Home Articles ಕುರಿಗಳ ಬಂಡ ತೆಗೆಯುವವರಿಗೆ ಹೆಚ್ಚಿರುವ ಬೇಡಿಕೆ

ಕುರಿಗಳ ಬಂಡ ತೆಗೆಯುವವರಿಗೆ ಹೆಚ್ಚಿರುವ ಬೇಡಿಕೆ

0

ಕುರಿ ಉಣ್ಣೆ ತೆಗೆಯುವವರಿಗೆ ಬೇಡಿಕೆ ಹೆಚ್ಚಿದೆ. ಹಿಂದೆ ಕುರಿ ಸಾಕಿರುವವರ ಮನೆಯ ಬಳಿ ಬಂದು ಉಣ್ಣೆಯ ಕಂಬಳಿ ಕೊಟ್ಟು ಕುರಿಗಳ ಬಂಡ(ತುಪ್ಪಳ)ವನ್ನು ತೆಗೆಯುತ್ತಿದ್ದ ಕಸುಬುದಾರರಿದ್ದರು. ಆದರೆ ಈ ಕಸುಬನ್ನು ನೆಚ್ಚಿದಲ್ಲಿ ಆರ್ಥಿಕವಾಗಿ ಗಿಟ್ಟುವುದಿಲ್ಲವೆಂದು ಅನೇಕರು ಈ ಕಸುಬನ್ನು ತೊರೆದಿದ್ದಾರೆ.
ಮಳ್ಳೂರಿನಲ್ಲಿರುವ ಮೂವರು ಅನುಭವಿ ಬಂಡ ತೆಗೆಯುವವರಿಗೆ ಬೇಡಿಕೆಯಿದ್ದರೂ ಅವರೂ ಹೆಚ್ಚಿಗೆ ಸಂಪಾದಿಸಲಾಗದೆ ಈ ಕಸುಬಿನ ಕೊನೆಯ ಕೊಂಡಿಯಂತಿದ್ದಾರೆ.

13mar3
ಕುರಿ ಉಣ್ಣೆ ಕತ್ತರಿಸುವ ಕತ್ತರಿ

ಕುರಿಗಳ ಉಣ್ಣೆ ಕನಿಷ್ಠ ವರ್ಷಕ್ಕೊಮ್ಮೆ ಕತ್ತರಿಸುವುದು ರೂಢಿ. ಅದರಿಂದ ಅವುಗಳ ಬೆಳವಣಿಗೆ ಹಾಗೂ ರೋಗ ತಡೆಯುವಿಕೆಯೂ ಸಾಧ್ಯ. ಆದರೆ ಹಿಂದೆ ತಾವೇ ಬಂದು ತುಪ್ಪಳ ತೆಗೆಯುತ್ತಿದ್ದವರು ಈಗ ಕಡಿಮೆಯಾಗಿರುವುದರಿಂದ ಕುರಿ ಸಾಕಿರುವವರು ಕುರಿಗೆ ತಲಾ ಇಷ್ಟೆಂದು ಕಸುಬುದಾರರಿಗೆ ಹಣ ತೆತ್ತು ತಮ್ಮ ಕುರಿಗಳ ಉಣ್ಣೆ ತೆಗೆಸುತ್ತಾರೆ. ಆ ಕಸುಬುದಾರರಿಗೆ ಬೇಡಿಕೆಯಿದ್ದರೂ ಅವರಿಗೂ ಹಲವು ಸಮಸ್ಯೆಗಳಿವೆ.
‘ಒಂದು ಕುರಿಗೆ ಬಂಡ ತೆಗೆಯಲು ರೈತರು 20 ರೂಪಾಯಿ ಕೊಡುತ್ತಾರೆ. ಆರು ತಿಂಗಳು ನಾವು ಕೂಡಿಟ್ಟ ಉಣ್ಣೆಗೆ ಸುಮಾರು 10 ಸಾವಿರ ರೂಪಾಯಿಗಳು ಸಿಗುತ್ತದೆ. ಈ ಉಣ್ಣೆಯ ಕಾರ್ಖಾನೆಗಳೂ ವಿರಳವಾಗಿರುವುದರಿಂದ ಕೆಲ ದಳ್ಳಾಳಿಗಳಷ್ಟೇ ಬಂದು ಖರೀದಿಸುತ್ತಾರೆ. ಈ ಉಣ್ಣೆಯನ್ನು ಕೂಡಿಟ್ಟು ಹುಳು ಬೀಳದಂತೆ ಕಾಪಾಡುವುದೂ ಕಷ್ಟಕರ. ಕೆಲವೆಡೆ ಈ ಕಷ್ಟಕ್ಕೆ ಹೆದರಿ ತಿಪ್ಪೆಗೆ ಬಿಸಾಡುವುದೂ ಉಂಟು. ನಾವು ಚಿಕ್ಕಂದಿನಿಂದ ಕಲಿತ ವಿದ್ಯೆಯನ್ನು ಕುಲಕಸುಬೆಂದು ಬಿಡಲಾರದೆ ಮುಂದುವರೆಸಿದ್ದೇವೆ. ಆದರೆ ನಮ್ಮ ಮುಂದಿನ ಜನಾಂಗ ಇದನ್ನು ಅವಲಂಬಿಸಿಲ್ಲ’ ಎಂದು ಬಂಡ ತೆಗೆಯುವ ಮಳ್ಳೂರಿನ ಲಿಂಗಪ್ಪ ತಿಳಿಸಿದರು.
‘ನಾನು ಚಿಕ್ಕಂದಿನಲ್ಲಿದ್ದಾಗ ಈ ಬಂಡ ತೆಗೆಯುವ ಕತ್ತರಿ 3 ರೂಪಾಯಿಯಿತ್ತು. ಆದರೆ ಈಗದು 800 ರೂಪಾಯಿಗಳಾಗಿದೆ. ಅದನ್ನು ಸೂಲಬೆಲೆ ಹತ್ತಿರವಿರುವ ಗಿಡ್ಡಪ್ಪನಹಳ್ಳಿಯಲ್ಲಿ ಮಾತ್ರ ತಯಾರಿಸಲಾಗುತ್ತದೆ. ಬಂಡ ಕತ್ತರಿಸುತ್ತಾ ನಮ್ಮ ಕೈಯೆಲ್ಲಾ ಕಾಯಿಗಟ್ಟಿವೆ. ಹಾಗೆಂದು ನಾವೇನೂ ಆರ್ಥಿಕವಾಗಿ ಚೇತರಿಕೆ ಕಂಡಿಲ್ಲ’ ಎಂದು ತಮ್ಮ ಕಷ್ಟವನ್ನವರು ವಿವರಿಸಿದರು.
‘ಹಿಂದೆ ನಾವು ನೂರಾರು ಕುರಿಗಳನ್ನು ಸಾಕುತ್ತಿದ್ದೆವು. ಆದರೆ ಮೇವು ಮತ್ತು ನೀರಿನ ಸಮಸ್ಯೆಯಿಂದ ಈಗ ಅವುಗಳ ಸಂಖ್ಯೆಯೂ ಕಡಿಮೆಯಾಗಿದೆ. ಮೊದಲು ಕುರಿ ಬಂಡ ಕತ್ತರಿಸುವವರು ಬಹಳಷ್ಟು ಮಂದಿ ಇದ್ದರು. ನಮಗೆ ಕುರಿ ಉಣ್ಣೆಯ ಕಂಬಳಿ ಕೊಟ್ಟು ಕತ್ತರಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬಂಡ ಕತ್ತರಿಸುವವರು ವಿರಳವಾಗಿದ್ದಾರೆ. ನಾವೇಕುರಿಗಿಷ್ಟು ಎಂದು ಹಣ ಕೊಟ್ಟು ಕತ್ತರಿಸಿಸಬೇಕಿದೆ’ ಎಂದು ಕುರಿಸಾಕಾಣಿಕೆದಾರ ಚೌಡಸಂದ್ರ ರಾಮಕೃಷ್ಣಪ್ಪ ತಿಳಿಸಿದರು.