ನಮ್ಮ ದೇಶ ಕೃಷಿ ಪ್ರಧಾನ ದೇಶ. ಶೇಕಡಾ 70 ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕುತ್ತಿದ್ದಾರೆ. ರೈತನೇ ಈ ದೇಶದ ಬೆನ್ನೆಲುಬು. ಆದರೆ ಆತ ಮಳೆಯೊಂದಿಗೆ ಜೂಜಾಡುತ್ತಾನೆ. ಹಾಗಾಗಿ ಸರಿಯಾಗಿ ಬೆಳೆ ಬೆಳೆಯಲಾರದು. ಒಂದೊಮ್ಮೆ ಬೆಳೆ ಬಂದರೂ ಅದಕ್ಕೆ ಸರಿಯಾದ ವೈಜ್ಞಾನಿಕ ಬೆಲೆ ಆತನಿಗೆ ಸಿಗುತ್ತಿಲ್ಲ. ಆತನ ಬದುಕಿಗೆ ಬೇಕಾದ ಪ್ರೋತ್ಸಾಹ ಸರಕಾರಗಳಿಂದ ದೊರಕುತ್ತಿಲ್ಲ. ಸಾಲದ ಬಾಧೆಯಿಂದ ಆತ ತತ್ತರಿಸುತ್ತಿದ್ದಾನೆ. ತತ್ಪರಿಣಾಮವಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇವಿಷ್ಟು ಸಂಕ್ಷಿಪ್ತವಾಗಿ ಭಾರತದ ರೈತನ ಕುರಿತಾಗಿ ಹೇಳಬಹುದಾದ ಮಾತುಗಳು. ಇತ್ತೀಚೆಗೆ ಸೇರ್ಪಡೆಯಾಗುತ್ತಿರುವ ವಿಚಾರವೆಂದರೆ ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿಯ ಹೆಸರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ಕುರಿತು ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದು.
ಇವೆಲ್ಲವೂ ನಿಜ. ಆದರೆ ಚಿಂತಿಸುವುದರಿಂದ ಹಳಿಯುವುದರಿಂದ ಅವರ ಅಭಿವೃದ್ಧಿ ಸಾಧ್ಯವೇ? ಕಛೇರಿ ಸಿಬ್ಬಂದಿ ಸಂಬಳ ಪಡೆಯುತ್ತಾರೆ. ಸಾಪ್ಟವೇರ್ ಕಂಪನಿಯಲ್ಲಿ ಕೆಲಸಮಾಡುವವರು ಲಕ್ಷಗಟ್ಟಲೆ ಸಂಬಳ ಪಡೆಯುತ್ತಾರೆ. ಅವರು ಐಷಾರಾಮ ಬದುಕು ಸಾಗಿಸುತ್ತಾರೆ. ಅದು ಸದಾ ಕಣ್ಣೆದುರಿಗೇ ಕುಣಿಯುತ್ತಿರುವುದರಿಂದ ನಮ್ಮ ಮಕ್ಕಳನ್ನು ಅತ್ತಲೇ ಕಳುಹಿಸಬೇಕು. ಹಳ್ಳಿ ಮತ್ತು ಕೃಷಿ ಬದುಕು ಯಾರಿಗೆ ಬೇಕು? ಇಂಥ ಮನೋಸ್ಥಿತಿಯಿಂದಾಗಿ ಇಂದು ಪ್ರತಿಹಳ್ಳಿಯ ಪ್ರತಿಮನೆಯಲ್ಲೂ ದುಡಿಯುವ ವ್ಯಕ್ತಿಗಳಿಗೆ ಬದಲಾಗಿ ನಿಧಾನವಾಗಿ ವೃದ್ಧಾಶ್ರಮಗಳಾಗುತ್ತ ಸಾಗಿದಲ್ಲಿ ಆಶ್ಚರ್ಯವೇನಿಲ್ಲ. ಇರುವ ಅಲ್ಪಸ್ವಲ್ಪ ಜನರಿಗೂ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕೂಲಿಗಳು ಸಿಗುತ್ತಿಲ್ಲ. ವಿದ್ಯುತ್ ಅಭಾವ ಆಧುನಿಕ ಸೌಲಭ್ಯಗಳ ಕೊರತೆ ಇತ್ಯಾದಿ ಸಮಸ್ಯೆಗಳು ಕಾಡುತ್ತಿವೆ. ಮತ್ತಲ್ಲಿ ಮನುಷ್ಯನ ದುರಾಸೆಯಿಂದ ಕಾಡುಗಳು ಕಣ್ಮರೆಯಾಗುತ್ತಿವೆ. ನದಿಗಳು ಬತ್ತುತ್ತಿವೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿಯ ಸುಧಾರಣೆಯ ಲಕ್ಷಣಗಳೇನೂ ಗೋಚರಿಸುತ್ತಿಲ್ಲ.
ಯಾವುದೇ ಗಿಡ ಮರವಾಗಲೀ ಪ್ರಾಣಿಯಾಗಲೀ ಮನುಷ್ಯ ಸಂಪರ್ಕವನ್ನು ಬಯಸುತ್ತವೆ. ಮನೆಯ ಹತ್ತಿರದ ಗಿಡಗಳು ನಾವು ಸದಾ ಓಡಾಡುವ ಜಾಗೆಯಲ್ಲಿನ ಗಿಡ ಮರಗಳು ಅಧಿಕ ಬೆಳೆ ನೀಡಿವುದನ್ನು ನಾವು ಕಾಣುತ್ತೇವೆ. ಹೀಗೆ ಗಿಡ ಮರಗಳು ಅಧಿಕ ಇಳುವರಿ ನೀಡಲು ನಾವಲ್ಲಿ ಸದಾ ಅವುಗಳೊಂದಿಗೆ ಸಂವಾದಿಸುತ್ತಿರಬೇಕು, ಎಂಬ ಸತ್ಯವನ್ನರಿತು. ನಿರ್ದಿಷ್ಟ ಸಮಯದಲ್ಲಿ ಯಾವುದೇ ಬಗೆಯ ಸೋಮಾರಿತನವನ್ನು ಮೈಗೂಡಿಸಿಕೊಳ್ಳದೇ ಅಲ್ಲಿ ಇದ್ದಲ್ಲಿ ಆದಾಯ ತನ್ನಿಂದ ತಾನೇ ಹೆಚ್ಚಬಹುದು. ಹಾಗೇ ರೋಗ ತಗುಲಿದ್ದರ ಅರಿವು ಸಕಾಲದಲ್ಲೇ ಆಗುವುದರಿಂದ ಸೂಕ್ತ ಚಿಕಿತ್ಸೆ ನೀಡಲು ಕೂಡಾ ಅನುಕೂಲ. ಕೊನೆಯ ಹೊತ್ತಿನ ಪ್ರಯತ್ನಗಳಿಗಿಂತ ಮೊದಲೇ ಎಚ್ಚರಗೊಂಡು ಪ್ರಯತ್ನಿಸಿದರೆ ಫಲ ಪರಿಣಾಮಕಾರಿಯಾಗಿ ದೊರೆಯಬಹುದು.
ಪರಿಸರ ಪ್ರೇಮಿ ಶ್ರೀ ನಾಗೇಶ ಹೆಗಡೆಯವರ “ಇರುವುದೊಂದೇ ಭೂಮಿ” ಯಲ್ಲಿ ಪ್ರಸ್ತಾಪಿಸಿದಂತೆ ಈ ನೆಲವು ನಾವು ಹಿರಿಯರಿಂದ ಬಳುವಳಿಯಾಗಿ ಪಡೆದದ್ದು ಎಂದು ಯೋಚಿಸುವುದಕ್ಕಿಂತ ಇದನ್ನು ನಾವು ನಮ್ಮ ಮೊಮ್ಮಕ್ಕಳಿಂದ ನ್ಯಾಸವಾಗಿಟ್ಟುಕೊಂಡಿದ್ದೇವೆ ಎಂಬ ಕಲ್ಪನೆ ಜಾಗೃತವಾಗಿದ್ದಲ್ಲಿ ಕೃಷಿಗೆ ಅವಶ್ಯಕವಾದ ಕಾಡು ಉಳಿದೀತು. ಅವರವರ ಊರಿನ ಕಾಡನ್ನು ಹಸಿರನ್ನು ರಕ್ಷಿಸಿಕೊಳ್ಳುವ ಕೆಲಸ ಕೃಷಿಕರಿಂದಲೇ ಸಾಧ್ಯವಾಗಬೇಕು. ದುರಾಸೆಯವರೊಂದಿಗೆ ಕೈಜೋಡಿಸಿದರೆ ಕಳೆದು ಕೋಳ್ಳುವುದೇ ಹೆಚ್ಚು. ತತ್ಕಾಲದ ಮೋಹಕ್ಕೆ ವಶವಾದಲ್ಲಿ ಭವಿಷ್ಯ ನಾಶವಾಗುವುದರಲ್ಲಿ ಸಂದೇಹವಿಲ್ಲ.
ಬೇರೆಯವರನ್ನು ದೂರುವುದರಿಂದ ನಾವು ಉದ್ಧಾರವಾಗುವುದಿಲ್ಲ. ಎಂಬ ಸತ್ಯವನ್ನರಿತು ಅವರಂತೆ ಸದಾ ಕ್ರಿಯಾಶೀಲವಾಗಿ ನೆಲದಲ್ಲಿ ಸದಾ ಇದ್ದು ಆದಷ್ಟು ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಸಾಗಿದರೆ ದಿನವೂ ಅಷ್ಟಷ್ಟು ಕೆಲಸ ಮಾಡುತ್ತಲೇ ಇದ್ದಲ್ಲಿ ಕೂಲಿ ಸಮಸ್ಯೆ ಕೂಡಾ ಅಷ್ಟಾಗಿ ಬಾಧಿಸಲಾರದು. ಪ್ರತಿಯೊಂದಕ್ಕೂ ಪರಾವಲಂಬಿಗಳಾಗಿ ಬದುಕಲು ಪ್ರಾರಂಭಿಸಿದರೆ ಉದ್ಧಾರ ಅಸಾಧ್ಯ. ಹಾಗಾಗಿ ತಮ್ಮೆಲ್ಲ ಸಂಕಟಗಳಿಗೆ ಬೇರೆಡೆಗೆ ಬೆಟ್ಟು ಮಾಡುವುದಕ್ಕೆ ಮುನ್ನ ಒಂದು ಕ್ಷಣ ಆತ್ಮಾವಲೋಕನ ಮಾಡಿಕೊಳ್ಳುವುದು ಇಂದಿನ ಅಗತ್ಯ. ಅವರು ಸೋಮಾರಿಗಳು ಕಛೇರಿಯಲ್ಲೇ ಇರುವುದಿಲ್ಲ ಎನ್ನುವ ಮೊದಲು ನಾವೆಷ್ಟು ಕ್ರಿಯಾಶೀಲರು ನಾವೆಷ್ಟು ನಮ್ಮ ನೆಲದೊಂದಿಗಿದ್ದೇವೆ ಎಂದು ಯೋಚಿಸುವುದು ಒಳಿತು.
ರವೀಂದ್ರ ಭಟ್ ಕುಳಿಬೀಡು