತದೆಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಹಿಂದೆ ಬೆಲೆ ಇಳಿದಾಗಲೂ ಯಾವ ಮಟ್ಟಕ್ಕೆ ಇಳಿಯಬಹುದೆಂದು ಯಾರೂ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಉಳಿದ ಆಹಾರ ಪದಾರ್ಥಗಳ – ತರಕಾರಿಗಳ ಬೆಲೆ ಏರುತ್ತಿದ್ದಂತೆ ಪೆಟ್ರೋಲ್ ಡೀಸೆಲ್‍ಗಳ ಬೆಲೆ ಕೂಡ ಏರುತ್ತಿದೆ. ಬೆಲೆ ಏರಿಕೆ ಮಾತ್ರ ಕಾಣುತ್ತಿದೆ. ಇಳಿಕೆಯ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಬೆಳೆಗೆ ಬೆಲೆ ಬಂದಾಗ ಬೆಳೆಗಾರರಿಗೆ ಖುಷಿಯಾಗುವುದು ಸಹಜ. ಸರಕಾರಿ ಯಾ ಖಾಸಗಿ ಕಂಪನಿಗಳ ನೌಕರರಿಗೆ ಸಂಬಳ ಏರಿದಾಗಲೂ ಹೀಗೆ. ಹಿಂದೆ ಕಾಲೇಜು ಶಿಕ್ಷಕರಿಗೆ ಯು.ಜಿ.ಸಿ. ವೇತನ ಶ್ರೇಣಿ ನೀಡಿದಾಗ ಉಳಿದ ನೌಕರಿಯವರು ಉದ್ಗಾರವೆತ್ತಿದ್ದರು. ತಮಗೂ ಹಾಗೇ ಇದ್ದರೆ ಎಂದು ಹಳಹಳಿಸಿದ್ದರು. ಈಗಿನ ಅಡಿಕೆ ಬೆಲೆಯ ಕುರಿತು ಅಡಿಕೆ ಬೆಳೆಗಾರರಲ್ಲದ ಬೇರೆ ಬೆಳೆಗಾರರೂ ಹಾಗೇ ಈಗ ಉದ್ಗರಿಸುತ್ತಿದ್ದಾರೆ. ಯಾವುದಾದರೂ ಇದ್ದಕ್ಕಿದ್ದಂತೆ ‘ಅತಿ’ ಎನ್ನಿಸಿದಾಗ ಹೀಗನ್ನಿಸುತ್ತದೆ. ಆದರೆ ಬಳಕೆದಾರ ಕಥೆಯನ್ನು ಕೇಳುವವರಿಲ್ಲ. ಟೊಮೊಟೋ ಕಬ್ಬಿಗೆ ಅಡಿಕೆಗೆ ಹೀಗೆ ಬೆಳೆಗಳ ಬೆಲೆ ಕುಸಿದಾಗಲೇ ಸರಕಾರದಿಂದ ಬೆಂಬಲ ಬೆಲೆ ಘೋಷಿಸುವಂತೆ ಹಕ್ಕೊತ್ತಾಯ ಮಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದ ಸಂಗತಿಯೇ ಹೌದು.
ಬೆಲೆ-ಸಂಬಳ ಅಧಿಕವಾಗುವುದರಿಂದ, ಆ ಬೆಲೆ ಬೆಳೆದ ಆ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುತ್ತದೆ. ಬಳಕೆದಾರರಿಗೆ ಕಷ್ಟವಾಗುತ್ತದೆ. ಕೂಲಿ-ನಾಲಿ ಮಾಡುವವರು ಈ ಪ್ರಮಾಣದಲ್ಲಿ ಅಡಿಕೆ ದರ ಏರಿದ್ದರಿಂದ ಎಲೆ ಅಡಿಕೆ ಹಾಕುವುದಕ್ಕೆ ಪಡುವ ಕಷ್ಟ ಪರಮಾತ್ಮನಿಗೇ ಪ್ರೀತಿ. ಹಾಗೇ ಉಳಿದವರು ಆರ್ಥಿಕವಾಗಿ ಎಷ್ಟೇ ಉತ್ತಮ ಸ್ಥಿತಿಯಲ್ಲಿದ್ದರೂ ಅವರ ಬಳಕೆಯ ವಸ್ತುಗಳ ಬೆಲೆ ಏರಿದಾಗ ಸಹಜವಾಗಿ ಗೊಣಗುತ್ತಾರೆ. ಉಳಿದವರನ್ನು ಸರಕಾರವನ್ನು ಸೇರಿಸಿ ದೂಷಿಸುತ್ತಾರೆ. ಅಂದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ಬೆಳೆಗೆ ಹೆಚ್ಚು ಹೆಚ್ಚು ಬೆಲೆ ಬರಬೇಕು ಅದೇ ಉಳಿದ ನಮ್ಮ ಬಳಕೆಯ ವಸ್ತುಗಳ ಬೆಲೆ ಇಳಿಯಬೇಕು. ಯಾರೂ ಕೂಡ ಸಾಕೆಂಬ ಹೇಳಿಕೆಯನ್ನು ಮುಂದಿಡುವುದಿಲ್ಲ.
ನಮ್ಮಲ್ಲಿ ಒಂದು ಮಾತಿದೆ – ‘ಮನುಷ್ಯ ಸಾಕೆನ್ನುವುದು ದೊಣ್ಣೆ ಪೆಟ್ಟು ಮಾತ್ರ’ ಅಂತ. ಅದು ಕೇವಲ ದೈಹಿಕ ನೋವಾಯಿತು. ಮನುಷ್ಯನಿಗೆ ದೈಹಿಕ ನೋವು ಅಥವಾ ಮಾನಸಿಕ ವೇದನೆ ಉಂಟಾದಾಗ ಸಾಕು ಸಾಕು ಎನ್ನುತ್ತಾನೆಯೇ ವಿನಃ ಉಳಿದ ಸಂದರ್ಭಗಳಲ್ಲಿ ಅಲ್ಲ. ಇಂದು ನಾವು ತುರ್ತಾಗಿ ಗಮನ ಹರಿಸಬೇಕಾದದ್ದು ಹೇಗೆ ಬೆಳೆಯನ್ನು ಬೆಳೆಯುವ ರೈತನನ್ನು ಕುರಿತು ಮತ್ತು ಅಷ್ಟೇ ತುರ್ತಾಗಿ ಗಮನ ಹರಿಸಬೇಕಾದ್ದು ಆ ಬೆಳೆಯನ್ನು ಬಳಸುವ ಬಳಕೆದಾರರನ್ನು. ಯಾರೊಬ್ಬರಿಗೂ ಅನ್ಯಾಯವಾಗುವುದು ಬೇಡ ಹಾಗೇ ಸಮತೋಲನ ತಪ್ಪಿ ಸಾಮಾಜಿಕ ಸ್ವಾಸ್ಥ್ಯ ಕೆಡುವುದೂ ಬೇಡ. ಹೀಗಾಗಬೇಕೆಂದಾದರೆ ಪ್ರತಿ ಬೆಳೆಗೂ ವೈಜ್ಞಾನಿಕವಾಗಿ ಬೆಲೆ ನಿಗದಿಯಾಗಬೇಕು. ಹೇಗೆ ಬಿಸ್ಕೆಟ್, ಚಾಕೊಲೇಟ್, ಇನ್ನಿತರ ಉತ್ಪನ್ನಗಳ ಮೇಲೆ ಬೆಲೆಯನ್ನು ಮತ್ತು ತಯಾರಿಕಾ ವರ್ಷವನ್ನು ನಿರ್ದಿಷ್ಟವಾಗಿ ನಮೂದಿಸಿರುತ್ತಾರೆ. ಅದೇ ರೀತಿಯಲ್ಲಿ ಉಳಿದ ಉತ್ಪನ್ನಗಳಿಗೂ ನಿರ್ದಿಷ್ಟ ಬೆಲೆ ನಿಗದಿಯಾದರೆ ಬೆಳೆಯುವವರಲ್ಲಿ ಮತ್ತು ಬಳಕೆದಾರರಲ್ಲಿ ಭರವಸೆಯಿದ್ದಿರುತ್ತದೆ. ಯಾವ ಹೊತ್ತಿಗೆ ಹೇಗೋ ಎಂಬ ಆತಂಕದಿಂದ ಇಬ್ಬರೂ ಮುಕ್ತವಾಗಿರಲು ಸಾಧ್ಯ ಬೇಕಿದ್ದರೆ ಸರಕಾರ ತನ್ನ ಬಜೆಟ್ ಮಂಡನೆಯಲ್ಲೇ ಅದನ್ನುಷ್ಟು ಪ್ರಸ್ತಾಪಿಸಿ; ಅದಕ್ಕೆ ತಕ್ಕಂತೆ ಎಲ್ಲವೂ ಇರುವಂತೆ ನೋಡಿಕೊಳ್ಳುವುದೂ ಸೂಕ್ತವಾದ ಕ್ರಮವೇ ಆಗಬಹುದು.
ಪ್ರತಿ ವರ್ಷವೂ ಸರಕಾರಿ ನೌಕರರ ಸಂಬಳ ಶೇಕಡವಾರು ಹೆಚ್ಚಳವಾಗುತ್ತಲೇ ಇರುತ್ತದೆ. ವರ್ಷಕ್ಕೆ ಎರಡು ಬಾರಿ ‘ತುಟ್ಟಿಭತ್ಯೆ’ಕೂಡ ನಿಗದಿಯಾಗಿ ನೀಡಲ್ಪಡುತ್ತದೆ. ಪ್ರತಿ ಐದು ಅಥವಾ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗದ ತೀರ್ಮಾನಕ್ಕನುಗುಣವಾಗಿ ಸಂಬಳದ ಪರಿಷ್ಕರಣೆಯಾಗುತ್ತದೆ. ಅದನ್ನು ‘ವೈಜ್ಞಾನಿಕ’ವೆಂದೇ ಪರಿಗಣಿಸಲಾಗುತ್ತದೆ. ದಿನೇ ದಿನೇ ಏರುತ್ತಿರುವ ಬೆಲೆಗಳನ್ನು ಆಧರಿಸಿ ಇದು ನಿರ್ಧರಿತವಾಗುತ್ತಿರುವುದು ನಿಜ. ಆದರೆ ಬೆಲೆಗಳೆಲ್ಲ ಒಂದು ಹತೋಟಿಯಲ್ಲಿದ್ದರೆ ಇಂಥ ಏರಿಕೆಯನ್ನು ಹತೋಟಿಯಲ್ಲಿ ಇಡಬಹುದು. ಹಾಗೇ ‘ತುಟ್ಟಿಭತ್ಯೆ’ಯನ್ನು ಕೂಡ. ಒಟ್ಟಾರೆ ದೇಶದ ಹಿತದ ದೃಷ್ಟಿಯಿಂದ ಆರ್ಥಿಕ ಶಿಸ್ತನ್ನು ಕಠಿಣವಾಗಿ ಜಾರಿಗೆ ತಾರದಿದ್ದ ಪಕ್ಷದಲ್ಲಿ ಭವಿಷ್ಯದಲ್ಲಿ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಬೆಳೆಯ ಬೆಲೆಯ ವೈಜ್ಞಾನಿಕ ನಿರ್ಧಾರ ಮತ್ತು ತನ್ಮೂಲಕವಾಗಿ ಬೆಳೆಗಾರನ ಹಿತ ಕಾಯುವುದು ಸರಕಾರದ ಜವಾಬ್ದಾರಿಯಾದಂತೆ ಬಳಕೆದಾರನಿಗೆ ಆಗುವ ಅನುಕೂಲಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಅವುಗಳ ಮಧ್ಯೆ ಒಂದು ಹೊಂದಾಣಿಕೆ ಮತ್ತು ಹದವನ್ನು ಕಾಪಾಡುವುದು ಸೂಕ್ತ. ಯಾರು ಎಷ್ಟೇ ಸಿಕ್ಕರೂ ಸಾಕೆಂದು ಹೇಳುವುದಿಲ್ಲ. ನಮಗಿಷ್ಟು ಸಾಕು, ನಮ್ಮ ಕುಟುಂಬದ ನಿರ್ವಹಣೆಗೆ ಇಷ್ಟು ಸಾಕು. ಆಪತ್ಕಾಲೀನ ಪರಿಸ್ಥಿತಿಯಲ್ಲಿ ಅನುಕೂಲವಾಗುವಂತೆ ಬೇಕಿದ್ದರೆ ಪ್ರತಿ ಕುಟುಂಬಕ್ಕೂ ಅನ್ವಯವಾಗುವಂತೆ ಬೇಕಿದ್ದರೆ ಆಪತ್ಕಾಲೀನ ನಿಧಿ ಸ್ಥಾಪಿಸಿ, ತತ್ ಕ್ಷಣದಲ್ಲಿ ದೊರಕುವಂತೆ ಕೂಡ ಮಾಡಬಹುದು. ಆದರೆ ಇದು ಕಾರ್ಯಸಾಧುವಲ್ಲವೆನ್ನಿಸಿದರೆ ಅವರವರ ಖಾತೆಯಲ್ಲಿ ಇಷ್ಟು ಹಣ (ಕನಿಷ್ಟ ಮತ್ತು ಗರಿಷ್ಟ) ಇರಬೇಕೆಂದು ತಿಳಿಸಿ ಅದನ್ನಷ್ಟು ಖಾತ್ರಿಗೊಳಿಸಿಕೊಳ್ಳುವುದು ಅಗತ್ಯ ಅನೇಕರಿಗೆÉ ವಿಶೇಷವಾದ ಸವಲತ್ತುಗಳು ಬೇಕಾಗುವುದು ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ. ಈ ಎರಡು ಖಾತೆಗಳು ಜನಸಾಮಾನ್ಯರಿಗೆ ಸದಾ ಕೈಗೆಟಕುವಂತಿದ್ದರೆ, ಬಹುತೇಕ ಜನರಲ್ಲಿ ಬೇಕು ಬೇಕೆಂಬ ಹಪಹಪಿಕೆ ಅಷ್ಟಾಗಿ ಇರದು.
ಇಂದು ರಾಜ್ಯದಾದ್ಯಂತ ನಡೆದ ಲೋಕಾಯುಕ್ತರ ದಾಳಿಯನ್ನು ನೋಡಿ. ಎಲ್ಲವೂ ಸಾಕಷ್ಟು ಸಂಬಳ ಪಡೆಯುವ – ಉಳ್ಳವರ ಮನೆಗಳ ಮೇಲೆಯೇ ನಡೆದದ್ದು. ಆದರೆ ಅವರುಗಳು ಪಡೆದ ಒಟ್ಟಾರೆ ಸಂಬಳಕ್ಕೂ – ಅವರು ಒಟ್ಟು ಹಾಕಿರುವ ಆಸ್ತಿಗೂ ತಾಳೆಯಾಗದ್ದು ಲೋಕಾಯುಕ್ತ ದಾಳಿಯಿಂದ ಪತ್ತೆಯಾಗಿದೆ ಎಂದಾದರೆ ಈ ಜನರ ಬೇಕು ಬೇಕೆಂಬ ಬೇಡಿಕೆಗೆ ಮಿತಿಯಿಲ್ಲವೆಂದೇ ಅರ್ಥ. ಇಂಥವರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಿಟ್ಟರೆ ಅವರು ಅತ್ಯಲ್ಪ ಕಾಲದಲ್ಲೇ ಇನ್ನಷ್ಟನ್ನು ಗಳಿಸಿ ಮೆರೆದಾಡಬಹುದು. ಹಾಗಾಗದಂತೆ ತಡೆಗಟ್ಟಲು ಅವರನ್ನು ಆಯಾ ಹುದ್ದೆಯಿಂದಲೇ ವಜಾಗೊಳಿಸಿ ಅವರ ಅಪ್ರಾಮಾಣಿಕತನಕ್ಕೆ ಶಿಕ್ಷೆಯಾಗಿ ಅವರನ್ನು ಮನೆಗೆ ಕಳಿಸುವುದು ಸೂಕ್ತ. ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗಳನ್ನು ಕನಿಷ್ಟಪಕ್ಷ ತೆರೆದ ಕಣ್ಣಿಂದ ವಿಶಾಲ ಹೃದಯದಿಂದ ಅವಲೋಕಿಸದಿದ್ದರೆ ಅವರ ಬದುಕು ಅವರೆಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕೂಡ ವ್ಯರ್ಥವೆನ್ನಬಹುದು.
ರವೀಂದ್ರ ಭಟ್ ಕುಳಿಬೀಡು