20.1 C
Sidlaghatta
Friday, December 27, 2024

ಬ್ರಿಟಿಷ್ ಅಧಿಕಾರಿ ಕಂಡ "ಸಿಲಗುಟ್ಟ"

- Advertisement -
- Advertisement -

ರೇಷ್ಮೆ ಮತ್ತು ಹೈನುಗಾರಿಕೆಗೆ ಶಿಡ್ಲಘಟ್ಟ ತಾಲ್ಲೂಕು ಹೆಸರುವಾಸಿ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ. ಆದರೆ ಶಿಡ್ಲಘಟ್ಟ ಹೀಗಿರಲಿಲ್ಲ. ಇಲ್ಲಿನ ಜನರಿಗೆ ರೇಷ್ಮೆಯ ಗಂಧಗಾಳಿಯೂ ಇರಲಿಲ್ಲ. ಇಲ್ಲಿನ ಜನರು ತರಕಾರಿ ಬೆಳೆಯುವುದರಲ್ಲಿ, ಹತ್ತಿಯ ಬಟ್ಟೆಗಳನ್ನು ತಯಾರಿಸುವುದರಲ್ಲಿ ಸಿದ್ದಹಸ್ತರಾಗಿದ್ದರು. ಈ ಮಾತುಗಳನ್ನು ಹೇಳಿದವರು ಮೂಲನಿವಾಸಿಗಳಲ್ಲ, ಭಾರತೀಯ ಇತಿಹಾಸಕಾರರೂ ಅಲ್ಲ. ಈ ಪ್ರದೇಶದ ಕುರಿತು ಅತೀವ ಆಸಕ್ತಿಯಿಂದ ಅಧ್ಯಯನ ಮಾಡಿದ ಬ್ರಿಟಿಷ್ ಅಧಿಕಾರಿ ಫ್ರಾನ್ಸಿಸ್ ಬುಕನನ್ ಈ ವಿಷಯವನ್ನು ತಿಳಿಸಿದ್ದಾರೆ.
1807 ರಲ್ಲಿ ಪ್ರಕಟವಾದ ಅವರ ಪುಸ್ತಕ “A journey from Madras through the countries of Mysore, Canara, and Malabar” ದಲ್ಲಿ ಗತಕಾಲದ ಶಿಡ್ಲಘಟ್ಟದ ಇತಿಹಾಸದ ಚಿತ್ರಣವನ್ನೇ ಅವರು ನೀಡಿದ್ದಾರೆ.
ಭಾರತದ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ವೆಲ್ಲೆಸ್ಲಿಗೆ ವೈದ್ಯಾಧಿಕಾರಿಯಾಗಿದ್ದರು ಫ್ರಾನ್ಸಿಸ್ ಬುಕನನ್. 1799ರಲ್ಲಿ ಟಿಪ್ಪುಸುಲ್ತಾನನ ಮರಣದ ನಂತರ ಆಗಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ವ್ಯಾಪ್ತಿಗೆ ಒಳಪಡುವ ದಕ್ಷಿಣ ಭಾರತವನ್ನು ಸರ್ವೇಕ್ಷಿಸುವ ಜವಾಬ್ದಾರಿಯನ್ನು ಇವರಿಗೆ ವಹಿಸಲಾಯಿತು.
ಸ್ಥಳವರ್ಣನೆ, ನಕ್ಷೆ, ಸ್ವರೂಪ, ಇತಿಹಾಸ, ಪ್ರಾಚೀನ ಅವಶೇಷ, ಸ್ಥಳೀಯರ ನಡವಳಿಕೆ, ಪದ್ಧತಿ, ಧರ್ಮ, ಆಹಾರ, ಉತ್ಪಾದನೆ, ಬೆಳೆ, ಕೃಷಿ, ತರಕಾರಿ, ಗೊಬ್ಬರ, ಪ್ರವಾಹ, ಸಾಕು ಪ್ರಾಣಿಗಳು, ಜಮೀನು, ಗಡಿರೇಖೆ, ಕಲೆ, ವಾಣಿಜ್ಯ ಮುಂತಾದವುಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ದಾಖಲಿಸಿದ್ದಾರೆ. ಇವರು ತಯಾರಿಸಿದ ವರದಿಗಳು ಮತ್ತು ದಾಖಲಾತಿಗಳು ಈಗಲೂ ಲಂಡನ್ನಿನ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ. ಈ ಸರ್ವೇಕ್ಷಣಾ ಕಾರ್ಯದಲ್ಲಿ ಇವರು ಶಿಡ್ಲಘಟ್ಟಕ್ಕೂ ಬಂದಿದ್ದರು. ತಮ್ಮ ಪುಸ್ತಕದಲ್ಲಿ ಶಿಡ್ಲಘಟ್ಟವನ್ನು ಸಿಲಗುಟ್ಟ(Silagutta) ಎಂದು ಕರೆದಿದ್ದಾರೆ. ಎರಡು ಶತಮಾನಗಳ ಹಿಂದಿನ ಶಿಡ್ಲಘಟ್ಟವನ್ನು ಬುಕನನ್ ಅತ್ಯಂತ ಆಪ್ತವಾಗಿ ಪರಿಚಯಿಸಿದ್ದಾರೆ.
‘ಜುಲೈ 13ರ ಬೆಳಿಗ್ಗೆ ಸಿಲಗುಟ್ಟಕ್ಕೆ ಬಂದೆ. ಮಳೆ ಹೆಚ್ಚಾಗಿ ಬಿದ್ದಿದ್ದರಿಂದ ಜನರು ರಾಗಿ ಬಿತ್ತುವುದರಲ್ಲಿ ಮಗ್ನರಾಗಿದ್ದರು. ಪಶ್ಚಿಮದಿಂದ ಬೀಸುವ ಗಾಳಿಯ ಆರ್ಭಟ ಒಂದೆಡೆಯಾದರೆ, ಆಗಾಗ ಬೀಳುವ ಮಳೆ ಇನ್ನೊಂದೆಡೆ. ಇಲ್ಲಿ ಕಲ್ಲು ಬಂಡೆಗಳಿಲ್ಲದೆ ಭೂಮಿ ಫಲವತ್ತಾಗಿದೆ. ಸಿಲಗುಟ್ಟ ಪಟ್ಟಣದಲ್ಲಿ ಕೇವಲ ೫೦೦ ಮನೆಗಳಿವೆ. ಅದರಲ್ಲಿ ಕೆಲವರು ನೇಕಾರರಿದ್ದಾರೆ. ಇದು ಅತ್ಯಂತ ಸುಂದರವಾದ ಪ್ರದೇಶವಾಗಿದೆ. ಇಲ್ಲಿ ಎರಡು ಸುಂದರವಾದ ಕೆರೆಗಳಿವೆ. ಕೆರೆಗಳ ಅಂಚಿನಲ್ಲಿ ಉದ್ಯಾನವನಗಳಿವೆ’ ಎಂದು ತಮ್ಮ ಪುಸ್ತಕದಲ್ಲಿ ವರ್ಣಿಸಿದ್ದಾರೆ.
‘ಕೃಷಿಯನ್ನೇ ನಂಬಿರುವ ಮೊರಸು ಅಥವಾ ಒಕ್ಕಲಿಗರು, ಮುಸಲ್ಮಾನರು, ಸಾದರು, ಬ್ರಾಹ್ಮಣರು, ಶೈವರು, ತೆಲುಗು ಮಾತನಾಡುವ ಬಣಜಿಗರು, ನಗರ್ತರು, ಸಾತಾನಾನರು ಇಲ್ಲಿ ವಾಸವಾಗಿದ್ದಾರೆ. ಸಿಲಗುಟ್ಟದಲ್ಲಿ ಒರಟಾದ ದಪ್ಪದ ಹತ್ತಿಯ ಕೋರಾ ಬಟ್ಟೆಗಳನ್ನು ನೇಕಾರರು ತಯಾರಿಸುತ್ತಾರೆ. ನೇಕಾರರು ಪದ್ಮಶಾಲಿ ಕುಲದವರು.
ಸಿಲಗುಟ್ಟದ ವ್ಯಾಪಾರಸ್ಥರು ಅಡಿಕೆ ಮತ್ತು ಕರಿ ಮೆಣಸನ್ನು ಕಟೀಲು ಮತ್ತು ನಗರದಿಂದ ತರುತ್ತಾರೆ. ಇಲ್ಲಿ ಸುತ್ತಮುತ್ತ ಬೆಳೆದ ತಂಬಾಕು ಮತ್ತು ನೇಯ್ದ ಬಟ್ಟೆಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಮೆಣಸು ಮತ್ತು ಅಡಿಕೆಯನ್ನು ವಾಲಾಜಪೇಟೆಯಲ್ಲಿ ಮಾರುತ್ತಾರೆ. ಸಮುದ್ರದ ಮಾರ್ಗದಿಂದ ಮದ್ರಾಸಿಗೆ ಬರುತ್ತಿದ್ದ ರೇಷ್ಮೆಯನ್ನೂ ತಂದು ಬೆಂಗಳೂರು, ಬಳ್ಳಾರಿ, ಆದೋನಿಗಳಲ್ಲಿ ಮಾರಾಟ ಮಾಡುತ್ತಾರೆ. ಅಲ್ಲಿ ಹತ್ತಿಯ ನೂಲನ್ನು ಹಾಗೂ ಕಂಬಳಿಗಳನ್ನು ಕೊಳ್ಳುತ್ತಾರೆ.
ಸಿಲಗುಟ್ಟ ತರಕಾರಿಗಳನ್ನು ಬೆಳೆಯುವುದರಲ್ಲಿ ಅತ್ಯಂತ ಹೆಸರುವಾಸಿ. ಗೋದಿ, ಅರಶಿನ, ಈರುಳ್ಳಿ, ಮೆಣಸಿನಕಾಯಿ, ಬೆಳ್ಳುಳ್ಳಿ, ಜೋಳ, ಕೊತ್ತಂಬರಿ ಬೆಳೆಯುವರು. ದನಗಳನ್ನು ಸಾಕಿದ್ದಾರೆ. ಇಲ್ಲಿ ಒಂದು ಎಕರೆಗೆ ಆರು ಕಂಡುಗ ರಾಗಿ ಬೆಳೆಯುತ್ತಾರೆ. ನೀರನ್ನು ಬಾವಿಯಿಂದ ತೆಗೆಯಲು ಇಲ್ಲಿ ಸಣ್ಣ ಏತವನ್ನೇ ಬಳಸುವರು. ನೀರು ೩೫ ಅಡಿ ಆಳಕ್ಕೆ ಹೋದರೂ ಇದರಿಂದ ನೀರೆತ್ತಬಹುದು’ ಎಂಬ ಚಿತ್ರಣವನ್ನು ನೀಡಿದ್ದಾರೆ.
 

 
ಬುಕನನ್ ನ ಅಧ್ಯಯನವನ್ನು ವಿವರವಾಗಿ ತಿಳಿಸುವ ಈ ಪುಸ್ತಕ University of Pittsburgh online library ಅಲ್ಲಿ ಲಭ್ಯವಿದೆ ಓದಲು ಇಲ್ಲಿ click ಮಾಡಿ
ಶಿಡ್ಲಘಟ್ಟದ ಇತಿಹಾಸವನ್ನು ತಿಳಿಯಲು ಇಲ್ಲಿ click ಮಾಡಿ

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -
  1. Great Folks… Nice to know about our Native…
    I would like to thank Mr. Admin of this Site to provide the valuable information…
    All the best… Thank you again

  2. I read this article and it is very inspiring, gives us a insight of our historical importance of our native place.
    I should thank the people who are involved in bringing this history into limelight and make us to feel proud to be a Sidlagattian. thank you once again.

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!