ಟೊಮೇಟೋ, ಹುರಳಿಕಾಯಿ, ಕ್ಯಾರೆಟ್, ಈರುಳ್ಳಿ ಮುಂತಾದ ತರಕಾರಿಗಳಿಲ್ಲದೆ ನಮ್ಮ ಆಹಾರ ಅಪೂರ್ಣ. ಇಂತಹ ತರಕಾರಿಗಳ ಹುಟ್ಟಿಗೆ ಕಾರಣವಾಗುವುವು ಅಜ್ಞಾತ ಬಂಧುಗಳಾದ ಜೇನುನೊಣಗಳು. ಇಂತಹ ರೈತಸ್ನೇಹಿ ಹೆಜ್ಜೇನುಗಳ ನೂರಾರು ಗೂಡುಗಳು ತಾಲ್ಲೂಕಿನ ತುಮ್ಮನಹಳ್ಳಿಯಲ್ಲಿವೆ.
ತಾಲ್ಲೂಕಿನ ತುಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಎದುರಿನ ಗುಂಡುತೋಪಿನಲ್ಲಿರುವ ಅತ್ಯಂತ ಹಳೆಯದಾದ ಮಾವಿನ ಮರಗಳಲ್ಲಿ ಹಲವಾರು ವರ್ಷಗಳಿಂದ ನೂರಾರು ಜೇನುಗಳು ಗೂಡುಗಳನ್ನು ಕಟ್ಟಿಕೊಂಡು ಮನುಷ್ಯರೊಂದಿಗೆ ಸಹಬಾಳ್ವೆ ನಡೆಸಿವೆ.
ಪ್ರಪಂಚದ ಆರನೇ ಒಂದು ಭಾಗದ ಹೂ ಬಿಡುವ ಸಸ್ಯಗಳ ಪರಾಗಸ್ಪರ್ಶ ನಡೆಯುವುದು ಮತ್ತು ಸುಮಾರು ನಾನ್ನೂರು ಕೃಷಿ ಸಸ್ಯಗಳ ಪರಾಗಸ್ಪರ್ಶಕ್ಕೆ ಕಾರಣವಾಗಿರುವುದು ಜೇನ್ನೊಣಗಳು. ಸುತ್ತಮುತ್ತ ಹೆಚ್ಚು ಸಸ್ಯ ವೈವಿಧ್ಯವಿರುವ, ತೊಂದರೆ ಇಲ್ಲದ ಎತ್ತರದ ಸ್ಥಳಗಳನ್ನು ಹೆಜ್ಜೇನುಗಳು ಆಯ್ಕೆ ಮಾಡಿಕೊಂಡು ನೆಲೆಗಳನ್ನು ಸ್ಥಾಪಿಸಿಕೊಳ್ಳುತ್ತವೆ. ಜೇನಿನ ಸಹಾಯವಿಲ್ಲದೆ ಹೂ ಬಿಡುವ ಸಸ್ಯಗಳು ಕಾಯಿ, ಬೀಜಗಳಾಗದು. ಬೀಜಗಳುದುರಿ ಗಿಡವಾಗಿ ಹೂಬಿಡದಿದ್ದರೆ ಜೇನು ಹುಳುವಿಗೆ ಮಕರಂದ ಸಿಗದು. ಸಮತೋಲನ ಹದ ತಪ್ಪಿದಲ್ಲಿ ಪರಿಸರ ಮತ್ತು ಪ್ರಕೃತಿಯಲ್ಲಿ ವೈಪರೀತ್ಯಗಳು ಸಂಭವಿಸಿ ಮಾನವನ ಜೀವನದಲ್ಲೂ ತನ್ನ ಸ್ವರೂಪ ತೋರಿಸುತ್ತದೆ.
ಜೇನು ತಯಾರಿಗೆ ಬೇಕಾದ ಕಚ್ಚಾ ವಸ್ತು ಹೂವಿನ ಮಕರಂದ. ಜೇನುಗಳು ಹೊಟ್ಟೆಯಲ್ಲಿ ಸುಕ್ರೋಸ್‌ನಂಥ ಸಂಕೀರ್ಣ ಸಕ್ಕರೆ ಎನ್‌ಜೈಮುಗಳ ಮೂಲಕ ಫ್ರಕ್ಟೋಸ್ ಗ್ಲೂಕೋಸ್‌ಗಳಂಥ ಸರಳ ರೂಪಕ್ಕೆ ಪರಿವರ್ತಿತವಾಗುತ್ತದೆ. ಶೇಕಡಾ ೮೦ರಷ್ಟು ಸಕ್ಕರೆ ಅಂಶವಿರುವ ಜೇನು ಸಿದ್ಧವಾಗುತ್ತದೆ. ಜೇನುತುಪ್ಪ ಸಂಗ್ರಹಿಸುವ ಜೇನ್ನೊಣಗಳಲ್ಲಿ ಹೆಜ್ಜೇನು, ಕೋಲುಜೇನು, ತುಡುವಿ, ಮಿಸ್ರಿ ಎಂಬ ನಾಲ್ಕು ಜಾತಿಯ ನೊಣಗಳು ಭಾರತದಲ್ಲಿವೆ. ಇವುಗಳಲ್ಲಿ ತುಡುವಿ ಜೇನ್ನೊಣಗಳನ್ನು ಮಾತ್ರ ಸಾಕಬಹುದು. ಹೆಜ್ಜೇನಿನ ಒಂದು ಹುಟ್ಟಿನಿಂದ ೩೦ ಕೆಜಿ ಜೇನು ಸಿಗುತ್ತದೆ.
ಜೇನಿನ ಹಲವಾರು ಉಪಯುಕ್ತತೆಗಳನ್ನು ಮನಗಂಡಿದ್ದ ಹಿಂದಿನ ರೈತಾಪಿ ಜನರು ಗ್ರಾಮದ ಗುಂಡುತೋಪುಗಳು, ಬಂಡೆಗಲ್ಲುಗಳ ಬಳಿ ಕಟ್ಟಿರುವ ಹೆಜ್ಜೇನುಗಳ ತಂಟೆಗೆ ಹೋಗಬಾರದು ಎನ್ನುತ್ತಿದ್ದರು. ಗ್ರಾಮದ ಸುತ್ತಮುತ್ತ ಜೇನುಗೂಡುಗಳು ಹೆಚ್ಚಿದ್ದಷ್ಟೂ ಗ್ರಾಮಕ್ಕೇ ಉಪಯೋಗ ಎಂಬ ನಂಬಿಕೆಯಿದೆ. ಔಷಧಿ ಸಿಂಪಡನೆ ಹೆಚ್ಚಿದಂತೆ ಮತ್ತು ಜೇನುತುಪ್ಪದ ಆಸೆಗೆ ಜೇನುಗೂಡಿಗೆ ಕೈಹಾಕಿದಂತೆ ಹಲವೆಡೆ ಜೇನುಗಳು ಗ್ರಾಮಗಳ ಬಳಿಯಿರುವ ತಮ್ಮ ವಾಸಸ್ಥಳಗಳನ್ನು ತೊರೆದಿವೆ.
’ನಮ್ಮ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ರಸ್ತೆ ಬದಿಯಲ್ಲಿರುವ ಗುಂಡು ತೋಪಿನಲ್ಲಿ ಹಳೆಯ ಕಾಲದ ಮಾವಿನ ಮರಗಳಲ್ಲಿ ಹಲವಾರು ವರ್ಷಗಳಿಂದ ಹೆಜ್ಜೇನುಗಳು ಗೂಡು ಕಟ್ಟಿಕೊಂಡಿವೆ. ಸುಮಾರು ೧೩೦ ವರ್ಷಗಳಿಗೂ ಹಿಂದಿನ ಮರಗಳಿವು. ಬಹಳ ಎತ್ತರದಲ್ಲಿರುವುದರಿಂದ ಜೇನುಗೂಡುಗಳನ್ನು ಯಾರೂ ಕೀಳಲು ಹೋಗಿಲ್ಲ. ಅವುಗಳೂ ಇದುವರೆಗೂ ಯಾರ ಮೇಲೂ ಧಾಳಿ ಮಾಡಿಲ್ಲ. ನಮ್ಮ ಗ್ರಾಮದಲ್ಲಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿನ ಬೆಳೆ ಹೆಚ್ಚಾಗಲು ಈ ಜೇನ್ನೊಣಗಳು ಕಾರಣವಾಗಿವೆ. ಸಾವಯವ ಕೃಷಿಯನ್ನು ಅಳವಡಿಸಿಕೊಂಡಿರುವವರಿಗೆ ಇವುಗಳು ನಿಜಕ್ಕೂ ವರದಾನವಾಗಿವೆ’ ಎನ್ನುತ್ತಾರೆ ತುಮ್ಮನಹಳ್ಳಿಯ ಬಚ್ಚರೆಡ್ಡಿ.
–ಡಿ.ಜಿ.ಮಲ್ಲಿಕಾರ್ಜುನ.