ನಾಟಕವೊಂದು ಪ್ರದರ್ಶಿತವಾದಾಗ ಗ್ರಾಮಗಳಲ್ಲಿ ನೂರಾರು ಮಂದಿ ಸೇರುತ್ತಾರೆ. ಚಪ್ಪಾಳೆ, ಸಿಳ್ಳೆ ಹೊಡೆದು ನಟರನ್ನು ಪ್ರೋತ್ಸಾಹಿಸುತ್ತಾ ನಾಟಕವನ್ನು ಆಸ್ವಾದಿಸುತ್ತಾರೆ.
ಈ ರೀತಿಯ ನಾಟಕವನ್ನು ಪ್ರದರ್ಶಿಸುವುದರ ಹಿಂದೆ ಹಲವು ತಿಂಗಳುಗಳ ಪರಿಶ್ರಮವಿರುತ್ತದೆ. ಸಾಮಾನ್ಯವಾಗಿ ನಟರು ಸ್ಥಳೀಯರೇ ಆಗಿದ್ದು, ನಾಟಕವನ್ನು ಕಲಿಸುವ ಗುರುವನ್ನು ಹೊರಗಿನಿಂದ ಕರೆತಂದು ಅವರಿಂದ ಹಾವ ಭಾವ, ಅಭಿನಯ, ಸಂಗೀತ, ಸಂಭಾಷಣೆಯನ್ನು ಕಲಿಯುತ್ತಾರೆ.
ತಾಲ್ಲೂಕಿನ ಎಚ್.ಕ್ರಾಸ್ನಲ್ಲಿ ಸುತ್ತ ಮುತ್ತ ಗ್ರಾಮಗಳಲ್ಲಿ ವ್ಯವಸಾಯ, ರೇಷ್ಮೆ ಕಸುಬು, ಅಂಗಡಿ ಮುಂತಾದ ಕಸುಬುಗಳ ಹಿನ್ನೆಲೆಯಿರುವ ಸ್ನೇಹಿತರು ಒಂದೆಡೆ ಸೇರಿಕೊಂಡು ಪೌರಾಣಿಕ ನಾಟಕದ ತಯಾರಿ ನಡೆಸಿದ್ದಾರೆ. ಜೀವನ ನಿರ್ವಹಣೆಗೆ ಹಗಲಿನಲ್ಲಿ ದುಡಿದು ರಾತ್ರಿಯ ವೇಳೆಯಲ್ಲಿ ನಾಟಕಕ್ಕೆ ತಾಲೀಮು ನಡೆಸಿದ್ದಾರೆ.
‘ಸೀತಾರಾಮಾಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ’ ಎಂಬ ಹೆಸರನ್ನಿಟ್ಟುಕೊಂಡು ಕಲಾಸಕ್ತ ಸಮಾನಮನಸ್ಕ ಸ್ನೇಹಿತರ ತಂಡವು ವರ್ಷಕ್ಕೊಮ್ಮೆ ನಾಟಕವೊಂದನ್ನು ಎಚ್.ಕ್ರಾಸ್ನಲ್ಲಿ ಪ್ರದರ್ಶಿಸುತ್ತಿದೆ. ಈ ಬಾರಿ ದಾನವೀರಶೂರಕರ್ಣ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಕಳೆದ ಇಪ್ಪತ್ತು ರಾತ್ರಿಗಳಿಂದ ಕಲಿಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 9ನೇ ತಾರೀಖು ಪ್ರದರ್ಶಿಸಲು ಉದ್ದೇಶಿಸಿರುವ ಈ ಪೌರಾಣಿಕ ನಾಟಕಕ್ಕೆ ಗುರುಗಳ ಉಪಸ್ಥಿತಿಯನ್ನು ನೋಡಿಕೊಂಡು ನಿದ್ರೆ ಕೆಟ್ಟು ಅಪರಾತ್ರಿಯವರೆಗೂ ಕೆಲವೊಮ್ಮೆ ಬೆಳಗಿನ ಜಾವದವರೆಗೂ ತಾಲೀಮು ನಡೆಸಿದ್ದಾರೆ.
‘ಹೊಸಕೋಟೆ ತಾಲ್ಲೂಕು ದೊಡ್ಡನೆಲ್ಲೂರಹಳ್ಳಿ ಮುತ್ತಪ್ಪನವರಿಂದ ಈ ನಾಟಕವನ್ನು ಕಲಿಯುತ್ತಿದ್ದೇವೆ. ನಮಗೆಲ್ಲಾ ಬೇರೆ ಬೇರೆ ಉದ್ಯೋಗಗಳಿದ್ದರೂ ರಂಗಭೂಮಿಯು ನಮ್ಮನ್ನು ಒಂದೆಡೆ ಸೇರಿಸಿದೆ. ನಾವೇನೂ ವೃತ್ತ ಕಲಾವಿದರಲ್ಲ. ಕಲಾಸಕ್ತಿಯಿಂದಾಗಿ ನಾವು ಗುರುವನ್ನು ಕರೆದುಕೊಂಡು ಬಂದು ಕಲಿಯುತ್ತಿದ್ದೇವೆ. ಸಾಕಷ್ಟು ಸಂಭಾಷಣೆ, ರಾಗ, ಹಾಡು, ಅಭಿನಯವನ್ನು ನೆನಪಲ್ಲಿಟ್ಟುಕೊಂಡು ಕೊಂಚವೂ ತಪ್ಪಿಲ್ಲದೆ ನಟಿಸಬೇಕಿರುವುದರಿಂದ ನಿದ್ರೆಕೆಟ್ಟು ಕಲಿಯುತ್ತಿದ್ದೇವೆ. ಈ ಪೌರಾಣಿಕ ನಾಟಕದ ತಯಾರಿಯಿಂದ ಪ್ರಾರಂಭವಾಗಿ ಪ್ರದರ್ಶನದವರೆಗೂ ಸುಮಾರು ಒಂದೂವರೆ ಲಕ್ಷ ರೂಗಳು ವೆಚ್ಚವಾಗಲಿದ್ದು ನಾವೇ ನಟರು ಭರಿಸುತ್ತೇವೆ. ಕಲೆಯ ಪೋಷಣೆಗಾಗಿ ವೆಚ್ಚ ಮಾಡುವ ಹಣ ಮತ್ತು ಪರಿಶ್ರಮ ನಮಗೆ ಸಿಗುವ ಮನಸ್ಸಂತೋಷದ ಮುಂದೆ ಹೆಚ್ಚಿನದ್ದಲ್ಲ’ ಎನ್ನುತ್ತಾರೆ ದುರ್ಯೋಧನ ಪಾತ್ರದಾರಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಯ್ಯಪ್ಪ.
- Advertisement -
- Advertisement -
- Advertisement -