ನಿರಂತರ ಗುಣಮಟ್ಟದ ಅಭಿಯಾನ ಇಂದು ಎಲ್ಲೆಡೆ ನಡೆಯುತ್ತಿದೆ. ಪದವಿ ಶಿಕ್ಷಣ ಸಂಸ್ಥೆಗಳು ಸದಾಗುಣ ಮಟ್ಟ/ಉತ್ಕøಷ್ಟತೆ ಸಾಧಿಸುವತ್ತ ನಿರಂತರ ಪ್ರಯತ್ನದಲ್ಲಿ ತೊಡಗಿರಬೇಕೆಂಬ ಸದಾಶಯ ಸರಕಾರ ಮತ್ತು ಇಲಾಖೆಗೆ ಇದೆ. ಆದರೆ ಕೇವಲ ಆಶಯಗಳು ಫಲನೀಡಬಲ್ಲದೇ ಎಂಬುದೇ ಪ್ರಸ್ತುತ ಪ್ರಶ್ನೆ.
ಉನ್ನತ ಶಿಕ್ಷಣ ಜನಸಾಮಾನ್ಯರಿಗೂ ಸಿಗುವಂತಾಗಬೇಕು. ತಾಲ್ಲೂಕು ಹೋಬಳಿ ಮಟ್ಟದ ವಿದ್ಯಾರ್ಥಿಗಳ ಕೈಗೆ ಉನ್ನತ ಶಿಕ್ಷಣ ಎಟಕುವಂತಾಗಬೇಕು ಅವರ ವಿದ್ಯಾಭ್ಯಾಸ ಅರ್ಧದಲ್ಲೇ ನಿಲ್ಲಕೂಡದು ಎಂಬ ಕಳಕಳಿಯಿಂದ ನಮ್ಮ ಘನ ಸರಕಾರ ರಾಜ್ಯದ ಎಲ್ಲ ತಾಲ್ಲೂಕು ಕೆಂದ್ರಗಳಲ್ಲಷ್ಟೇ ಅಲ್ಲದೆ ಹೋಬಳಿ ಮಟ್ಟದಲ್ಲೂ ಪದವಿ ಕಾಲೇಜನ್ನು ಪ್ರಾರಂಭಿಸಿದ್ದು, ಬಹುತೇಕ ಕಡೆಗಳಲ್ಲಿ ಕಟ್ಟಡಗಳೂ ಪೂರ್ಣಗೊಂಡಿವೆ ಅಥವಾ ಪೂರ್ಣಗೊಳ್ಳುವ ಹಂತದಲ್ಲಿವೆ. ಇಷ್ಟೆಲ್ಲ ಬಿ.ಎ., ಬಿ.ಕಾಂ., ಬಿ.ಬಿ.ಎಂ. ಇತ್ಯಾದಿ ಕೋರ್ಸ್‍ಗಳು ಪ್ರಾರಂಭವಾಗಿ ಬಹಳಷ್ಟು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಇದರ ಲಾಭ ಪಡೆಯಲು ಪ್ರವೇಶಾತಿಯನ್ನು ಪಡೆದದ್ದು ನಿಜ.
ಆದರೆ ಕಾಲೇಜುಗಳನ್ನು ಪ್ರಾರಂಭಿಸಲಿಕ್ಕೆ ತೋರಿದ ಉತ್ಸಾಹವನ್ನು ಕಳಕಳಿಯನ್ನು ಆ ಮೇಲೆ ಅವುಗಳ ನಿರ್ವಹಣೆಯಲ್ಲಿ ತೋರುವುದಕ್ಕೆ ಸಾಧ್ಯವಾಗದ್ದು–ಗುಣಮಟ್ಟದ ಶಿಕ್ಷಣ ನೀಡುವಲ್ಲಿ-ದೊಡ್ಡ ಅಡಚಣೆಯಾಗಿದ್ದು ಒಂದೆಡೆಯಾದರೆ-ಒಟ್ಟಾರೆ ಪದವಿಗೆ ಸೇರಿರುವುದಷ್ಟೇ ತಮ್ಮ ಕೆಲಸವೆಂದು ಭಾವಿಸಿ ಓಡಾಡುವ ವಿದ್ಯಾರ್ಥಿ ಸಮುದಾಯ ಇನ್ನೊಂದೆಡೆ.
ಕೇವಲ ಶೈಕ್ಷಣಿಕ ಸಂಸ್ಥೆಗಳ ಸಂಖ್ಯಾಬಲವಾಗಲಿ ಅವುಗಳಲ್ಲಿ ಅಭ್ಯಾಸಿಸಲು ಹೆಸರನ್ನು ನೊಂದಾಯಿಸಿದ ವಿದ್ಯಾರ್ಥಿಗಳ ಸಂಖ್ಯಾಬಲವಾಗಲಿ ಶಿಕ್ಷಣದ ಗುಣಮಟ್ಟವನ್ನು ಎತ್ತರಿಸಲು ಸಾಧ್ಯವಿಲ್ಲ. ಬದಲಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಲಿಕೆಗೆ ಪೂರಕವಾಗಿ ಶೈಕ್ಷಣಿಕ ವಾತಾವಣದ ನಿರ್ಮಿತಿ ಇಂದಿನ ತುರ್ತಾದರೆ, ಗುಣಮಟ್ಟದ ಏರಿಕೆ ತನ್ನಿಂದ ತಾನೇ ಸಾಧ್ಯವಾಗಬಹುದು. ಇದಕ್ಕೆ ಅಗತ್ಯವಾದ ಕಟ್ಟಡ-ಕೊಠಡಿಗಳು-ಶೌಚಾಲಯ-ಶುದ್ಧ ಕುಡಿಯುವ ನೀರು-ಗಾಳಿ-ಬೆಳಕು ಸರಿ ಇರುವ ವಾಚನಾಲಯ-ಗ್ರಂಥಾಲಯ ಮತ್ತು ಚಿಕ್ಕದಾದರೂ ಸಾಕಷ್ಟು ಚೆನ್ನಾಗಿರುವ ಆಟದ ಮೈದಾನ ಇವನ್ನು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವುದರ ಜೊತೆಗೆ ಬೋಧನೆಗೆ ಅಗತ್ಯವಾದ ಉಪನ್ಯಾಸಕರನ್ನು ನೇಮಿಸುವ ಕೆಲಸವಾಗಬೇಕು. ಬಹಳಷ್ಟು ಕಡೆಗಳಲ್ಲಿ ಹಂಗಾಮಿ ನೇಮಕಾತಿಯ ಮೇಲೆ ಬೋಧಕ ಸಿಬ್ಬಂದಿಗಳು (ಅವರ ಸಂಖ್ಯೇಯೇ ಅಧಿಕ) ಕರ್ತವ್ಯ ನಿರ್ವಹಿಸುತ್ತಿದ್ದರೆ ವಿದ್ಯಾರ್ಥಿಗಳಿಗೆ ಪಾಠಗಳು ನಡೆದರೂ ಅದು ವ್ಯವಸ್ಥಿತವಾಗಿ ನಡೆಯುವುದು ಅನುಮಾನ. ಅಲ್ಲಿ ಒಬ್ಬರಿಗೊಬ್ಬರ ನಡುವೆ ಹೊಂದಾಣಿಕೆ ಇರಲು ಅವರುಗಳು ಅವರವರ ಅನುಕೂಲದ ದಿನಗಳಂದು ಮಾತ್ರ ಬಂದು ಹೋಗುವುದರಿಂದ ವಿದ್ಯಾರ್ಥಿಗಳಿಗಾಗುವ ತೊಂದರೆಗಳಿಗೆ ನಿರ್ದಿಷ್ಟ ಪರಿಹಾರ ಸೂಚಿಸುವವರು ಸಕಾಲದಲ್ಲಿ ಲಭ್ಯವಾಗದೆ ಹೋಗುವ ಸಂದರ್ಭಗಳೇ ಅಧಿಕ.
ಹೀಗಾಗಿ ಗುಣಮಟ್ಟ ಬರಬೇಕು ಎಂದು ಪ್ರಾಮಾಣಿಕವಾಗಿ ಆಶಿಸುವುದಾದಲ್ಲಿ ಕಾಲೇಜು ನಡೆಯುವ ಅವಧಿಯಲ್ಲಿ ಪೂರ್ಣ ಪ್ರಮಾಣದಲ್ಲಿ ವೇಳಾಪಟ್ಟಿಗೆ ಅನುಗುಣವಾಗಿ ಪಾಠ-ಪ್ರವಚನಗಳು ಕಡ್ಡಾಯವಾಗಿ ನಡೆಯುವಂತಾಗಬೇಕು. ವಿದ್ಯಾರ್ಥಿಗಳೂ ಕಡ್ಡಾಯವಾಗಿ ತರಗತಿಗಳಿಗೆ ಹಾಜರಾಗಿ ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ ಆದಾಗ ಮಾತ್ರ-ವಿದ್ಯಾರ್ಥಿಗಳ-ಶಿಕ್ಷಕರ ಮತ್ತು ಶೈಕ್ಷಣಿಕ ಸಂಸ್ಥೆಯ ಗುಣಮಟ್ಟದಲ್ಲಿ ಏರಿಕೆಯಾಗಬಹುದು.
ಊರಿನಲ್ಲೇ ಕಾಲೇಜಿದೆ ಎಂಬ ಏಕೈಕ ಕಾರಣಕ್ಕಾಗಿ ಓದಲು ಆಸಕ್ತಿ ಇಲ್ಲದಿದ್ದರೂ ಸೇರಿ ಓದುವವರಿಗೂ ಅಡಚಣೆಗಳನ್ನು ಮಾಡುತ್ತ ಕೇವಲ ಕಾಲಹರಣಕ್ಕೆ ಶೋಕಿಗೆ ಬಂದು ಹೋಗುವ ವಿದ್ಯಾರ್ಥಿಗಳಿಗೇನೂ ಕೊರತೆಯಿರುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ತಿಳಿ ಹೇಳುವ ಕೆಲಸವು ಇಂದಿನ ಅಗತ್ಯ ಆದ್ಯತೆ ಎಂದು ಭಾವಿಸಬೇಕು. ಅಷ್ಟೆ ಅಲ್ಲದೆ ಅಂಥ ಕೆಲವರಿಂದ, ಒಟ್ಟಾರೆ ವಾತಾವರಣ ಕಲುಷಿತವಾಗುತ್ತದೆ ಎಂದಾಗ ಅವರನ್ನು ಯಾವುದೇ ಮುಲಾಜಿಗೊಳಗಾಗದೆ ಹೊರಗಿಡುವ ಪ್ರಯತ್ನ ಮಾಡಬೇಕಾಗುತ್ತದೆ. ಆದರೆ ಅವರಲ್ಲಿ ಅನೇಕರು ಅನೇಕ ರೀತಿಯ ಪ್ರಭಾವಗಳನ್ನು ಹೊಂದಿರುವ ಕಾರಣದಿಂದ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತೆ ಎಲ್ಲರೂ ಸುಮ್ಮನಿರುವ ಕಾರಣಕ್ಕೆ ಗುಣಮಟ್ಟದ ಕುಸಿತವನ್ನು ಮೌನವಾಗಿ ವೀಕ್ಷಿಸುವಂತಾಗಿದ್ದು ಕೂಡ ಪ್ರಸ್ತುತ ದುರಂತಗಳಲ್ಲಿ ಒಂದು.
ಆದರೂ ನಿರಾಸೆಯಿಂದ ಕೈ ಚೆಲ್ಲಿ ಕುಳಿತುಕೊಳ್ಳುವುದು ಸಲ್ಲದು. ನಿಜವಾಗಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರ ಉಜ್ವಲ ಭವಿಷ್ಯ ರೂಪಿಸುವ ರೂವಾರಿಗಳಾಗಲು ಪ್ರಾಂಶುಪಾಲರನ್ನು ಒಳಗೊಂಡತೆ ಸಂಸ್ಥೆಯ ಸಿಬ್ಬಂದಿವರ್ಗ ಶ್ರಮಿಸಿದರೆ ಅವರೇ ಖುದ್ದಾಗಿ ಕಿಡಿಗೇಡಿಗಳಿಂದ ದೂರಾಗಿ ಹೊಸ ಮಾರ್ಗ ಸೃಷಿಸಿಕೊಳ್ಳುವಂತಾದಾಗ ಮಾತ್ರ ಗುಣಮಟ್ಟಕ್ಕೆ ಅರ್ಥ ಪ್ರಾಪ್ರವಾಗಬಹುದು. ಯಾವುದಕ್ಕೂ ಇಚ್ಛಾಶಕ್ತಿ ಬೇಕು.
ರವೀಂದ್ರ ಭಟ್ ಕುಳಿಬೀಡು