ಶಿಡ್ಲಘಟ್ಟದಲ್ಲಿ ಎರಡನೇ ಕೊರೊನ +ve ಪ್ರಕರಣ ದಾಖಲಾಗಿದ್ದು ಸೋಂಕಿತರು ಜಂಗಮಕೋಟೆಯಲ್ಲಿ ಈ ಮೊದಲು ವರದಿಯಾಗಿದ್ದ ಸೋಂಕಿತ ವ್ಯಕ್ತಿಯ ಸಂಬಂಧಿಕ ಹಾಗೂ ನೆರೆಯ ಮನೆಯವರು ಎಂದು ಗುರುತಿಸಲಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಕೊರೊನಾ ಪ್ರಕರಣ ಬುಧವಾರ ದಾಖಲಾಗಿತ್ತು. ತಾಲ್ಲೂಕಿನ ಜಂಗಮಕೋಟೆ ನಿವಾಸಿ ಯುವಕನೋರ್ವ ಕೊರೋನಾ ಪಾಸಿಟಿವ್ ವ್ಯಕ್ತಿಯಾಗುವ ಮೂಲಕ ಮೊದಲು ಕೊರೊನಾ ತಾಲ್ಲೂಕಿಗೆ ಪ್ರವೇಶ ಪಡೆದಿತ್ತು.
ಮೊದಲು ಪಾಸಿಟೀವ್ ಬಂದ ವ್ಯಕ್ತಿ ಯಲಹಂಕದಲ್ಲಿದ್ದು ಬಂದಿದ್ದರೆ, ಶುಕ್ರವಾರ ಪಾಸಿಟೀವ್ ಆದ ವ್ಯಕ್ತಿ ಕೆ.ಆರ್.ಪುರಂ ನಲ್ಲಿ ಆಟೋಮೊಬೈಲ್ಸ್ ಅಂಗಡಿಯಲ್ಲಿ ಕೆಲಸ ಕಲಿಯಲು ಹೋಗಿದ್ದ ಎಂದು ತಿಳಿದುಬಂದಿದೆ. ಆಗಿಂದಾಗ್ಗೆ ಜ್ವರ ಬರುತ್ತಿದ್ದುದರಿಂದ ಜಂಗಮಕೋಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ತಾಲ್ಲೂಕು ಆಡಳಿತ ಅಧಿಕಾರಿಗಳು ಜಂಗಮಕೋಟೆಗೆ ಭೇಟಿ ನೀಡಿ, ಕೊರೊನಾ ಪಾಸಿಟೀವ್ ಆದ ಯುವಕನನ್ನು ಆಂಬುಲೆನ್ಸ್ ನಲ್ಲಿ ಚಿಕ್ಕಬಳ್ಳಾಪುರದ ಕೋವಿಡ್ ವಾರ್ಡ್ ಗೆ ಕಳುಹಿಸಿದ್ದಾರೆ.
ಬುಧವಾರದಂದು ಪಾಸಿಟೀವ್ ಬಂದ ಯುವಕನ ಕುಟುಂಬದವರು ಸೇರಿದಂತೆ, ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರಾದ 38 ಮಂದಿಯ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಅವರಲ್ಲಿ 15 ಮಂದಿಯ ವರದಿ ಬಂದಿದ್ದು, ಅವರಲ್ಲಿ ಒಬ್ಬ ವ್ಯಕ್ತಿ ಪಾಸಿಟೀವ್ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಹಾಗೂ ಸಿಬ್ಬಂದಿ ಹಾಜರಿದ್ದರು.