ಯಾವುದೇ ಒಂದು ವ್ಯವಸ್ಥೆಯೊಳಗೆ ವ್ಯಕ್ತಿಯೊಬ್ಬನ ಅಂತಃಸತ್ವವನ್ನು ಅಳೆಯಲು ಪರೀಕ್ಷೆ ನಡೆಸಬೇಕಾದದ್ದು ಅನಿವಾರ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಈ ಪರೀಕ್ಷೆ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೊತ್ತರ ಪದವಿಯವರೆಗೂ ಪ್ರತಿ ವರ್ಷ, ವರ್ಷದಲ್ಲಿ ಎರಡು ಬಾರಿ ಹೀಗೆ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳ ಬೌದ್ಧಿಕಮಟ್ಟವನ್ನು ಅಂಕಗಳ ಮೇಲೆ ನಿರ್ಧರಿಸಿ, ಮುಂದಿನ ವ್ಯಾಸಂಗಕ್ಕೆ ಅನುವು ಮಾಡಿಕೊಡುವುದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ, ಪರೀಕ್ಷೆಯ ವಿಧಾನಗಳು ಅದರ ಪಾವಿತ್ರ್ಯತೆ, ಅದು ಅಲ್ಲಲ್ಲಿಗೆ ಸಂಬಂಧಿಸಿದ ವಿಚಾರ.
ಇದೇ ಪದ್ದತಿ ನಮ್ಮ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೂ ಅನ್ವಯವಾಗಿದೆ. ಹಿಂದೆ ವರ್ಷಕ್ಕೊಂದು ಬಾರಿ ಪರೀಕ್ಷೆಗಳನ್ನು ನಡೆಸಿ ಆ ಮೂರು ಗಂಟೆಗಳ ಆವಧಿಯಲ್ಲಿ ಒಬ್ಬ ವಿದ್ಯಾರ್ಥಿ ತೋರ್ಪಡಿಸಿದ ಸಾಮಥ್ರ್ಯನುಗುಣವಾಗಿ ಅವನನ್ನು ಮುಂದಿನ ತರಗತಿಗಳಿಗೆ ಯೋಗ್ಯ ಅಥವಾ ಅಯೋಗ್ಯ ಎಂದು ತೀರ್ಮಾನಿಸಲಾಗುತ್ತಿತ್ತು. ವ್ಯವಸ್ಥೆಯೊಳಗಡೆ ಏನೇ ದೋಷಗಳಿದ್ದರೂ ಒಂದು ವ್ಯವಸ್ಥೆಯಂತೂ ಇತ್ತು. ಮತ್ತು ಆ ವ್ಯವಸ್ಥೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಂದಿಕೊಂಡಿದ್ದರು, ಆದರೆ ವರ್ಷವಿಡೀ ಓದಿದ್ದನ್ನು ಅಥವಾ ಉರು ಹೊಡೆದದ್ದನ್ನೆಲ್ಲ ಒಂದೇ ಬಾರಿಗೆ ಪರೀಕ್ಷೆಯಲ್ಲಿ ಕಕ್ಕುವ ಕ್ರಮಕ್ಕೆ ಬದಲಾವಣೆ ಬಂದದ್ದು ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಬೇಕೆಂಬ ಕಾಳಜಿಯಿಂದ ಹುಟ್ಟಿಕೊಂಡ ಸೆಮಿಸ್ಟರ್ ಪದ್ಧತಿಯಿಂದ, ಇಡೀ ವರ್ಷ ವಿದ್ಯಾರ್ಥಿ ಶೈಕ್ಷಣಿಕ ವಾತಾವರಣದಲ್ಲಿ ಎಂಬ ಸದಾಶಯ ಸೆಮಿಸ್ಟರ್ ಪದ್ಧತಿಯ ಹಿಂದೆ ಇದ್ದದ್ದೆನೋ ಸತ್ಯ ಅದರಿಂದಾಗಿ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ, ಸಾಸ್ಕøತಿಕ ಚಟುವಟಿಕೆಗಳಿಗೆ ಸಮಯ ಸಾಲದೆಂಬ ಗೊಣಗಾಟ ಒಂದೆಡೆಯಿಂದ ಕೇಳಿಬರುತ್ತಿದ್ದರೆ ಇನ್ನೊಂದೆಡೆಯಿಂದ ಸೆಮಿಸ್ಟರ್ ಪದ್ದತಿಯೆಂದರೆ ಕೇವಲ ಪರೀಕ್ಷಾ ಪದ್ಧತಿಯೇ? ಪ್ರಶ್ನಿಸುವಂತಾಗಿದೆ.
ಪಾಠಗಳನ್ನು ಆಧರಿಸಿ ಪರೀಕ್ಷೆಗಳನ್ನು ನಡೆಸಬೇಕೆ ವಿನಃ, ಪರೀಕ್ಷೆಗಳನ್ನಾಧರಿಸಿ ಪಾಠಗಳನ್ನು ರೂಪಿಸುವುದಲ್ಲ, ಇಂದು ಪದವಿಯಲ್ಲಿ ಅಭ್ಯಸಿಸುವ ಪ್ರತಿ ವಿದ್ಯಾರ್ಥಿಯನ್ನು ಕಾಡುವ ಪ್ರಶ್ನೆಯೆಂದರೆ, ತಾವು ಪಠ್ಯದ ಅಧ್ಯಯನಕ್ಕಾಗಿ ಬಂದಿದ್ದೆವೆಯೋ ಅಥವಾ ಕೇವಲ ಪರೀಕ್ಷೆಗಳನ್ನೆದುರಿಸಲು ಬಂದಿದ್ದೇವೆಯೋ ಎಂಬುದು. ಶಿಕ್ಷಕ ಸಮುದಾಯಕ್ಕೂ, ತಾವು ಪಾಠ ಹೇಳಲು ಇದ್ದೆವೆಯೋ ಅಥವಾ ಕೇವಲ ಪರೀಕ್ಷೆ ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದಕ್ಕಷ್ಟೇ ನಿಗದಿಯಾಗಿದ್ದೆವೋ ಎಂಬ ಬಲವಾದ ಗುಮಾನಿ ಕಾಡುತ್ತಿದ್ದರೆ ಆಶ್ಚರ್ಯವಿಲ್ಲ.
ಕಾರಣವಿಷ್ಟೇ, ಪ್ರತಿ ಸೆಮಿಸ್ಟರ್ ಅಂತ್ಯಕ್ಕೆ ಪರೀಕ್ಷೆಗಳು ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆಯುತ್ತದೆ. ಅಂದರೆ ವರ್ಷದಲ್ಲಿ ಮೂರು ತಿಂಗಳುಗಳ ಕಾಲ ಪರೀಕ್ಷೆಗಳೇ ಜರುಗುತ್ತಿರುತ್ತವೆ, ಅವುಗಳಲ್ಲಿ ಶಿಕ್ಷಕರು ತೊಡಗಿರುವುದು ಅನಿವಾರ್ಯ, ಅನಂತರ ಮೌಲ್ಯಮಾಪನ ಈ ಮೌಲ್ಯಮಾಪನ ಪ್ರಕ್ರಿಯೆ, ಪರೀಕ್ಷೆಗಳು ನಡೆಯುವ ರಜಾ? ಅವಧಿಯಲ್ಲಿ ಜರುಗಿದರೆ ತೊಂದರೆಯಿಲ್ಲ. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಪ್ರತಿಬಾರಿ ಅನಂತರದ ಸೆಮಿಸ್ಟರ್ ಶೈಕ್ಷಣಿಕ ವರ್ಷ ಪ್ರಾರಂಭವಾದ ಮೇಲೂ ಸಹ ಹತ್ತು, ಹದಿನೈದು ದಿನಗಳ ಕಾಲ ಜರುಗುತ್ತಿರುತ್ತದೆ. ಅಂದರೆ ಪ್ರತಿ ಸೆಮಿಸ್ಟರನ್ನು ಶೈಕ್ಷಣಿಕ ಅವಧಿಯ ಪ್ರಾರಂಭದ ಹದಿನೈದು ದಿನಗಳು ಮೌಲ್ಯಮಾಪನಕ್ಕಾದರೆ, ವರ್ಷದಲ್ಲಿ ಒಂದು ತಿಂಗಳ ಅವಧಿ, ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ವ್ಯರ್ಥವಾದಂತೆ, ಇದರೊಟ್ಟಿಗೆ ವಿಶ್ವವಿದ್ಯಾಲಯಗಳ ದೂರಶಿಕ್ಷಣ ಕೇಂದ್ರಗಳು ನಡೆಸಿದ ಪರೀಕ್ಷೆಗಳಿಗೂ ಇದೇ ಶಿಕ್ಷಕರನ್ನು ಬಳಸಿಕೊಂಡಾಗ ಈ ಅವಧಿ ಇನ್ನಷ್ಟು ಅಧಿಕವಾಗುತ್ತ ಸಾಗುತ್ತದೆ. ಇದು ವಿಶ್ವವಿದ್ಯಾಲಯವೇ ಅಧಿಕೃತವಾಗಿ ನಡೆಸುವ ಪ್ರಕ್ರಿಯೆ.
ಶಿಕ್ಷಣದ ಆತಂರಿಕ ಗುಣಮಟ್ಟದ ಹೆಚ್ಚಳಕ್ಕಾಗಿ ಪದವಿಗಳಲ್ಲಿ ಆತಂರಿಕ ಅಂಕಗಳನ್ನು ನಿಗದಿಗೊಳಿಸಲಾಗಿದೆ. ಅವುಗಳ ನಿರ್ಧಾರಕ್ಕಾಗಿ ಪ್ರತಿ ಸೆಮಿಸ್ಟರ್ ನಲ್ಲೂ ವಿದ್ಯಾರ್ಥಿಗಳಿಗೆ ಎರಡು ಆತಂರಿಕ ಕಿರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅವುಗಳನ್ನು ಜರುಗಿಸಲು ಮತ್ತು ಅವುಗಳು ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ವಿಶ್ವವಿದ್ಯಾಲಯಗಳಿಗೆ ಕಳಿಸಿಕೊಡಲು ಪ್ರತಿ ಸೆಮಿಸ್ಟರ್‍ನಲ್ಲೂ ಕನಿಷ್ಠ ಹತ್ತು ದಿನಗಳ ಅಗತ್ಯವಿದ್ದೇ ಇರುತ್ತದೆ. ಇವುಗಳನ್ನೆಲ್ಲಾ ಗಮನಿಸಿದಾಗ ಶೈಕ್ಷಣಿಕ ಅವಧಿಯಲ್ಲಿ ನಿಜಕ್ಕೂ ನಿಗದಿತ ಪಠ್ಯವನ್ನು ಬೋಧಿಸಲು ಸಿಗುವ ಅವಧಿ ಕುಗ್ಗುತ್ತ ಹೋಗುತ್ತಿರುವುದು ಯಾರ ಗಮನಕ್ಕಾದರು ಬರಬಹುದಾದ ವಿಷಯ.
ಪರೀಕ್ಷೆಗಳು ಮತ್ತು ಮೌಲ್ಯಮಾಪನ ಇವೆ ವಿದ್ಯಾರ್ಥಿಗಳಿಗೆ ಪಾಠಕ್ಕೆ ದಕ್ಕಬೇಕಾದ ಅವಧಿಯನ್ನೆಲ್ಲಾ ಕಬಳಿಸುತ್ತಿದೆ. ಅವರು ಪಾಪ ಏನು ಮಾಡಿಯಾರು? ಪಾಠವೇ ಸಸೂತ್ರವಾಗಿ ಜರುಗದೇ ಅವರಿಂದ ಗುಣಮಟ್ಟದ ಉತ್ತರಗಳನ್ನು ನಿರೀಕ್ಷಿಸುವುದಾದರು ಹೇಗೆ ಸಾಧ್ಯ. ಅಪವಾಧಗಳು ಇರಬಹುದು ಆದರೆ ಅಪವಾಧಗಳು ಎಂದಿಗೂ ವಾಕ್ಯಕ್ಕೊಳಗೊಳ್ಳುವುದಿಲ್ಲ.
ಪದವಿ ಕಾಲೇಜುಗಳಿಗೆ ವರ್ಷಕ್ಕೆ ಎರಡು ಭಾರಿ ರಜಾ ಅವಧಿ ಅಂದರೆ ಶಿಕ್ಷಕರಿಗೆ ರಜಾ. ರಜಾ ಅವಧಿಯುಳ್ಳ ನೌಕರರು ಎಂದು ಸರ್ಕಾರವೇನೋ ಪರಿಗಣಿಸಿದೆ. ಅದರೆ ವಾಸ್ತವವಾಗಿ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬಹುತೇಕ ವಿಭಾಗಗಳ ಶಿಕ್ಷಕರಿಗೆ ರಜೆ ಎಂಬುದೆ ದಕ್ಕುತ್ತಿಲ್ಲ ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲೇ ವರ್ಷದ ಬಹಳಷ್ಟು ಅವಧಿಯು ವ್ಯಯವಾಗುತ್ತಿರುವಾಗ ಅವರು ಕೂಡ ಹೊಸ ಹೊಸದನ್ನು ಅಧ್ಯಯನ ಮಾಡಲಿಕ್ಕಾಗಲಿ ಅವರು ಬೆಳೆಯುವುದಕ್ಕಾಗಲಿ ಅದರ ಲಾಭವನ್ನು ಅವರ ವಿದ್ಯಾರ್ಥಿಗಳಿಗೆ ಹಂಚುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. ಅದರೊಟ್ಟಿಗೆ ಇದ್ದುದರಲ್ಲೇ ಒಂದಿಷ್ಟು ಹೆಚ್ಚುವರಿಯಾಗಿ ಹೇಳ ಹೊರಟರೆ ಅದು ಪರೀಕ್ಷೆಗೆ ಇದೆಯಾ? ಪರೀಕ್ಷೆಗಳಲ್ಲಿ ಅವುಗಳ ಮೇಲೆ ಪ್ರಶ್ನೆಗಳು ಇವೆಯಾ? ಎಂದು ಪ್ರಶ್ನಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕ. ಪಾಪ ಅವರಿಗೂ ಪರೀಕ್ಷೆಗಳೆಂಬ ಸಾಗರವನ್ನು ಹೇಗೂ ದಾಟಿ ಅಚೆ ದಡವನ್ನು ಸೇರಿದರೆ ಸಾಕು ಎಂಬ ಭಾವನೆ.
ಎಲ್ಲವೂ ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸುವ ಪರೀಕ್ಷೆ ಮತ್ತು ಅಂಕ ಗಳಿಕೆಯನ್ನೆ ಆಧರಿಸಿದ್ದು. ಪದವಿಗಳೆಂದರೆ ಕೇವಲ ಪರೀಕ್ಷೆಗಳಿಗೆ ಪ್ರಯತ್ನಿಸುವುದು, ಅಂಕಗಳಿಸುವುದು ಎಂಬ ಭಾವನೆ, ಅದು ಸತ್ಯ ಕೂಡ. ಪರೀಕ್ಷೆಗಳಿಂದ ಅಷ್ಟೇ ಪದವಿ ಪ್ರಾಪ್ತಿ ಹಾಗಾಗಿ ಪರೀಕ್ಷೆಗಳನ್ನಷ್ಟು ಎದುರಿಸುವ ಕೌಶಲ್ಯ ಕಲಿತರೆ ಸಾಕು. ಪದವಿ ದಕ್ಕಿದಂತೆ ಇದು ವಿದ್ಯಾರ್ಥಿಗಳ ಪಾಡಾದರೇ, ಶಿಕ್ಷಕರ ಪಾಡು ಕೂಡ ಇದ್ದಕ್ಕಿಂತ ಭಿನ್ನವಾಗಿಲ್ಲ. ಪರೀಕ್ಷೆಗಳನ್ನು ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದು ವ್ಯವಸ್ಥೆಯತ್ತ ಜವಾಬ್ದಾರಿಯೆಂದು ತಿಳಿದು, ಅದರಲ್ಲೇ ಅವರಿಗರಿವಾಗದಂತೆ ಅವರು ಕಳೆದು ಹೋಗುತ್ತಿದ್ದಾರೆ. ದಿನೇ ದಿನೇ ಒಂದರ್ಥದಲ್ಲಿ ವ್ಯವಸ್ಥೆಯ ಕಾರಣದಿಂದ ದುರ್ಬಲವಾಗುತ್ತಿದ್ದರೆ ಮುಂದೆ ಈ ‘ಪದವಿ’ ಎಂಥದ್ದಾಗಿರಬಹುದು?.
ರವೀಂದ್ರ ಭಟ್ ಕುಳಿಬೀಡು.
- Advertisement -
- Advertisement -
- Advertisement -
- Advertisement -