Home Articles ವೈವಿಧ್ಯಮಯ ಹೂಗಳ ಮೆರವಣಿಗೆ

ವೈವಿಧ್ಯಮಯ ಹೂಗಳ ಮೆರವಣಿಗೆ

0

ಶಿವರಾತ್ರಿ ಕಳೆಯುತ್ತಿದ್ದಂತೆ ಶಿವಶಿವಾ ಎನ್ನುವಂತೆ ತಾಪಮಾನ ಏರತೊಡಗಿದೆ. ಬೇಸಿಗೆ ಪ್ರಾರಂಭವಾಯಿತು ಎನ್ನುತ್ತಾ ಬಿಸಿಲಿನ ತಾಪಮಾನಕ್ಕೆ ಜನರು ಛತ್ರಿ, ಟೊಪ್ಪಿಗೆಯ ಆಸರೆ ಪಡೆಯುತ್ತಿದ್ದಾರೆ. ಆದರೆ ಋತುಗಳ ರಾಜ ವಸಂತ ಯುಗಾದಿಯ ಮುನ್ನ ಆಗಮಿಸಿ ಮರಗಿಡಗಳನ್ನು ಚಿಗುರಿಸುತ್ತಾ, ಹಲವೆಡೆ ಸುಂದರ ಹೂವರಳಿಸುತ್ತಾ ಸಾಗಿದ್ದಾನೆ. ಬಿಸಿಲಿನ ಝಳಕ್ಕೆ ಹೆದರಿ ತಲೆ ತಗ್ಗಿಸಿ ನಿಸರ್ಗದ ಚೆಲುವನ್ನು ನೋಡಲು ಮರೆಯದಿರಿ ಎನ್ನುತ್ತಾ ಕರೆನೀಡಿದ್ದಾನೆ.
ನಗರದ ಹೊರವಲಯದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳ ಕಚೇರಿಯ ಆವರಣದಲ್ಲಿ ಈಗ ಹಳದಿ ಹೂಗಳ ಪ್ರದರ್ಶನವಿದೆ. ಹಳದಿ ರಂಗು ಚೆಲ್ಲಿದಂತೆ ಕಾಣುವ ಈ ಹೂವು ಬಿಗ್ನಾನಿಯಸ್ ಮರಗಳ ಗುಂಪಿಗೆ ಸೇರುವ ‘ಟಾಬೆಬುಯಾಸ್’ ಎನ್ನುವ ಮರದ್ದು. ಅಮೆರಿಕಾದಲ್ಲಿ ಇದನ್ನು ಕರೆಯುವುದು ‘ಚಿನ್ನದ ಮರ’ ಎಂದು ಕರೆಯುತ್ತಾರೆ. ವಸಂತ ಋತುವಿನ ಆಗಮನಕ್ಕೆ ಭವ್ಯ ಪರದೆ ನಿರ್ಮಿಸಿಕೊಡುವ ಈ ಹಳದಿ ಗಂಟೆ ಹೂಗಳು ಜೇನುನೊಣಗಳಿಗೆ ಬಹುಪ್ರಿಯ. ಈ ಹೂಗಳ ಮಧುಪಾತ್ರೆಯಿಂದ ಮಧು ಹೀರಲು ಜೇನುನೊಣಗಳ ಗುಂಪು ಈ ಮರಗಳಿಗೆ ದಾಳಿ ಇಡುತ್ತವೆ.
ಚಳಿಯಲ್ಲಿ ಮುದುಡಿ ಹೋಗಿದ್ದ ಸಸ್ಯಲೋಕದಲ್ಲಿ ಈಗ ಜೀವ ಸಂಚಾರ. ನೇಸರನ ಪ್ರಖರತೆ ಹೆಚ್ಚುತ್ತಿದ್ದಂತೆ ಬೋಳು ಬೋಳಾಗಿದ್ದ ಮರ-ಗಿಡಗಳೆಲ್ಲ ಹೊಸ ಚಿಗುರು ಕಾಣಿಸಿಕೊಂಡು ಹೊಸ ರೂಪ ಪಡೆಯುತ್ತಿವೆ. ನೂತನ ವರ್ಷಾರಂಭದ ಮುನ್ಸೂಚನೆ ಈಗಾಗಲೇ ಕಾಣಿಸಿಕೊಂಡು ಹೇಮಂತ ಋತು ಕಳೆದು ಶಿಶಿ ಋತುವಿನ ಆಗಮನಕ್ಕೆ ಸ್ವಾಗತ ಶುರುವಾಗಿದೆ.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಕ್ರಾಸ್ ಬಳಿ ಗುಲಾಬಿ ಬಣ್ಣದ ಹೂಗಳಿರುವ ಪಿಂಕ್ ಟ್ರಂಪೆಟ್ ಮರ, ಮುತ್ತುಗದ ಮರ, ಹನುಮಂತಪುರ ರಸ್ತೆಯಲ್ಲಿ ಮತ್ತು ನ್ಯಾಯಾಲಯದ ಆವರಣದಲ್ಲಿರುವ ಗುಲ್ಮೊಹರ್ ಮರಗಳು, ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿನ ಆಕಾಶ ಮಲ್ಲಿಗೆ, ಗುಲಗಂಜಿ ಮರ, ನಗರದ ಅಂಚೆ ಕಚೇರಿ ರಸ್ತೆಯಲ್ಲಿರುವ ಮಳೆ ಮರಗಳು … ನೋಡುತ್ತಾ ಸಾಗಿದಂತೆ ಬಣ್ಣ ಬಣ್ಣದ ಹೂಗಳ ಸಂಖ್ಯೆ ಬೆಳೆಯುತ್ತದೆ.
‘ಋತುಮಾನಕ್ಕೆ ತಕ್ಕಂತೆ ವೈವಿಧ್ಯಮಯ ಹೂಗಳು ನಿಸರ್ಗದಲ್ಲಿ ಕಾಣಸಿಗುತ್ತವೆ. ನಮ್ಮ ಸುತ್ತಮುತ್ತಲಿನ ಮರ, ಗಿಡ, ಅವುಗಳಲ್ಲಿ ಅರಳುವ ವಿವಿಧ ಹೂಗಳ ಪರಿಚಯ ಮಾಡಿಕೊಳ್ಳಬೇಕು ಮತ್ತು ಮಕ್ಕಳಿಗೆ ತೋರಿಸಿ ತಿಳಿಸಬೇಕು. ಈ ಹೂಗಳು ಮತ್ತು ಮರಗಳನ್ನಾಶ್ರಯಿಸಿ ಬದುಕುವ ಅಸಂಖ್ಯ ಕೀಟ, ಪಕ್ಷಿ, ಚಿಟ್ಟೆಗಳ ಪರಿಚಯವೂ ಇದರ ಮೂಲಕ ಆಗುತ್ತದೆ. ನಮ್ಮ ಸುತ್ತಲಿನ ನಿಸರ್ಗ ಸೌಂದರ್ಯವನ್ನು ಆಸ್ವಾದಿಸುವ ಮನಸ್ಥಿತಿ ಬೆಳೆದಲ್ಲಿ ಅವುಗಳ ಸಂರಕ್ಷಿಸುವ ತುಡಿತವೂ ಮೂಡುತ್ತದೆ’ ಎನ್ನುತ್ತಾರೆ ನಿವೃತ್ತ ಶಿಕ್ಷಣ ಸಂಯೋಜಕ ತಲದುಮ್ಮನಹಳ್ಳಿ ಆರ್.ಕೃಷ್ಣಪ್ಪ.
–ಡಿ.ಜಿ.ಮಲ್ಲಿಕಾರ್ಜುನ.