ಯಾವುದೇ ಭಾಷೆಯಾದರೂ ಸರಿ ಅದನ್ನು ದಿನನಿತ್ಯ ಬಳಸದೇ ಹಾಗೇ ಬದಿಗಿಟ್ಟು, ಪುರುಸೊತ್ತಾದಾಗಲಷ್ಟೆ ತೆಗೆದು, ಓದಿ ಮಾಡಿದರೆ ಅದು ಬೆಳೆಯುವುದಿಲ್ಲ. ಇಟ್ಟಲ್ಲೆ ಗೆದ್ದಲು ಹತ್ತಲು ತೊಡಗುತ್ತದೆ. ಬಳಕೆಗೆ ಬಾರದ ಭಾಷೆ ಮಾತೃಭಾಷೆ ಎಂಬ ಪಟ್ಟವನ್ನು ಪಡೆಯುತ್ತದೆ. ನಮ್ಮ ಮಾತೃಭಾಷೆ ನಾಡ ನುಡಿಗೆ ನಾವು ಸಲ್ಲಿಸುವ ನಿಜವಾದ ಗೌರವ ಅದರ ಬಳಕೆಯಲ್ಲಿದೆಯೇ ವಿನಃ ಕೇವಲ ಆ ಕುರಿತಾದ ಭಾಷಣಗಳಲ್ಲಿ ಅಲ್ಲ. ಹಾಗಾಗಿಯೇ ಡಾ. ಹಾ.ಮಾ.ನಾಯಕರು ಹೇಳಿದ್ದು, ನಾವು ತೀರಿಸಬೇಕಾದ ಋಣಗಳಲ್ಲಿ ಮಾತೃಭಾಷಾ ಋಣವೂ ಒಂದು ಎಂದು.
ಇಂದಿನ ಗೋಳಿಕರಣ ವ್ಯವಸ್ಥೆಯೊಳಗೆ ದಿನೇ ದಿನೇ ಕನ್ನಡದ ಕಂಪು ಕಡಿಮೆಯಾಗುತ್ತಿರುವುದು ವಾಸ್ತವ ಸತ್ಯ. ಇಂಗ್ಲೀಷ್ ಇರಲಿ ಆದರೆ ಅದು ಕನ್ನಡದ ಜಾಗೆಗೆ ಪರ್ಯಾಯವಾಗದಿರಲೆಂಬುದೇ ಆಶಯವಾಗಿ, ಅರಿವಾಗಿ, ಆಚರಣೆಗೆ ಬಂದಾಗ, ಮಾತೃಭಾಷಾ ಋಣವನ್ನು ಅಷ್ಟರ ಮಟ್ಟಿಗೆ ತೀರಿಸಿದಂತೆ ಆಗಬಹುದು. ಭಾಷೆ ಇರದೇ ನಾವು ಬದುಕಲು ಸಾಧ್ಯವಿಲ್ಲ. ನಮ್ಮ ಭಾವಾಭಿವ್ಯಕ್ತಿಯ ಮಾಧ್ಯಮ ಅದು. ಪರಸ್ಪರ ವಿಚಾರಗಳ ಲೇವಾದೇವಿಗೆ ಬೇಕೇ ಬೇಕು. ಆ ಮೂಲಕವೇ ಪ್ರಪಂಚವನ್ನು ಅರಿಯುತ್ತ, ಬೆಳೆಯುತ್ತಾ ಸಾಗುತ್ತೇವೆ. ನಿತ್ಯ ಜೀವನದಲ್ಲಿ ವ್ಯವಹರಿಸಲು ಅದು ಅಗತ್ಯ, ಅನಿವಾರ್ಯ ಪ್ರಶ್ನೆ, ಎಂದರೆ ಯಾವ ಭಾಷೆ? ಉತ್ತರ ಸ್ಪಷ್ಟ ಅದು ನಮ್ಮ ಭಾಷೆ ಕನ್ನಡ ಉತ್ತರದಲ್ಲಿ ತಪ್ಪಿದ್ದರೆ ತಿದ್ದಿಕೊಳ್ಳಬೇಕಾಗುತ್ತದೆ, ಕನ್ನಡ ಅಂತ. ಯಾಕೆಂದರೆ ಅದೇ ನಮಗೆ ಸಹಜ ಭಾಷೆ. ಮನುಷ್ಯ ಸಹಜ ವ್ಯವಹಾರಗಳಿಗೆ ಸಹಜವಾಗಿ ಮುನ್ನುಗ್ಗಿ ಬರುವುದೇ ಮಾತೃಭಾಷೆ. ಪ್ರೇಮ, ಸಿಟ್ಟು, ವ್ಯಾಪಾರ ವ್ಯವಹಾರಗಳ ಸಂದರ್ಭಗಳಲ್ಲೆಲ್ಲಾ ನಮ್ಮ ನುಡಿಯೇ ನಮ್ಮ ಉಸಿರಿನಿಂದ ಹೊರ ಬೀಳುತ್ತದೆ. ಅಂದರೆ ನಾವು ಸಹಜವಾಗಿ ಉಸಿರಾಡುತ್ತಿದ್ದೇವೆ ಎಂದು ಅರ್ಥ. ಹಾಗಲ್ಲದಿದರೆ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಲ್ಪಿಸಿಕೊಳ್ಳಬಹುದು.
ಕುವೆಂಪುರವರು ಹೇಳುತ್ತಾರೆ “ವಿದ್ಯೆಯಿಂದ ಮನುಷ್ಯನಿಗೆ ಮುಖ್ಯವಾಗಿ ಭಾವವಿಕಾಸವಾಗುತ್ತದೆ. ಇದು ಮಾತೃ ಭಾಷೆಯಿಂದ ಆಗುವಂತೆ ಇನ್ನಾವುದರಿಂದಲೂ ಆಗಲಾರದು. ಪರಭಾಷೆಯಿಂದ ಭಾವವಿಕಾಸ ಸಾಧ್ಯವಿಲ್ಲ. ಮನುಷ್ಯನ ಸಹಜ ಬುದ್ದಿ ಕಾಣುವುದು ಮಾತೃಭಾಷೆಯಲ್ಲಿ, ಇಂಗ್ಲೀಷ್ ಹೊಸ ಭಾವನೆ ತರಬಹುದು ಆದರೆ ಮಾತೃಭಾಷೆ ಹುಟ್ಟಿದ ಆವರಣದ ಗಾಳಿ ಇದ್ದ ಹಾಗೆ. ಉಸಿರೆಷ್ಟು ಸಹಜವೋ ಅಷ್ಟೆ ಸಹಜ ಮಾತೃಭಾಷೆ” ಹಾಗೆ ಮುಂದುವರಿದು ಹೇಳುವ ಮಾತೆಂದರೆ ಪರಭಾಷೆಯ ಮೂಲಕದ ಶಿಕ್ಷಣ ಮಕ್ಕಳ ಬುದ್ದಿಶಕ್ತಿಯನ್ನು ಬೆಂಡುಮಾಡಿದೆ. ಅವರ ನರಗಳನ್ನು ದುರ್ಬಲಗೊಳಿಸಿದೆ ಅವರನ್ನು ಬಾಯಿಪಾಠ ಮಾಡುವ ಗಿಳಿಗಳನ್ನಾಗಿ ಮಾಡಿದೆ. ಪ್ರತಿಭಾನ್ವಿತ ಸೃಷ್ಠಿ ಕಾರ್ಯಕ್ಕೆ ಅಡ್ಡಿ ಮಾಡಿದೆ.
ಶಿಕ್ಷಣದ ಮೂಲಕವೇ ಒಂದು ಮಗು ತನ್ನ ಬುದ್ಧಿ ಬೆಳಸಿಕೊಳ್ಳಲು ಸಾಧ್ಯವಾಗುವುದರಿಂದ ಅದಕ್ಕೆ – ತಾಯ್ನುಡಿಯೇ ತಕ್ಕ ಆಯ್ಕೆ. ಅದೇ ಮೊದಲ ಅವಶ್ಯಕತೆ ಆದಾಗ್ಯೂ ನಾವು ಇದನ್ನು ಗಮನಿಸದೇ ದಿನನಿತ್ಯವೂ ಇಂಗ್ಲೀಷ್‍ಗಾಗಿ ಮೊರೆಯಿಡುತ್ತೇವೆ. ಆ ಭಾಷೆಯ ಭಾಗ್ಯವನ್ನು ಪಡೆಯಲು ಏನನ್ನಾದರೂ ಪಣಕ್ಕೀಡಲು ಸಿದ್ದರಾಗುತ್ತೇವೆ. ಅದರಿಂದಲೇ ಬದುಕಿನ ಸರ್ವ ಇಷ್ಟಾರ್ಥಗಳೂ ಪ್ರಾಪ್ತವಾಗುತ್ತದೆಂದು ನಂಬುತ್ತಾ ಪ್ರಾರ್ಥಿಸುತ್ತಾ ಸಾಗುತ್ತಿರುವುದೇ ಸದ್ಯದ ದುರಂತ. ಯಾರಿಗೂ ತಾಯಿ ಋಣದ ಚಿಂತೆ ಬಾಧಿಸದಿರುವುದು ಬದಲಾಗುತ್ತಿರುವ ವ್ಯವಸ್ಥೆಯ ವ್ಯಂಗ್ಯವು ಆಗಿರಬಹುದು.
ಇಂಗ್ಲೀಷ್ ಭಾಷೆ ಪ್ರತಿಷ್ಠೆಯ ಪ್ರಶ್ನೆಯಾಗಿ, ತನ್ಮೂಲಕವಾಗಿಯೇ ತಮ್ಮೆಲ್ಲ ಸಂವಹನ ಪ್ರಕ್ರಿಯೆಗಳಿಗೆ ಚಾಲನೆ ನೀಡಲು, ಅಕ್ಷರಸ್ಥ ಜನ ಸಮುದಾಯ ಮುಂದಾದಾಗ, ಶ್ರೀ ಸಾಮಾನ್ಯರ ಜೊತೆಗಿನ ಸಂಬಂಧ ಕೇವಲ ಬೌದ್ಧಿಕ ಕಸರತ್ತಾಗಿ ಮಾತ್ರ ಉಳಿದುಬಿಡಬಹುದಾಗಿದೆ. ಉದಾಹರಣಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್‍ನಲ್ಲಿ ಓದಿ, ಇಂಗ್ಲೀಷ್‍ನಲ್ಲೆ ಬರೆದು ಡಿಗ್ರಿ ಪಡೆದು ಬಂದ ಅಧಿಕಾರಿ ಇಲ್ಲಿನ ಕೃಷಿಕರಿಗೆ ಹೇಗೆ ಸಮರ್ಥವಾಗಿ ಮಾರ್ಗದರ್ಶನ ಮಾಡಬಲ್ಲ? ಅವನು ಇವರೊಟ್ಟಿಗೆ ಬೆರೆಯುವುದಾದರೂ ಹೇಗೆ? ಸಹಜ ಸಂವಹನ ಸಾಧ್ಯವಾಗದಿದ್ದಲ್ಲಿ, ಪಡೆದ ಪದವಿಯಿಂದ ಯಾರಿಗೆ ಪ್ರಯೋಜನ? ಪ್ರಯೋಜನವು ಲಭಿಸಬೇಕೆಂದಾದರೆ ಪರಸ್ಪರ ಸಂವಹನ ಕನ್ನಡದಲ್ಲಾಗಬೇಕು. ಅದಕ್ಕೆ ತಕ್ಕ ವ್ಯವಸ್ಥೆಯಾಗಬೇಕು. ಇಲ್ಲವಾದರೆ ಪರಸ್ಪರ ವಿರುದ್ಧ ದಿಕ್ಕಿನ ದ್ವೀಪಗಳಾಗಿ ಉಳಿಯುವಂತಾಗಿ ಬಿಡುತ್ತದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನಗಳು ಸಹಿತ ಜೀವನ ವ್ಯಾಪಿಯಾಗಬೇಕಾದರೆ ಅದು ನಮ್ಮ ಭಾಷೆಯಲ್ಲೆ ಮುಟ್ಟಬೇಕು. ಆದರೆ ಈ ದಿನನಿತ್ಯದ ಅರಿವಾಗದಿರುವುದಕ್ಕೆ “ರಾಷ್ಟ್ರೀಯ ದುರಂತ ಎನ್ನಬಹುದೇ?
ಇನ್ನೂ ನಿತ್ಯ ಜನಸಾಮಾನ್ಯರ ಜೀವನದಲ್ಲಿ ಬೆಳೆದು ಬಂದ ಅವೈಜ್ಞಾನಿಕ ಮೌಡ್ಯ ನಿವಾರಣೆಗೆ ಮಾತೃಭಾಷೆಯಲ್ಲಿ ತಿಳಿ ಹೇಳುವುದೊಂದೆ ಸರಿಯಾದ ಮಾರ್ಗ. ಹಾಗಾಗಿಯೇ ಬಸವಣ್ಣ ಮತ್ತಿತರರ ವಚನಗಳು ಪ್ರಭಾವ ಬೀರಲು ಸಾಧ್ಯವಾದದ್ದು. ನಮ್ಮ ದೇಶದ ಪ್ರತಿಭಾನ್ವಿತ ವಿಜ್ಞಾನಿ ಪದ್ಮ ಪ್ರಶಸ್ತಿ ಪುರಸ್ಕøತ ಪ್ರೋ| ಎಂ.ಜಿ.ಕೆ. ಮೆನನ್ ಹೇಳುತ್ತಾರೆ “ವಿಜ್ಞಾನ ಬೆಳೆಯುವುದು ಅರಿವಿನಿಂದಲೇ ಹೊರತೂ ಬಾಯಿ ಪಾಠದಿಂದಲ್ಲ. ಅರ್ಥವಾಗದೇ ಹೋಗುವ ಮಾಧ್ಯಮದ ಮೂಲಕ ಅರಿವು ಮೂಡುವುದು ಸಾಧ್ಯವಿಲ್ಲ. ವಿಜ್ಞಾನವನ್ನು ಸಹಜ ಮಾರ್ಗದಲ್ಲಿ ಭೋಧಿಸಬೇಕು. ಇದು ಪರಿಚಿತವಾದ ಮಾಧ್ಯಮದ ಮೂಲಕ ಮಾತ್ರವೇ ಸಾಧ್ಯ. ಸಾಮಾನ್ಯವಾಗಿ ಆ ಮಾಧ್ಯಮ ಮಾತೃಭಾಷೆ”.
ಡಾ. ಹಾ.ಮಾ.ನಾ. ಹೇಳುತ್ತಾರೆ “ಭಾಷೆ ರಾಜಭವನದ ತೋಟದಲ್ಲಿ ಬೆಳೆಯುವುದಿಲ್ಲ. ಕಾನೂನು ಕಡತಗಳಲ್ಲಿ ವೃದ್ಧಿಸುವದಿಲ್ಲ. ನಮ್ಮ ಜನ ಜೀವನವನ್ನೆಲ್ಲಾ ನಮ್ಮ ಭಾಷೆ ಆಕ್ರಮಿಸಿಕೊಳ್ಳದಿದ್ದರೆ, ಅದಕ್ಕೂ ನಮಗೂ ನಡುವೆ ಸದಾ ಕಂದರವೊಂದು ಇದ್ದೇ ಇರುತ್ತದೆ” ನಮ್ಮ ಭಾಷೆಯನ್ನು ನಾವೆಷ್ಟರ ಮಟ್ಟಿಗೆ ಪ್ರೀತಿಸುತ್ತೇವೆ, ಅದರ ಬಗ್ಗೆ ನಮಗೆಷ್ಟು ಅಭಿಮಾನವಿದೆ ಎನ್ನುವುದು, ನಾವು ಅದನ್ನು ಬಳಸುವ ವಿಧಾನದಲ್ಲಿ ವ್ಯಕ್ತವಾಗುತ್ತದೆ. ಯಾವುದೇ ಭಾಷೆ ಬೆಳೆಯುವುದು ಜನ ಜೀವನದಿಂದ ಜನಸಾಮಾನ್ಯರಿಂದ. ನಿತ್ಯ ಜೀವನದಲ್ಲಿ ಮಾನವನು ಸಹಜವಾಗಿ ನಿರೀಕ್ಷಿಸಬಹುದಾದ ಕಡೆಗಳಲೆಲ್ಲಾ ಕನ್ನಡ ಬಂದರೆ ಅವನಿಗೆ ಒಳ್ಳೆಯದು.
ಕಛೇರಿ, ಸಂಸ್ಥೆ, ವಿದ್ಯಾಲಯಗಳ ನಾಮಫಲಕವನ್ನು ಕನ್ನಡದಲ್ಲಿ ಅಳವಡಿಸುವುದರಿಂದಲೇ ಪ್ರಾರಂಭಿಸಬೇಕಾಗಿದೆ. ಸಾಮಾನ್ಯರೊಂದಿಗೆ ವ್ಯವಹರಿಸುವಾಗ ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸಬೇಕು. ಇಂಗ್ಲೀಷ್‍ನಲ್ಲಿ ಬಂದ ಪತ್ರವೊಂದನ್ನು ಒಯ್ದು ಬೇರೆಯವರು ಓದಿ ಹೇಳಿದ್ದನ್ನು ನಂಬುವ ಕೆಲಸ ಮೊದಲು ತಪ್ಪಬೇಕಿದೆ. ನಿತ್ಯ ಜೀವನದ ಬಹುಮುಖ್ಯ ವ್ಯವಹಾರಗಳಲ್ಲಿ ನ್ಯಾಯಾ ವಿಚಾರಣೆಯು ಒಂದು. ವಾದ -ಪ್ರತಿವಾದಗಳು ಕನ್ನಡದಲ್ಲಿ ನಡೆದಾಗ ಕಕ್ಷಿದಾರನಿಗೆ ಅರ್ಥವಾಗುತ್ತದೆ. ತೀರ್ಪು ಕೂಡ ಕನ್ನಡದಲ್ಲಿ ಲಭ್ಯವಾಗಬೇಕಾದದ್ದು ಅಗತ್ಯ. ಪ್ರತಿ ಕಛೇರಿಯಲ್ಲಿನ ಸೂಚನ ಫಲಕ – ಪ್ರಗತಿ ಸೂಚಿ ಇತ್ಯಾದಿಗಳು ಕನ್ನಡದಲ್ಲಿದ್ದರೆ ಜನಕ್ಕೆ ಅರ್ಥವಾಗಬಹುದು. ಹಾಗಿಲ್ಲದಿದ್ದಲ್ಲಿ ಅಲ್ಲಿನ ಗೋಡೆಗಳಿಗೆ ಅವು ಕೇವಲ ಅಲಂಕಾರ ಸಾಮಗ್ರಿಗಳಾಗಬಹುದು. ಉದ್ದೇಶ ಸಾರ್ಥಕವಾಗದ ಯಾವುದೇ ಕ್ರೀಯೆ ಅರ್ಥವಿಲ್ಲದ ಆಚರಣೆ ಅಷ್ಟೆ.
ಇಂಗ್ಲೀಷ್ ವಿಜ್ಞಾನದ ಭಾಷೆ, ಇಂಗ್ಲೀಷ್ ಕಲಿತರೆ ಮಾತ್ರ ಭವಿಷ್ಯ ಎಂಬ ಮೋಹಕ ಮಾತುಗಳಿಗೆ ಮರುಳಾಗದವರಿಲ್ಲ. ಆದರೆ ಇಂಗ್ಲೀಷ್‍ನಲ್ಲಿ ದೊರಕುವಷ್ಟನ್ನು ಕನ್ನಡದಲ್ಲಿ ಪೂರೈಸುವಂತಾದರೆ ಎಂದು ಯಾರು ಚಿಂತಿಸುವುದಿಲ್ಲ. ವಿಷಾದದ ಸಂಗತಿ ಎಂದರೆ ಅದೇ.
ಕನ್ನಡ ಕೂಡ ಇಂಗ್ಲೀಷ್‍ನಂತೆ ಸ್ವೀಕೃತ ಭಾಷೆ. ಉಳಿದ ಭಾಷೆಯ ಪದÀಗಳನ್ನು ತನ್ನದಾಗಿ ಪರಿವರ್ತಿಸಿಕೊಳ್ಳಬಲ್ಲ ಶಕ್ತಿಯನ್ನು ಪಡೆದಿರುವಂತಹದ್ದು. ಇಂದು ಪ್ರಪಂಚ ಕಿರಿದಾಗುತ್ತಿರುವ ಸಂದರ್ಭದಲ್ಲಿ ಎಲ್ಲಿ ಭಾಷೆಯ ಬಳಕೆ ಜನರಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಇದೆ. ಉದಾಹರಣೆಗೆ, ಕಾಲೇಜು, ಬಸ್ಸು, ಪೋಲಿಸ್, ಇಂಜಿನಿಯರ್ ಇತ್ಯಾದಿ ಇವಕ್ಕೆಲ್ಲಾ ಕನ್ನಡಾನುವಾದವನ್ನಿತ್ತು, ಅದನ್ನೇ ಬಳಸಬೇಕೆಂಬ ಹಟ ಕೂಡ ಭಾಷಾ ಬೆಳವಣಿಗೆಗೆ ಸಹಕಾರಿಯಾಗದು. ಅವನ್ನೇಲ್ಲಾ ನಮ್ಮದೇ ಭಾಷೆಯ ಅಂಗವೆಂದು ಪರಿಗಣಿಸುವುದು ಸೂಕ್ತ. ಮತ್ತೆ ಡಾ.ಹಾ.ಮಾ.ನಾ. ಹೇಳುವಂತೆ “ಸಿಮೆಂಟ್”ಗೆ ‘ವಜ್ರಚೂರ್ಣ’ ಎನ್ನಬೇಕಿಲ್ಲ. ಸಿಮೆಂಟ್ ಇದು ಸಿಮೆಂಟು ಆದಾಗಲೇ ನಮ್ಮ ಪಾಲಿಗದು ಸೀಮೆಯ ಅಂಟಷ್ಟೆ ಅಲ್ಲ ಸೀಮೆಯ ನಂಟೂ ಆಗಬಲ್ಲದು.
ನಿತ್ಯದ ಬದುಕಿನಲ್ಲಿ ಬೆರಿಕೆಯಾಗುತ್ತಿರುವ ಪರಭಾಷೆಯ ಶಬ್ದಗಳ ಕುರಿತು ನಾವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಅವು ನಾಳೆ ನಮ್ಮದೇ ಭಾಷೆಯ ಶಬ್ದಗಳಾದಾವು! ಆದರೆ ಅದೇ ಮೋಹವಾಗಬಾರದು. ಅದಕ್ಕೆ ನಮ್ಮ ಮಾತೃಭಾಷೆಯ ಸ್ವರೂಪ ಬಲಿಯಾಗಬಾರದು. ನಮ್ಮ ಭಾಷೆಯ ಕುರಿತು ಮಮತೆ, ಅಭಿಮಾನವಿದ್ದರೆ ಹಾಗಾಗಲೂ ಸಾಧ್ಯವಿಲ್ಲ. ಅದಕ್ಕೆ ಶ್ರೀ ಎ.ಆರ್.ಕೃಷ್ಣಶಾಸ್ತ್ರಿಗಳ ಎಚ್ಚರಿಕೆಯ ಮಾತುಗಳು ನಮ್ಮಗೆ ಸದಾ ಅನುಕರಿಸುತ್ತಿರಬೇಕು. ಅದೆಂದರೆ “ಕನ್ನಡಿಗರೆ ನಿಮ್ಮ ಕನ್ನಡವನ್ನು ಭಾರತ ದೇಶದ ದಕ್ಷಿಣದಲ್ಲಿ ಒಂದು ಅಂಗೈ ಅಗಲ ಬಿಟ್ಟರೆ ಮತ್ತೆಲ್ಲೂ ನೋಡಲಾರಿರಿ. ನೀವು ಅದನ್ನು ಅಂಕ ಮಾಡಿದರೆ ಮಿಕ್ಕ ಯಾವ ದೇಶದ ಯಾವ ಜನರೂ ಅದನ್ನು ಎತ್ತಿ ಹಿಡಿಯಲಾರರು. ಅದು ಹೋದರೆ ಹೋಗಲಿ ಎನ್ನುವ ಹಾಗಿದ್ದರೆ ಈ ಕಡೆ ಬಂಗಾಳ ಕೊಲ್ಲಿಯಿದೆ. ಆ ಕಡೆ ಅರಬ್ಬಿ ಸಮುದ್ರವಿದೆ. ಗುಡಿಸಿಹಾಕಿ ಬಿಡಿ”. ಮಾತೃಭಾಷಾ ಋಣ ಹೊತ್ತಾವರಾರು ಈ ಕೃತ್ಯಕ್ಕೆ ಕೈ ಹಾಕಲಾರರು. ಆದರೂ ದಿನದಿಂದ ದಿನಕ್ಕೆ ಕನ್ನಡದ ಕುರಿತು ಕನ್ನಡದ ಸಾರ್ವಭೌಮತೆ ಕುರಿತು ಕರ್ನಾಟಕದಲ್ಲೆ ಮಾತು ಕತೆಗಳು ನಡೆಯುತ್ತಿರುವುದು ದುರಂತವಾದರೂ ಸತ್ಯ. ಈ ಸಂದರ್ಭದಲ್ಲಿ ಸಾಲಿ ರಾಮಚಂದ್ರರಾಯರ ನುಡಿ “ಕನ್ನಡವನ್ನುಳಿದೆನಗೆ ಅನ್ಯ ಜೀವನವಿಲ್ಲ. ಕನ್ನಡವೇ ಎನ್ನುಸಿರು” ಎಂಬುದು ಎಲ್ಲರ ಉಸಿರಲ್ಲೂ ಇರುವಂತಾದರೆ, ಆ ಕನ್ನಡಮ್ಮ ಖುಷಿಯಿಂದ ಇನ್ನಷ್ಟು ಎತ್ತರಕ್ಕೇರಿ ನಮ್ಮನ್ನು ಸಲಹಬಹುದು.
ರವೀಂದ್ರ ಭಟ್ ಕುಳಿಬೀಡು.
- Advertisement -
- Advertisement -
- Advertisement -
- Advertisement -