ಉಜ್ಜನಿ ಮೂಲದ ಕೆಂಪೇಗೌಡ ತನ್ನ ಗರ್ಭಿಣಿ ಮಡದಿ ಹಲಸೂರಮ್ಮನೊಂದಿಗೆ ಶಿಡ್ಲಘಟ್ಟದ ಉತ್ತರಕ್ಕಿರುವ ಅಬ್ಲೂಡಿಗೆ ಬಂದು ವಾಸಿಸುತ್ತಿದ್ದನು. ವೆಲ್ಲೂರಿನ ಕದನದಲ್ಲಿ ಈತ ನಿಧನನಾದ. ಹಲಸೂರಮ್ಮ ಅಬ್ಲೂಡಿನಲ್ಲಿ ಕೋಟೆ ಕಟ್ಟಿ ಸುತ್ತಮುತ್ತಲಿನ ಪ್ರದೇಶವನ್ನು ಆಕ್ರಮಿಸಿಕೊಂಡು ಆಳತೊಡಗಿದಳು. ನಂತರ ತನ್ನ ಮಾವ ಶಿಡ್ಲೇಗೌಡನ ಹೆಸರಿನಲ್ಲಿ ಶಿಡ್ಲಘಟ್ಟವನ್ನು 1526ರಲ್ಲಿ ಸ್ಥಾಪಿಸಿದಳು. ಆಕೆಯ ಮಗ ಶಿವನೇಗೌಡ 47 ವರ್ಷಗಳ ಕಾಲ ಈ ಊರನ್ನು ಆಳಿದನು.
ಈ ಪಟ್ಟಣದ ನೈರುತ್ಯಕ್ಕಿರುವ ಅಮ್ಮನಕೆರೆಯನ್ನು ಹಲಸೂರಮ್ಮನು, ಆಗ್ನೇಯಕ್ಕಿರುವ ಗೌಡನಕೆರೆಯನ್ನು ಶಿವನೇಗೌಡನು ಕಟ್ಟಿಸಿದರೆಂದು ಪ್ರತೀತಿ. ಅಮ್ಮನಕೆರೆಯ ಸಮೀಪದಲ್ಲಿಯೆ ಶಿವನೇಗೌಡ ಮತ್ತು ಆತನ ಹೆಂಡತಿಯ ಸಮಾಧಿಗಳಿವೆ. ಶಿವನೇಗೌಡನ ನಂತರ ಅವನ ಮಗ ಇಮ್ಮಡಿ ಶಿವನೇಗೌಡ 1576ರಿಂದ ಸುಮಾರು 40 ವರ್ಷ ಆಳಿದ.
ಈ ಪಟ್ಟಣ ಹದಿನೇಳನೇ ಶತಮಾನದಲ್ಲಿ ಮರಾಠರ, ನಂತರ ವಿಜಾಪುರ ಸುಲ್ತಾನರ ಮತ್ತು ಮೊಗಲರ ಆಳ್ವಿಕೆಗೆ ಒಳಪಟ್ಟಿತ್ತು. 1679ರಲ್ಲಿ ಇದನ್ನು ವಶಪಡಿಸಿಕೊಂಡ ಮರಾಠರು 1691ರಲ್ಲಿ ಅಣ್ಣಯ್ಯಗೌಡ ಎಂಬಾತನಿಗೆ ಮಾರಿದರು. ಇದನ್ನು 1762ರಲ್ಲಿ ಹೈದರ್‍ಅಲಿಯು ವಶಪಡಿಸಿಕೊಂಡನು.
ಮಹಾಭಾರತದ ಪಾಂಡವರ ವನವಾಸಕ್ಕೂ ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಗ್ರಾಮಕ್ಕೂ ಸಂಬಂಧವಿದೆ. ಪಾಂಡವರೈವರಲ್ಲಿ ಒಬ್ಬನಾದ ಸಹದೇವನು ಸಾದಲಿ ಪಟ್ಟಣವನ್ನು ನಿರ್ಮಿಸಿದನು. ಅದನ್ನು ಹಿಂದೆ ಸಹದೇವಪಟ್ಟಣವೆಂದು ಕರೆಯಲಾಗುತ್ತಿತ್ತು. ಇಲ್ಲಿ ಸಹದೇವನು ನಿರ್ಮಿಸಿದನೆಂದು ಹೇಳಲಾಗುವ ನಂದೀಶ್ವರ ದೇವಾಲಯವಿದೆ. ಈ ಗ್ರಾಮದ ನಾಗರಕಲ್ಲು ಕಟ್ಟೆಯ ಬಳಿಯಿರುವ ಬಂಡೆಯ ಮೇಲಿನ ಕ್ರಿ.ಶ.1792ರ ಶಾಸನವು ಆವತಿ ನಾಡಪ್ರಭು ದೊಡ್ಡಭೈರೇಗೌಡನ ಮೊಮ್ಮಗ ಚನ್ನಣಪ್ಪಯ್ಯನ ಮಗ ರಾಮಸ್ವಾಮಿಯೆಂಬ ಅಧಿಕಾರಿಯು ನಂದೀಶ್ವರ ದೇವರ ಅರ್ಚಕರಾದ ರಾಮಶಾಸ್ತ್ರಿ ಎಂಬುವರಿಗೆ ನೀಡಿದ ಹಲವು ದಾನಗಳನ್ನು ದಾಖಲಿಸುತ್ತದೆ.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಸಮೀಪದಲ್ಲಿರುವ ಸುಗುಟೂರು ಪ್ರಾಚೀನ ಊರಾಗಿದ್ದು, ಚೋಳರ ಕಾಲಕ್ಕಾಗಲೇ ಪ್ರಮುಖ ನೆಲೆಯಾಗಿದ್ದ ಅಂಶ ಸುಗುಟೂರಿನಲ್ಲಿ ಪತ್ತೆಯಾಗಿರುವ ಚೋಳ ಶಾಸನಗಳಿಂದ ವೇದ್ಯವಾಗುತ್ತದೆ.
- Advertisement -
- Advertisement -
- Advertisement -