Home Articles ಹಿಪ್ಪುನೇರಳೆ ಸೊಪ್ಪಿನ ಉಪಯೋಗಗಳು

ಹಿಪ್ಪುನೇರಳೆ ಸೊಪ್ಪಿನ ಉಪಯೋಗಗಳು

0

ಒಂದೆಡೆ ರೇಷ್ಮೆಗೂಡಿನ ಬೆಲೆ ತೀವ್ರವಾಗಿ ಕುಸಿತದಿಂದ ಕಂಗೆಟ್ಟ ತಾಲ್ಲೂಕಿನ ರೈತರು ಅಲ್ಲಲ್ಲಿ ಹಿಪ್ಪುನೇರಳೆ ಸೊಪ್ಪಿನ ಬೆಳೆಯನ್ನು ಬೇರು ಸಮೇತ ಕಿತ್ತು ಹಾಕುವ ಘಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಉತ್ಸಾಹಿ ಯುವತಿಯರ ತಂಡ ರೇಷ್ಮೆ ಕೃಷಿಯ ಅಧ್ಯಯನದಲ್ಲಿ ತೊಡಗಿದ್ದು ಕೆಲ ಗ್ರಾಮಗಳಲ್ಲಿ ರೇಷ್ಮೆಯ ವಿವಿಧ ಉಪಯುಕ್ತತೆಗಳು ಹಾಗೂ ಆರ್ಥಿಕತೆಯ ಕುರಿತಂತೆ ಅರಿವು ಮೂಡಿಸುತ್ತಿದ್ದಾರೆ.
ಚಿಂತಾಮಣಿಯ ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ತಂಗಿದ್ದು, ರೇಷ್ಮೆ ಕೃಷಿಯ ಕುರಿತಂತೆ ಅಧ್ಯಯನದಲ್ಲಿ ತೊಡಗಿದ್ದಾರೆ. ತೇಜಶ್ರೀ, ಸ್ವಾತಿ, ವಿದ್ಯಾಶ್ರೀ, ಶ್ರೀವಾಣಿ, ವೀಣಾ, ಉಮಾಮಹೇಶ್ವರಿ, ತೇಜಸ್ವಿನಿ, ಕೆ.ಎನ್.ವೀಣಾ ಮತ್ತಿತರರ ವಿದ್ಯಾರ್ಥಿನಿಯರು ಗ್ರಾಮದಲ್ಲಿ ರೇಷ್ಮೆ ಕೃಷಿಯ ವಾಸ್ತವ ಚಿತ್ರಣದ ದಾಖಲಾತಿಯೊಂದಿಗೆ ಹಿಪ್ಪುನೇರಳೆ ಸೊಪ್ಪಿನ ವಿವಿಧ ವಾಣಿಜ್ಯಿಕ ಬಳಕೆಗಳ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದಾರೆ.

ಹಿಪ್ಪುನೇರಳೆ ಸೊಪ್ಪಿನ ಪಕೋಡ
ಹಿಪ್ಪುನೇರಳೆ ಸೊಪ್ಪಿನ ಪಕೋಡ
ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಹಿಪ್ಪುನೇರಳೆ ಸೊಪ್ಪಿನ ಪಕೋಡವನ್ನು ತಯಾರಿಸಿದ್ದಾರೆ. ಗ್ರಾಮದ ಮನೆಗಳಲ್ಲಿ ಪಕೋಡ ತಯಾರಿಕೆ ಬಗ್ಗೆ ವಿವರಿಸಿ ವಿವಿಧ ಮನೆಗಳಲ್ಲಿ ತಾವೂ ಭಾಗವಹಿಸಿ ತಯಾರಿಸಿ ರುಚಿ ತೋರಿಸಿದ್ದಾರೆ.
ರೇಷ್ಮೆ ಕೃಷಿ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಹಿಪ್ಪುನೇರಳೆ ಸೊಪ್ಪಿನ ಪಕೋಡ ತಯಾರಿಸುತ್ತಿರುವುದು
‘ಮೊದಲಿಗೆ ಈರುಳ್ಳಿಯನ್ನು ಉದ್ದವಾಗಿ ಕತ್ತರಿಸಿಕೊಳ್ಳಿ. ಒಂದು ಪಾತ್ರೆಗೆ ಕಡ್ಲೆಹಿಟ್ಟು, ಕತ್ತರಿಸಿದ ಈರುಳ್ಳಿ, ಹಿಪ್ಪುನೇರಳೆ ಸೊಪ್ಪನ್ನು, ಅಚ್ಚಖಾರದಪುಡಿ, ಸೋಡಾ, ಉಪ್ಪು, ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬೆರಸಿ. ಬೇಕಿದ್ದರೆ ಸ್ವಲ್ಪ ನೀರು ಸೇರಿಸಿಕೊಳ್ಳಿ. ಈಗ ಕಲಸಿಟ್ಟ ಮಿಶ್ರಣವನ್ನು ಕಾದ ಎಣ್ಣೆಯಲ್ಲಿ ಕೈಯಲ್ಲಿ ಅಥವಾ ಸ್ಪೂನ್ ನಿಂದ ಹಾಕಿ ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೂ ಕರೆದು ಪೆಪರ್ ಟವೆಲ್ ಮೇಲೆ ಹಾಕಿ. ಬಳಿಕ ಪ್ಲೇಟ್ ಗೆ ಹಾಕಿ ಸರ್ವ್ ಮಾಡಿದರೆ ಗರಿಗರಿಯಾದ ಹಿಪ್ಪುನೇರಳೆ ಸೊಪ್ಪಿನ ಪಕೋಡ ಸವಿಯಲು ಸಿದ್ಧ’ ಎಂದು ವಿದ್ಯಾರ್ಥಿನಿ ತೇಜಶ್ರೀ ವಿವರಿಸುತ್ತಾರೆ.
’ಇದಲ್ಲದೆ, ಹಿಪ್ಪುನೇರಳೆ ವೈನ್, ಚಾಕೋಲೇಟ್ಸ್, ಟೀ ಮುಂತಾದವುಗಳನ್ನು ತಯಾರಿಸಬಹುದಾಗಿದೆ. ಗ್ರಾಮೀಣ ಪ್ರವಾಸೋದ್ಯಮವನ್ನು ವ್ಯವಸ್ಥಿತವಾಗಿ ನಡೆಸಿ, ವಿದೇಶೀಯರನ್ನು ನಮ್ಮ ರೇಷ್ಮೆ ಪ್ರವಾಸೋಧ್ಯಮಕ್ಕೆ ಆಹ್ವಾನಿಸಬಹುದಾಗಿದೆ. ಬಂದ ಪ್ರವಾಸಿಗರಿಗೆ ಹಿಪ್ಪುನೇರಳೆಯ ವಿವಿಧ ರುಚಿಗಳನ್ನು ತೋರಿಸಬಹುದು. ರೇಷಷ್ಮೆಯ ವಿವಿಧ ಉತ್ಪನ್ನಗಳನ್ನೂ ಮಾರಾಟ ಮಾಡಬಹುದು’ ಎಂದು ಅವರು ಹೇಳುತ್ತಾರೆ.
–ಡಿ.ಜಿ.ಮಲ್ಲಿಕಾರ್ಜುನ.