ಚಾಕು- ಚೂರಿ ಸವೆದು “ಬಡ್” ಆದೊಡನೆ ನೆನಪಾಗುವುದು ಸಾಣೆ ಹಿಡಿಯುವ ಸಾಬರಣ್ಣ. ಹಳೇ ಸೈಕಲ್ ಗಾಲಿಗೆ ಸಾಣೆ ಚಕ್ರ ಹೊಂದಿಗೆ, ಪೆಡಲ್ ತುಳಿದು ಚಾಕು, ಕತ್ತರಿ ಚೂಪು ಮಾಡಿ ಕೊಡುವುದು ಇಂಥವರ ಕಾಯಕ. ರಸ್ತೆ ಬದಿಯಲ್ಲಿ ಇಂಥವರನ್ನು ನೋಡದವರಿಲ್ಲ. ಆದರೆ ಆಧುನಿಕತೆಯ ಭರಾಟೆಯಲ್ಲಿ ಇವರ ಸಂತತಿಯೂ ವಿರಳವಾಗುತ್ತಿದೆ. ಮುಂದೆ ಇಲ್ಲವಾದರೂ ಹೆಚ್ಚೇನಲ್ಲ.
ಆಂಧ್ರದ ವಿ.ಕೋಟ ಮೂಲದ ರಹಮತ್ತುಲ್ಲ, ನಗರದ ದಿಬ್ಬೂರಹಳ್ಳಿ ರಸ್ತೆಯ ದರ್ಗಾದಲ್ಲಿ ಬೀಡುಬಿಟ್ಟಿದ್ದು, ನಗರ ಹಾಗೂ ತಾಲ್ಲೂಕಿನ ಹಲವಾರು ಹಳ್ಲಿಗಳಲ್ಲಿ ತನ್ನ ಸೈಕಲ್ ಮತ್ತು ಅದಕ್ಕೆ ಹೊಂದಿಸಿರುವ ಸಾಣೆ ಯಂತ್ರದೊಂದಿಗೆ ಸುತ್ತಾಡುತ್ತಿದ್ದಾರೆ. ಇದೇ ಅವರ ಜೀವನ ಮತ್ತು ಬದುಕಾಗಿದೆ.
ಹಿಂದೆ, “ಚಾಕು ಸಾಣೆ, ಕತ್ರಿ ಸಾಣೆ… ಮೊಂಡು ಚಾಕು…ಸಾಣೆಮ್ಮಾ ಸಾಣೆ..” ಎಂದು ಬೀದಿ ಬದಿಯಲ್ಲಿ ಕೂಗು ಕೇಳುತ್ತಿದ್ದಂತೆ ಮನೆಯೊಳಗೆ ಮೊಂಡಾಗಿ ಕುಳಿತ ಚಾಕು, ಕತ್ತರಿಗಳು ಎದ್ದು ಕೂರುತ್ತಿದ್ದವು. ಸಂತೆಗಳಲ್ಲಿ ಕೆಲವರು ಸಾಣೆ ಚಕ್ರವನ್ನು ಬಿಗಿದಿರುವ ಹಳೇ ಸೈಕಲ್ ಗಾಲಿಯನ್ನು ಹೊತ್ತು ತಂದು. ಪೆಡಲ್ ತುಳಿಯುತ್ತಾ ಚಾಕು, ಕತ್ತರಿ ಚೂಪು ಮಾಡಿಕೊಡುತ್ತಿದ್ದರು.
ಕಾಲಿನಿಂದ ಪೆಡಲ್ ತುಳಿಯುತ್ತಾ ಕತ್ತರಿ ಅಥವಾ ಚಾಕುವನ್ನು ಹರಿತ ಮಾಡುವುದನ್ನು ನೋಡಲು ಮಕ್ಕಳು ಸುತ್ತುವರಿಯುತ್ತಿದ್ದರು. ಪೆಡಲ್ ವೇಗ ಹೆಚ್ಚಿದಂತೆಲ್ಲಾ “ಕಿರ್…ಕಿರ್ರ್…ಟರ್ರ್…” ಎಂಬ ಶಬ್ದ ಹೆಚ್ಚುತ್ತದೆ. ಸಾಣೆ ಕಲ್ಲಿನಿಂದ ಹೊಮ್ಮುವ ಬೆಂಕಿಕಿಡಿಗಳು ಎತ್ತರೆತ್ತರಕ್ಕೆ ಹಾರಿದಂತೆಲ್ಲಾ ನೋಡುವ ಮಕ್ಕಳಿಗೆ ಆನಂದ.
ಕತ್ತರಿ, ಚಾಕು ಅಷ್ಟೇ ಅಲ್ಲ ಮಚ್ಚು, ಈಳಿಗೆ ಮಣೆಯ ಕತ್ತಿ, ಮಿಕ್ಸಿ ಜಾರಿನ ಬ್ಲೇಡು, ಚೂರಿ ಎಲ್ಲವನ್ನೂ ಹರಿತಗೊಳಿಸಿಕೊಡುತ್ತಾರೆ, ಕತ್ತರಿ ರಿಪೇರಿ ಕೂಡ ಮಾಡಿಕೊಡುತ್ತಾರೆ ರಹಮತ್ತುಲ್ಲ.
“ಸುಮಾರು 20 ವರ್ಷಗಳಿಂದ ಇದೇ ಕಸುಬನ್ನು ಮಾಡುತ್ತಿದ್ದೇನೆ. ವ್ಯಾಪಾರದಲ್ಲಿ ಹೇಳಕ್ಕಾಗಲ್ಲ ಅಣ್ಣಾ, ದಿನಕ್ಕೆ 200 ರೂಪಾಯಿ ಸಿಗುತ್ತೆ, ಕೆಲವೊಮ್ಮೆ 500 ರೂಪಾಯಿ ಸಿಗುತ್ತೆ, ಇನ್ನು ಕೆಲವು ಸಾರಿ ಟೀ ಕುಡಿಯೋದಕ್ಕೆ ಕಾಸು ಇರಲ್ಲ. ಹತ್ತ ರಿಂದ ನಲವತ್ತು ರೂಪಾಯಿಯವರೆಗೂ ಕೊಡುತ್ತಾರೆ. ಇದರಲ್ಲಿಯೇ ಹಣ ಉಳಿಸಿಕೊಂಡು ತಿಂಗಳಿಗೊಮ್ಮೆ ಮನೆಗೆ ಹೋಗಿ ಕೊಟ್ಟು ಬರುತ್ತೇನೆ” ಎನ್ನುತ್ತಾರೆ ರಹಮತ್ತುಲ್ಲ.
“ಹೊಟ್ಟೆಪಾಡಿಗೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಏನು ಮಾಡುವುದು, ಎಲ್ಲರ ವಸ್ತು ಚೂಪು ಮಾಡಿಕೊಂಡುವ ನಮ್ಮ ಬದುಕು ಮೊಂಡಾಗಿದೆ. ಹಾಗೆಂದು ಸುಮ್ಮನಿರುವುದಿಲ್ಲ. ಕಷ್ಟಪಡುತ್ತೇನೆ. ಒಂಟಿ ಕಾಲಿನಲ್ಲಿ ಸೈಕಲ್ ತುಳಿಯುತ್ತಾ ಚಕ್ರವನ್ನು ತಿರುಗಿಸುತ್ತಾ ಮೊಡಾದ ವಸ್ತುಗಳಿಗೆ ಹೊಳಪು ತಂದುಕೊಡುತ್ತೇನೆ” ಎಂದು ಅವರು ಹೇಳಿದರು.
-ಡಿ.ಜಿ.ಮಲ್ಲಿಕಾರ್ಜುನ