ಬೇಸಿಗೆಯ ಬಿಸಿ ಕಡಿಮೆಯಾಗದಿದ್ದರೂ ಮಕ್ಕಳಿಗೆ ಬೇಸಿಗೆ ರಜೆ ಜಾರಿಯಲ್ಲಿರುವುದರಿಂದ ಕುಣಿಯುತ್ತಾ ಕುಪ್ಪಳಿಸುತ್ತಾ ಸದಾ ಚಟುವಟಿಕೆಯಿಂದ ಪುಟಿದೇಳುವ ಮಕ್ಕಳನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಸಲು ಅಸಾಧ್ಯ.
ಟಿವಿಯಲ್ಲಿ ಮೂಡಿ ಬರುವ ಕಾರ್ಟೂನು, ಬೇಸಿಗೆ ಶಿಬಿರಗಳು, ಕ್ರಿಕೆಟ್ಟು, ವೀಡಿಯೋ ಗೇಮ್ಸ್, ಪ್ರವಾಸ ಮುಂತಾದ ಹಲವು ಆಕರ್ಷಣೆಗಳು ಮಕ್ಕಳನ್ನು ತಮ್ಮೆಡೆಗೆ ಸೆಳೆಯುವ ಈ ದಿನಗಳಲ್ಲಿ ತಾಲ್ಲೂಕಿನಲ್ಲಿ ಕೆಲವೆಡೆ ಮಕ್ಕಳು ಗ್ರಾಮೀಣ ಜಾನಪದ ಆಟಗಳಲ್ಲಿ ತೊಡಗಿಕೊಂಡಿರುವುದು ಕಂಡು ಬರುತ್ತಿದೆ.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿ ಮಕ್ಕಳು ಲಗೋರಿ ಆಡುವುದರಲ್ಲಿ ಸಂತೋಷಪಡುತ್ತಿದ್ದರೆ, ವರದನಾಯಕನಹಳ್ಳಿಯಲ್ಲಿ ಹೆಣ್ಣು ಮಕ್ಕಳು ಕಲ್ಲಾಟ, ಹಳಗುಣಿಮನೆ ಆಡುತ್ತಾ ನಲಿಯುತ್ತಿದ್ದಾರೆ. ಹನುಮಂತಪುರ ಗ್ರಾಮದಲ್ಲಿ ಕುಂಟೆಬಿ್ಲೆ, ಕಣ್ಣಾಮುಚ್ಚಾಲೆ ಆಟದಲ್ಲಿ ಮಕ್ಕಳು ತಲ್ಲೀನರು. ವರದನಾಯಕನಹಳ್ಳಿಯ ಸರ್ಕಾರಿ ಶಾಲೆಯ ಬಳಿಯಿರುವ ಗುಲ್ಮೊಹರ್ ಮರವಂತೂ ಹುಡುಗರಿಗೆ ಮರಕೋತಿ ಆಟ ಆಡಲು ಹೇಳಿ ಮಾಡಿಸಿದಂತಿದೆ.
ಯಾವುದೇ ಕಾಸು ಖರ್ಚಿಲ್ಲದೇ ಪರಿಸರದಲ್ಲೇ ಸಿಗುವ ಪರಿಕರಗಳನ್ನು ಬಳಸಿಕೊಂಡು ಆಡುವ ಈ ಆಟಗಳು ಕೂಡಿ ಬಾಳುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸುವಂತಹವು. ಜನಪದ ಸಾಹಿತ್ಯದಂತೆ ಜನಪದ ಆಟಗಳೂ ಕೂಡ ನಾಡಿನ ಸಾಂಸ್ಕೃತಿಯ ಪ್ರತೀಕ. ಈ ಆಟಗಳು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಐಪಿಎಲ್ ಹುಚ್ಚು ಎಲೆಡೆ ಪಸರಿಸಿ ಕ್ರಿಕೆಟ್ ಗುಂಗಿನಲ್ಲಿ ಕಣ್ಮರೆಯಾಗುವಂತಹ ಈ ಆಟಗಳನ್ನು ಮುಂದೆ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗಬಹುದು. ಅಥವಾ ಇಂತಹ ಆಟಗಳನ್ನು ಕಲಿಸುಂತಹ ಬೇಸಿಗೆ ಶಿಬಿರಗಳು ಹುಟ್ಟಿಕೊಂಡು ಹೊಸ ವಿದ್ಯೆಯೆಂಬಂತೆ ಕಲಿಸಲೂಬಹುದು.
ಮೌಖಿಕ ಪರಂಪರೆ ಹೊಂದಿದ ಈ ಆಟಗಳು ಜನಾಂಗದಿಂದ ಜನಾಂಗಕ್ಕೆ ಪ್ರದೇಶದಿಂದ ಪ್ರದೇಶಕ್ಕೆ ಅಲ್ಪ ಬದಲಾವಣೆ ಹೊಂದುತ್ತದೆ. ಒಂದೇ ಆಟ ಬೇರೆ ಬೇರೆ ಹೆಸರಿನಿಂದ ವಿವಿಧ ಪ್ರದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವುದನ್ನು ಕಾಣಬಹುದು. ಈ ಹಿನ್ನೆಲೆಯಲ್ಲಿ ಜಾನಪದ ಆಟಗಳು ಹಲವು ನೆಲೆಯಲ್ಲಿ ಕುತೂಹಲ ಕೆರಳಿಸಿ ಆಸಕ್ತಿಯನ್ನು ಅರಳಿಸುತ್ತವೆ.
ಜಾನಪದ ಆಟಗಳು ಮನರಂಜನೆ ಕೊಡುವುದರೊಂದಿಗೆ ದೈಹಿಕ ಹಾಗೂ ಮಾನಸಿಕ ಕಸರತ್ತನ್ನು ನೀಡುತ್ತವೆ. ಮನುಷ್ಯ ಸಂಬಂಧದ ಸಾಮರಸ್ಯವನ್ನು ಹೆಚ್ಚಿಸುವ ಇವು ನಮ್ಮ ಬದುಕಿನಿಂದ ಮರೆಯಾಗುತ್ತಿರುವುದು ವಿಷಾದನೀಯ. ಜೀವನ ಮೌಲ್ಯಗಳನ್ನು ಬೆಳೆಸುವಲ್ಲಿ ಸಹಾಯಕ ಸಾಧನಗಳಾಗಿ ನಿಲ್ಲುವ ಈ ಆಟಗಳು ಆಡುವವರಿಗೂ, ನೋಡುವವರಿಗೂ, ಕೇಳುವವರಿಗೂ ಆನಂದ ಹಂಚುವಂಥವುಗಳು.
ಸಂಕೀರ್ಣವಾಗುತ್ತಿರುವ ನಮ್ಮ ಬದುಕು ಜಾಗತೀಕರಣ, ವ್ಯಾಪಾರೀಕರಣ, ನಗರೀಕರಣಗಳ ಸುಳಿಯೊಳಗೆ ಸುತ್ತುತ್ತಿದೆ. ದೇಶೀಯತೆ ದೂರಸಾಗುತ್ತಾ ಗ್ರಾಮಸಂಸ್ಕೃತಿಯ ವೈವಿಧ್ಯಮಯ ಆಚರಣೆಗಳು ಅಳಿಯುತ್ತಿವೆ. ಕೆಲವು ತಮ್ಮ ಮೂಲ ಸ್ವರೂಪ ಕಳೆದುಕೊಂಡು ಹೊಸ ರೂಪ ಪಡೆಯುತ್ತಿವೆ. ಮನುಷ್ಯ ಬದುಕಿನ ವಿಕಾಸದ ಜೊತೆ ತಳುಕು ಹಾಕಿಕೊಂಡಿರುವ ಈ ಆಟಗಳ ಪುನರುತ್ಥಾನದ ಚಿಂತನೆಯ ಅಗತ್ಯವಿದೆ.
- Advertisement -
- Advertisement -
- Advertisement -
- Advertisement -