Home Education ನಂಬಿಕೆ ಇಲ್ಲದ ಪರೀಕ್ಷೆಗಳು. . . . . ?

ನಂಬಿಕೆ ಇಲ್ಲದ ಪರೀಕ್ಷೆಗಳು. . . . . ?

0

ವ್ಯಕ್ತಿಯೊಬ್ಬನ ಯೋಗ್ಯತೆಯನ್ನು ಅಳೆಯಲು ಪರೀಕ್ಷೆ ಅಗತ್ಯ ಪರೀಕ್ಷೆಯ ಮಾನದಂಡಗಳೇನೇ ಇದ್ದರೂ ಪ್ರಾಮುಖ್ಯತೆಯಂತೂ ಅನಾದಿಕಾಲದಿಂದಲೂ ಇದ್ದೇಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪರೀಕ್ಷೆ’ ಎಂದರೆ ವಿದ್ಯಾರ್ಥಿಗಳಲ್ಲೇನೋ ಸಾಕಷ್ಟು ಭಯ ಭಕ್ತಿ ಇರಬಹುದು. ಆದರೆ ಅವುಗಳನ್ನು ನಡೆಸುವವರಿಗೆ ಮತ್ತು ಮೌಲ್ಯಮಾಪನ ಮಾಡುವವರಿಗೆ ಅದು ಅಷ್ಟೊಂದು ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ಮಾಡಬೇಕಲ್ಲ ಎಂದು ಮಾಡಿ, ಕೈ ತೊಳೆದುಕೊಂಡರೆ ಸಾಕು ಎಂಬ ಮಟ್ಟಕ್ಕೆ ಶಾಲೆ ಕಾಲೇಜುಗಳಲ್ಲಿನ ಪರೀಕ್ಷಾ ವ್ಯವಸ್ಥೆ ತಲುಪುತ್ತಿರುವುದಕ್ಕೆ ಶಿಕ್ಷಣದಲ್ಲಿ ಗುಣಮಟ್ಟದ ಸುಧಾರಣೆ ಎನ್ನಬೇಕೋ ಕುಸಿತ ಎಂದು ಭಾವಿಸಬೇಕೋ ತಿಳಿಯದ ಗೊಂದಲದಲ್ಲಿ ಇದ್ದೇವೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಅನೇಕ ಯೋಜನೆಗಳು ಜಾರಿಯಾದದ್ದು ಸಂತೋಷದ ಸಂಗತಿ. ಮಧ್ಯಾಹ್ನದ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆ, ಸೈಕಲ್ ಯೋಜನೆ ಇವೆಲ್ಲ ಜಾರಿಗೊಂಡು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ತಕ್ಕಮಟ್ಟಿನ ಅನುಕೂಲವಾಗಿದ್ದು ನಿಜ. ಆದರೆ ಪ್ರಶ್ನೆ ಇರುವುದು – ವಿದ್ಯಾರ್ಥಿಗಳು ‘ಶಾಲೆ’ ಎಂಬ ಕಟ್ಟಡಕ್ಕೆ ಭೇಟಿ ನೀಡಿ ಬೆಳಗಿನಿಂದ ಸಂಜೆಯವರೆಗೆ ಇದ್ದು ಬರುವುದಕ್ಕೊ ಅಥವಾ ಶಿಕ್ಷಣವನ್ನು ಕಲಿಯಲಿಕ್ಕೋ? ಯಾಕೆಂದರೆ ಶಿಕ್ಷಣ ಕಲಿಸಲು ಅಗತ್ಯವಾದ ಸಂಖ್ಯೆಯಲ್ಲಿ ಶಿಕ್ಷಕರಿಲ್ಲ. ಪಠೈಪುಸ್ತಕಗಳೂ ಸಕಾಲದಲ್ಲಿ ದೊರಕುವುದು ದುಸ್ತರವಾದ ಸಂಗತಿಯೇ. ಇರುವಷ್ಟೇ ಶಿಕ್ಷಕರಿಗೆ ಶಿಕ್ಷಣದ ಕೆಲಸದ ಹೊರೆಯ ಜೊತೆ ಜೊತೆಗೆ –‘ಗಣತ’ ಇತ್ಯಾದಿಗಳ ವಹಿವಾಟು, ಹಾಗಾಗಿ ನಡೆಯಬೇಕಾದ ಪ್ರಮಾಣದಲ್ಲಿ ಪಾಠ ನಡೆಯದಿದ್ದಾಗ ನಡೆಸುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳೆಲ್ಲ ಚೆನ್ನಾಗಿ ಬರೆದು ಪಾಸು ಮಾಡಬೇಕೆಂದು ನಿರೀಕ್ಷಿಸುವುದು ಹೇಗೆ? ಅವರೆಲ್ಲ ಹೇಗೆ ಬರೆದರೂ ಪಾಸು ಮಾಡದೇ ಅವರನ್ನು ಅದೇ ಕ್ಲಾಸಿನಲ್ಲಿ ಮತ್ತೊಂದು ವರ್ಷ ಕೂರಿಸಿದರೆ – ಅದಕ್ಕೆ ಅವರು, ಪಾಲಕರು ಒಟ್ಟಾಗಿ ಪ್ರಶ್ನಿಸಬಹುದು. ನೀವು ಸರಿಯಾಗಿ ಪಾಠ ಮಾಡಿಲ್ಲ. ಬಹುತೇಕೆ ಸಂದರ್ಭಗಳಲ್ಲಿ ಹೀಗೆ ಹೇಳುವುದು ಇದಕ್ಕೆ ಅಪವಾದಗಳೂ ಇರಲು ಸಾಧ್ಯ ಅದು ಬೇರೆ ಮಾತು. ಹೀಗಾದಾಗ ಅನಿವಾರ್ಯವಾಗಿ ಎಲ್ಲ ವಿದ್ಯಾರ್ಥಿಗಳೂ ಪಾಸು. ಒಂದರಿಂದ ಹತ್ತರವರೆಗೆ ಯಾರೂ ಫೇಲಿಲ್ಲ ಎಂದರೆ ಒಂದು ರೀತಿಯಲ್ಲಿ ಅವರಿಗೆಲ್ಲ ‘ಪಾಸು ಭಾಗ್ಯ’ ಯೋಜನೆ ಪ್ರಾಪ್ತವಾದಂತೆ. ಹಾಗೆ ಹೇಗೂ ಪಾಸು ಮಾಡುತ್ತಾರೆಂದಾದ ಮೇಲೆ ಯಾರಾದರೂ ಯಾಕೆ ಕಲಿಕೆಗೆ ಪ್ರಯತ್ನಿಸುತ್ತಾರೆ? ಫೇಲಾಗುವ ಭಯವಿದ್ದಾಗ ಮಾತ್ರ ಓದುವ ಹಟ ಹುಟ್ಟಿಕೊಳ್ಳುತ್ತದೆ. ಹಟತೊಟ್ಟು, ಓದದಿದ್ದರೆ ಕಲಿಯುವುದಾದರೂ ಹೇಗೆ? ಇದೊಂದು ರೀತಿಯಲ್ಲಿ ‘ಬೀಜ ವೃಕ್ಷ’ ನ್ಯಾಯದಂತಾಗಿಬಿಟ್ಟಿದೆ. ಒಂದೇ ಬಾರಿ ಎಸ್.ಎಸ್.ಎಲ್.ಸಿ. ಕೇಂದ್ರೀಯ ಪರೀಕ್ಷೆಯಲ್ಲಿ ಇದರ ಪರಿಣಾಮ ತಿಳುಯುತ್ತದೆ. ಪಿಯುಸಿಗೂ ಹಾಗೆ ಪಬ್ಲಿಕ್ ಪರೀಕ್ಷೆ, ಪದವಿಗಳಿಗೂ ಹಾಗೆ ಪ್ರತಿ ಸೆಮಿಸ್ಟರ್ ಪರೀಕ್ಷೆಯೂ ಪಬ್ಲಿಕ್ ಪರೀಕ್ಷೆ ಎಂ.ಎ, ಡಿ.ಎಡ್, ಬಿ.ಎಡ್ ಇತ್ಯಾದಿಗಳಿಗೂ ಹಾಗೆ ಪಬ್ಲಿಕ್ ಪರೀಕ್ಷೆ ಹಾಕಿದ ಮೇಲೆ ಈ ಪರೀಕ್ಷೆಗಳೆಲ್ಲ ವಿದ್ಯಾರ್ಥಿಗಳ ನಿಜವಾದ ಜ್ಞಾನದ ಮಟ್ಟವನ್ನು ಗುರುತಿಸಿ ಅದನ್ನು ಅಂಕಪಟ್ಟಿಯಲ್ಲಿ ದಾಖಲಿಸಬೇಕಲ್ಲ? ನಿಜ, ಅವು ದಾಖಲಿಸುತ್ತವೆ. ಹಾಗಿದ್ದರೆ, ಆಯಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ಮುಂದಿನ ಶಿಕ್ಷಣಕ್ಕೆ ಪ್ರವೇಶ ಅಥವಾ ನೌಕರಿಯನ್ನು ನೀಡಲಾಗುತ್ತಿದೆಯೇ? ಖಂಡಿತ ಇಲ್ಲ. ಯಾಕೆಂದರೆ ಆ ಪರೀಕ್ಷೆಗಳ ಫಲಿತಾಂಶದ ಮೇಲೆ ಬಹುಶಃ ಇಂದು ನಂಬಿಕೆಯೇ ಇಲ್ಲವಾಗಿದೆ.
ದ್ವಿತೀಯ ಪಿಯೂಸಿ ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಅಂಕಗಳ ಆಧಾರದ ಮೇಲೆ ಆತ/ಆಕೆಗೆ ವೃತ್ತಿ ಶಿಕ್ಷಣ ಪಡೆಯಲು ಅವಕಾಶವಿಲ್ಲ. ಅವರು ಸಿಇಟಿ ಬರೆದು ಅದರ ಆಧಾರದ ಮೇಲೆ ದೊರಕುವ ಕೋರ್ಸುಗಳಿಗೆ ಸಾಗಬೇಕು. ಎಷ್ಟೋ ಸ್ನಾತಕ್ಕೋತ್ತರ ವಿಷಯಗಳಿಗೆ ಸೇರಲು ಕೂಡ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆ ನಡೆಸುತ್ತವೆ. ಹಾಗೇ ಡಿಎಡ್, ಮತ್ತು ಬಿಎಡ್ ಆದವರು. ಅವರು ಪದವಿಯಲ್ಲಿನ ಪರೀಕ್ಷೆಗಳಲ್ಲಿ ಪಡೆದುಕೊಂಡ ಅಂಕಗಳ ಆಧಾರದ ಮೇಲೆ ನೌಕರಿಗೆ ಅರ್ಹರಾಗುವುದಿಲ್ಲ. ಅವರಿಗೆ ಅದಕ್ಕೋಸ್ಕರವಾಗಿಯೇ ‘ಟಿಇಟಿ’ ನಡೆಸುತ್ತಾರೆ. ಎಂ.ಎ., ಎಂ.ಎಸ್ಸಿ; ಎಂ.ಕಾಂ ಆದರೆ ಕಾಲೇಜುಗಳಿಗೆ ಶಿಕ್ಷಕರಾಗಲಾಗುವುದಿಲ್ಲ. ಖಾಯಂ ಶಿಕ್ಷಕರಾಗಲು ನೆಟ್ ಸ್ಲೆಟ್ (NET), (SLET)  ಪರೀಕ್ಷೆಗಳನ್ನು ನಡೆಸುತ್ತಾರೆ. ಇನ್ನು ಬ್ಯಾಂಕ್ ಇತ್ಯಾದಿ ಕಡೆಗಳಲ್ಲಿ ಕೂಡ ಅವರು ಅವರದ್ದೇ ಆದ ಪರೀಕ್ಷೆಗಳನ್ನು ನಡೆಸುತ್ತಾರೆ.
ಯಾರೂ ಕೂಡ ಕೇವಲ ಶೈಕ್ಷಣಿಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನಷ್ಟೇ ಆಧರಿಸಿ ನೌಕರಿ ನೀಡುವುದಿಲ್ಲ. ಇದಕ್ಕೆ ಖಾಸಗಿ ಕಂಪನಿಗಳೂ ಹೊರತಾಗಿಲ್ಲ. ಅಂದರೆ ಏನು ಅರ್ಥ? ಪಡೆದ ಶಿಕ್ಷಣಕ್ಕೆ, ಸಂಬಂಧಿಸಿದಂತೆ ಸಂಬಂಧಿಸಿದ ಪರೀಕ್ಷಾ ಮಂಡಳಿ, ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳಲ್ಲಿ ನಂಬಿಕೆ ಇಲ್ಲ ಎಂದು ಅರ್ಥವಾಗುವುದಿಲ್ಲವೇ? ನಂಬಿಕೆ ಇಲ್ಲದ ಪರೀಕ್ಷೆಗಳು ಇವು ಎಂದಾದ ಮೇಲೆ ಇವುಗಳನ್ನು ನಡೆಸುವುದರ ಪ್ರಯೋಜನ ಕೂಡಾ ಕಾಲ ಕ್ರಮೇಣ ಪ್ರಶ್ನಾರ್ಹವಾಗಬಹುದು. ಹೇಗೂ ಅವರವರು ಅವರವರಿಗೆ ಬೇಕಾದಂತಹ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ‘ಕನಿಷ್ಟ’ ವಿದ್ಯಾರ್ಹತೆಗಾಗಿ ಅಷ್ಟೇ ಈ ಅಂಕಪಟ್ಟಿಗಳು ಎಂದಾದರೆ ಯಾಕೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕು? ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳು ಎಲ್ಲರೂ ಪಾಸು ಎಂಬ ತತ್ವವನ್ನೇ ಮುಂದುವರಿಸಿದರೆ ತಪ್ಪೇನು ಎಂದು ಪ್ರಶ್ನಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಹಾಗಾಗಿ ‘ಪಾಸುಭಾಗ್ಯ’ ಯೋಜನೆಯನ್ನು ಸ್ನಾತಕ – ಸ್ನಾತಕೋತ್ತರ ಹಂತದವರೆಗೂ ವಿಸ್ತರಿಸಿದರೆ ಹೇಗೆ? ಕುಹಕದ ಮಾತಾದೀತು ಅಷ್ಟೆ. ಯಾಕೆಂದರೆ, ಉಳಿದವರಿಗೆ ನಂಬಿಕೆ ಇಲ್ಲ ಎಂದಾದರೆ ಓದುವವರಿಗೆ ಮತ್ತು ಕಲಿಸುವವರಿಗೆ ನಂಬಿಕೆ ಇಲ್ಲ ಎಂದು ಅರ್ಥವಾಗುವುದಿಲ್ಲ. ಪರೀಕ್ಷೆಗಳಿವೆ, ಪಾಸಾಗಬೇಕಾದ್ದು ಅವಶ್ಯಕ ಎಂಬ ಕಲ್ಪನೆ ಸ್ಥಿರವಾಗಿದ್ದುದರಿಂದಲೇ ಇಷ್ಟರ ಮಟ್ಟಿಗಾದರೂ ಶಿಸ್ತಿನಿಂದ ಇಂದು ಶೈಕ್ಷಣಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಶೈಕ್ಷಣಿಕ ವಾತಾವರಣಕ್ಕೆ ಇದು ಅಗತ್ಯ ಹಾಗಲ್ಲದೆ ಹೋದರೆ ಒಟ್ಟಾರೆ ವ್ಯವಸ್ಥೆ ಭವಿಷ್ಯದಲ್ಲಿ ಸಂಪೂರ್ಣ ಹದಗೆಟ್ಟುಹೋಗುವ ಸಾಧ್ಯತೆಯಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಪರೀಕ್ಷೆಗಳು ಪ್ರಸ್ತುತ ದಿನಮಾನಗಳಲ್ಲಿ ನಂಬಿಗೆ ಕಳೆದುಕೊಳ್ಳುತ್ತಿರುವುದು ನಿಜ. ಆದರೆ ನಮ್ಮ ಪ್ರಯತ್ನವಿರಬೇಕಾದದ್ದು ನಂಬಿಕೆಯನ್ನು ಉಳಿಸುವ ದಿಕ್ಕಿನಲ್ಲಿ. ಅಂಕಪಟ್ಟಿಗೆ ಅದರದ್ದೇ ಆದ ಮಾನ್ಯತೆ ಮತ್ತು ಯೋಗ್ಯತೆ ಲಭ್ಯವಾಗುವಂತೆ ಒಟ್ಟಾರೆ ವಾತಾವರಣದ ನಿರ್ಮತಿ ಕೂಡ ಇಂದಿನ ಅಗತ್ಯ ಪರೀಕ್ಷಾ ಅಕ್ರಮಗಳು – ಅನಗತ್ಯ ಹಗರಣಗಳು, ಪ್ರಶ್ನೆಪತ್ರಿಕೆಯ ಸೋರಿಕೆ – ಬೇಕಾಬಿಟ್ಟಿ ಮೌಲ್ಯಮಾಪನ ಇಂಥವುಗಳೆಲ್ಲ ನಿಂತ ಪಕ್ಷದಲ್ಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನೆಮ್ಮದಿ ದೊರಕೀತು. ಹಾಗೆ ಪ್ರಾಮಾಣಿಕ ಶ್ರದ್ಧಾವಂತ ಶಿಕ್ಷಕ ಸಮುದಾಯಕ್ಕೆ ಸಂತಸ ದೊರಕಲು ಸಾಧ್ಯ ನಂಬಿಕೆ ಇಲ್ಲದ ಪರೀಕ್ಷೆಗಳು ಎಂದು ಪರೀಕ್ಷೆಗಳನ್ನೇ ರದ್ದುಗೊಳಿಸಿ ಎಲ್ಲರೂ ಪಾಸೆಂದು ಘೋಷಿಸುವುದು ಯುಕ್ತವಾದ ಕ್ರಮವಲ್ಲ. ಬದಲಿಗೆ ಪರೀಕ್ಷೆಗಳೆಲ್ಲ ನಂಬಿಕೆಗೆ ಅರ್ಹವಾಗುವಂತೆ ನೋಡಿಕೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಾಟಾಚಾರದ ಪರೀಕ್ಷಾ ವ್ಯವಹಾರಗಳಿಗೆ ಕಡಿವಾಣ ಹಾಕುವುದಲ್ಲದೆ ಭ್ರಷ್ಟಾಚಾರ ನುಸುಳದಂತೆ ಜಾಗ್ರತೆ ವಹಿಸಬೇಕಾದದ್ದೂ ಅಗತ್ಯ ಹೇಗೆಂದರೆ ‘ಸೀಸರನ ಹೆಂಡತಿ ಪತಿವ್ರತೆಯಾಗಿದ್ದರಷ್ಟೇ ಸಾಲದು; ಹಾಗಂತ ಲೋಕಕ್ಕೆ ನಿರೂಪಿಸುವುದೂ ಮುಖ್ಯ’ ಎಂಬಂತೆ.
ಇನ್ನು ಈ ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿಗಳೆಲ್ಲ ಜಾರಿಗೆ ಬಂದದ್ದೇ ಪ್ರತಿಭಾವಂತರಿಗೆ ಅನ್ಯಾಯವಾಗದಿರಲಿ ಎಂದು. ಈ ಪರೀಕ್ಷೆಗಳೆಲ್ಲ ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ಜರುಗುತ್ತಿರುವುದರಿಂದ ಜನರಿಗೆ ಇವುಗಳ ಮೇಲೆ ನಂಬಿಕೆ ಹುಟ್ಟಿಕೊಂಡಿದೆ. ಹಾಗೆ ಯಾವುದೇ ವಶೀಲಿ ಬಾಜಿಗೂ ಕೈ ಹಾಕದೆ ಮುಂದಿನ ವ್ಯಾಸಂಗ ಕೈಗೊಳ್ಳಲು ಯಾ ನೌಕರಿಯನ್ನು ಪಡೆದುಕೊಳ್ಳಲು ಇವು ಸಹಾಯ ಮಾಡುತ್ತವೆ ಎಂಬ ತೃಪ್ತಿ ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಮೂಡಿರುವುದು ಸುಳ್ಳಲ್ಲ. ಹೀಗಾಗಿ ನಾವು ಇಂದು ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಾದರೂ ಅತ್ಯಂತ ಜವಾಬ್ದಾರಿಯಿಂದ ಈ ಪರೀಕ್ಷೆಗಳಿಗೆ ಮಾತ್ರ ಇನ್ನಿಲ್ಲದ ರೀತಿಯಲ್ಲಿ ತರಬೇತಿ ಪಡೆದುಕೊಳ್ಳುತ್ತ – ಅಧ್ಯಯನ ಮಾಡುತ್ತ ಸಿದ್ಧರಾಗುತ್ತಾರೆ. ಯಾಕೆಂದರೆ ಈ ಪರೀಕ್ಷೆಗಳ ಫಲಿತಾಂಶ ಅವರವರ ಬದುಕಿನ ದಿಕ್ಕನ್ನೇ ಬದಲಿಸುವ ಸಾಮಥ್ರ್ಯ ಹೊಂದಿರುವಂಥದ್ದು. ಹೀಗೆ ಜವಾಬ್ದಾರಿ ಮತ್ತು ಸತತಾಧ್ಯಯನಕ್ಕೆ ಒತ್ತು ನೀಡುವ ಪರೀಕ್ಷೆ ಪದ್ಧತಿ, ಎಲ್ಲ ಹಂತಗಳಲ್ಲೂ ಜಾರಿಯಾದರೆ ಜನ ಅದನ್ನು ಗೌರವಿಸಲು ಸಾಧ್ಯ ಒಬ್ಬ ಟಿಇಟಿ, ನೆಟ್, ಸ್ಲೆಟ್ ಪಾಸಾದರೆ ಅವನನ್ನು ಸಮಾಜ ನೋಡುವ ರೀತಿಗೂ ಯಾವುದೋ ಪದವಿ-ಸ್ನಾತಕೋತ್ತರ ಪದವಿ ಪಡೆದವನನ್ನು ನೋಡುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ನಾವು ಬೇಕಿದ್ದರೆ ಗಮನಿಸಬಹುದು.ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿ ಪರೀಕ್ಷೆಗಳು ಹುಟ್ಟಿದ್ದರ ಹಿಂದಿರುವ ಕಾರಣಗಳನ್ನು ಅರಿತು-ನಮ್ಮ ಮಾಮೂಲಿ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಗಳನ್ನು ತರುವುದು ಅಂದರೆ ಅಲ್ಲಿನ ಪರೀಕ್ಷೆಗಳು ನಂಬಿಕೆಗೆ ಯೋಗ್ಯ ಎಂದು ನಿರೂಪಿಸುವುದು ಮುಖ್ಯ ಸಧ್ಯದ ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿಗಳೂ ಉಳಿದ ಮಾಮೂಲಿ ಪರೀಕ್ಷೆಗಳಂತಾದರೆ ಮತ್ತೆ ಬೇರೆ ಬೇರೆ ರೀತಿಯ ಪರೀಕ್ಷಾ ಪದ್ಧತಿಗಳನ್ನು ಜಾರಿಗೆ ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಒಟ್ಟಾರೆ ಸುಧಾರಣೆಯತ್ತ ಸಾಗಬೇಕಾದ ಸಂದರ್ಭದಲ್ಲಿ ಇವೆಲ್ಲ ಅನಿವಾರ್ಯವಾಗುತ್ತ ಹೋಗುತ್ತವೆ. ಹಾಗಾಗಿ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದ ವರೆಗೆ ವಿದ್ಯಾರ್ಥಿಗಳಿಗೆ., ಬೇಕಾದ ಸೌಲಭ್ಯ ಒದಗಿಸಿಕೊಡುವುದಲ್ಲದೆ, ಶೈಕ್ಷಣಿಕ ಅನುಕೂಲತೆಯನ್ನು ದೊರಕಿಸಿಕೊಡುವುದಲ್ಲದೆ, ಕೊಟ್ಟವುಗಳ ಉಪಯೋಗವೆಷ್ಟಾಯ್ತು? ಎಂದು ಕಾಲಕಾಲಕ್ಕೆ ಪರಿಶೀಲಿಸಿದುವುದು ಕೂಡ ಉಪಯುಕ್ತ ಕ್ರಮವಾದೀತು. ಎಲ್ಲವನ್ನೂ ನೀಡಿದ ಬಳಿಕ ಕೂಡ ಓದದೇ ಅಧ್ಯಯನ ಮಾಡದೆ ಒಟ್ಟಾರೆ ಮುಂದಿನ ತರಗತಿಗೆ ಪ್ರವೇಶ ನೀಡಬೇಕೆಂದು ಬಯಸುವುದು – ಒತ್ತಾಯಿಸುವುದು – ಸೂಕ್ತವಾದದ್ದಲ್ಲ. ಪಾಸಾಗಿಯೇ ಪಾಸಾದರೆ ಮಾತ್ರ ಮುಂದೆ ಹೋಗುವುದಕ್ಕೆ ಅವಕಾಶ. ಹಾಗಲ್ಲದಿದ್ದಲ್ಲಿ ಇದ್ದಲ್ಲೇ ಇದ್ದು ಪುನಃ ಪ್ರಯತ್ನಿಸಿ ಮುಂದೆ ಹೋಗಲಿ ಎಂದು ಖಂಡಿತವಾಗಿ ಹೇಳುವುದು. ಆ ಕುರಿತು ಕಠಿಣ ಕ್ರಮ ಕೈಗೊಳ್ಳುವುದು ಸಾಧ್ಯವಾಗದ ಪಕ್ಷದಲ್ಲಿ ‘ಗುಣಮಟ್ಟ’ ನಿರೀಕ್ಷೆ ಸಾಧ್ಯವಿಲ್ಲ. ಅಷ್ಟೂ ಸೆಮಿಷ್ಟರ್‍ಗಳ ಪರೀಕ್ಷೆಗಳನ್ನು ಕೊನೆಗೆ ಒಟ್ಟಿಗೇ ಬರೆಯಲು ಅವಕಾಶ ಕೊಡಬೇಕೆಂಬ ಬೇಡಿಕೆಗೆ ಯಾವುದೇ ಅರ್ಥವಿಲ್ಲ. ಆಯಾ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಅಷ್ಟಷ್ಟನ್ನೇ ಮುಗಿಸಲಾರೆ ಕೊನೆಗೆ ಅಷ್ಟನ್ನೂ ಪೂರೈಸುತ್ತಾರೆ ಎಂದರೆ – ಅಲ್ಲಿಯವರೆಗೆ ಅವರೇನು ಮಾಡುತ್ತಿರುತ್ತಾರೆ ಎಂದು ಕೂಡ ಪ್ರಶ್ನಿಸಬೇಕಾಗುತ್ತದೆ. ಹಾಗಾಗಿ ನಂಬಿಕೆ ಇಲ್ಲದ ಪರೀಕ್ಷೆಗಳು ನಮಗೆ ಅನಗತ್ಯ ಪರೀಕ್ಷೆಗಳು ನಂಬಿಕೆಗೆ ಯೋಗ್ಯವಾದವುಗಳಾಗಬೇಕೆಂಬುದಷ್ಟೇ ಸದ್ಯದ ಕಳಕಳಿ.
ರವೀಂದ್ರ ಭಟ್ ಕುಳಿಬೀಡು