ಮುಂಗಾರಿನ ಆರಂಭದೊಂದಿಗೆ ನಿಸರ್ಗದಲ್ಲಿ ಅದರಲ್ಲೂ ಜೀವ ಜಗತ್ತಿನಲ್ಲಿ ಕಂಡೂ ಕಾಣದಂತೆ ಹಲವಾರು ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ತಾಲ್ಲೂಕಿನ ಸಾದಲಿ, ದಿಬ್ಬೂರಹಳ್ಳಿ ಭಾಗದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ಮಳೆಯ ಆಗಮದೊಡನೆ ಸಹಸ್ರಪದಿಗಳ ಜನನವೂ ಆರಂಭವಾಗಿದೆ.
ಮಲೆನಾಡು ಪ್ರದೇಶದಲ್ಲಿ ಅದರಲ್ಲೂ ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಸಹಸ್ರಪದಿಗಳು ಬಯಲು ಸೀಮೆ, ಅಂತರ್ಜಲ ಕುಸಿದಿರುವ ತಾಲ್ಲೂಕಿನಲ್ಲೂ ಅಲ್ಲಲ್ಲಿ ಕಂಡುಬರುತ್ತಿವೆ. ಈ ರೀತಿಯ ಜೀವಿಗಳು ಕಂಡುಬಂದಾಗ ಇನ್ನೂ ತಾಲ್ಲೂಕಿನ
ಪರಿಸರ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿಲ್ಲವೆಂದು ಸಮಾಧಾನ ಪಟ್ಟುಕೊಳ್ಳಬಹುದಾಗಿದೆ ಎನ್ನುತ್ತಾರೆ ಪರಿಸರಪ್ರೇಮಿಗಳು.
ಮಣ್ಣು ಮಿದುವಾಗಿ ಬಿದ್ದ ಎಲೆಗಳು ಕೊಳೆಯುವ ವಾತಾವರಣದಲ್ಲಿ ನೂರಾರು ಕಾಲುಗಳಿರುವ ಹಲವಾರು ಮರಿಗಳು ಗುಂಪುಗುಂಪಾಗಿ ಕಂಡುಬರುತ್ತಿವೆ. ಮಿಲ್ಲಿಪೀಡ್ ಎಂದು ಇಂಗ್ಲಿಷ್ನಲ್ಲಿ ಕರೆಯುವ ಈ ಹುಳವನ್ನು ಕನ್ನಡದಲ್ಲಿ ಸಹಸ್ರಪದಿ ಎನ್ನುತ್ತಾರೆ. ಇದರ ಹೆಸರು ಸೂಚಿಸುವಂತೆ ಸಾವಿರ ಕಾಲುಗಳೇನೂ ಇರುವುದಿಲ್ಲ. ೩೬ ರಿಂದ ೪೦೦ ಕಾಲುಗಳಿರುತ್ತದೆ. ಕೊಳೆತ ಎಲೆಗಳು, ಮರದ ತೊಗಟೆಗಳನ್ನು ತಿಂದು ಬದುಕುತ್ತದೆ. ಅದಕ್ಕಾಗಿಯೇ ಮಳೆ ಬಿದ್ದು ಎಲೆಗಳು ಕೊಳೆಯುವ ಸಮಯದಲ್ಲಿಯೇ ಮರಿಗಳ ಜನನವಾಗುತ್ತವೆ.
ಸಹಸ್ರಪದಿಗಳು ಉದ್ದವಾದ ಮತ್ತು ಕೊಳವೆಯಾಕಾರದ ದೇಹ ರಚನೆ, ತಲೆ ಹೊಲೆ ಹೊರತುಪಡಿಸಿ ದೇಹದ ಒಂದೊಂದು ಭಾಗಕ್ಕೂ ಎರಡು ಜತೆ ಕಾಲುಗಳಿರುತ್ತವೆ. ಕಾಲುಗಳ ಸಂಖ್ಯೆ ಜಾಸ್ತಿ ಇರುವುದರಿಂದ ನಡಿಗೆ ನಿಧಾನ. ಭೂಮಿಯ ಮೇಲೆ ಮಾನವರಿಗಿಂತ ನೂರಾರು ಮಿಲಿಯನ್ ವರ್ಷಗಳಿಂದ ಇವು ಬದುಕಿವೆ.
ಸಹಸ್ರಪದಿಗಳು ಸಾಮಾನ್ಯವಾಗಿ ಕಪ್ಪು ಅಥವಾ ಕಂದು ಬಣ್ಣ ಹೊಂದಿರುತ್ತವೆ. ಇವುಗಳ ದೇಹದ ನೀರಿನ ಅಂಶ ಕಾಪಾಡಲು ತೇವಾಂಶಯುತ ವಾತಾವರಣ ಬೇಕು. ಆದ್ದರಿಂದ ಮಳೆಗಾಲದಲ್ಲಿ ಮಾತ್ರವೇ ಚಟುವಟಿಕೆಯಿಂದ ಇರುತ್ತವೆ. ಬೇರೆ ಕಾಲದಲ್ಲಿ ತೇವಾಂಶ ಹೆಚ್ಚಿರುವ ಕಡೆಯಲ್ಲಿ ಅಡಗುತ್ತವೆ. ಒಣಗಿದ, ಕೊಳೆಯುತ್ತಿರುವ ಸಸ್ಯಶೇಷ ಇವುಗಳ ಆಹಾರ.
ಹೆಣ್ಣು ಹುಳು ತೇವಾಂಶವಿರುವ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಳ್ಳುತ್ತವೆ. ಜಾತಿಗೆ ಅನುಗುಣವಾಗಿ 10ರಿಂದ ಮುನ್ನೂರು ಮೊಟ್ಟೆಗಳನ್ನಿಡುತ್ತವೆ. ಮರಿ ಹುಟ್ಟಿದಾಗ ದೇಹದ ಭಾಗ ಮತ್ತು ಕಾಲುಗಳ ಸಂಖ್ಯೆ ಕಡಿಮೆಯಿರುತ್ತದೆ. ನಂತರ ಎರಡು-ಮೂರು ಬಾರಿ ಹೊರಚರ್ಮ ಕಳಚಿ ದೊಡ್ಡದಾಗಿ ಬೆಳೆಯುತ್ತದೆ.
ಎಲ್ಲಕ್ಕಿಂತ ವಿಸ್ಮಯವೆಂದರೆ ಸಹಸ್ರಪದಿಗಳ ರಕ್ಷಣಾ ವ್ಯವಸ್ಥೆ. ವೇಗವಾಗಿ ಓಡಲಾರದ, ಕಚ್ಚಲು, ಚುಚ್ಚಲು ಯಾವುದೇ ಅಂಗಗಳಿಲ್ಲದ, ಸಹಸ್ರಪದಿಗಳು ಬೇರೆ ಜೀವಿಗಳಿಗೆ ಆಹಾರವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ವೈರಿಗಳನ್ನು ಗಲಿಬಿಲಿಗೊಳಿಸಲು ಚಕ್ಕುಲಿಯಾಕಾರದಲ್ಲಿ, ಇನ್ನು ಕೆಲವು ಉಂಡೆಯಾಕಾರದಲ್ಲಿ ದೇಹವನ್ನು ಸುತ್ತಿಕೊಳ್ಳುತ್ತದೆ. ಹೀಗೆ ಸುತ್ತಿಕೊಳ್ಳುವಾಗ ತನ್ನ ನೂರಾರು ಕಾಲುಗಳಿಗೆ ಸ್ವಲ್ಪವೂ ಘಾಸಿಯಾಗದಂತೆ ಅದನ್ನು ಹೊರಗೆಳೆದುಕೊಳ್ಳುತ್ತದೆ.
ಇವು ತಮ್ಮ ರಕ್ಷಣೆಗೆ ರಾಸಾಯನಿಕ ಅಸ್ತ್ರವನ್ನು ಪ್ರಯೋಗಿಸುತ್ತವೆ. ಕೆಲ ಸಹಸ್ರಪದಿಗಳು ಕೀಟಗಳನ್ನು, ಇರುವೆಗಳನ್ನು ದೂರಮಾಡಲು ಕೆಟ್ಟವಾಸನೆ ಬೀರುವ, ವೈರಿಗಳ ದೇಹವನ್ನು ಸುಡಬಲ್ಲ ರಾಸಾಯನಿಕಗಳನ್ನು ಸ್ರವಿಸುತ್ತವೆ. ಕೆಲ ಜಾತಿಯ ಮಂಗಗಳು ಸೊಳ್ಳೆಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ಬೇಕೆಂದೇ ಈ ಹುಳವನ್ನು ಮುಟ್ಟಿ ಇದು ಹೊರಸೂಸುವ ದ್ರವವನ್ನು ಮೈಗೆಲ್ಲಾ ಹಚ್ಚಿಕೊಳ್ಳುತ್ತವೆ.
‘ಬಸವನ ಪಾದ ಅಥವಾ ಬಸವನ ಹುಳು ಎಂದೂ ಇದನ್ನು ಕರೆಯುವರು. ಬಸವನಂತೆ ಸಾಧು ಎಂದು ಈ ಹೆಸರು ಬಂದಿರಬಹುದು! ಈ ಹುಳು ದಾರಿಯಲ್ಲಿ ಅಡ್ಡಬಂದರೆ ಅಂದಿನ ಕೆಲಸ ಸುಗಮವಾಗುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ಹಿಂದೆ ಮಳೆಬೆಳೆ ಚೆನ್ನಾಗಿದ್ದಾಗ ಹೊಲದೆಡೆಯಲ್ಲೆಲ್ಲಾ ಕಂಡುಬರುತ್ತಿದ್ದ ಈ ಜೀವಿಗಳಿಂದು ಕಡಿಮೆಯಾಗಿವೆ’ ಎನ್ನುತ್ತಾರೆ ಶಿಕ್ಷಕ ದೇವರಾಜ್.
– ಡಿ.ಜಿ.ಮಲ್ಲಿಕಾರ್ಜುನ