ನೀರಿನ ಉಳಿತಾಯ ಮತ್ತು ಸದ್ಭಳಕೆ ನಮ್ಮ ಭಾಗದ ಜನರೆಲ್ಲಾ ಅಳವಡಿಸಿಕೊಳ್ಳಬೇಕಾದ ಅತ್ಯವಶ್ಯ ಸಂಗತಿಯಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಬೇಸಿಗೆ ಬಂತೆದರೆ ನೀರಿಗೆ ಆಹಾಕಾರ ಎದುರಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟದ ವ್ಯವಸ್ಥೆಗೆ ಸಾಕಷ್ಟು ನೀರಿನ ಅಗತ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ನೀರನ್ನು ಉಳಿಸುತ್ತಾ ಸದುಪಯೋಗಪಡಿಸಿಕೊಳ್ಳುವತ್ತ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಇತರರಿಗೆ ಮಾದರಿಯಾಗಿದೆ.
ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ನೀರನ್ನು ಪುನರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
‘ಸಂಚಾರಿ ಕೈತೊಳೆಯುವ ಹಾಗೂ ನೀರಿನ ಪುನರ್ಬಳಕೆಯ ಘಟಕ’ವನ್ನು ಕೇವಲ 800 ರೂಗಳಷ್ಟು ಖರ್ಚು ಮಾಡಿ ರೂಪಿಸಿದ್ದಾರೆ. ಮಕ್ಕಳು ಬೆಳಿಗ್ಗೆ ಹಾಲು ಕುಡಿದ ಲೋಟ, ಊಟ ಮಾಡಿದ ತಟ್ಟೆಯನ್ನು ತೊಳೆದ ನೀರು ಶೇಖರಣೆಯಾಗುವಂತೆ ಈ ಘಟಕವನ್ನು ತಯಾರಿಸಿದ್ದಾರೆ. ತಟ್ಟೆಯಲ್ಲಿನ ಉಳಿಕೆ ತರಕಾರಿ, ಅನ್ನ ಮುಂತಾದವುಗಳು ಡ್ರಮ್ಗೆ ಹೋಗದಂತೆ ಪ್ಲಾಸ್ಟಿಕ್ ಜಾಲರಿ ಅಳವಡಿಸಲಾಗಿದೆ. ಈ ಜಾಲರಿ ತುಂಬುತ್ತಿದ್ದಂತೆ ಮಕ್ಕಳು ಊಟದಲ್ಲಿನ ಉಳಿಕೆ ಪದಾರ್ಥವನ್ನು ಗೋಬರ್ ಗ್ಯಾಸ್ ಘಟಕಕ್ಕೆ ವರ್ಗಾಯಿಸುತ್ತಾರೆ.
ನೀರಿನ ಪುನರ್ಬಳಕೆಯ ಘಟಕದಿಂದಾಗಿ ಪ್ರತಿನಿತ್ಯ ಇಲ್ಲಿ ಸುಮಾರು 60 ಲೀಟರ್ ನೀರಿನ ಉಳಿತಾಯವಾಗುತ್ತಿದೆ. ಮಕ್ಕಳಲ್ಲೇ ವಿವಿಧ ಜವಾಬ್ದಾರಿಗಳನ್ನು ವಹಿಸಿದ್ದು, ಈ ಡ್ರಮ್ ಮೇಲಿನ ಅಳತೆ ಮಾಪನದಲ್ಲಿ ನೋಡಿ ಪ್ರತಿನಿತ್ಯ ನೀರಿನ ಉಳಿತಾಯದ ಬಗ್ಗೆ ದಾಖಲಿಸುತ್ತಾರೆ. ಡ್ರಮ್ನಲ್ಲಿ ಶೇಖರಣೆಯಾದ ನೀರನ್ನು ಗೇಟ್ ವಾಲ್ವ್ ಮೂಲಕ ಶಾಲೆಯ ಆವರಣದಲ್ಲಿರುವ ಸಸ್ಯಗಳಿಗೆ ನೀರುಣಿಸಲಾಗುತ್ತಿದೆ. ನೀರು ಜಾಲರಿ ಮೂಲಕ ಶೋಧಿಸಿರುವುದರಿಂದ ಶೌಚಾಲಯಕ್ಕೂ ಬಳಸಲು ಅರ್ಹವಾಗಿದೆ. ಇದರಿಂದಾಗಿ ನೀರಿನ ಮಿತವ್ಯಯ ಹಾಗೂ ಸದ್ಭಳಕೆ ಸಾಧ್ಯವಾಗಿದೆ.
ಶಾಲೆಯಲ್ಲಿನ ‘ಬಯೋಗ್ಯಾಸ್’ ಘಟಕ ನೀರಿನ ಘಟಕಕ್ಕೆ ಪೂರಕವಾಗಿದೆ. ಆಹಾರ ತ್ಯಾಜ್ಯದ ಸದ್ಭಕೆಯ ಮೂಲಕ ಮಕ್ಕಳಿಗೆ ನೀಡುವ ಹಾಲು ಕುದಿಸಲು ಅನಿಲದ ಉತ್ಪಾದನೆ ಇದರಿಂದ ನಡೆದಿದೆ.
‘ನಮ್ಮಲ್ಲಿ ಮೂರು ದಿನಗಳಿಗೊಮ್ಮೆ ನೀರು ಬರುತ್ತದೆ. ಹಾಗಾಗಿ ನೀರು ನಮಗೆ ಅತ್ಯಮೂಲ್ಯ. ಆದಷ್ಟು ಕಡಿಮೆ ನೀರನ್ನು ಬಳಸಬೇಕು ಮತ್ತು ಪೋಲಾಗದಂತೆ ನೋಡಿಕೊಳ್ಳಬೇಕಿದೆ. ‘ಸಂಚಾರಿ ಕೈತೊಳೆಯುವ ಹಾಗೂ ನೀರಿನ ಪುನರ್ಬಳಕೆಯ ಘಟಕ’ ಮತ್ತು ‘ಬಯೋಗ್ಯಾಸ್’ ಘಟಕವನ್ನು ಕಡಿಮೆ ಖರ್ಚಿನಲ್ಲಿ ರೂಪಿಸಲಾಗಿದೆ. ‘ನಮ್ಮ ಮುತ್ತೂರು’ ಸಂಸ್ಥೆಯವರು ಬೆಂಗಳೂರಿನ ರೀಪ್ ಬೆನಿಫಿಟ್ ಎಂಬ ಸಂಸ್ಥೆಯವರನ್ನು ಕರೆಸಿ ನೀರಿನ ಮತ್ತು ತ್ಯಾಜ್ಯದ ಸದ್ಭಳಕೆ, ಶಕ್ತಿಯ ಉತ್ಪಾದನೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಅವರಿಂದಲೇ ಈ ಘಟಕಗಳನ್ನು ರೂಪಿಸಿದ್ದಾರೆ. ಮಕ್ಕಳಿಗೆ ಹಾಲು ಕುದಿಸಿ ನೀಡಲು ನಾವು ವಿದ್ಯುತ್ ಅವಲಂಬಿಸಿಲ್ಲ. ಇದರಿಂದ ವಿದ್ಯಾರ್ಥಿಗಳು ನೀರಿನ ಉಪಯೋಗಗಳು ಮತ್ತು ಬಯೋಗ್ಯಾಸ್ ಬಗ್ಗೆ ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವಂತಾಗಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಯಾರು ಬೇಕಾದರೂ ಇದನ್ನು ರೂಪಿಸಿಕೊಳ್ಳಬಹುದು. ಇದರಿಂದ ಸಾಕಷ್ಟು ನೀರಿನ ಉಳಿತಾಯವಿದೆ. ಯಾವುದೇ ಶಾಲೆಯವರು ಇಷ್ಟಪಟ್ಟಲ್ಲಿ ಇದನ್ನು ತಯಾರಿಸಲು ನಾವು ಮಾರ್ಗದರ್ಶನ ಮಾಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಿ.ಪ್ರಭಾಕರ.
–ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -