ಬದುಕನ್ನು ಮತ್ತು ಬಳಸುವ ವಸ್ತುಗಳನ್ನು ಸೂಕ್ಷ್ಮ ಮಾಡಿಕೊಳ್ಳುತ್ತಿರುವುದರಿಂದ ಸ್ಥೂಲ ವಸ್ತುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ. ಅಂಥಹ ವಸ್ತುಗಳಲ್ಲಿ ಪ್ರಮುಖವಾದದ್ದು ಹಿಟ್ಕಲ್ಲು ಮತ್ತು ರಾಗ್ಕಲ್ಲು.
ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಹೊಸ ಮನೆಯ ಬಳಿ ಬಿದ್ದಿದ್ದ ಹಿಟ್ಕಲ್ಲು ಮತ್ತು ರಾಗ್ಕಲ್ಲು ಕಣ್ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಪ್ರತಿನಿಧಿಗಳಂತಿವೆ.
ಹಳ್ಳಿಗಳಲ್ಲಿ ಹಳೆ ಮನೆಗಳನ್ನು ಕೆಡವಿ ಹೊಸ ಮನೆಗಳನ್ನು ಕಟ್ಟುವಾಗ ಈ ಬದುಕಿನ ಅಂಗವಾಗಿದ್ದ ಪರಿಕರಗಳು ಮಣ್ಣಿಗೆ ಸೇರುತ್ತಿವೆ. ಈ ವಸ್ತುಗಳೊಂದಿಗೆ ಅವುಗಳೊಂದಿಗೆ ಹೆಣೆದುಕೊಂಡ ಪದಕೋಶ, ಗಾದೆ ಮಾತುಗಳೂ ಕಣ್ಮರೆಯಾಗುತ್ತಿವೆ.
ಮನೆ ಎಂದ ಮೇಲೆ ಅಡುಗೆ ಮನೆ, ಅಡುಗೆ ಮನೆಗೆ ತಕ್ಕ ಪರಿಕರಗಳು ಇರುತ್ತವೆ. ಎಲ್ಲಾ ಹಳ್ಳಿ ಮನೆಯಲ್ಲೂ ಅಡುಗೆ ಮನೆ ಇರುತ್ತಿರಲಿಲ್ಲ. ಬದಲಿಗೆ ಮೂಲೆಮನೆ ಇರುತ್ತಿತ್ತು. ಗ್ರಾಮೀಣರು ಅಡುಗೆ ಮನೆಗೆ ಕೊಟ್ಟಿರುವ ಪರ್ಯಾಯ ಪದ ಈ ‘ಮೂಲೆ ಮನೆ’ ಎಂಬುದಾಗಿದೆ.
ಹಳ್ಳಿ ಅಡುಗೆ ಮನೆಯನ್ನು ಸ್ಟೀಲ್ ಪಾತ್ರಗಳು ಪ್ರವೇಶಿಸಿ, ಹಿತ್ತಾಳೆ, ಕಂಚು, ಮಡಿಕೆಗಳನ್ನು ಹೊರಕ್ಕೆ ಕಳಿಸಿವೆ. ಆದರೆ ಇನ್ನೂ ಅಲ್ಲಲ್ಲಿ ಕಂಡುಬರುವ ಮೂಲೆ ಮನೆಯಲ್ಲಿ ಸಿಲ್ವರ್(ಅಲ್ಯೂಮಿನಿಯಂ), ಗಿನ್ನೆ(ಬಟ್ಟಲು), ತಪ್ಪಲೆ, ಡೇಕ್ಸಾ, ಗೆಂಟಿ(ಸೌಟು), ಕೆಲವು ಮಡಿಕೆಗಳು ಕಂಡುಬರುತ್ತವೆ.
ಹಳ್ಳಿ ಅಡುಗೆ ಮನೆ ವಸ್ತು ಸಾಮಗ್ರಿಗಳಲ್ಲಿ ಮುದ್ದೆ ತಯಾರಿಕೆಗೆ ರಾಗ್ಕಲ್ಲು(ರಾಗಿ ಬೀಸುವ ಕಲ್ಲು), ಹಿಟ್ಮಡಿಕೆ(ಹಿಟ್ಟು ತೊಳಿಸುವ ಮಡಿಕೆ), ಹಿಟ್ಕೋಲು, ಮೆಟ್ಕೋಲು, ಸೊಟ್ಕೋಲು(ಸಿಪ್‌ಕಟ್ಟೆ), ಹಿಟ್ಕಲ್ಲು(ಮುದ್ದೆ ಮಾಡುವ ಕಲ್ಲು) ಪ್ರಮುಖವಾದದ್ದಾಗಿದ್ದವು.
ಮುದ್ದೆ ತೊಳೆಸಿದರೇನೆ ಅದು ಮುದ್ದೆ ಅನಿಸುವುದು. ಕಾರಣ ತೊಳಿಸಿದಾಗಲೇ ಇಟ್ಟು ಚೆನ್ನಾಗಿ ಎಸರಿನಲ್ಲಿ ಬೆರತು ಬೆಂದು ಮುದ್ದೆಯಾಗುವುದು. ಅದಕ್ಕೆ ಹಿಟ್ಕೋಲು ಇರಲೇ ಬೇಕು. ಕಡಿಮೆ ಜನಕ್ಕೆ ಮುದ್ದೆ ತೊಳಿಸುವಾಗ ಒಂಟಿಯಾಗಿ, ಹೆಚ್ಚು ಮಂದಿಗೆ ತೊಳಿಸಬೇಕಾದಾಗ ಜೋಡಿ ಹಿಟ್ಕೋಲುಗಳನ್ನು ಬಳಸುತ್ತಾರೆ.
ತೊಳೆಸುವುದು ಸರಿಯಾಗಿ ಆಗಬೇಕಾದರೆ ಮೆಟ್ಕೋಲು ಇರಲೇಬೇಕು. ಏಕೆಂದರೆ ತೊಳೆಸುವ ಒತ್ತಡಕ್ಕೆ ಪಾತ್ರೆ ಕದಲಬಾರದು. ಇದು ಮುದ್ದೆ ತೊಳೆಸುವವರಿಗೆ ಸುರಕ್ಷಿತ ಸಾಧನವೂ ಹೌದು. ಏಕೆಂದರೆ ಬಾನೆಯಲ್ಲಿ ಹಿಟ್ಟಿನ ಕುದಿಯಿರುತ್ತದೆ. ಅದು ಮೈಮೇಲೆ ಬೀಳದಂತಿರಲು ಮೆಟ್ಕೋಲು(ಕವೆಗೋಲು) ಆಧಾರವಾಗಿದೆ.
ಸೊಟ್ಕೋಲು ಅಥವಾ ಸಿಪ್‌ಕಟ್ಟೆಯು ತೆಂಗಿನ ಚಿಪ್ಪಿನ ಕಣ್ಣಿಗೆ ಚೂಪಾದ ಕೋಲನ್ನು ಸೇರಿಸಿ ಮಾಡಿದ ಸೌಟು. ಕಡಿಮೆ ಜನಕ್ಕೆ ಮುದ್ದೆ ತಯಾರಿಸಲು ಹಿಟ್ಮಡಿಕೆ ಬಳಕೆಯಾದರೆ, ದೊಡ್ಡ ಕುಟುಂಬಕ್ಕೆ ಹಿಟ್ಬಾನೆ ಬಳಸುವರು.
‘ಆಧುನಿಕತೆಯ ಪ್ರವೇಶದಿಂದ ಈ ಭಾರವಾದ ಕಲ್ಲಿನ ಪರಿಕರಗಳನ್ನು ಬಳಸುವುದು ಕಡಿಮೆಯಾಗುತ್ತಿದೆ. ಹಿಟ್ಕಲ್ಲಿನ ಮೇಲೆ ಮಾಡಿದ ಮುದ್ದೆಯ ಹದ, ರುಚಿ ಬಹಳ ಚೆನ್ನಾಗಿರುತ್ತದೆ. ಆದರೂ ಮನೆಗಳಲ್ಲಿ ಟೈಲ್ಸ್, ಮಾರ್ಬಲ್ ಮುಂತಾದವುಗಳನ್ನು ಹಾಕಿಸಿರುತ್ತಾರೆ. ಈ ಕಲ್ಲು ಬೇಡವಾಗುತ್ತಿದೆ. ಅದರೊಂದಿಗೆ ಹಲವಾರು ಪರಿಕರಗಳು ಮಾಯವಾಗುತ್ತಾ ಮುಂದಿನ ತಲೆಮಾರಿನವರಿಗೆ ಅವನ್ನೆಲ್ಲಾ ಜನಪದ ಸಂಗ್ರಹಾಲಯದಲ್ಲಿ ತೋರಿಸಬೇಕಾಗುತ್ತದೆ. ಆದರೆ ಅದರ ರುಚಿ, ಸ್ವಾದ, ಗಾದೆ ಮಾತುಗಳನ್ನು ಹೇಗೆ ವಿವರಲು ಸಾಧ್ಯ’ ಎನ್ನುತ್ತಾರೆ ಶಿಕ್ಷಕ ನಾಗಭೂಷಣ್.
– ಡಿ.ಜಿ.ಮಲ್ಲಿಕಾರ್ಜುನ
- Advertisement -
- Advertisement -
- Advertisement -
- Advertisement -