23.1 C
Sidlaghatta
Monday, December 23, 2024

ಶಿಡ್ಲಘಟ್ಟ ರೇಷ್ಮೆ ಉದ್ಯಮದ ಹರಿಕಾರ ಆನೂರು ಎ.ಎಂ.ಮುನೇಗೌಡರು

- Advertisement -
- Advertisement -

ಶಿಡ್ಲಘಟ್ಟ ರೇಷ್ಮೆ ಉದ್ಯಮದ ಬೀಡು, ರೇಷ್ಮೆ ಉದ್ಯಮದಲ್ಲಿ ಸಣ್ಣಪುಟ್ಟ ಬದಲಾವಣೆ ಆದರೂ ನೆನಪಾಗುವುದೇ ಶಿಡ್ಲಘಟ್ಟ. ರೇಷ್ಮೆ ಕೃಷಿಕರ ಹಾಡು-ಪಾಡು, ನೂತನ ತಂತ್ರಜ್ಞಾನದ ಪರಿಚಯ, ಬೆಲೆ ಏರಿಕೆ ಮತ್ತು ಕುಸಿತ, ರಫ್ತು ಮತ್ತು ಆಮದು ಮುಂತಾದವುಗಳ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಅನಿಸಿಕೆ, ಅಭಿಪ್ರಾಯ ನೀಡತೊಡಗುತ್ತಾರೆ.
ಆಸಕ್ತಿಮಯ ಸಂಗತಿಯೆಂದರೆ, ಈ ರೀತಿಯ ಚರ್ಚೆ ಸಂವಾದಗಳು ಇಂದಿನದಲ್ಲ. ಇದಕ್ಕೆ ಸುಮಾರು 50 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಅದು 60 ರ ದಶಕದ ಸಮಯ, ವೈಜ್ಞಾನಿಕ ರೇಷ್ಮೆ ಬೇಸಾಯ ಆಗ ತಾನೆ ಅಖಂಡ ಕೋಲಾರ ಜಿಲ್ಲೆಗೆ ಪರಿಚಯವಾಗಿತ್ತು. ರೈತರು ಹಿಂಜರಿಯುತ್ತಲೇ ವಾಣಿಜ್ಯ ಬೆಳೆಯಾಗಿ ರೇಷ್ಮೆಯನ್ನು ಕಂಡುಕೊಳ್ಳುತ್ತಿದ್ದರು. ರೇಷ್ಮೆ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ರೈತರಲ್ಲಿ ಆತ್ಮವಿಶ್ವಾಸ ತುಂಬಲೆಂದೇ ಶಿಡ್ಲಘಟ್ಟ ತಾಲ್ಲೂಕಿನ ವ್ಯಕ್ತಿಯೊಬ್ಬರು ಪುಸ್ತಕಗಳನ್ನು ಹೊರತಂದರು.
ರೇಷ್ಮೆಯಿಂದ ಯಾವ ರೀತಿ ಆರ್ಥಿಕ ಸಬಲತೆ ಕಾಣಬಹುದು ಎಂಬುದು ಸೇರಿದಂತೆ ಯಾವುದೆಲ್ಲ ಪರಿಹಾರೋಪಾಯ ಕಂಡುಕೊಳ್ಳಬಹುದು ಎಂಬುದನ್ನು ಅವರು ಪುಸ್ತಕಗಳ ಮೂಲಕ ತಿಳಿಪಡಿಸುತ್ತಿದ್ದರು. ಹಾಗೆಂದು ಅವರೇನೂ ಸಾಹಿತಿಯಾಗಿರಲಿಲ್ಲ. ಆದರೆ ಸಾಹಿತ್ಯದ ಕುರಿತು ತುಂಬ ಆಸಕ್ತಿ ಇತ್ತು. ರೇಷ್ಮೆ ಕೃಷಿ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಿದ್ದರು.
ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಎ.ಎಂ.ಮುನೇಗೌಡ. ಆನೂರಿನ ಪಟೇಲ ಮುನಿಶಾಮೇಗೌಡರ ಪುತ್ರ.ಆಗಿನ ಕಾಲದಲ್ಲೇ ಕೃಷಿಗೆ ಸಂಬಂಧಿಸಿದಂತೆ ಎಲ್.ಎಜಿ ಎಂಬ ಡಿಪ್ಲೊಮ ಗಳಿಸಿದ್ದರು. ಸರ್ಕಾರಿ ಉದ್ಯೋಗ ತಿರಸ್ಕರಿಸಿದ್ದ ಅವರು ತಮ್ಮ ಕುಲ ವೃತ್ತಿಯಾದ ವ್ಯವಸಾಯವನ್ನೇ ನಂಬಿ ಗ್ರಾಮಕ್ಕೆ ಹಿಂದಿರುಗಿದ್ದರು. ದೊಡ್ಡ ಕುಟುಂಬದ ಹಿರಿಯರಾಗಿದ್ದ ಅವರು ಕುಟುಂಬದ ಜವಾಬ್ದಾರಿಯೊಂದಿಗೆ ಸಾಹಿತ್ಯಾಭಿಮಾನಿಯಾಗಿದ್ದರು. ಆವರು ಜಿಲ್ಲೆಯ ಹಿರಿಯ ಸಾಹಿತಿಗಳಲ್ಲೊಬ್ಬರಾದ ಸಂತೇಕಲ್ಲಹಳ್ಳಿಯ ಲಕ್ಷ್ಮೀನರಸಿಂಹಶಾಸ್ತ್ರಿಯವರ ಒಡನಾಟವನ್ನು ಹೊಂದಿದ್ದು, ಶಾಸ್ತ್ರಿಗಳ ಸಾಹಿತ್ಯ ಸೇವೆಗೆ ಆರ್ಥಿಕ ನೆರವನ್ನು ನೀಡುತ್ತಿದ್ದರು.
ರೇಷ್ಮೆ ವ್ಯವಸಾಯದ ಬಗ್ಗೆ ರೈತರಿಗೆ ಸರ್ಕಾರ ಅರಿವು ಮೂಡಿಸುವ ಮುನ್ನವೇ ಮುನೇಗೌಡ ಅವರು “ರೇಷ್ಮೆ ಕೈಗಾರಿಕೆ” ಎಂಬ ದ್ವೈಮಾಸಿಕ ಪತ್ರಿಕೆ ತರುವ ಸಾಹಸಕ್ಕೆ ಕೈಹಾಕಿದರು. ಅವರಿಗೆ ಪತ್ರಿಕೋದ್ಯಮ ಮತ್ತು ಮುದ್ರಣದ ಬಗ್ಗೆ ಸಾಮಾನ್ಯ ಪರಿಚಯವೂ ಇರಲಿಲ್ಲ. ಆದರೆ ರೇಷ್ಮೆ ಬೇಸಾಯದ ಬಗ್ಗೆ ಅಪಾರವಾದ ತಿಳುವಳಿಕೆಯನ್ನು ಹೊಂದಿದ್ದರು. ಬೇರೆ ದೇಶಗಳಲ್ಲಿ ರೇಷ್ಮೆ ಕೃಷಿ ಹೇಗೆ ನಡೆದಿದೆ, ವ್ಯಾಪಿಸಿದೆ. ಅದರ ಸಾಧ್ಯಾಸಾಧ್ಯತೆಗಳೇನು ಎಂಬುದರ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದರು. ತಾವು ತಿಳಿದುಕೊಂಡ ವಿಷಯಗಳನ್ನು ರೈತರಿಗೆ ತಿಳಿಸಬೇಕೆಂಬ ಕಾಳಜಿ, ಕಳಕಳಿಯಿತ್ತು. ಬೆಂಗಳೂರಿನ ಕಲಾಸಿಪಾಳ್ಯಂನ ಹಾಸನದ ವೆಂಕಟೇಶಯ್ಯ ಅವರ ಮುದ್ರಣಾಲಯದಲ್ಲಿ ಇವರ ಪತ್ರಿಕೆ ರೂಪುಗೊಳ್ಳುತ್ತಿತ್ತು. ಪತ್ರಿಕೆಯ ಕರಡು ತಿದ್ದುವುದು, ಭಾಷೆಯನ್ನು ಪರಿಷ್ಕರಿಸುವುದು ಮುಂತಾದ ಕೆಲಸಗಳನ್ನು ಶಾಸ್ತ್ರಿಗಳು ಮಾಡುತ್ತಿದ್ದರು. 16 ಪುಟಗಳ ಈ ಮಾಸಪತ್ರಿಕೆಯ ಎಲ್ಲಾ ಲೇಖನಗಳನ್ನೂ ಗೌಡರೇ ಬರೆಯುತ್ತಿದ್ದರು. ಕೆಲ ಲೇಖನಗಳು ಇಂಗ್ಲಿಷ್ ನಲ್ಲಿದ್ದರೆ, ಕೆಲ ಲೇಖನಗಳನ್ನು ಸಚಿತ್ರವಾಗಿಯೂ ಪ್ರಕಟಿಸುತ್ತಿದ್ದರು. ಅದರ ಬ್ಲಾಕುಗಳ ತಯಾರಿಕೆಗಾಗಿ ಬಹಳಷ್ಟು ಹಣ ವ್ಯಯವಾಗುತ್ತಿತ್ತು. ಈ ಪತ್ರಿಕೆಗೆ ಚಂದಾದಾರರಿದ್ದರೋ ಇಲ್ಲವೋ ಎಂಬುದನ್ನು ಪರಿಗಣಿಸದೇ, ಯಾವುದೇ ಆರ್ಥಿಕ ಅಪೇಕ್ಷೆಯಿಲ್ಲದೆ ಕೆಲ ಕಾಲ ಪತ್ರಿಕೆ ಹೊರತಂದರು. ಆರ್ಥಿಕ ಮುಗ್ಗಟ್ಟಿನಿಂದ, ಜನರ ಮತ್ತು ಸರ್ಕಾರದ ಪ್ರೋತ್ಸಾಹದ ಕೊರತೆಯಿಂದಾಗಿ ಪತ್ರಿಕೆ ಕೊನೆಯುಸಿರೆಳೆಯಿತು.
ರೈತರ ಬದುಕಿನ ಬಗ್ಗೆ ಕಳಕಳಿ ಹೊಂದಿದ್ದ ಮುನೇಗೌಡರು ’ಗ್ರಾಮೋದ್ಧಾರವಾಗುವುದೆಂದು?’ ಸೇರಿದಂತೆ ಕೆಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದರು. 1944-45 ನೆಯ ವರ್ಷದಲ್ಲಿ ಗ್ರಾಮಾಭ್ಯುದಯ ಮತ್ತು ಒಕ್ಕಲಿಗರ ಪತ್ರಿಕೆಗಳಲ್ಲಿ ರೈತರ ಬಗ್ಗೆ ಇವರು ಬರೆದ ಲೇಖನಗಳನ್ನು ಒಟ್ಟುಗೂಡಿಸಿ ’ಗ್ರಾಮೋದ್ಧಾರವಾಗುವುದೆಂದು?’ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕದ ಬಿನ್ನಹದಲ್ಲಿ, “ಗ್ರಾಮವಾಸಿಗಳು ಸಂಘಗಳನ್ನು ಏರ್ಪಡಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ತಮ್ಮ ಕಾಲಿನ ಮೇಲೆ ತಾವು ನಿಲ್ಲುವಂತಾಗಬೇಕು. ಪ್ರತಿಯೊಂದಕ್ಕೂ ಇತರರನ್ನೇ ನಂಬಿಕೊಂಡಿರುವುದು ಹಿಂದುಳಿದವರ ಲಕ್ಷಣ. ಇದು ತೊಲಗಿದಂತೆಲ್ಲಾ ರೈತನು ಅಭಿವೃದ್ಧಿ ಹೊಂದುತ್ತಿದ್ದಾರೆಂದು ತಿಳಿಯಬೇಕು. ಹೀಗಾಗಬೇಕಾದರೆ ರೈತನ ಹಿತಚಿಂತಕರೆಲ್ಲರೂ ರೈತನ ಅವಶ್ಯಕತೆಗಳ ನಿಜ ಸ್ವರೂಪವನ್ನು ತಿಳಿದು ನಡೆಯಬೇಕು. ಓದುಗರು ಸಾಹಿತ್ಯದೋಷಗಳನ್ನು ಮನ್ನಿಸಿ ರೈತನೊಬ್ಬನಿಂದ ಬರೆಯಲ್ಪಟ್ಟಿರುವ ಈ ಪುಸ್ತಕದಲ್ಲಿರುವ ವಿಷಯಗಳನ್ನು ಗಮನಿಸಬೇಕೆಂದು ವಿಜ್ಞಾಪನೆ’ ಎಂದು ಬರೆಯುತ್ತಾರೆ ಮುನೇಗೌಡರು.
ಮುನೇಗೌಡರು ರೇಷ್ಮೆ ಬೇಸಾಯದ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕ್ರಿಯಾಶೀಲರಾಗಿದ್ದವರು. ರೇಷ್ಮೆ ಬೇಸಾಯ ಸುಣ್ಣಕಟ್ಟು ರೋಗ ಮತ್ತು ಹೂಜಿ ನೊಣಗಳ ಹಾವಳಿಯಿಂದಾಗಿ ಸೊರಗಿದಾಗ ಅದರಿಂದ ಪಾರಾಗುವ ಬಗ್ಗೆ ತಮ್ಮ ಆಲೋಚನೆಗಳನ್ನು ದಾಖಲಿಸುತ್ತಿದ್ದರು. ಆಗ ಸರ್ಕಾರದ ರೇಷ್ಮೆ ಇಲಾಖೆ ಮುನೇಗೌಡರ ಸೂಚನೆಗಳನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಮೈಸೂರಿನ ರೇಷ್ಮೆ, ಜಪಾನಿನ ರೇಷ್ಮೆ, ರೇಷ್ಮೆ ಕುರಿತ ಕವನಗಳು, ರೇಷ್ಮೆ ಇಲಾಖೆ, ರೇಷ್ಮೆ ಕೈಗಾರಿಕೆಯ ವಿವಿಧ ಕಸುಬುಗಳ ಹಾಗೂ ಸಮಸ್ಯೆಗಳ ಕುರಿತಂತೆ ವೈವಿಧ್ಯಮಯ ಲೇಖನಗಳನ್ನು ಇವರ ’ರೇಷ್ಮೆ ಕೈಗಾರಿಕೆ’ ರೇಷ್ಮೆ ಕೈಗಾರಿಕೆಯ ಪ್ರಗತಿಗೆ ಮೀಸಲಾದ ಏಕೈಕ ತ್ರಿಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದೆ.
ಲೇಖನ – ಡಿ ಜಿ ಮಲ್ಲಿಕಾರ್ಜುನ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!