ಸಣ್ಣ ಊರು ಅಥವಾ ಗ್ರಾಮಗಳಲ್ಲಿ ಪೋಸ್ಟ್‌ಮ್ಯಾನ್ ಅಥವಾ ಅಂಚೆಯಣ್ಣ ಕೇವಲ ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಮದುವೆ, ಹೆರಿಗೆ, ಫಲಿತಾಂಶ, ಕೋರ್ಟು ವಾರಂಟು, ಸಾವು, ರೋಗ, ವೃದ್ಧಾಪ್ಯವೇತನ ಎಲ್ಲವನ್ನೂ ಮನೆಮನೆಗೆ ಹಂಚುವ ಅಂತರಂಗದ ಸದಸ್ಯ. ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಸಿಕ್ಕಿಸಿಕೊಂಡು ಬೆವರೊರೆಸಿಕೊಳ್ಳುತ್ತಾ ಸೈಕಲ್ ತುಳಿಯುವ ಈತ ಸಮಾಜದ ಚಲನಶೀಲ ಬಂಧು.
ತಾಲ್ಲೂಕಿನ ಹನುಮಂತಪುರದ ವಾಸಿ ಎಚ್.ಕೆ.ರಮೇಶ್ ಇಂಥ ಚಲನಶೀಲ ಪೋಸ್ಟ್‌ಮ್ಯಾನ್‌ಗಳಲ್ಲೊಬ್ಬರು. ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ಅವರು ಹೆಸರಿಗಷ್ಟೇ ಬ್ರಾಂಚ್ ಪೋಸ್ಟ್ ಮಾಸ್ಟರ್. ಆದರೆ ಟಪಾಲು ಸ್ವೀಕಾರ, ಠಸ್ಸೆ ಹೊಡೆಯುವುದು, ರವಾನೆ, ಹಂಚಿಕೆ ಎಲ್ಲವೂ ಅವರೇ ಮಾಡಬೇಕು. ಜೊತೆಯಲ್ಲಿ ಕವರ್, ಕಾರ್ಡ್, ಸ್ಟಾಂಪ್, ಎಸ್‌ಬಿ, ಆರ್‌ಡಿ, ಪಿಎಲ್‌ಐ, ಎಂಓ, ಸ್ಪೀಡ್‌ಪೋಸ್ಟ್, ರಿಜಿಸ್ಟರ್‌ಪೋಸ್ಟ್ ಕೂಡ ನಿರ್ವಹಿಸಿ ಲೆಕ್ಕ ಪತ್ರಗಳ ಸಮೇತ ಬ್ಯಾಗ್ ತಯಾರಿಸಬೇಕು.
ಅವರ ಕಾರ್ಯವ್ಯಾಪ್ತಿಗೆ ಕುಂದಲಗುರ್ಕಿ, ದೊಡ್ಡದಾಸೇನಹಳ್ಳಿ, ಚಿಕ್ಕದಾಸೇನಹಳ್ಳಿ, ಚಿಕ್ಕಪಾಪನಹಳ್ಳಿ, ಬಸವನಪರ್ತಿ, ಗೊಲ್ಲಹಳ್ಳಿ, ಸಿದ್ದಾಪುರ, ಗಂಗಾಪುರ ಮತ್ತು ರೊಪ್ಪಾರ್‍ಲಹಳ್ಳಿ ಬರುತ್ತವೆ. ಬೆಳಿಗ್ಗೆ ಶಿಡ್ಲಘಟ್ಟದ ಕಚೇರಿಯಲ್ಲಿ ಟಪಾಲುಗಳನ್ನು ಪಡೆದು ಕುಂದಲಗುರ್ಕಿಗೆ ಹೋಗಿ ಅಲ್ಲಿಂದ ಸೈಕಲ್ ಏರಿ ತಮ್ಮ ೧೦ ಕಿಮೀ ವ್ಯಾಪ್ತಿಯ ಹಳ್ಳಿಗಳಿಗೆ ತೆರಳಿ ಪತ್ರ ರವಾನಿಸಬೇಕು.
‘೩೦೦ ರೂಗಳಿಗೆ ಒಪ್ಪಂದದ ಮೇರೆಗೆ ೧೯೮೬ರಲ್ಲಿ ಕೆಲಸಕ್ಕೆ ಸೇರಿದೆ. ಈಗ ೩,೦೦೦ ರೂ ಸಂಬಳ ಬರುತ್ತಿದೆ. ತಾತ್ಕಾಲಿಕವಾಗಿ ನೇಮಿಸಿರುವುದರಿಂದ ಇತರೆ ಯಾವುದೇ ಸೌಲಭ್ಯವಿಲ್ಲ. ಅನೇಕ ಮುಷ್ಕರಗಳು ದೇಶದಾದ್ಯಂತ ನಡೆದರೂ ಪರಿಣಾಮಕಾರಿ ಬದಲಾವಣೆಗಳಾಗಿಲ್ಲ. ಮೊಬೈಲ್ ಬಳಕೆಯಿಂದಾಗಿ ಇತ್ತೀಚೆಗೆ ಟೆಲಿಗ್ರಾಂ ಮತ್ತು ಕ್ಷೇಮಸಮಾಚಾರದ ಪತ್ರಗಳು ಕಡಿಮೆಯಾಗಿವೆಯಷ್ಟೆ’ ಎಂದು ರಮೇಶ್ ಹೇಳಿದರು.
‘ಒಮ್ಮೆ ದೊಡ್ಡದಾಸೇನಹಳ್ಳಿಯ ಶಶಿಕಲಾ ಮತ್ತು ಮಂಜುನಾಥ್ ಎಂಬುವವರಿಗೆ ರಿಜಿಸ್ಟರ್‌ಪೋಸ್ಟ್ ಬಂದಿತ್ತು. ಮಧ್ಯಾಹ್ನ ಟಪಾಲು ಪಡೆದು ಹೋಗಿ ಅವರಿಗೆ ತಲುಪಿಸುವಷ್ಟರಲ್ಲಿ ಸಂಜೆಯಾಗಿತ್ತು. ಮಾರನೇ ದಿನವೇ ಅವರಿಗೆ ಸಂದರ್ಶನವಿತ್ತು. ಇಬ್ಬರೂ ಈಗ ಸಾರಿಗೆ ನಿರ್ವಾಹಕರು. ಅವರು ಸಿಕ್ಕಾಗೆಲ್ಲಾ ನನ್ನ ಕೆಲಸವನ್ನು ಹೊಗಳುವರು’ ಎಂದು ತನ್ನೆಲ್ಲಾ ಕಷ್ಟಗಳ ನಡುವೆಯೂ ನಡೆದಿರುವ ಸಂತಸದ ಸಂಗತಿಯನ್ನು ಅವರು ವಿವರಿಸುತ್ತಾರೆ.
‘ಹತ್ತಾರು ಕಿಮೀ ಸೈಕಲ್ ತುಳಿದು ಹಳ್ಳಿ ಹಳ್ಳಿಗೂ ಪತ್ರ ರವಾನಿಸಿ ಹಿಂತಿರುಗಿ ಬರುವಷ್ಟರಲ್ಲಿ ಕತ್ತಲಾಗಿರುತ್ತದೆ. ಊರಿಗೆ ಬರುವ ಬಸ್ ತಪ್ಪಿದರೆ ಸರಹೊದ್ದಿನಲ್ಲಿ ಹಳ್ಳಿಯಲ್ಲಿರುವ ಮನೆಗೆ ನಡೆದು ಬರಬೇಕು. ಅವರ ಕಷ್ಟ ನೋಡಿದರೆ ಯಾರಿಗೂ ಈ ವೃತ್ತಿ ಕೈಗೊಳ್ಳಲು ಇಷ್ಟವಾಗದು. ಸರ್ಕಾರ ಇಂಥವರಿಗೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಕೊಡುವ ಸೌಲಭ್ಯಗಳನ್ನೇ ನೀಡಬೇಕು’ ಎನ್ನುತ್ತಾರೆ ಹನುಮಂತಪುರದ ನಾಗಭೂಷಣ್.
–ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -
- Advertisement -