ಸ್ವಾವಲಂಬಿ ದೇಶ ನಿರ್ಮಾಣದತ್ತ ಎಲ್ಲರೂ ಸಂತಸದಿಂದ ಮುನ್ನಡೆಯುತ್ತಿದ್ದರೆ, ಕೆಲವರು ಬಡತನದ ದಾಸ್ಯದಿಂದ ಹೊರಬರಲಾಗದೇ ಬದುಕನ್ನು ಸವೆಸುತ್ತಿದ್ದಾರೆ. ಸರ್ಕಾರಿ ಸೌಲಭ್ಯಗಳು ವಿಫುಲವಾಗಿದ್ದರೂ, ಅವುಗಳ ನೆರವಿಲ್ಲದೇ -ಸರ್ಕಾರದ ಆಶ್ರಯವಿಲ್ಲದೇ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಕಷ್ಟನಷ್ಟಗಳ ನಡುವೆಯೂ ಪುಟ್ಟ ಆಶಾಕಿರಣದೊಂದಿಗೆ ಜೀವನ ಸಾಗಿಸುತ್ತಿರುವ ಆ ಕೆಲವರಲ್ಲಿ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಯ ಕೂಲಿ ಕಾರ್ಮಿಕರು ಕೂಡ ಸೇರಿದ್ದಾರೆ.
ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ನಿತ್ಯವೂ ಲಕ್ಷಾಂತರ ರೂಪಾಯಿಯ ವಹಿವಾಟು ನಡೆಯುತ್ತದೆ, ಆದರೆ ಕಾರ್ಮಿಕರ ಕೂಲಿಯು ದಿನಕ್ಕೆ ೧೫೦ ರೂಪಾಯಿಯ ಗಡಿ ದಾಟುವುದಿಲ್ಲ. ಪಾದಗಳಿಗೆ ಚಪ್ಪಲಿಯೂ ಹಾಕಿಕೊಳ್ಳದೇ ಕೆಲಸ ಮಾಡುವ ಈ ಶ್ರಮಿಕರು ತಲೆಯ ಮೇಲೆ 30 ರಿಂದ 50 ಕೆ.ಜಿಯಷ್ಟು ರೇಷ್ಮೆ ಗೂಡನ್ನು ಹೊರುತ್ತಾರೆ. ಸೈಕಲ್‌ನಲ್ಲೇ ಸಾಗುವ ಅವರು ತಲೆಯ ಮೇಲೆ ಮೂಟೆಯ ಸಮತೋಲನ ಕಾಯ್ದುಕೊಳ್ಳುವುದರ ಜೊತೆಗೆ ಅಪಘಾತಕ್ಕೀಡಾಗದಂತೆ ಎಚ್ಚರಿಕೆ ಸಹ ವಹಿಸಬೇಕು.
ಅಸಂಘಟಿತ ವಲಯದಲ್ಲಿರುವ ಈ ಕಾರ್ಮಿಕರಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯಗಳಿಲ್ಲ. ಚುನಾಯಿತ ಪ್ರತಿನಿಧಿಗಳು ನೀಡುವ ಭರವಸೆಗಳ ಹೊರತಾಗಿ ಅವರಿಗೆ ಏನೂ ಸಿಕ್ಕಿಲ್ಲ. ಅನಾರೋಗ್ಯ ಸೇರಿದಂತೆ ಯಾವುದೇ ಗಂಭೀರ ಸಮಸ್ಯೆ ಕಾಡಿದರೂ ಅವರು ದಿನದ ೧೫೦ ರೂಪಾಯಿಯಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕೆ ಹೊರತು ಬೇರೆ ಮಾರ್ಗವಿಲ್ಲ.
‘ನಾವು ಸುಮಾರು 268 ಕಾರ್ಮಿಕರಿದ್ದೇವೆ. ನಿತ್ಯವೂ 20 ರಿಂದ 50 ಕೆಜಿ ತೂಕದವರೆಗೂ ಗೂಡನ್ನು ಹೊರುತ್ತೇವೆ. ಮಾರುಕಟ್ಟೆಯಲ್ಲಿ ಗೂಡು ಬರುವುದರ ಮೇಲೆ ನಮ್ಮ ಸಂಪಾದನೆ ಅವಲಂಬಿತವಾಗಿರುತ್ತದೆ. ದಿನಕ್ಕೆ 150 ರೂಪಾಯಿ ಸಂಪಾದಿಸುತ್ತೇವೆ. ಆದರೆ ಸೈಕಲ್ ಬಾಡಿಗೆ, ಬಸ್ ಪ್ರಯಾಣ, ಹೋಟೆಲ್ ಊಟ ಎಲ್ಲ ಕಳೆದು ೭೫ ರಿಂದ ೧೦೦ ರೂಪಾಯಿ ಉಳಿಯುತ್ತದೆ. ಅಲ್ಪಸಂಪಾದನೆಯಲ್ಲೇ ಸಂಸಾರ ನಡೆಸಬೇಕು, ಮಕ್ಕಳಿಗೆ ಓದಿಸಬೇಕು, ಆಹಾರದ ಕೊರತೆ ಕಾಡದಂತೆ ನೋಡಿಕೊಳ್ಳಬೇಕು’ ಎಂದು ಹಮಾಲಿ ಕಾರ್ಮಿಕರು ಹೇಳುತ್ತಾರೆ.
‘ಸಂಸಾರದ ನಿತ್ಯ ಜಂಜಾಟವನ್ನು ಹೇಗಾದರೂ ತೂಗಿಸಬಹುದು. ಆದರೆ ಅಪಘಾತ ಅಥವಾ ಅನಾರೋಗ್ಯ ಕಾಡಿದಲ್ಲಿ ಔಷಧಿ ಕೊಳ್ಳಲು ಮತ್ತು ಆಸ್ಪತ್ರೆಗೆ ದಾಖಲಾಗಲು ಹಣವಿರುವುದಿಲ್ಲ. ಸರ್ಕಾರದ ಯಾವುದೇ ಯೋಜನೆಗೆ ಒಳಪಡದ ನಮಗೆ ಯಾವುದೇ ಸೌಕರ್ಯಗಳು ಸಹ ಸಿಗುವುದಿಲ್ಲ. ಬದುಕಲು ಸಾಲ ಮಾಡಬೇಕಾಗುತ್ತದೆ. ಆದರೆ ಸಾಲ ತೀರಿಸುವುದರಲ್ಲೇ ನಮ್ಮ ಬದುಕು ಕೊನೆಯಾಗುತ್ತದೆ’ ಎಂದು ಅವರು ಅಳಲು ತೋಡಿಕೊಂಡರು.
‘ದೇಹವನ್ನು ದಂಡಿಸಿ ಕೆಲಸ ಮಾಡುವ ಈ ಕಾರ್ಮಿಕರು ಬೇಗನೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ದೀರ್ಘ ಕಾಲದವರೆಗೆ ಬದಕುಲು ಆಗುವುದಿಲ್ಲ. ಪಿಂಚಣಿ, ಆರೋಗ್ಯ ವಿಮೆ, ಹೆರಿಗೆ ಭತ್ಯೆ, ವಿದ್ಯಾರ್ಥಿ ವೇತನ, ಭವಿಷ್ಯ ನಿಧಿ ಮುಂತಾದ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹೋರಾಟದ ಮನೋಭಾವವನ್ನೇ ಕಳೆದುಕೊಂಡ ಸ್ಥಿತಿಯಲ್ಲಿರುವ ಈ ಕಾರ್ಮಿಕರು ನಿರಾಸೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಬಹುತೇಕ ಕಾರ್ಮಿಕರಿಗೆ ಓದು-ಬರಹ ಗೊತ್ತಿಲ್ಲ. ಸರ್ಕಾರದಿಂದ ಸೌಲಭ್ಯಗಳಿವೆ, ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಪರಿವೆ ಅವರಿಗಿಲ್ಲ’ ಎಂದು ರೇಷ್ಮೆ ಗೂಡು ಮಾರುಕಟ್ಟೆಯ ಅಧಿಕಾರಿಯೊಬ್ಬರು ತಿಳಿಸಿದರು.
Say ‘HI’ to Sidlaghatta.com on WhatsApp: +91 9986904424